ಜನಸೇನಾದಿಂದ ರಾಜ್ಯಸಭೆಗೆ ಪವನ್ ಕಲ್ಯಾಣ್ ಆಪ್ತ; ರೇಸ್‌ನಲ್ಲಿರುವ ಲಿಂಗಮನೇನಿ ರಮೇಶ್ ಹಿನ್ನೆಲೆ ಏನು?
ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ. ಜನಸೇನಾ ಪಕ್ಷದ (JSP) ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪರಮಾಪ್ತ ಸ್ನೇಹಿತ, ಪ್ರಸಿದ್ಧ ಉದ್ಯಮಿ ಹಾಗೂ ಸಮಾಜಸೇವಕ ಲಿಂಗಮನೇನಿ ರಮೇಶ್ ಅವರನ್ನು ಜನಸೇನಾ ಪಕ್ಷದ ವತಿಯಿಂದ ರಾಜ್ಯಸಭೆಗೆ ಕಳುಹಿಸಲು ಸಿದ್ಧತೆ ನಡೆದಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಹಿನ್ನೆಲೆ ಮತ್ತು ಕೌಟುಂಬಿಕ ಪರಂಪರೆ
ಮೂಲತಃ ವಿಜಯವಾಡದವರಾದ ಲಿಂಗಮನೇನಿ ರಮೇಶ್ ಅವರು ಕಳೆದ ಮೂರು ದಶಕಗಳಿಂದ ಆಂಧ್ರಪ್ರದೇಶದ ರಿಯಲ್ ಎಸ್ಟೇಟ್, ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಲಿಂಗಮನೇನಿ ರಮೇಶ್ ಅವರು ಉದ್ಯಮ ಮತ್ತು ಸಮಾಜಸೇವೆಯನ್ನೇ ಉಸಿರಾಡಿದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದವರು. ತಮ್ಮ ಪೋಷಕರಾದ ಲಿಂಗಮನೇನಿ ಶ್ರೀರಾಮುಲು ಮತ್ತು ನೀಲಕಂಠೇಶ್ವರಮ್ಮ ಅವರ ಆದರ್ಶಗಳಿಂದ ಪ್ರೇರಿತರಾಗಿ, ಅವರ ಹೆಸರಿನಲ್ಲೇ 'ಲಿಂಗಮನೇನಿ ಶ್ರೀರಾಮುಲು-ನೀಲಕಂಠೇಶ್ವರಮ್ಮ ಚಾರಿಟಬಲ್ ಟ್ರಸ್ಟ್' ಸ್ಥಾಪಿಸಿ ಉಚಿತ ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳನ್ನು ಒದಗಿಸುತ್ತಾ ಬಂದಿದ್ದಾರೆ.

ಉದ್ಯಮ ರಂಗದಲ್ಲಿ ಲಿಂಗಮನೇನಿ ರಮೇಶ್ ಸಾಧನೆಗಳು
ಲಿಂಗಮನೇನಿ ಎಸ್ಟೇಟ್ಸ್ (LEPL ಗ್ರೂಪ್) ಮೂಲಕ ಕರಾವಳಿ ಆಂಧ್ರದಲ್ಲಿ ಬೃಹತ್ ಪ್ರಮಾಣದ ಮತ್ತು ಅಂತರರಾಷ್ಟ್ರೀಯ ಮಟ್ಟದ ರಿಯಲ್ ಎಸ್ಟೇಟ್ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಲೇಷ್ಯಾ ಮೂಲದ ಐಜೆಎಂ ಕಾರ್ಪೊರೇಷನ್ ಜೊತೆ ಮೈತ್ರಿ ಮಾಡಿಕೊಂಡು 120 ಎಕರೆ ಪ್ರದೇಶದಲ್ಲಿ 3,300 ಅಪಾರ್ಟ್‌ಮೆಂಟ್‌ಗಳು ಹಾಗೂ 300 ವಿಲ್ಲಾಗಳನ್ನು ಒಳಗೊಂಡ 'ರೇನ್ ಟ್ರೀ ಪಾರ್ಕ್' ಎಂಬ ಹೈಟೆಕ್ ಟೌನ್‌ಶಿಪ್ ನಿರ್ಮಿಸಿದರು. ಇದು ವಿಜಯವಾಡ-ಗುಂಟೂರು ನಗರ ಕಾರಿಡಾರ್ ಅಭಿವೃದ್ಧಿಗೆ ದೊಡ್ಡ ವೇಗ ನೀಡಿತು.
