ಮಾರ್ಕ್ಸ್ ಕಡಿಮೆ ಬಂದ್ರ ಕಪಾಳದ ಮೇಲೆ ಮಾರ್ಕು!

ಮಾರ್ಕುಗಳ ವಿಷಯ ಬಂದಾಗಲೆಲ್ಲಾ ನನಗೆ ನನ್ನ ಆರನೇ ತರಗತಿಯ ಸ್ನೇಹಿತ ನೆನಪಾಗುತ್ತಾನೆ. ಆಗ ನಮ್ಮ ಗಣಿತದ ಗುರುಗಳು ಒಂದು ಒಳ್ಳೆಯ ರೂಢಿಯನ್ನು ನಮಗೆ ಕಲಿಸುವ ಪ್ರಯತ್ನದಲ್ಲಿದ್ದರು. ಯಾವುದೇ ಲೆಕ್ಕದ ಕೊನೆಗೆ ಬರುವ ಉತ್ತರವನ್ನು ಅಂಡರ್ಲೈನ್ ಮಾಡಿ, ಅದರ ಪಕ್ಕ ನಾವು ಕೋಡಿನಲ್ಲಿ ಕಮೆಂಟು ಬರೆಯುವ ರೀತಿಯಲ್ಲಿ "Ans" ಎಂದು ಬರೆಯಿರಿ ಎಂದಿದ್ದ ನಮ್ಮ ಗುರುಗಳು ಪರೀಕ್ಷೆಯಲ್ಲಿ ಹಾಗೇ ಮಾಡದಿದ್ದರೆ ಅರ್ಧ ಮಾರ್ಕು ಕಡಿಯುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆ ಸಲದ ಯುನಿಟ್ ಟೆಸ್ಟಿನಲ್ಲಿ ನಾನು ಚೆನ್ನಾಗಿ ಮಾಡಿದ್ದರಿಂದ ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದಿತ್ತು. ನಾವೆಲ್ಲಾ ಉತ್ತರಪತ್ರಿಕೆಗಳನ್ನು ನೋಡಿಕೋಳ್ಳುತ್ತಿರುವಾಗ ನನ್ನ ಸ್ನೇಹಿತ ನನ್ನ ಉತ್ತರ ಪತ್ರಿಕೆಯನ್ನು ಇಸಿದುಕೊಂಡು ತನ್ನ ಉತ್ತರಗಳೊಡನೆ ಹೊಲಿಸಿಕೊಳ್ಳತೊಡಗಿದ. ಒಂದು ಉತ್ತರಕ್ಕೆ ನಾನು "Ans" ಎಂಬ ಶ್ರೀಕಾರ ಹಾಕಿರಲಿಲ್ಲ. ನನ್ನ ಸ್ನೇಹಿತ ನೇರವಾಗಿ ನಮ್ಮ ಗುರುಗಳ ಹತ್ತಿರಹೋಗಿ ಅದನ್ನು ತೋರಿಸಿದ್ದ. ಕೊಟ್ಟ ಮಾತಿಗೆ ತಪ್ಪದ ಗುರುಗಳು, ಅರ್ಧ ಮಾರ್ಕು ಕಡಿದು ಕೊಟ್ಟಿದ್ದರು. ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದ ಖುಷಿಯಲ್ಲಿದ್ದ ನನ್ನ ಬಲೂನಿಗೆ ಸೂಜಿ ಚುಚಿದ್ದರು. ಈ ಘಟನೆಯಾಗಿ ಈಗ ಇಪ್ಪತ್ತು-ಇಪ್ಪತ್ತೈದು ವರುಷಗಳಾಗಿವೆ. ಮಾರ್ಕುಗಳ ವಿಷಯ ಬಂದಾಗಲೆಲ್ಲ ನನಗೆ ಅರ್ಧ ಮಾರ್ಕು ಕಡಿಸಿದ ಗೆಳೆಯ ನೆನಪಾಗುತ್ತಾನೆ, ಮತ್ತು ಪ್ರತೀ ಸಲವೂ ಅವನು ಮಾರ್ಕು ಕಡಿಸಿದ್ದಕ್ಕೆ ನಾನು ಹಲ್ಲು ಕಡಿಯುತ್ತೇನೆ!
ಈಗ ಹೇಗೊ ಏನೋ ಗೊತ್ತಿಲ್ಲ, ನಾವು ಸಣ್ಣವರಿದ್ದಾಗ ಮಾತ್ರ ಮಾಸ್ತರುಗಳು ನಮ್ಮ ಮಾರ್ಕುಗಳಿಗೆ ಬಹಳ ಮಹತ್ವಕೊಡುತ್ತಿದ್ದರು. ಈಗ ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸವಾದಿಗಳು ಸೇರಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಗಳಿವೆ. ನಮ್ಮ 'ಮಾರ್ಕ್ಸ್'ವಾದಿ ಮಾಸ್ತರುಗಳು ಕೂಡ ನಮಗೆ ಕಡಿಮೆ ಮಾರ್ಕು ಬಂದಾಗ ಕೊಡುತ್ತಿದ್ದ ಹಿಂಸೆಯೇನು ಕಡಿಮೆಯಿರಲಿಲ್ಲ. ಕಡಿಮೆ ಮಾರ್ಕು ಬಂದರೆ ಅವರು ನಮ್ಮ ಕಪಾಳದ ಮೇಲೆ ತಮ್ಮ ಬೆರಳುಗಳ ಮಾರ್ಕು ಮೂಡಿಸಿ ಕಡಿಮೆಯಾದ ಮಾರ್ಕುಗಳಿಗೆ ಸಮಾ ಮಾಡಿಕೊಳ್ಳುತ್ತಿದ್ದರು. ನಾವು ಏನಾದರೂ ಕಿತಾಪತಿ ಮಾಡಿದಾಗ, I mean ಮಾಡಿ ಸಿಕ್ಕಿಕೂಡ ಬಿದ್ದಾಗ, ನಮ್ಮ ಗುರುಗಳು ಪೂಜೆ ಶುರುಮಾಡುತ್ತಿದ್ದುದುದೇ "ಈ ಸಲದ ಯುನಿಟ್ ಟೆಸ್ಟನ್ಯಾಗ ಮಾರ್ಕು ಎಷ್ಟು ಬಂದಾವು?" ಎಂಬ ನಾಂದಿಯಿಂದ. ಕಡಿಮೆ ಮಾರ್ಕು ಬಂದಿದ್ದರೆ ಉಗ್ರವಾಗುತ್ತಿದ್ದ ಪೂಜೆ, "ಎದೀ ಸೀಳಿದರ ನಾಕ ಅಕ್ಷರ ಇಲ್ಲ, ಕಿತಾಪತಿ ಮಾಡ್ತಾನ, ಕಿತಾಪತಿ" ಎಂಬ ಮಂತ್ರದ ಪುನರುಚ್ಚಾರದ ನಡುವೆ ಸಾಂಗವಾಗುತ್ತಿತ್ತು. ಒಂಚೂರು ಅಡ್ದಿಯಿಲ್ಲ ಎನ್ನಬಹುದಾದ ಮಾರ್ಕು ಬಂದಿದ್ದರೆ, "ಏನು ಅಷ್ಟೇ ಸಾಕಾ?" ಎಂತಲೊ, "ಮಾರ್ಕು ಛಲೊ ಬಂದಾವಂತ ಕೊಡು ಮೂಡ್ಯಾವಾ?" ಎಂಬ ಸ್ತುತಿಯಿಂದ ಸೌಮ್ಯವಾಗಿಯೇ ಮುಗಿಯುತ್ತಿತ್ತು.
ಶಾಲೆಯಲ್ಲಷ್ಟೇ ಅಲ್ಲ, ನಮ್ಮ ಮಾಸ್ತರುಗಳ ಜೀವನದಲ್ಲಿ ಕೂಡ ಮಾತು ಮಾರ್ಕು, ಪಾಸು-ನಪಾಸು, ಫಸ್ಟ್ ಕ್ಲಾಸು-ಸೆಕೆಂಡು ಕ್ಲಾಸುಗಳ ಸುತ್ತನೇ ಸುತ್ತುತ್ತಿದ್ದವು. ಉದಾಹರಣೆಗೆ ಶಾಲೆಯಿಂದ ಮರಳಿದ ತಕ್ಷಣ ಹೆಂಡತಿ ತಿಂಡಿ ಕೊಟ್ಟರೆ ಅದಕ್ಕೆ ನಮ್ಮ ಮಾಸ್ತರರು ಕೊಡುತ್ತಿದ್ದ ಟಿಪಿಕಲ್ ಫೀಡ್ಬ್ಯಾಕ್ ಹೀಗಿರುತ್ತಿತ್ತು "ಮೆಣಸಿನಕಾಯಿಬಜಿ ಫಸ್ಟ್ ಕ್ಲಾಸ್ ಆಗ್ಯಾವು. ಚುಮ್ಮರಿ ಅಡ್ಡಿಯಿಲ್ಲ, ನೂರಕ್ಕ ಐವತ್ತು ಕೊಡಬಹುದು. ಆದರ ಚಾ ಮಾತ್ರ ನಪಾಸ್ - ತೀರ ಕಲಗಚ್ಚ ಆಗೇತಿ"!
ಈ 'ಅಂಕಾ'ಲಾಜಿ - ಅಂಕಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡುವ ರೋಗ, ಒಂದು ಬಗೆಯ ಕ್ಯಾನ್ಸರ್ - ಆವಾಗ ಬಹಳ ಪಾಲಕರಿಗೆ ಅಮರಿಕೊಂಡಿತ್ತು. ನಮ್ಮಂತಹ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿರಲಿಲ್ಲವಾದರೂ, ನಗರ ಪ್ರದೇಶದಲ್ಲಿ ಅದು ಅತಿಯಾಗಿತ್ತು. ಇಲ್ಲವಾದರೆ, ಜೀವನದಲ್ಲಿ ಎಂದೆಂದಿಗೂ, ಯಾರ್ಯಾರಿಗೂ ಉಪಯೋಗವಾಗದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ್ ಬರುತ್ತವೆ ಎಂಬ ಮೂಢನಂಬಿಕೆಯಿಂದ ಕನ್ನಡದ ಬದಲು ಸಂಸ್ಕೃತ ವಿಷಯ ತೆಗೆದುಕೊಳ್ಳಲು ಪಾಲಕರು ಯಾಕೆ ಒತ್ತಾಯ ಮಾಡುತ್ತಿದ್ದರು? ಅದಿರಲಿ, ಆದ್ಯಾವನೋ ಅಡ್ಡಕಸುಬಿ ಮಾಸ್ತರು ತನ್ನ ಹತ್ತಿರ ಟ್ಯೂಶನ್ನಿಗೆ ಬಂದವರಿಗೆ ಕ್ಲಾಸ್ ಪರೀಕ್ಷೆಗಳಲ್ಲಿ ಹೆಚ್ಚಿನ ಮಾರ್ಕು ಕೊಡುತ್ತಾನೆ ಎಂದು ಅವನ ಹತ್ತಿರ ತಮ್ಮ ಮಕ್ಕಳನ್ನು ಯಾಕೆ ಕಳುಹಿಸುತ್ತಿದ್ದರು?
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications