ಅಕ್ಕಿ ಅಷ್ಟ ಯಾಕ? ಇಂದ ಮಾರ್ಕ್ಸೂ ತುಟ್ಟಿ!

Teachers and marks theory
(ಹಿಂದಿನ ಪುಟದಿಂದ...) ಇದೆಲ್ಲಾ ಶಾಲೆಗಳಲ್ಲಿದ್ದಾಗಿನ ಮಾತಾಯ್ತು. ಇನ್ನು ಕಾಲೇಜಿಗೆ ಬಂದಾಗ 'ಅಂಕ'ಗಣಿತದಲ್ಲಿ ಇನ್ನೊಂದು ಅಧ್ಯಾಯ ಶುರುವಾಗುತ್ತಿತ್ತು. ಕಾಲೇಜು ಹಾಸ್ಟೆಲಿನಲ್ಲಿರುತ್ತಿದ್ದರಿಂದ 'ಈ ಸಲ ಟೆಸ್ಟ್ ನ್ಯಾಗ ಛಲೋ ಮಾರ್ಕ್ಸ್ ತಗೋಬೇಕ್ ನೋಡ್" ಎಂದು ಜೀವ ತಿನ್ನಲು ಅಪ್ಪ-ಅಮ್ಮ ಹತ್ತಿರವಿರುತ್ತಿರಲಿಲ್ಲ. ಆದರೆ ನಮ್ಮ ಕಾಲೇಜಿನ ಬಹಳಷ್ಟು ಮಾಸ್ತರರು - ಅವರೆಲ್ಲರ ಹೊಟ್ಟೆ ತಣ್ಣಗಿರಲಿ- ಮಾರ್ಕುಗಳಿಗಾಗಿ ನಮ್ಮ ಜೀವ ತಿನ್ನುತ್ತಿದ್ದರು.

ನಮ್ಮ ಹಿಂದಿನ ತಲೆಮಾರಿನಲ್ಲಿ, ಕಾಲೇಜು ಶಿಕ್ಷಣ ಪಡೆಯುವವರೇ ಕಮ್ಮಿಯಿರುತ್ತಿದ್ದಾಗ, ಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿರುವ ಕಾಲೇಜು ಶಿಕ್ಷಕರು ಕಾಲೇಜು ಶುರುವಾದ ತಕ್ಷಣ ವಿದ್ಯಾರ್ಥಿಗಳಲ್ಲಿ ತಮ್ಮ ಭಾವಿ ಅಳಿಯನನ್ನು ಹುಡುಕಿ, ಅವನಿಗೆ ತಮ್ಮ ಕೈಲಾದಷ್ಟು ಹೆಚ್ಚಿಗೆ ಮಾರ್ಕು ಕೊಟ್ಟು, ತಮ್ಮ ಸ್ನೇಹಿತ ಉಪನ್ಯಾಸಕರಿಂದ ಕೊಡಿಸಿ, ಡಿಗ್ರಿ ಮುಗಿದಮೇಲೆ ಮಗಳನ್ನು ಕೊಡತಿದ್ದರಂತೆ. ಆಗ ಕುಟುಂಬ ಯೋಜನೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲವಾಗಿ ಗುರುಪುತ್ರಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತಿತಂತೆ. ಆದರೆ ನಮ್ಮ ಕಾಲೇಜುಕಾಲದ ಹೊತ್ತಿಗೆ ಆ ಸುಭಿಕ್ಷದ ಕಾಲ ಹೊರಟೋಗಿತ್ತು. ಮಗಳನ್ನು ಕೊಡೋದು ದೂರ ಉಳಿಯಿತು, ನಾವು ಕಷ್ಟಪಟ್ಟು ಓದಿ, ನಿಯತ್ತಾಗಿ ಬರೆದ ಉತ್ತರಗಳಿಗೆ ಮಾರ್ಕು ಕೊಡಲು ಜಿಪುಣತನ ಮಾಡುತ್ತಿತ್ತು ನಮ್ಮ ಗುರುವೃಂದ. ಇರಲಿ, ಎಲ್ಲಕ್ಕೂ ಪಡೆದುಬಂದಿರಬೇಕು...