"ಥಿಂಕ್ ಲೋಕಲ್, ಆಕ್ಟ್ ಗ್ಲೋಬಲ್" ಎಂಬ ತತ್ವದಡಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ 'ಡಾನ್‌ಕಾಸ್ಟರ್ ಪಿನಾಕಲ್' ಎಂಬ ವಸತಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡರು. 2011ರಲ್ಲಿ ವಿಜಯವಾಡದ ಬೆಂಜ್ ಸರ್ಕಲ್‌ನಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಕಮ್ ಶಾಪಿಂಗ್ ಮಾಲ್ ನಿರ್ಮಿಸಿದರು. ಅಲ್ಲದೆ, ₹600 ಕೋಟಿ ವೆಚ್ಚದ 26 ಅಂತಸ್ತಿನ 'ಮಿಡ್ ವ್ಯಾಲಿ' ಗೇಟೆಡ್ ಕಮ್ಯುನಿಟಿ ನಿರ್ಮಿಸಿ, ಆಲ್ ಇಂಡಿಯಾ ಬಿಸಿನೆಸ್ ಡೆವಲಪ್‌ಮೆಂಟ್ ಅಸೋಸಿಯೇಷನ್‌ನಿಂದ 'ಇಂಡಿಯನ್ ಬಿಲ್ಡರ್ ಪ್ರಶಸ್ತಿ' ಮುಡಿಗೇರಿಸಿಕೊಂಡರು.
ಉಮ್ಮಡಿ ಆಂಧ್ರಪ್ರದೇಶದಿಂದ ಆರಂಭವಾದ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆ 'ಏರ್ ಕೋಸ್ಟಾ' (Air Costa) ಲಾಂಚ್ ಮಾಡುವಲ್ಲಿ ಇವರ ಪಾತ್ರ ದೊಡ್ಡದಾಗಿತ್ತು. ಇದರೊಂದಿಗೆ ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಸೌರ ಹಾಗೂ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಿ ಪರಿಸರಸ್ನೇಹಿ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ವಿಜಯವಾಡ ಬಳಿ 'ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ' ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ರೋಗಿಗಳ ಮನೆಗೇ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ 'ಹೆಲ್ತ್ ಆನ್ ಅಸ್' ಎಂಬ ಹೋಮ್ ಹೆಲ್ತ್ ಕೇರ್ ಯೋಜನೆಯನ್ನು ಆರಂಭಿಸಿದ್ದಾರೆ.
'ಲಿಂಗಮನೇನಿ ಎಜುಕೇಷನಲ್ ಅಕಾಡೆಮಿಕ್ ಫೌಂಡೇಶನ್' (LEAF) ಮೂಲಕ ಆರ್ಥಿಕವಾಗಿ ಹಿಂದುಳಿದ ನೂರಾರು ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. 2010ರಲ್ಲಿ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸಲು ಅಮೆರಿಕಕ್ಕೆ ತೆರಳಿದ್ದ ಆಂಧ್ರಪ್ರದೇಶ ಸರ್ಕಾರದ ನಿಯೋಗದಲ್ಲಿ ಇವರೂ ಭಾಗಿಯಾಗಿದ್ದರು. 2014ರಲ್ಲಿ ವಿಜಯವಾಡದ 'ಸ್ಮಾರ್ಟ್ ಸಿಟಿ ಕಮಿಟಿ'ಯ ಜಿಲ್ಲಾ ಮಟ್ಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಮೂಲಸೌಕರ್ಯ ಅಭಿವೃದ್ಧಿಯ ಅನುಭವವನ್ನು ಗುರುತಿಸಿ, 2016ರಲ್ಲಿ ಮಲೇಷ್ಯಾ ಸರ್ಕಾರವು ಇವರನ್ನು "ಭಾರತ ಮತ್ತು ದಕ್ಷಿಣ ಏಷ್ಯಾದ ಮೂಲಸೌಕರ್ಯ ಅಭಿವೃದ್ಧಿಯ ವಿಶೇಷ ರಾಯಭಾರಿ"ಯನ್ನಾಗಿ ನೇಮಿಸಿತ್ತು. ಇವರ ಉದ್ಯಮ ಮತ್ತು ಸಮಾಜಸೇವೆಯನ್ನು ಗೌರವಿಸಿ 2016ರಲ್ಲಿ ದೆಹಲಿ ತೆಲುಗು ಅಕಾಡೆಮಿಯು ಇವರಿಗೆ 'ಉದ್ಯೋಗ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.
