ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಟೆ : ಹಂಡೆಯ ಹಗರಣ

By * ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

Girish Jamadagni, Singapore
ಹೀಗೆ ಒಂದು ಭಾನುವಾರದ ಮಧ್ಯಾಹ್ನ, ಮನೆ ಹಿತ್ತಲಿನ ಕಡೆ ಹೆಜ್ಜೆ ಹಾಕಿದ್ದೆ. ಮನೆ ಹಿಂದಿನ ಒಗೆಯೋ ಕಟ್ಟೆ ಮೇಲೆ ಕುಳಿತು, ಬಿಸಿಲು ಕಾಯಿಸುವುದು ನನ್ನ ಭಾನುವಾರದ ಪ್ರಮುಖ ಕಲಾಪಗಳಲ್ಲಿ ಒಂದು! ಕುಳಿತು ನಾಲ್ಕು ನಿಮಿಷವಾಗಿರಲಿಲ್ಲ, ಆಗಲೇ ಯಾರದೊ "ಅಣ್ಣಾ" ಎಂಬ ಆರ್ತನಾದ. ತಿರುಗಿ ನೋಡಿದರೆ, ಯಾರೂ ಇಲ್ಲ. ಮತ್ತೆರಡು ನಿಮಿಷದಲ್ಲಿ, ಮತ್ತೊಮ್ಮೆ ಕೂಗಿದ ಧ್ವನಿ. ಈ ಸಾರಿ ಬಿಡಲಿಲ್ಲ. ಕಂಡು ಹಿಡಿದೇ ಬಿಟ್ಟೆ. ಕೂಗಿದ್ದು ಮತ್ತಾರೂ ಅಲ್ಲ, "ಕೊಡ"ದ ಕಜಿನ್.. ಅದೇ ರೀ ಹಂಡೆ. ಹಿತ್ತಲಲ್ಲಿ ಹತ್ತು ವರುಷದಿಂದ ಹಾಳಾಗಿ ಬಿದ್ದಿದ್ದ ನಮ್ಮ ಮನೆ ಹಳೆ ಹಂಡೆ.

ಹತ್ತಿರ ಹೋದೆ. ಪಾಪ, ತುಂಬಾ ವಯಸ್ಸಾದಂತೆ ಕಂಡಿತು. ಅಲ್ಲವೇ ಮತ್ತೆ! ನಮ್ಮ ಮುತ್ತಾತನ ಕಾಲದಿಂದಲೂ ನಮ್ಮ ಮನೆ ಸೇವೆಯಲ್ಲೇ ಜೀವ ತೇಯ್ದಿತ್ತು. ಕಳಕಳಿಯಿಂದ ಕೇಳಿದೆ. "ಏನಪ್ಪ, ಏನು ಸಮಾಚಾರ?"

"ಅಯ್ಯೊ ಬುಡಿ, ಏನು ಏಳೋದು, ಯಾಕೋ ಟೇಮೇ ಸರಿ ಇಲ್ಲ", ಒಂದು ಕಡೆ ವಾಲಿಕೊಂಡು ಕುಳಿತಿದ್ದ ಹಂಡೆ ಹೇಳಿತು.

"ಯಾಕಪ್ಪ, ಈಗೇನಾಯ್ತು?

"ಮತ್ತಿನ್ನೇನಣ್ಣ, ಮೊದಲೆಲ್ಲ, ನನ್ನನ್ನ ಮನೆಯಾಗೆ ಮಡಿಕತಿದ್ರು. ಈಗ, ಗೀಜರ್ರು, ಈಟರ್ರು, ಸೋಲಾರು ಬಂದಮೇಲೆ ನಮ್ದು ಬೀದಿ ನಾಯಿ ಗತಿ. ಅದೂ ಸಾಲ್ದು ಅಂತ, ಈ ವಾಸ್ತು, ಪಾಸ್ತು ಅಂತ ನೋಡಿ, ನಮ್ಮನ್ನೆಲ್ಲ, ಮನೆ ಇಂದೆ ಅಟ್ತಿದಾರೆ, ಅಲೂರ?" ಅಂತು.

ಹೌದು ಅನ್ನಿಸಿತು. ನಮ್ಮ ಮನೆಯಲ್ಲೂ ಅಷ್ಟೆ. ಮನೆ ಒಡೆದು ಕಟ್ಟಿಸಿದಾಗ, 60 ವರುಷಗಳಿಂದ ನಮ್ಮ ಬಚ್ಚಲು ಮನೆಯಲ್ಲಿ ವಿರಾಜಮಾನವಾಗಿದ್ದ ಹಂಡೆಯನ್ನು ಮನೆ ಹಿಂದಕ್ಕೆ ದಯ ದಾಕ್ಷಿಣ್ಯವಿಲ್ಲದೆ ಎತ್ತಂಗಡಿ ಮಾಡಲಾಗಿತ್ತು.

"ನಮಗೆ ಮೊದಲಿಂದ್ಲೂ ಈಗೆ, ತಾರ-ತಮ್ಮ ಮಾಡ್ಬುಟ್ಟವ್ರೆ ಎಲ್ಲ" ಅಂತು. "ಏನಪ್ಪ ಅದು ತಾರತಮ್ಯ" ಅಂದೆ.

"ಇಲ್ವ ಮತ್ತೆ. ನಮಕ್ಕಿಂತ ಗಾತ್ರದಲ್ಲಿ ಕಮ್ಮಿ ಇರೋ ಆ ಕೊಡಕ್ಕೆ ಸಿಗೊ ಮರ್ವಾದೇಲಿ 1 ಪರ್ಸೆಂಟು ಸಿಗಾಕಿಲ್ಲ. ಕೊಡಕ್ಕೆ ಪೂಜೆ ಮಾಡ್ತಾರೆ, ಅಡಿಗೆ ಮನೇಲಿ ಜೋಪಾನವಾಗಿ ಮಡಿಕ್ಕತಾರೆ, ಎಲ್ಲಕಿಂತ ಎಚ್ಚಾಗಿ, ಉಡ್ಗೀರು, ಎಂಗಸ್ರೆಲ್ಲಾ, ಸೊಂಟದ್ಮೇಲೆ ಕುಂಡ್ರಿಸ್ಕೊಂಡು ಸುತ್ತಾಡಿಸ್ತಾರೆ. ಅದನ್ನೆಲ್ಲ ನೋಡಿದ್ರೆ, ರುದಯ ಚುರ್ರ್ ಅಂತೈತೆ ". ಓಹೋ, ಪೂಜೆ, ಅಡುಗೆ ಮನೇಲಿ ಜಾಗಕ್ಕಿಂತ ಹೆಚ್ಚಾಗಿ, ಪ್ರಾಯದ ಹುಡುಗಿಯರ ಸೊಂಟದ ಮೇಲೆ ಸೀಟ್ ಸಿಗಲಿಲ್ಲ ಅನ್ನೊ ಬೇಜಾರು."

"ಅಲ್ಲ, ನಿನ್ನನ್ನ ಸೊಂಟದ ಮೇಲೆ ಕೂರಿಸ್ಕೊಂಡು, ಊರೆಲ್ಲ ಸುತ್ತಾಡಿದ್ರೆ, ಆ ನಾಜೂಕು ಸೊಂಟದ ಗತಿ ಏನೋ?" ಅಂದೆ.

"ಹಿ..ಹಿ ಹಿ..ಅದು ಸರಿ ಬುಡಿ, ಏನೋ, ಉಣೆಸೆ ಅಣ್ಣಿನ ಉಳೀಲಿ ಮೈ ಉಜ್ಜಿಸ್ಕೊಂಡ ಮೇಲೆ, ಇದೆಲ್ಲ ಆಸೆ ಆಗುತ್ತಲ್ವಾ?" ಅನ್ನೊದೆ!
"ಆದ್ರುನು, ಮೊದಲಿಂದ್ಲೂ, ನಮಗೆ, ಸಿಕ್ಕಾಪಟ್ಟೆ ದ್ರೋಹ ಆಗ್ಬುಟ್ಟೈತೆ".

"ಅದು ಹ್ಯಾಗಪ್ಪಾ?"

"ಮತ್ತೆ, ಕೊಡನಾ ದಿನಾ ಬೆಳಗಿ ಬೆಳಗಿ ಇಡ್ತಾರೆ. ಆದ್ರೆ, ನಮಗೆ ಚಿತ್ರ ಇಂಸೆ. ಅಲ್ಲಾಡದಂಗೆ ಕುಂಡ್ರಿಸಿ, ನಮ್ಮ ಒಟ್ಟೇ ತುಂಬಾ ನೀರು ಸುರಿದು, ದಿನ ಬೆಳಗ್ಗೆ, ಇಡಬಾರದ್ ಜಾಗದಲ್ಲೆಲ್ಲಾ, ಕೊಳ್ಳಿ, ಭೆರಣಿ ಇಟ್ಟು ಸೀಮೆಎಣ್ಣೆ ಆಕಿ ಸುಡತಾರೆ. ದಿನವೆಲ್ಲ ಉರಿಯತ್ತೆ ಗೊತ್ತಾ ಅಣ್ಣ?" ಅಂತು. ಥೂ... ಅಲ್ಲ.. ಛೆ, ಅನ್ನಿಸ್ತು.

"ಗಾದೆನಲ್ಲೂ ಅಷ್ಟೆ. ತುಂಬಿದ್ ಕೊಡ ತುಳಕಲ್ಲಾ, ಅಂತಾ ಏಳ್ಬುಟ್ಟವ್ರೆ. ಆದ್ರೆ, ಅಲ್ಲಾಡ್ದೆ, ಒಂದೇ ಕಡೆ ಕೂರೊ ನಾವು ತುಂಬಿದ್ರೂ ತುಳ್ಕೊದಿಲ್ಲ, ತುಂಬದೇ ಇದ್ರೂ ತುಳ್ಕಾದಿಲ್ಲ. ಅಲ್ಲೇನ್ ಸಾಮಿ?" ಪಾಯಿಂಟ್ ಸರಿ ಅಲ್ವ ಅನ್ನಿಸ್ತು.

"ದೇವರು ಕೊಟ್ಟರೂ ಪೂಜಾರಿ ಕೊಡ, ಅನ್ನೊ ಗಾದೆನಲ್ಲೂ, ಕೊಡ ಯಾಕೆ ಸಾಮಿ." ಅಯ್ಯೊ, ಆ ಕೊಡ ಈ ಕೊಡ ಒಂದೆ ಅಲ್ಲ ಅಂತ ಹೇಳಲು ಹೋದರೆ, ಹಂಡೆ ಮಾತು ಮುಂದುವರಿಸೇ ಬಿಟ್ಟಿತ್ತು.

"ಸರ್ವಜ್ಞ ಮಹಾಸಯ ಕೂಡ, ಸೊಡಲೆಣ್ಣೆ ತೀರಿದರೆ, ಕೊಡನೆತ್ತಿ ಸುರಿವರೇ? ಅಂತ ಕೇಳ್ಬುಟ್ಟವ್ರೆ, ಅದ್ರೆ ಸೊಡಲೆಣ್ಣೆ ತೀರಿದರೆ, ಹಂಡೆಯನೆತ್ತಿ ಸುರಿವರೆ? ಅಂದಿದ್ರೆ, ಅದು ಸರಿ ಓಯ್ತಿತ್ತು" ಅಂತ ಇನ್ನೂ ಒಂದು ಇಂಟಲೆಕ್ಚುಯಲ್ ಪಾಯಿಂಟ್ ಆಕಿತ್ತು.. ಅಲ್ಲ ಹಾಕಿತ್ತು.

"ಆ ಬಿಂದಿಗೆಗೆ, ಬಕೆಟ್‌ಗೆ ಸಿಗೋ ಮರ್ವಾದೇನೂ ಸಿಗ್ತಾ ಇಲ್ಲ ನಮಗೆ. ಮನುಸ್ಸತ್ವ ಇಲ್ದಿದ್ರೂ, ನಮಗೂ ತಾಮ್ರತ್ವ ಅಂತ ಐತೆ ಅಲೂರಾ, ಶ್ಯಾನೆ ಪೀಲಿಂಗ್ ಆಯ್ತದೆ" ಹಂಡೆಯ ಬೇಸರ ಹೆಚ್ಚಾಗುತಿತ್ತು.

ಸಾಂತ್ವನ ಮಾಡಲು ಏನಾದ್ರು ಹೇಳೋಣ ಅಂದರೆ, ಹಂಡೆಯ ರೆಫರೆನ್ಸ್ ಇರೋ ಗಾದೆ ಆಗಲಿ, ಹಾಡಾಗಲಿ ಹಾಳಾದ್ದು ಜ್ಞಾಪಕವೇ ಬರಲಿಲ್ಲ. ಯಾಕೋ ಸಮಸ್ಯೆ ಹಂಡೆ ಗಾತ್ರದ್ದೆ ಅನ್ನಿಸಿತು. ಹಂಡೆಯ ಸಮಾಧಾನಕ್ಕೆ, ಅಣ್ಣೋರ ಚಿತ್ರದ "ಕಂಡೆ ಹರಿಯ ಕಂಡೆ" ಹಾಡನ್ನ ಅಣುಕು ಮಾಡಿ "ಹಂಡೆ ಕರಿಯ ಹಂಡೆ" ಅಂತ ಹೇಳೋಣ ಅಂದ್ಕೊಂಡೆ. ಆದ್ರೆ, ನನ್ನ ಗಾರ್ದಭ ಕಂಠದಲ್ಲಿ, ಅಣಗಿಸೋ ಹಾಡು ಕೇಳಿ, ಹಂಡೆ ಹೊಟ್ಟೆಲಿರೋ ಸಿಟ್ಟು ನೆತ್ತಿಗೆ ಬಂದ್ರೆ ಕಷ್ಟ ಅಂತ ಸುಮ್ಮನಾದೆ.

"ಏನಣ್ಣಾ, ಸುಮ್ನಾಗ್ಬುಟ್ಟೆ, ಒಸಿ ಮಾತಾಡಣ್ಣಾ..." ಕೈ ಹಿಡಿದು ಎಳೆಯುತ್ತಿತ್ತು.

ಹಿಂದೆಯೆ ಒಂದು ಕರ್ಕಶ ಧ್ವನಿ..ನನ್ನವಳದ್ದು! "ರೀ..ಏನು ಸೋಮಾರಿರೀ ನೀವು. ಹಗಲು ರಾತ್ರಿ ನೋಡದೆ ಜಾಗ ಕಂಡ ಕಡೆ ಮಲಗಿ ಗೊರಕೆ ಹೊಡೀತೀರಲ್ಲ... ಏಳ್ತೀರೋ..ಇಲ್ಲ.. ಆ ಹಂಡೆ ತಂದು ಕುಕ್ಕಲೋ..."

"ಬೇಡ ಮಾರಾಯ್ತಿ.. ಏಳ್ತೀನಿ. ಹಂಡೆನಲ್ಲಿ ನೀನು ನನ್ನ ಕುಕ್ಕಿದ್ರೆ, ಆಮೇಲೆ, ಆಸ್ಪತ್ರೆಗೆ ನಾನು ದುಡ್ಡು ಕಕ್ಕಬೇಕು ಅಷ್ಟೆ". ಛೆ! ಒಳ್ಳೆ ನಿದ್ದೆ ಹಾಳು ಮಾಡಿ ಬಿಟ್ಟಳು..ಕನಸು ಬೇರೆ....ಕೊಡವಿಕೊಂಡು ಎದ್ದೆ! ನಡೆಯುತ್ತಾ ಹಂಡೆ ಕಡೆ ನೋಡಿದೆ. ಮೂಲೆಯಲ್ಲಿ ಮಾತಿಲ್ಲದೆ ಮಲಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X