ತಮಿಳುನಾಡು ಬಿಜೆಪಿಗೆ ಮತ್ತೊಂದು ಶಾಕ್: ರಾಜ್ಯ ಕಾರ್ಯದರ್ಶಿ ಸುಮತಿ ದಿಢೀರ್ ರಾಜೀನಾಮೆ
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಕಮಲ ಪಾಳಯದ ವಿಕೆಟ್‌ಗಳು ಒಂದರ ಬೆನ್ನಲ್ಲೇ ಮತ್ತೊಂದು ಉರುಳುತ್ತಿದ್ದು, ಭಾರಿ ತಲ್ಲಣ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ರಾಜ್ಯ ಉಪಾಧ್ಯಕ್ಷ ಕಾರು ನಾಗರಾಜನ್ ಅವರ ನಿರ್ಗಮನದ ಬೆನ್ನಲ್ಲೇ, ಈಗ ಪಕ್ಷದ ಮತ್ತೊಬ್ಬ ಪ್ರಭಾವಿ ಮಹಿಳಾ ನಾಯಕಿ, ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ.
"ತುಂಬಿದ ಹೃದಯ, ತೀವ್ರ ಬೇಸರದಿಂದ ನಿರ್ಧಾರ"
ಅಣ್ಣಾಮಲೈ ಅವರ ರಾಜೀನಾಮೆಯ ನಂತರ ತಮಿಳುನಾಡು ಬಿಜೆಪಿಯಿಂದ ಹೊರಬರುತ್ತಿರುವ ಮೂರನೇ ಪ್ರಮುಖ ನಾಯಕಿ ಸುಮತಿ ವೆಂಕಟೇಶ್ ಆಗಿದ್ದು, ಈ ದಿಢೀರ್ ಬೆಳವಣಿಗೆಯು ರಾಜ್ಯದಲ್ಲಿ ಬಿಜೆಪಿಗೆ ಚೇತರಿಸಿಕೊಳ್ಳಲಾಗದ ದೊಡ್ಡ ಹಿನ್ನಡೆಯನ್ನು ತಂದೊಡ್ಡಿದೆ.

ತಮ್ಮ ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸುಮತಿ ವೆಂಕಟೇಶ್, "ತುಂಬಿದ ಹೃದಯ ಮತ್ತು ತೀವ್ರ ಬೇಸರದಿಂದ ನಾನು ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಜವಾಬ್ದಾರಿಯಿಂದ ಕೆಳಗಿಳಿಯುತ್ತಿದ್ದೇನೆ. ಅದರೊಂದಿಗೆ ಪಕ್ಷದೊಂದಿಗಿನ ನನ್ನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ಈ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು ನನಗೆ ಹೆಮ್ಮೆಯ ಮತ್ತು ಗೌರವದ ವಿಷಯವಾಗಿತ್ತು. ತುಂಬಾ ಆಳವಾಗಿ ಯೋಚಿಸಿದ ಬಳಿಕವೇ ನಾನು ಈ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ, ದೇಶಭಕ್ತಿ ಮತ್ತು ದೇಶಸೇವೆಯ ಆದರ್ಶಗಳಿಂದ ನಾನು ಯಾವಾಗಲೂ ಸ್ಫೂರ್ತಿ ಪಡೆದಿದ್ದೇನೆ. ಈ ಮೌಲ್ಯಗಳು ನನ್ನ ಇಡೀ ರಾಜಕೀಯ ಪ್ರಯಾಣದಲ್ಲಿ ನನಗೆ ಮಾರ್ಗದರ್ಶನ ನೀಡಿವೆ ಮತ್ತು ಮುಂದೆಯೂ ನೀಡಲಿವೆ. ನನ್ನ ಅಧಿಕಾರಾವಧಿಯಲ್ಲಿ ಬೆಂಬಲ ನೀಡಿದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ. ತಮಿಳುನಾಡಿನ ಹಾಲಿ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿ, ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.
ಅಣ್ಣಾಮಲೈ ಹೊಸ ತಂತ್ರಕ್ಕೆ ಸಾಥ್?
ತಮಿಳುನಾಡಿನಲ್ಲಿ ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ಆಡಳಿತ ನಡೆಸುತ್ತಿವೆ. ಆದರೆ ಇತ್ತೀಚೆಗೆ ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಹಾಗೂ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅತಿವೇಗದ ಬೆಳವಣಿಗೆಯು ತಮಿಳುನಾಡು ರಾಜಕಾರಣದ ಚಿತ್ರಣವನ್ನೇ ಬದಲಿಸಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ವಿಜಯ್ ಅವರ ಈ ರಾಜಕೀಯ ಎಂಟ್ರಿಯೇ ಅಣ್ಣಾಮಲೈ ಅವರು ಬಿಜೆಪಿ ತೊರೆದು ಯುವ ಪೀಳಿಗೆಯನ್ನು ಸೆಳೆಯಲು ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸದ್ಯ ಬಿಜೆಪಿಗೆ ರಾಜೀನಾಮೆ ನೀಡುತ್ತಿರುವ ನಾಯಕರು ಮುಂದಿನ ದಿನಗಳಲ್ಲಿ ಅಣ್ಣಾಮಲೈ ಅವರ ಹೊಸ ಚಳವಳಿಯನ್ನು ಬೆಂಬಲಿಸಿ ಅವರ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ. ಅಣ್ಣಾಮಲೈ ಅವರ ಈ ಹೊಸ ಸಂಘಟನೆಯು ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕೃತ ರಾಜಕೀಯ ಪಕ್ಷವಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದೆ.
ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದ ನಾಯಕರು
ಒಂದೆಡೆ ಪ್ರಮುಖ ನಾಯಕರು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದರೆ, ಮತ್ತೊಂದೆಡೆ ತಮಿಳುನಾಡು ಬಿಜೆಪಿ ಘಟಕ ಮಾತ್ರ ತನಗೇನೂ ನಷ್ಟವಾಗಿಲ್ಲ ಎಂಬಂತೆ ಬೀಗುತ್ತಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, "ಅಣ್ಣಾಮಲೈ ಅವರ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಗೆ ಇದರಿಂದ ಯಾವುದೇ ಹಿನ್ನಡೆಯಾಗುವುದಿಲ್ಲ. ಪಕ್ಷವು ತನ್ನ ಸದ್ಧಾಂತಿಕ ನಿಲುವುಗಳಿಗೆ ಬದ್ಧವಾಗಿ ಮುನ್ನಡೆಯಲಿದೆ" ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಕೇವಲ ಕೆಲವೇ ದಿನಗಳ ಅಂತರದಲ್ಲಿ ಮೂವರು ಪ್ರಮುಖ ರಾಜ್ಯ ಮಟ್ಟದ ಪದಾಧಿಕಾರಿಗಳು ಸಾಮೂಹಿಕವಾಗಿ ಹೊರನಡೆದಿರುವುದು ತಮಿಳುನಾಡು ಕಮಲ ಪಾಳಯದಲ್ಲಿ ಭಾರಿ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲ.













Click it and Unblock the Notifications