ಮಹಿಳೆಯರಿಂದ ಮ್ಯಾಚಿಂಗ್ ಕಲರ್ ಹೆಲ್ಮೆಟಿಗೆ ಭಾರೀ ಡಿಮಾಂಡ್!

Posted By:
Subscribe to Oneindia Kannada

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎನ್ನುವ ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರಕಾರ ಅಧಿಕೃತಗೊಳಿಸಿದ ನಂತರ ಬೆಂಗಳೂರಿನಲ್ಲಿ ಶಿರಸ್ತ್ರಾಣಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.

ಹೆಲ್ಮೆಟಿಗೆ ಬೇಡಿಕೆ ಎಷ್ಟಿದೆಯೆಂದರೆ ಸಂಕ್ರಾತಿ ಸಮಯದಲ್ಲಿ ಅವರೇಕಾಳಿಗಿರುವ ಡಿಮಾಂಡ್ ಗಿಂತಲೂ ಒಂದು ಕೈ ಜಾಸ್ತಿ ಅನ್ನುತ್ತಾರೆ ನಗರದ ಪ್ರಮುಖ ಸಗಟು ವ್ಯಾಪಾರಸ್ಥರು. (ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು)

ತರಕಾರಿ ಮಾರುತ್ತಿರುವವರೆಲ್ಲರೂ ಸದ್ಯದ ಮಟ್ಟಿಗೆ ನಗರದ ಪ್ರಮುಖ ರಸ್ತೆಬದಿಯಲ್ಲಿ ಹೆಲ್ಮೆಟ್ ಮಾರುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅದರಲ್ಲೂ ISI ಬ್ರಾಂಡ್ ಹೆಲ್ಮೆಟಿಗೆ ಎಲ್ಲಿಲ್ಲದ ಮತ್ತು ಇನ್ನಿಲ್ಲದ ಬೇಡಿಕೆ.

ಹೆಲ್ಮೆಟ್ ಹೆಚ್ಚಾಗಿ ಮಾರಲಾಗುವ ನಗರದ ಜೆ ಸಿ ರಸ್ತೆ, ಎಸ್ಪಿ ರಸ್ತೆ, ಎನ್ ಆರ್ ರಸ್ತೆಯಲ್ಲಿನ ಹೆಲ್ಮೆಟ್ ಅಂಗಡಿಯಲ್ಲಿ ಭಾರೀ ನೂಕುನುಗ್ಗಲು ಉಂಟಾಗುತ್ತಿರುವ ವಿಚಾರ ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.

Womens in Bengaluru buying helmets bassed on matching dresses

ಮಹಿಳೆಯರಿಂದ ಈ ಬಾರಿ ಹೆಲ್ಮೆಟಿಗೆ ಭಾರೀ ಬೇಡಿಕೆ ಬರುತ್ತಿರುವುದರಿಂದ ಅಂಗಡಿಯಲ್ಲಿ ಸಹಜ ಪರಿಸ್ಥಿತಿಯಿಲ್ಲ ಎನ್ನುವ ಮಾತಿದೆ. ಪ್ರಮುಖವಾಗಿ ಮಹಿಳೆಯರು ಒಂದಕ್ಕಿಂತ ಹೆಚ್ಚು ಹೆಲ್ಮೆಟ್ ಖರೀದಿಸುತ್ತಿರುವುದು ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ ಎನ್ನುವುದು ಒಟ್ಟಾರೆ ವ್ಯಾಪಾರಸ್ಥರ ಅಭಿಪ್ರಾಯ.

ಮಹಿಳೆಯರು ಮ್ಯಾಚಿಂಗ್ .. ಮ್ಯಾಚಿಂಗ್ ಕಲರಿನ ಹೆಲ್ಮೆಟ್ ಖರೀದಿಸಲು ಮುಂದಾಗುತ್ತಿರುವುದು, ಐದರಿಂದ ಆರು ವಿವಿಧ ಡಿಸೈನ್ ಮತ್ತು ಕಲರಿನ ಹೆಲ್ಮೆಟ್ ಖರೀದಿಸುತ್ತಿದ್ದಾರೆ. ಹೀಗಾಗಿ ತಮಗೆ ಬೇಕಾಗಿರುವ ಮ್ಯಾಚಿಂಗ್ ಕಲರಿನ ಹೆಲ್ಮೆಟ್ ಸಿಗದೇ ಇದ್ದಲ್ಲಿ ಅಂಗಡಿ ಮಾಲೀಕರ ಬಳಿ ವಾಗ್ಯುದ್ದಕ್ಕೆ ಇಳಿಯುತ್ತಿದ್ದಾರೆ ಎನ್ನುವ ಸುದ್ದಿಯಿದೆ.

