ಅಣ್ಣಾಮಲೈ ಬೆನ್ನಲ್ಲೇ ಮತ್ತೊಬ್ಬ ಪ್ರಭಾವಿ ನಾಯಕ ರಾಜೀನಾಮೆ; ತಮಿಳುನಾಡಿನಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ
ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕಾರು ನಾಗರಾಜನ್ (Karu Nagarajan) ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಇತ್ತೀಚೆಗೆ ಬಿಜೆಪಿ ತೊರೆದು ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಿದ ಬೆನ್ನಲ್ಲೇ, ಕಾರು ನಾಗರಾಜನ್ ಅವರ ಈ ನಡೆ ಕಮಲ ಪಾಳಯಕ್ಕೆ ದೊಡ್ಡ ಆಘಾತ ನೀಡಿದೆ. ಬಿಜೆಪಿ ತೊರೆದಿರುವ ಕಾರು ನಾಗರಾಜನ್ ಅವರು ಅಣ್ಣಾಮಲೈ ಅವರ ಹೊಸ ರಾಜಕೀಯ ಹಾದಿಯನ್ನು ಬೆಂಬಲಿಸುವುದಾಗಿ ಮುಕ್ತವಾಗಿ ಘೋಷಿಸಿದ್ದಾರೆ.
"ಬಿಜೆಪಿಯನ್ನು ಮನೆಮನೆಗೆ ತಲುಪಿಸಿದ್ದೇ ಅಣ್ಣಾಮಲೈ"
ತಮ್ಮ ರಾಜೀನಾಮೆ ಕುರಿತು ಮಾತನಾಡಿರುವ ಕಾರು ನಾಗರಾಜನ್, "ತಮಿಳುನಾಡಿನಲ್ಲಿ ಬಿಜೆಪಿಯನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ದು, ಪ್ರತಿ ಮನೆಮನೆಗೂ ತಲುಪಿಸಿದ ಕೀರ್ತಿ ಅಣ್ಣಾಮಲೈ ಅವರಿಗೆ ಸಲ್ಲುತ್ತದೆ. ಅವರು ತಮಿಳುನಾಡು ರಾಜಕಾರಣದಲ್ಲಿ ಹೊಸ ಆಶಾವಾದ ಮೂಡಿಸಿದ್ದಾರೆ. ಹಾಗಾಗಿ, ನಾನು ಅಣ್ಣಾಮಲೈ ಅವರು ಆರಂಭಿಸಿರುವ ಹೊಸ ಚಳವಳಿ/ಮೂವ್‌ಮೆಂಟ್ ಸೇರಲು ನಿರ್ಧರಿಸಿದ್ದೇನೆ" ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಪ್ರಭಾವಿ ನಾಯಕರಾಗಿದ್ದ ಕಾರು ನಾಗರಾಜನ್ ರಾಜೀನಾಮೆಯಿಂದಾಗಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದ್ದು, ಮುಂಬರುವ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಅವರ ಹೊಸ ಚಳವಳಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
ಸಾಮೂಹಿಕ ರಾಜೀನಾಮೆಗೆ ನಿರ್ಧಾರ
ತಮಿಳುನಾಡು ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಕಾರು ನಾಗರಾಜನ್ ನೇತೃತ್ವದಲ್ಲಿ ಹಲವು ಪ್ರಮುಖ ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಈಗ ಅವರ ಬೆಂಬಲಕ್ಕೆ ನಿಂತಿರುವ ಕಾರು ನಾಗರಾಜನ್, ಅಣ್ಣಾಮಲೈ ಆರಂಭಿಸಿರುವ ಹೊಸ ರಾಜಕೀಯ ಚಳವಳಿಗೆ ಸಾಥ್ ಕೊಡುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರು ನಾಗರಾಜನ್, ಬಿಜೆಪಿಗೆ ಬರೆದಿರುವ ರಾಜೀನಾಮೆ ಪತ್ರವನ್ನು ಶೀಘ್ರದಲ್ಲೇ ವರಿಷ್ಠರಿಗೆ ರವಾನಿಸುವುದಾಗಿ ತಿಳಿಸಿದ್ದು, ತಮಿಳುನಾಡು ಕಮಲ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ತಮ್ಮ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಕಾರು ನಾಗರಾಜನ್, "ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಜನಸಾಮಾನ್ಯರಿಂದ ಅಪಾರ ಬೆಂಬಲ ಗಳಿಸಿದ್ದರು. ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಅವರು ಭವಿಷ್ಯದಲ್ಲಿ ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ರಾಜಕಾರಣದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಸೇರಿದಂತೆ ಹಲವು ಉದಾತ್ತ ಆಶಯಗಳೊಂದಿಗೆ ಅವರು ಹೊಸ ಚಳವಳಿಯನ್ನು (New Movement) ಪ್ರಾರಂಭಿಸಿದ್ದಾರೆ. ಅವರಿಗೆ ತಮಿಳುನಾಡಿನಾದ್ಯಂತ ಸಾರ್ವಜನಿಕರ ದೊಡ್ಡ ಬೆಂಬಲ ಇರುವುದರಿಂದ, ನಾವೆಲ್ಲರೂ ಸ್ವಯಂಪ್ರೇರಿತರಾಗಿ ಬಿಜೆಪಿಗೆ ರಾಜೀನಾಮೆ ನೀಡಿ ಅವರ ಸಂಘಟನೆಯನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ.
ನಟ ವಿಜಯ್ ಪಕ್ಷದ ವಿರುದ್ಧ ಹೋರಾಟದ ಮುನ್ಸೂಚನೆ
ಇದೇ ಸಂದರ್ಭದಲ್ಲಿ ತಮಿಳುನಾಡಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಅವರ ರಾಜಕೀಯ ಎಂಟ್ರಿ ಮತ್ತು ಅವರ ಪಕ್ಷ 'ಟಿವಿಕೆ' ಕುರಿತೂ ಕಾರು ನಾಗರಾಜನ್ ಪ್ರಸ್ತಾಪಿಸಿದ್ದಾರೆ. "ನಮ್ಮ ರಾಜಕೀಯ ಹೋರಾಟ ವೈಯಕ್ತಿಕವಾಗಿ ನಟ ವಿಜಯ್ ವಿರುದ್ಧ ಇರುವುದಿಲ್ಲ. ಆದರೆ, ಭವಿಷ್ಯದಲ್ಲಿ ಒಂದು ವೇಳೆ ವಿಜಯ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಅದರ ವಿರುದ್ಧ ನಮ್ಮ ಹೋರಾಟ ಇರಲಿದೆ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಬಿಜೆಪಿಯ ಹೈಕಮಾಂಡ್ ಧೋರಣೆಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ನಾಗರಾಜನ್, "ತಮಿಳುನಾಡಿನಲ್ಲಿ ಪದೇ ಪದೇ ರಾಜಕೀಯ ನಾಯಕರನ್ನು ಬದಲಾಯಿಸುತ್ತಾ ಹೋದರೆ, ರಾಜ್ಯದಲ್ಲಿ ಅರ್ಥಪೂರ್ಣ ರಾಜಕೀಯ ಬದಲಾವಣೆ ತರಲು ಹೇಗೆ ಸಾಧ್ಯ? ನನ್ನೊಂದಿಗೆ ಬಿಜೆಪಿಯ ಹಲವು ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ಬಂದು ಅಣ್ಣಾಮಲೈ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಮಿಳುನಾಡು ಜನತೆಯ ನೆಚ್ಚಿನ ನಾಯಕನಾಗಿ ಅಣ್ಣಾಮಲೈ ಹೊರಹೊಮ್ಮಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಅವರ ಹೊಸ ರಾಜಕೀಯ ಪಯಣ ಹಾಗೂ ಬಿಜೆಪಿ ನಾಯಕರ ಈ ಸಾಮೂಹಿಕ ರಾಜೀನಾಮೆ ಪರ್ವ ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.













Click it and Unblock the Notifications