• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಳು ಹೇಳದವ್ರು ಯಾರವ್ರೆ ಸುಳ್ಳು ಹೇಳದವ್ರು ಎಲ್ಲವ್ರೆ?

By Staff
|

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾದರೆ, ತಂದೆ ತಾಯಿಯರೇ (ಕೆಲಬಾರಿ) ಅನಿವಾರ್ಯವಾಗಿ(!) ಸುಳ್ಳು ಹೇಳಿಸುವ ಮಾಸ್ತರುಗಳು. ಆದರೆ ಅವು ಮಕ್ಕಳು ಸುಳ್ಳುಗಾರ ಆಗಲಿ ಅಂತ ಕಲಿಸುವ ಸುಳ್ಳುಗಳಲ್ಲ. ಈ ಸುಳ್ಳುಗಳಿಂದ ಎಂಥ ಹಾನಿಯೂ ಆಗುವುದಿಲ್ಲ. ಒಟ್ಟಿನಲ್ಲಿ ಸುಳ್ಳಿಲ್ಲದ ಜಗತ್ತೇ ಇಲ್ಲ. ಹಾಗಂತ, ಲೇಖನ ತುಂಬಾ ಚೆನ್ನಾಗಿದೆಯಂತ ಖಂಡಿತ ಸುಳ್ಳು ಹೇಳುತ್ತಿಲ್ಲ, ನಿಜಕ್ಕೂ ಚೆನ್ನಾಗಿದೆ. ಓದಿ ನಿಮ್ಮ ನಿಜವಾದ ಅಭಿಪ್ರಾಯ ತಿಳಿಸಿ. - ಸಂಪಾದಕ.

* ರಾಘವೇಂದ್ರ ಶರ್ಮಾ, ತಲವಾಟ

ಸುಳ್ಳು ಎನ್ನುವ ಎರಡಕ್ಷರದ ಪದದ ಮಹಿಮೆ ಮನುಷ್ಯನ ಜೀವನದಲ್ಲಿ ಹುಟ್ಟಿದಂದಿನಿಂದ ಸಾಯುವವರೆಗೂ ಹಾಸುಹೊಕ್ಕಾಗಿ ಸೇರಿಕೊಳ್ಳುತ್ತದೆ. ನಾನು ಸುಳ್ಳು ಹೇಳುವುದಿಲ್ಲ ಎಂಬ ಮಹಾ ಸುಳ್ಳಿನೊಂದಿಗೆ ಎಲ್ಲರೂ ನಿತ್ಯವೂ ಒಂದಲ್ಲ ಒಂದು ರೀತಿಯ ಸುಳ್ಳನ್ನು ಹೇಳುತ್ತಿರುತ್ತಾರೆ. ಹಾಗಾಗಿ ತನ್ನನ್ನೇ ತಾನು ನಂಬದ ಈ ಸುಳ್ಳಿನ ಸಮಾಚಾರವಾಗಿ ಬರೆಯುವುದಾಗಲೀ ಹೇಳುವುದಾಗಲಿ ಅತ್ಯಂತ ಕಠಿಣ. ಸತ್ಯವನ್ನು ಹೇಳಲು ತೀರಾ ದೊಡ್ಡ ಪ್ರಮಾಣದ ನೆನಪಿನ ಶಕ್ತಿಯ ಅವಶ್ಯಕತೆ ಇರುವುದಿಲ್ಲ. ಆದರೆ ಸುಳ್ಳನ್ನು ಹೇಳುವಾಗ ಮಾತ್ರ ಹಿಂದೆ ಮುಂದೆ ಮೇಲೆ ಕೆಳಗೆ ನೊಡಿಕೊಳ್ಳುವ ಚಾಣಾಕ್ಷತನವಿರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳು ದಕ್ಕುವ ಸಾಧ್ಯತೆ ಕಡಿಮೆಯಾಗಿ ಪಚೀತಿಬೀಳುವಂತಾಗುತ್ತದೆ. ಆದ್ದರಿಂದ ಈಗ ನಾನು ಹೇಳುವ ಸುಳ್ಳಿನ ಕತೆಗಳನ್ನು ನೀವು ಸುಳ್ಳು ಎಂದು ತೀರ್ಮಾನಿಸಿದರೆ ನಾನು ಅದಕ್ಕೆ ಹೊಣೆಗಾರನಲ್ಲ. ಆದರೂ ನೀವು ನಂಬುತ್ತೀರೆಂದು ನನಗೆ ಭರವಸೆ ಇದೆ. ಕಾರಣ ನಿತ್ಯ ಜೀವನದಲ್ಲಿ ಎದುರಾಗುವವರು ಹೇಳುವ ನಿಮ್ಮ ಮಗ ತುಂಬಾ ಚೂಟಿ ಕಣ್ರೀ.. ನಿಮ್ಮ ಮನೆ ಬಹಳಾ ಚೆನ್ನಾಗಿದೇರಿ.. ನೀವುಟ್ಟ ಸೀರೆ ಒಳ್ಳೆ ಸೆಲೆಕ್ಷನ್ ಕಣ್ರೀ... ಎಂಬಂತಹ ವಾಕ್ಮುತ್ತುಗಳು! ನೂರಕ್ಕೆ ನೂರು ಸುಳ್ಳು ಎಂದು ಗೊತ್ತಿದ್ದೂ ನೀವು ನಂಬುತ್ತೀರಿ ಎಂದಾದಮೇಲೆ ನಾನು ಹೇಳುವ ಸತ್ಯದ ತಲೆಯಮೇಲೆ ಹೊಡೆದಂತಹ ಸುಳ್ಳಿನ ಕತೆಯನ್ನು ನಂಬಲೇಬೇಕು.

ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿಯೂ ಸುಳ್ಳು ಹೇಳುವ ಖಯಾಲಿ ಅಧಿಕೃತವಾಗಿ ಎರಡನೇ ಕ್ಲಾಸಿನಿಂದ ಪ್ರಾರಂಭವಾಗುತ್ತದೆ. ಅದಕ್ಕೆ ಅಪ್ಪ ಅಮ್ಮಂದಿರ ಒತ್ತಾಸೆಯಿಂದ ಹೇಳುವ ಸುಳ್ಳು ಅಂತ ಹೇಳಬಹುದು. ಬಸ್ಸು ಹತ್ತಿದಾಗ ಟಿಕೆಟ್ ಮಾಮ ಬಂದು ಕೇಳಿದರೆ ನಾನು ಎಲ್.ಕೆ.ಜಿ ಅನ್ನಬೇಕು ಎಂದು ಅಮ್ಮ ತಾಕೀತು ಮಾಡುವ ಮೂಲಕ ಸುಳ್ಳಿನ ಜೀವನಕ್ಕೆ ಅಧಿಕೃತ ಮುದ್ರೆಬೀಳುತ್ತದೆ. ಈ ಹಸಿ ಸುಳ್ಳು ಅಪ್ಪ ಅಮ್ಮನ ಜೇಬಿಗೆ ಚಿಲ್ಲರೆ ಕಾಸು ಉಳಿಸುತ್ತದೆಯಾದ್ದರಿಂದ ದುಡ್ಡು ಉಳಿಯುತ್ತದೆ ಎಂದಾದರೆ ಸುಳ್ಳು ಹೇಳಬಹುದು ಎಂಬ ಲೆಕ್ಕಾಚಾರಕ್ಕೆ ಮುಗ್ದ ಮನಸ್ಸು ಇಳಿಯುತ್ತದೆ.

ಒಮ್ಮೆ ಬೆಂಗಳೂರು-ತುಮಕೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ವಾರಸ್ಯ ಘಟನೆ ನಡೆಯಿತು. ನನ್ನ ಪಕ್ಕದ ಸೀಟಿನಲ್ಲಿ ತಾಯಿ ಮಗು ಕುಳಿತಿದ್ದರು. ಕಂಡಕ್ಟರ್ ಟಿಕೇಟ್ ಟಿಕೆಟ್ ಎನ್ನುತ್ತಾ ಬಂದ. ತಾಯಿ ತುಮಕೂರಿಗೆ ಒಂದು ಟಿಕೆಟ್ ಕೊಡಿ ಎಂದಳು. ಕಂಡಕ್ಟರ್ ಮಗುವಿನ ವಯಸ್ಸು ಏನನ್ನೂ ಕೇಳದೆ ತಾಯಿಗೆ ಮಾತ್ರ ಪರ್ರ್ ಅಂತ ಟಿಕೆಟ್ ಹರಿದು ಕೊಟ್ಟು ದುಡ್ಡು ಇಸಿದುಕೊಂಡು ಟಕ್ ಟಕ್ ಎಂದು ಬಸ್ಸಿನ ಟಾಪ್ ಬಡಿಯುತ್ತಾ ಮುಂದೆ ಹೋದ. ಮಗುವಿಗೆ ಅದೇನೋ ಚಡಪಡಿಕೆ, ಹಿಂದೆ ನೋಡಿತು ಮುಂದೆ ನೋಡಿತು. ಮನೆಯಲ್ಲಿ ಅಮ್ಮ ಹೇಳಿದಂತೆ ಕಂಡಕ್ಟರ್ ತನ್ನ ವಯಸ್ಸು ಕೆಳಲೇ ಇಲ್ಲವಲ್ಲ ಎಂಬ ಯೋಚನೆ ಅದಕ್ಕೆ ಬಂದಿರಬೇಕು. ಮಾಮ ಮಾಮ ಅಂತ ಕಂಡಕ್ಟರ್‌ನನ್ನು ಕರೆದು ನಾನು ಎಲ್.ಕೆ.ಜಿ ಎಂದು ಕೂಗಿ ಹೇಳಿತು. ಕಂಡಕ್ಟರ್‌ಗೆ ಅದು ಯಾಕೆ ಹಾಗೆ ಹೇಳಿತು ಅಂತ ಅರ್ಥವಾಗಲಿಲ್ಲ. ಆತ ಮುಗುಳ್ನಕ್ಕು ಮುಂದೆ ಹೋದ. ಸ್ವಲ್ಪ ಹೊತ್ತಿನ ನಂತರ ವಾಪಾಸು ಬಂದಾಗ ಮತ್ತೆ ಮನೆಯಲ್ಲಿ ಅಮ್ಮನ ಅಣತಿಯಂತೆ ಮಗು ಮಾಮಾ ನಾನು ಎಲ್.ಕೆ.ಜಿ ಎಂದು ಹೇಳಿತು. ಆತ ಆಗ್ಲಿ ಪುಟ್ಟಿ ಗುಡ್ ಎಂದು ಹಿಂದೆ ಹೋದ. ಮಗು ತಕ್ಷಣ ಅಮ್ಮನ ಬಳಿ, ನೋಡಮ್ಮಾ ಮನೆಯಿಂದ ಹೊರಡುವಾಗ ಬಸ್ಸಿನಲ್ಲಿ ಕಂಡೆಕ್ಟರ್ 2ನೇ ಕ್ಲಾಸು ನೀನು ಎಲ್.ಕೆ.ಜಿ ಅಂತ ಸುಳ್ಳು ಹೇಳ್ತೀಯಾ ಅಂತಾರೆ, ಆವಾಗ ಇಲ್ಲ ನಾನು ನಿಜವಾಗ್ಲೂ ಎಲ್.ಕೆ.ಜಿ ಅನ್ನಬೇಕು ಅಂದಿದ್ದೆ, ಆದ್ರೆ ಪಾಪ ಒಳ್ಳೆ ಮಾಮ ಏನೂ ಕೇಳ್ದೆ ಒಪ್ಕೊಂಡುಬಿಟ್ರು ಅಂತ ದೊಡ್ಡ ದನಿಯಲ್ಲಿಯೇ ಹೇಳಿತು. ಮಗುವಿನ ಮಾತಿನಿಂದ ಇರಿಸುಮುರಿಸುಗೊಂಡ ಆಕೆ ಮಗುವಿನ ಮಾತನ್ನು ನಿಲ್ಲಿಸಲು ಹರಸಾಹಸಪಡುತ್ತಿದ್ದುದನ್ನು ಕಂಡ ಸುತ್ತಮುತ್ತಲಿನ ನಮಗೆಲ್ಲಾ ಒಳಗೊಳಗೆ ನಗು.

ಇಲ್ಲಿಂದ ಮೊದಲನೇ ಹಂತದ ಸುಳ್ಳು ಆರಂಭವಾಗುತ್ತದೆ. ನಂತರ ಪೂರ್ತಿ ಟಿಕೆಟ್ ಹಣ ಉಳಿಸುವ ಯಾದಿಯಿಂದ ಅರ್ದ ಟಿಕೆಟ್ ಉಳಿಸಲು ಶುರುವಾಗುವ ಎರಡನೆ ಹಂತದ ಸುಳ್ಳು ಜೀವನ ಪ್ರಾರಂಭವಾಗುವುದು ಮಗು 6ನೇ ಕ್ಲಾಸ್ ಪಾಸ್ ಆದನಂತರ. ಅಲ್ಪ ಸ್ವಲ್ಪ ಪ್ರಪಂಚ ತಿಳಿದ 12 ವರ್ಷದ ನಂತರದ ವಯಸ್ಸಿನ ಮಕ್ಕಳು ಕೆಲವೊಮ್ಮೆ ತಾನು ಹೀಗೆ ಪಬ್ಲಿಕ್ ಆಗಿ ಸುಳ್ಳು ಹೇಳಲು ರಚ್ಚೆ ಹಿಡಿದುಬಿಡುತ್ತವೆ. ಇಷ್ಟು ದೊಡ್ಡವನಾಗಿದ್ದೀಯ ಇನ್ನೂ ಆರನೇ ಕ್ಲಾಸಾ.. ಎಂದು ಕೇಳಿಬಿಡುತ್ತಾರೇನೋ ಎಂಬ ಆತಂಕ ಮಕ್ಕಳದ್ದಾದರೆ ದೂರದ ಊರಿನ ನಾಲ್ಕುನೂರು ಐದುನೂರು ರೂಪಾಯಿಯ ಬಸ್ ಚಾರ್ಜಿನಲ್ಲಿ ಒಂದೆರಡು ವರ್ಷ ಕಡಿಮೆ ಮಾಡಿ ಸುಳ್ಳು ಹೇಳಿದರೆ ಇನ್ನೂರು ರೂಪಾಯಿಯ ದೊಡ್ಡಗಂಟು ಉಳಿಸುವ ಲೆಕ್ಕಾಚಾರ ಅಪ್ಪ ಅಮ್ಮನದ್ದಾಗಿರುತ್ತದೆ.