ಕಾಮನ್ ಆಗಿ ಬಳಸುವ ಗೋಲ್ಡನ್ ಮತ್ತು ಬ್ಲ್ಯಾಕ್ ಕಲರಿನ ಬೇರೆ ಬೇರೆ ಡಿಸೈನಿನ ಹೆಲ್ಮೆಟ್ ಖರೀದಿಸಲು ಮಹಿಳೆಯರು ಹೆಚ್ಚು ಉತ್ಸುಕರಾಗಿದ್ದಾರೆ. ಹಾಗಾಗಿ, ಈ ಎರಡು ಬಣ್ಣದ ಶಿರಸ್ತ್ರಾಣಕ್ಕೆ ಸಪ್ಲೈ ಮಾಡಲಾಗದಷ್ಟು ಡಿಮಾಂಡ್ ಇದೆ. ಅದಲ್ಲದೇ ಇನ್ನೆರಡು ದಿನಗಳಲ್ಲಿ ಬೇರೆ ಡೆಲಿವರಿ ಕೊಡಲೇ ಬೇಕಾಗಿದೆ.

ಮೊದಲೇ ಹೆಚ್ಚು ಸ್ಟಾಕ್ ತಂದಿಟ್ಟುಕೊಳ್ಳಲು ನಿಮಗೇನು ದಾಡಿಯೆಂದು ಮಹಿಳೆಯರು ಜಗಳಕ್ಕಿಳಿಯುತ್ತಿದ್ದಾರೆ. ಮ್ಯಾಚಿಂಗ್ ಹೆಲ್ಮೆಟ್ ತೆಗೆದುಕೊಳ್ಳುವುದನ್ನು ಮಹಿಳೆಯರು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿರುವುದರಿಂದ ನಮಗೆ ವ್ಯಾಪಾರವೋ ವ್ಯಾಪಾರ ಎಂದು ಖುಷಿಖುಷಿಯಾಗಿ ವಿತರಕರು ಹೇಳುತ್ತಿದ್ದಾರೆ. (ಗ್ರಾಹಕರಿಗೆ ಹೆಲ್ಮೆಟ್ ದರ ಏರಿಕೆ ಭಾಗ್ಯ)

ಹಿಂಬದಿ ಸವಾರರ ಡ್ರೆಸ್ ಕೋಡಿಗೆ ಹೆಚ್ಚುಕಮ್ಮಿ ಸೂಟ್ ಆಗುವಂತೆ, ಒಂದೆರಡು ಹೆಚ್ಚುವರಿ ಹೆಲ್ಮೆಟನ್ನು ಢಿಕ್ಕಿಯಲ್ಲಿ ಇಟ್ಟುಕೊಳ್ಳುವ ಬಗ್ಗೆಯೂ ಅಂಗಡಿಯಲ್ಲಿ ಮಹಿಳೆಯರು ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಒಟ್ಟಿನಲ್ಲಿ ಸರಕಾರದ ಹೆಲ್ಮೆಟ್ ಕಡ್ಡಾಯ ಆದೇಶವನ್ನು ಮಹಿಳಾಮಣಿಗಳು ರೈಟ್ ಸ್ಪಿರಿಟ್ ನಲ್ಲಿ ತೆಗೆದುಕೊಂಡಿರುವುದಕ್ಕೆ ಪೊಲೀಸ್ ಮತ್ತು ಗೃಹ ಇಲಾಖೆಗೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎನ್ನುವುದು ಜೆಸಿ ರಸ್ತೆ ಕಡೆಯಿಂದ ಹಾಗೇ ಸುಮ್ಮನೆ ಬರುತ್ತಿರುವ ಗಾಳಿಸುದ್ದಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Womens in Bengaluru buying helmets based on matching dresses - humor article.
Please Wait while comments are loading...