ಶಾಲಾ ಪರೀಕ್ಷೆಯ ಮಾರ್ಕುಗಳು ಬರೇ ಬೂಸಾ?

ನಾವು ಹೀಗೆ ಮಾರ್ಕುಗಳಿಗಾಗಿ ಪರದಾಡುತ್ತಿದ್ದಾಗ ನಮ್ಮ ಗೆಳೆಯರ ಬಳಗದಲ್ಲೊಬ್ಬ ವಿಜಯ್ ಎಂಬವನಿದ್ದ. ಅವನು ಪರೀಕ್ಷೆಗಳು - ಮಾರ್ಕುಗಳು - ಪಾಸು - ಫೇಲುಗಳ ಬಗ್ಗೆ ಅಗಾಧ ನಿರ್ಲಿಪ್ತತನ ಬೆಳೆಸಿಕೊಂಡಿದ್ದ. ಉಳಿದೆಲ್ಲ ದಿನಗಳಲ್ಲಿ ಊರ ಉಸಾಬರಿ ಮಾಡುತ್ತ, ಬಾರಾ ಭಾನಗಡಿಗಳಲ್ಲಿ ಭಾಗಿಯಾಗುತ್ತ, ಪರೀಕ್ಷೆ ಬಂದಾಗ ಸರಿಯಾಗಿ ಮೂವತ್ತೈದು ಮಾರ್ಕುಗಳಿಗೆ ತಯಾರಿ ಮಾಡಿಕೊಂಡು ಪರೀಕ್ಷೆ ಬರಿಯುತ್ತಿದ್ದ. ಹೀಗಾಗಿ ಪ್ರತಿ ಸಲವೂ ಒಂದಾದರೂ ವಿಷಯ ಪಾಸಾಗದೇ ಉಳಿಯುತ್ತಿದ್ದ. ಪ್ರತೀ ಫಲಿತಾಂಶದ ನಂತರ ನಾವು ಕೊಡುತ್ತಿದ್ದ ಪಾರ್ಟಿ ಅವನು ಬರುತ್ತಿದ್ದನಾದರೂ ಅವನಿಗೆ ಪಾರ್ಟಿ ಕೊಡುವ ಅವಕಾಶವೇ ಸಿಕ್ಕಿರಲಿಲ್ಲ.
ಕೊನೆಯ ವರ್ಷದ ಪರೀಕ್ಷೆ ನಾವು ಮುಗಿಸಿ ನಮ್ಮ-ನಮ್ಮ ಊರಿಗೆ ಹೋಗುವ ಮೊದಲು ವಿಜಯ್ "ದೋಸ್ತಗಳಾ, ಬರೀ ನಿಮ್ಮದೇ ಪಾರ್ಟಿಲಿ ತಿಂದಿದೀನಿ, ಈ ಸಲ ನಾನು ಪಾರ್ಟಿ ಕೊಡತೇನಿ. ಈ ಸಲನೂ ನೀವು ಚೆನ್ನಾಗಿ ಪಾಸ್ ಆಗ್ತೀರಿ, ಮತ್ತು ನನ್ನವು ಒಂದೆರಡು ವಿಷಯ ಉಳಿತಾವು. ಉಳಿವಲ್ಯಾಕ, ಆದರ ಅಂತೂ-ಇಂತೂ ಈ ಕಾಲೇಜು ಮುಗಿಸಿದೆನಲ್ಲಾ, ಆ ಖುಷಿಲೇ ಪಾರ್ಟಿ" ಎಂದು ಒಂದು ಭರ್ಜರಿ ಪಾರ್ಟಿ ಕೊಟ್ಟಿದ್ದ. ನಾವು ಡಿಗ್ರಿ ಮುಗಿಸಿ ಒಂದೆರಡು ವರುಷದ ನಂತರ ಹಳೇ ಬಾಕಿಯಲ್ಲಾ ತೀರಿಸಿ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಹಿಡಿದ ವಿಜಯ ಈಗ ಜಬರ್ ದಸ್ತಾಗಿದ್ದಾನೆ!
ವಿದ್ಯಾರ್ಥಿ ಜೀವನವನ್ನು ಮುಗಿಸಿ, ಗೃಹಸ್ಥ/ ಗ್ರಸ್ತ ಜೀವನದಲ್ಲಿರುವ ನಾನು ಈಗ ನನ್ನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತ ದಾಟಿ, ನನ್ನ ಮಗನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತಕ್ಕೆ ಬಂದಿದ್ದೇನೆ. ನಾನು ಕೂಡ ಆಗಾಗ ದಾರ್ಶನಿಕವಾಗಿ ವಿಜಯನಂತೆ ವಿಚಾರ ಮಾಡುತ್ತೇನೆ - ಅಗಾಧವಾದ, ಅನಂತವಾದ ದೇಶ-ಕಾಲಗಳ ಲೆಕ್ಕದಲ್ಲಿ ಕ್ಷುಲ್ಲಕವಾದ ಯಾವುದೋ ಒಂದು ಪರೀಕ್ಷೆಯ ಅಂಕಗಳ ಬಗ್ಗೆ ನಾವು ಚಿಂತಿಸಬೇಕಾ? ಲೋಭ ಪಡಬೇಕಾ? ಹೆಮ್ಮೆ ಇಲ್ಲವೇ ಅವಮಾನ ಪಡಬೇಕಾ? 'ಜೀವನ ಯೋಗ ಧರ್ಮ' ದಯಪಾಲಿಸಿದ ಕವಿ ಡಿವಿಜಿ ಹತ್ತನೇ ಇಯತ್ತೆಯನ್ನೂ ಪಾಸಾಗಿರಲಿಲ್ಲವಲ್ಲ? 'ಕಡಲ ತೀರದ ಭಾರ್ಗವ' ಕಾರಂತರು ಡಿಗ್ರಿಯನ್ನೇ ಪಾಸಾಗಿರಲಿಲ್ಲವಲ್ಲ? ಇನ್ನೇನು 'ಶಾಲಾ ಪರೀಕ್ಷೆಯ ಮಾರ್ಕುಗಳು ಬೂಸಾ' ಎಂಬ ಸಿದ್ಧಾಂತಕ್ಕೆ ಬರೋಣವೆನ್ನುವಷ್ಟರಲ್ಲಿ 'ಕನ್ನಡದ ಆಸ್ತಿ' ಮಾಸ್ತಿ ನೆನಪಾಗುತ್ತಾರೆ. ಪರೀಕ್ಷೆಗಳಲ್ಲಿ ಕೈತುಂಬ ಮಾರ್ಕು ಪಡೆದು, ಒಳ್ಳೆಯ ಕೆಲಸವನ್ನು ಪಡೆದು, ಪರೋಪಕಾರಿಯಾಗಿ ಬಾಳಿ, ತುಂಬು 'ಜೀವನ' ನಡೆಸಿದ ಮಾಸ್ತಿಯವರನ್ನು ನೆನಸಿಕೊಂಡು ನನ್ನ ಸಿದ್ಧಾಂತವನ್ನು ಒಂಚೂರು ಬದಲಿಸಿಕೊಳ್ಳುತ್ತೇನೆ 'ಜೀವನದ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡೋದು ಮುಖ್ಯ, ಅದರ ಜೊತೆಗೆ ಶೈಕ್ಷಣಿಕ ಪರೀಕ್ಷೆಗಳಲ್ಲೂ ಚೆನ್ನಾಗಿ ಮಾಡಿದರೆ ಇನ್ನೂ ಒಳ್ಳೆಯದು..'











Click it and Unblock the Notifications