ಓಣ್ಯಾಗಿನ ಹೆಂಗಸ್ರಿಂದ ಕ್ರಾಸ್ಡ್ ಲೆಗ್ ಮೂವ್ಮೆಂಟ್!
ಮೊನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ, ನನ್ನ ಹೆಂಡತಿ "ರ್ರೀ, ನೀವು ಇವತ್ತಿನಿಂದ ಪಡಸಾಲ್ಯಾಗ ಮಲ್ಕೋಬೇಕು" ಅಂದ್ಲು. ನಾ ಒಮ್ಮಿಕ್ಕಲೇ ಗಾಬರಿ ಆಗಿ "ಯಾಕಲೇ, ಹೋದ ವಾರದಾಗರ ಮೂರ ದಿವಸ ಹೊರಗ ಮಲ್ಕೊಂಡಿದ್ದೆ, ಈಗ ಮತ್ತ ಮೂರ ದಿವಸ ಹೊರಗ ಮಲ್ಕೋಬೇಕು?" ಅಂತ ಕೇಳಿದರ "ಮೂರ ದಿವಸ ಇಷ್ಟ ಅಲ್ಲಾ, ನಮ್ಮ ಓಣಿ ರಸ್ತೆ ರಿಪೇರಿ ಆಗೊ ತನಕಾ, ವಾರಕ್ಕ ಎರಡ ಸರತೆ ನಳಾ ಬರೋತನಕಾ, ಓಣ್ಯಾಗಿನ ಗಟರ್ ಕ್ಲೀನ್ ಆಗೋತನಕ ನೀವು ಹೊರಗ ನಾ ಒಳಗ" ಅಂದ್ಲು.
"ಅಯ್ಯ, ಈ ರಸ್ತೆ ರಿಪೇರಿ, ನಳದಾಗ ನೀರು, ಗಟರ್ ಕ್ಲೀನ್ ಇದಕ್ಕ ನನಗ ಏನ ಸಂಬಂಧಲೇ ನಾ ಏನ ಕಾರ್ಪೋರೇಶನದಾಗ ಕೆಲಸಾ ಮಾಡ್ತೇನೇನ್?" ಅಂತ ನಾ ವಿಚಾರಿಸಿದೆ.
"ರ್ರಿ, ಅದೆಲ್ಲಾ ನಂಗೊತ್ತಿಲ್ಲಾ, ನಾವ್ ಇವತ್ತ ಮಹಿಳಾ ಮಂಡಳದ ಸದಸ್ಯರೆಲ್ಲಾ ಸೇರಿ ನಮ್ಮ ಓಣಿ ರೋಡ ರಿಪೇರಿ ಆಗೋತನಕ, ಮೂರ ದಿವಸಕ್ಕೊಮ್ಮೆ ನಳಾ ಬರೋ ತನಕಾ 'ನೊ ಸೆಕ್ಸ್' ಅಂತ ಡಿಸೈಡ ಮಾಡೇವಿ. ನಮ್ಮ ಪಾಲಿಟಿಸಿಯನ್ಸಗೆ ಅಂತೂ ಯಾರು ಹೇಳೊರ ಇಲ್ಲಾ ಕೇಳೋರ ಇಲ್ಲಾ ಹಿಂಗಾಗಿ ನಾವ ಸೆಕ್ಸ್ ಸ್ಟ್ರೈಕ್ ಮಾಡೊರಿದ್ದೇವಿ" ಅಂದ್ಲು.
ನಂಗ ಸಿಟ್ಟ ನೆತ್ತಿಗೇರಿ "ಲೇ, ಏನ್ ಹುಚ್ಚರಂಗ ಮಾಡ್ತೀರಿ, ನಳಾ ಬರಲಿಲ್ಲಾಂದ್ರ, ರೋಡ ರಿಪೇರಿ ಆಗಲಿಲ್ಲಾಂದ್ರ ನಾವೇನ ಮಾಡಬೇಕ್? ಬೇಕಾರ ಆ ಕಾರ್ಪೋರೇಟರ್ ಮನಿ ಮುಂದ ಹೋಗಿ ಕಸಬರಗಿ ಹಿಡಕೊಂಡ ಸ್ಟ್ರೈಕ ಮಾಡಿರಿ. ಹಂತಾದ ಬಿಟ್ಟ ನೋ ರೋಡ್, ನೋ ಸೆಕ್ಸ್ ಅಂದರ ಹೆಂಗ?" ಅಂತ ನಾ ಅಂದೆ.

"ರ್ರಿ, ಆ ಕಸಬರಗಿ ಅಂದೊಲನ ಎಲ್ಲಾ ಹ್ವಾದು. ಈಗ ನಾವು ಮಾಡರ್ನ ಆಗೇವಿ, ಈಗ ಏನಿದ್ದರು ಕ್ರಾಸ್ಡ ಲೆಗ್ಸ್ ಮೂವಮೆಂಟ್. ನೋ ಸಿಟಿ ಡೆವಲ್ಮೆಂಟ್, ನೋ ಬೆಡ್ ಕಮಿಟ್ಮೆಂಟ್. ಏ ನನಗ ಲೋಕಲ್ ಎಮ್.ಪಿ, ಗೊತ್ತ, ಎಮ್.ಎಲ್.ಎ ಗೊತ್ತ, ನಮ್ಮ ಓಣಿ ಕಾರ್ಪೋರೇಟರ್ ನಮ್ಮ ದೋಸ್ತ ಅಂತೆಲ್ಲಾ ದೊಡ್ಡ ದೊಡ್ಡ ಮಾತಾಡ್ತೀರಿ, ಹೋಗಿ ಅವರ ಕಡೆ ಡೆವಲಪಮೆಂಟ್ ಮಾಡಸರಿ. ಅವರಿಗೆ ಹೋಗಿ ಹೇಳ್ರಿ 'ನೀವು ರೋಡ ಮಾಡಲಿಲ್ಲಾಂದರ ನನ್ನ ಹೆಂಡತಿ ನನಗ ಬೆಡ್ ರೂಮಿನಿಂದ ಹೊರಗ ಹಾಕ್ತಾಳ' ಅಂತ, ಏನಂತಾರ ನೋಡ್ರಿ ನಿಮ್ಮ ಲೀಡರ್" ಅಂತ ನಂಗ ಜೋರ ಮಾಡಲಿಕತ್ಲು.
ಅಲ್ಲಾ ನಮ್ಮ ಲೀಡರ್ ಏನಂತಾರ, ಹಂಗ ಅವರ ಹೆಂಡತಿ ಅವರನ್ನ ಬೆಡ್ ರೂಮಿನಿಂದ ಹೊರಗ ಹಾಕಿದ್ದರ ಮಾತ ಬ್ಯಾರೆ ಇತ್ತ. ಅಲ್ಲಾ ಆದ್ರು ಇದೆಲ್ಲಿ ಕನ್ಸೆಪ್ಟಲೇ ಊರ ಡೆವಲಪಮೆಂಟಗು ಗಂಡನ ಜೊತಿ ಮಲ್ಕೊಳದಕ್ಕೂ ಏನ ಸಂಬಂಧ ಅಂತ ಕೇಳಿದರ ಆಮ್ಯಾಲೆ ಗೊತ್ತಾತು ಇದೆಲ್ಲಾ ಕೋಲಂಬಿಯನ್ ಕ್ರಾಸ್ಡ್ ಲೆಗ್ಸ್ ಮೂವಮೆಂಟದ ಎಫೆಕ್ಟ್ ಅಂತ.
ಅದೇನ ಆಗಿತ್ತಂದರ, ಮೊನ್ನೆ ಕೊಲಂಬಿಯಾದ ಬಾರ್ಬಕೋಸ್ ಒಳಗ ಕ್ರಾಸ್ಡ್ ಲೆಗ್ಸ್ ಮೂವಮೆಂಟ್ ಅಂತ ಹೆಣ್ಣಮಕ್ಕಳು ಹೊಸಾ ನಮೂನಿ ಸ್ಟ್ರೈಕ್ ಶುರು ಮಾಡಿದ್ದರು. ಅಂದರ ಆ ಊರಿನ ಹೆಣ್ಣ ಮಕ್ಕಳು 'ನಮ್ಮ ಊರಿನ ರಸ್ತೆ ಸರಿ ಆಗೋತನಕ ನಾವು ಸೆಕ್ಸಗೆ ಕೊ-ಆಪರೇಟ ಮಾಡಂಗಿಲ್ಲಾ' ಅಂತ ಸ್ಟ್ರೈಕ್ ಮಾಡಲಿಕತ್ತಿದ್ದರು.
ಅದ ಒಂಥರಾ 'ಸೆಕ್ಸ್ ಸ್ಟ್ರೈಕ್'ಇದ್ದಂಗ. ಹಂಗ ಅಲ್ಲಿ ಪರಿಸ್ಥಿತಿ ಬ್ಯಾರೆ ಇತ್ತು. ಅವರ ಊರಾಗ ಒಂದ ಛಲೋ ರೋಡ ಇಲ್ಲಾ, ಒಂದ ಕಾರ ಸಹಿತ ಊರಾಗ ಓಡಾಡೊ ಹಂಗ ಇಲ್ಲಾ, ಎಮರ್ಜನ್ಸಿ ಟೈಮ್ ಒಳಗ ಒಂದ ಆಂಬುಲೆನ್ಸ್ ದಾವಾಖಾನಿ ಸಹಿತ ಮುಟ್ಟಂಗಿಲ್ಲಾ. ಅಂತಾ ಹೊಲಸ ರೋಡ ಅವ. ಹಿಂತಾ ವಾತಾವರಣದಾಗ ಅವರು ನಾವ ಮಕ್ಕಳನ ಹಡದ ಅವಕ್ಕ್ಯಾಕ ಕಷ್ಟ ಕೊಡಬೇಕು? ಹಿಂಗಾಗಿ ಊರಿನ ಕಂಡೀಷನ್ ಸುಧಾರಿಸೊ ತನಕ ನಮಗ ಮಕ್ಕಳು ಬ್ಯಾಡ ಅಂತ ಅವರ ಸೆಕ್ಸ್ ಸ್ಟ್ರೈಕ ಶುರು ಮಾಡಿದ್ದರು.
ಅವರ ಪ್ರಕಾರ "Why bring children into this world when they can just die without medical attention and government can't even offer them the most basic rights? So we decided to stop having s** and stop having children until the state fulfils its developmental promises." ಹಿಂಗಾಗಿ "No more s**. We want our road" ಅಂತ ಅವರದ ವಿಚಾರ.
ಇನ್ನೊಂದ ಮಜಾ ಅಂದ್ರಾ ಅಲ್ಲೆ ಈ ಸ್ಟ್ರೈಕಿಗೆ ಅವರ ಗಂಡಂದರು ಸಪೋರ್ಟ ಮಾಡಲಿಕತ್ತಿದ್ದರು. ಈ ವಿಚಾರ ಅದ ಹೆಂಗೋ ನನ್ನ ಹೆಂಡತಿ ಕಿವಿಗೆ ಬಿದ್ದ ಅಕಿ ಅದನ್ನ ನಮ್ಮ ಓಣಿ ಮಹಿಳಾ ಮಂಡಳ ಮೀಟಿಂಗನಾಗ ಹೇಳಿ ಬಿಟ್ಟಾಳ. ತೊಗೊ ಕೇಳ್ತೀರೇನ? ನಮ್ಮ ಓಣಿ ಹೆಣ್ಮಕ್ಕಳೆಲ್ಲಾ "very innovative idea, ನಮ್ಮ ಓಣಿ ರೋಡು ಹಳ್ಳಾ ಹಿಡದಾವ, ಮೂರ ದಿವಸಕ್ಕೊಮ್ಮೆ ಬರೋ ನಳಾ ಆರ ದಿವಸಕ್ಕ ಬರತದ, ಯಾರ ಹೇಳೋರ ಇಲ್ಲಾ ಕೇಳೋರ ಇಲ್ಲಾ, ನಮ್ಮ ಗಂಡಂದರಿಗಂತೂ ಜವಾಬ್ದಾರಿನ ಇಲ್ಲಾ, ಹಂಗ ಹಿಂಗ...." ಅಂತ ಲೋಕಲ್ ಲೀಡರನಿಂದ ಹಿಡದ ಮನಿ ಗಂಡನ್ನ ತನಕಾ ಎಲ್ಲಾರಿಗೂ ಬೈದ ತಾವು ಸೆಕ್ಸ್ ಸ್ಟ್ರೈಕ್ ಮಾಡಬೇಕು ಅಂತ ಡಿಸೈಡ ಮಾಡ್ಯಾರ.
ಏನ ಮಾಡ್ತೀರಿ? ಅದಕ್ಕ ಹೇಳೊದು ಭಾಳ ಕಲತೊರನ ಮದವಿ ಮಾಡ್ಕೋಬಾರದು ಅಂತ. ಈಗ ನೋಡ್ರಿ ಈ ಸುಡಗಾಡ ರೋಡ ಯಾವಾಗ ಆಗಬೇಕೊ, ಯಾವಾಗ ವಾರದಾಗ ಎರಡ ಸರತೆ ನೀರ ಬರಬೇಕೊ ಆ ದೇವರಿಗೆ ಗೊತ್ತ. ಅಲ್ಲಿ ತನಕಾ ನಾವ ಪಡಸಾಲ್ಯಾಗ ಮಲ್ಕೊಳ್ಳೋದ. ಹಂಗ ನಮ್ಮ ಲೀಡರ್ಸ್ ಕೆಲಸಾ ಮಾಡೋದ ನೋಡಿದರ ಎಲ್ಲೆ ಕಾಯಂ ಪಡಸಾಲಿನ ಗತಿ ಆಗ್ತದೋ ಅಂತ ನನಗಂತೂ ಹೆದರಕಿನ ಬರಲಿಕತ್ತದ. ನಿಮ್ ಕಥೀನು ಹಂಗ ಏನ್ರಿ?












Click it and Unblock the Notifications