ಅನಾಥರು ಮತ್ತು ಆಸರೆ ಇಲ್ಲದ ಸುಮಾರು 100 ಬಡ ಹೆಣ್ಣುಮಕ್ಕಳ ಪುನರ್ವಸತಿ ಮತ್ತು ಶಿಕ್ಷಣಕ್ಕಾಗಿ 'ಚಿನ್ಮಯ ಆರ್ಗನೈಸೇಷನ್ ಫಾರ್ ರೂರಲ್ ಡೆವಲಪ್‌ಮೆಂಟ್' ಸಂಸ್ಥೆಗೆ 6 ಎಕರೆ ಭೂಮಿಯನ್ನು ದಾನ ಮಾಡಿದ್ದರು. ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಖುದ್ದಾಗಿ ಈ ಸಂಸ್ಥೆಗೆ ಭೇಟಿ ನೀಡಿ ಲಿಂಗಮನೇನಿ ಕುಟುಂಬದ ದಾನಗುಣವನ್ನು ಶ್ಲಾಘಿಸಿದ್ದರು. ನಂಬೂರು ಎಂಬಲ್ಲಿ ಆಗಮ ಶಾಸ್ತ್ರದ ಪ್ರಕಾರ ಕಟ್ಟುನಿಟ್ಟಾಗಿ 'ಶ್ರೀ ಭೂ ಸಮೇತ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ' ದೇವಸ್ಥಾನವನ್ನು 12 ವರ್ಷಗಳ ಕಾಲ ಶ್ರಮವಹಿಸಿ ನಿರ್ಮಿಸಿದ್ದಲ್ಲದೆ, ಅದರ ಮುಂದಿನ ನಿರ್ವಹಣೆಗಾಗಿ 9 ಎಕರೆ ಜಮೀನನ್ನು ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.
ಪವನ್ ಕಲ್ಯಾಣ್ ಜೊತೆಗಿನ ಒಡನಾಟ
ಲಿಂಗಮನೇನಿ ರಮೇಶ್ ಅವರು ಜನಸೇನಾ ಪಕ್ಷ ಸ್ಥಾಪನೆಯಾದ ದಿನದಿಂದಲೂ ಅದರೊಂದಿಗೆ ಆಳವಾದ ಒಡನಾಟ ಹೊಂದಿದ್ದಾರೆ. ಪವನ್ ಕಲ್ಯಾಣ್ ಅವರ ವೈಯಕ್ತಿಕ ಸ್ನೇಹಿತರಾಗಿರುವ ಇವರು, ಕಳೆದ 2024ರ ಆಂಧ್ರಪ್ರದೇಶ ಸಾರ್ವತ್ರಿಕ ಚುನಾವಣೆಯ ಮೈತ್ರಿ ಕೂಟದ (TDP-JSP-BJP) ಸಮನ್ವಯತೆ ಮತ್ತು ಸಾಂಸ್ಥಿಕ ಸಭೆಗಳ ಯಶಸ್ಸಿನಲ್ಲಿ ತೆರೆಮರೆಯ ಪ್ರಮುಖ ಸೂತ್ರಧಾರಿಯಾಗಿ ಕೆಲಸ ಮಾಡಿದ್ದರು. ಪಕ್ಷಕ್ಕೆ ಮತ್ತು ಸಮಾಜಕ್ಕೆ ಅವರು ನೀಡಿರುವ ಸುದೀರ್ಘ ಕೊಡುಗೆಯನ್ನು ಪರಿಗಣಿಸಿ, ಈಗ ಅವರನ್ನು ಜನಸೇನಾ ಕೋಟಾದಿಂದ ರಾಜ್ಯಸಭೆಗೆ ಕಳುಹಿಸಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗುತ್ತಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ.













Click it and Unblock the Notifications