ಮಾರ್ಕುಗಳನ್ನು ತಮ್ಮ ಮನೆಯ ಗಂಟಿನಂತೆ ಭಾವಿಸುವುದು ಹೆಚ್ಚುಕಡಿಮೆ ಎಲ್ಲಾ ಗುರುಗಳ ಸಾಮಾನ್ಯ ಗುಣವಾಗಿತ್ತಾದರೂ, ಕೆಲ ಗುರುಜನ ಮಾರ್ಕುಗಳ ವಿಷಯದಲ್ಲಿ ಇನ್ನೂ ಕೆಲ ವಿಶೇಷತೆಗಳನ್ನು ಹೊಂದಿದ್ದರು. ಒಬ್ಬ ಗುರುಗಳು ತಮ್ಮ ವಿಷಯದಲ್ಲಿ ನಾವು ಪಡೆಯುವ ಮಾರ್ಕುಗಳ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರುತ್ತಿದ್ದರೆಂದರೆ ನಾವು ಯಾವಾಗಲೂ ಅವರ ವಿಷಯವನ್ನೇ ಓದಬೇಕೆಂದು ಬಯಸುತ್ತಿದ್ದರು!

ಇನ್ನೊಬ್ಬ ಗುರುಗಳು ತಮ್ಮ ವಿಷಯದಲ್ಲಿ ಯಾರಿಗೂ, ಯಾವತ್ತಿಗೂ ನೂರಕ್ಕೆ ಅರವತ್ತೈದಕ್ಕಿಂತ ಹೆಚ್ಚು ಮಾರ್ಕು ಕೊಡುತ್ತಿರಲಿಲ್ಲ. ಅದ್ಯಾಕೆ ಹಾಗೆ ಎಂದು ಒಬ್ಬ ವಿದ್ಯಾರ್ಥಿ ಕೇಳಿದಾಗ ನಮ್ಮ ಗುರುವರ್ಯರು "ಅಲ್ಲೋ ತಮ್ಮ್ಯಾ, ನಾ ಕಲಿಯುವಾಗ ನನಗ ಈ ವಿಷಯದಾಗ ನನಗ ಅರವತ್ತೈದು ಮಾರ್ಕ್ಸ್ ಬಂದಿದ್ವು. ನೀನು ನನ್ನ ಕೈಯಾಗ ಕಲ್ತು ನನಗಿಂತ ಶ್ಯಾಣ್ಯಾ ಆಗಿರ್ತೀಯೇನೂ? ಮತ್ತ, ನಿನಗ ಅರವತ್ತೈದಕ್ಕಿಂತಾ ಹೆಚ್ಚಿಗಿ ಹ್ಯಾಂಗ್ ಕೊಡಾಕ್ ಬರ್ತೈತಿ?" ಎಂದು ದಬಾಯಿಸಿದ್ದರಂತೆ ಎಂಬ ಕತೆ ನಮ್ಮ ಕಾಲೇಜಿನ ಮೌಖಿಕ ಸಾಹಿತ್ಯದಲ್ಲಿ ದಾಖಲಾಗಿತ್ತು. ರೂಪಾಯಿಗೆ ಸೇರು ಅಕ್ಕಿ ಬರತಿದ್ದ ಕಾಲದಲ್ಲಿ ಕಾಲೇಜು ಕಲಿತ ಗುರುಗಳಿಗೆ, ನಲವತ್ತು ರೂಪಾಯಿಗೆ ಕಿಲೋ ಅಕ್ಕಿಯಾಗಿರುವ ಈ ಕಾಲದಲ್ಲಿ ಉಳಿದಿದ್ದೆಲ್ಲಾ ತುಟ್ಟಿಯಾದರೂ ಮನುಷ್ಯನ ಜೀವ ಮತ್ತು ಮಾರ್ಕ್ಸು ಮಾತ್ರ ಸೋವಿ ಎಂದು ಯಾರು ಹೇಳ್ಬೇಕು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+