ಬೆಂಗಳೂರಿನಿಂದ ಜೋಗಕ್ಕೆ ಹೋಗುವ ಬಸ್ಸಿನಲ್ಲಿ ಒಮ್ಮೆ ಹಾಗೆ ಆಯಿತು. ಗಂಡ ಹೆಂಡತಿಯರಿಬ್ಬರು ತಮ್ಮ ಗಂಡು ಹಾಗೂ ಹೆಣ್ಣು ಮಗುವಿನೊಡನೆ ಮೂರು ಜನ ಕೂರುವ ಸೀಟಿನಲ್ಲಿ ಕುಳಿತಿದ್ದರು. ಕಂಡಕ್ಟರ್ ಬಂದಾಗ ಯಥಾ ಪ್ರಕಾರ ಯಜಮಾನರು ಎರಡು ಫುಲ್ ಎರಡು ಹಾಪ್ ಸಾಗರ ಎಂದರು. ಕಂಡಕ್ಟರ್ ಸ್ವಲ್ಪ ಸಂಶಯದ ಪ್ರಾಣಿ ಇರಬೇಕು, ಈಕೆಗೆ ಹಾಫ್ ಆಗುತ್ತೆ ಇವನಿಗೆ ಆಗಲ್ಲ ಅಂದ. ತಕ್ಷಣ ಮಗರಾಯ ಮನೆಯಲ್ಲಿ ಹೇಳಿಕೊಟ್ಟಂತೆ ಅಂಕಲ್ ನನಗೆ ಸರಿಯಾಗಿ 12 ವರ್ಷ ಅಷ್ಟೆ ಎಂದ. ಕಂಡಕ್ಟರ್ ಮಾತನಾಡಲಿಲ್ಲ ಕೆಲನಿಮಿಷ ಬಿಟ್ಟು ಹುಡುಗಿಯ ಬಳಿ ನೀನು ಎಷ್ಟನೇ ಕ್ಲಾಸಮ್ಮಾ.? ಎಂದ. ಆಕೆ ಸಹಜವಾಗಿ ಆರನೇ ಕ್ಲಾಸು ಅಂತ ಸತ್ಯವನ್ನೇ ಹೇಳಿದಳು. ಮರುಕ್ಷಣದಲ್ಲಿ ಕಂಡಕ್ಟರ್ ನಿನ್ನ ಅಣ್ಣ ಎಷ್ಟನೇ ಕ್ಲಾಸ್? ಎಂದ. ಹುಡುಗಿಗೆ ಆಲೋಚನೆ ಮಾಡಲು ಸಮಯಾವಕಾಶ ಸಿಗಲಿಲ್ಲ ಥಟ್ಟನೆ ಅಣ್ಣ ಎಂಟನೇ ಕ್ಲಾಸ್ ಅಂದೇಬಿಟ್ಟಳು. ಹುಡುಗಿ ಹೇಳಿಕೆ ತಿದ್ದುಪಡಿ ಮಾಡಲಾಗದೆ ಯಜಮಾನರು ಅನಿವಾರ್ಯವಾಗಿ ಮಗನಿಗೆ ಫುಲ್ ಟಿಕೇಟ್ ಮಾಡಿಸಬೇಕಾಯಿತು. ಅಷ್ಟೇ ಆಗಿದ್ದರೆ ಸಹಜವಾಗಿ ಮುಗಿಯುತ್ತಿತ್ತೇನೋ! ಆದರೆ ಆ ಕಂಡಕ್ಟರ್ ಮಹಾಶಯ ಹುಡುಗನಿಗೆ ಏನಪ್ಪಾ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಈ ಪಾಟಿ ಸುಳ್ಳಾ.. ಇದನ್ನೇ ನಿನಗೆ ಸ್ಕೂಲಿನಲ್ಲಿ ಹೇಳಿಕೊಟ್ಟಿದ್ದಾ? ಎಂದು ಕೇಳಿದ. ಎಲ್ಲರೆದುರು ಮರ್ಯಾದೆ ಹೋಗಿದ್ದರಿಂದ ಆತ ಅಳುತ್ತಾ ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ತಂಗಿಗೆ ಗುದ್ದತೊಡಗಿದ. ಗಂಡ ಹೆಂಡತಿ ತಮ್ಮ ಮರ್ಯಾದೆ ಹೋಗಿದ್ದನ್ನೂ ಲೆಕ್ಕಿಸದೆ ಮಗನ ಸಮಾಧಾನ ಪಡಿಸುವಷ್ಟರಲ್ಲಿ ಟಿಕೆಟ್ ನಲ್ಲಿ ಉಳಿಸಹೊರಟ ಹಣದ ಜತೆಗೆ ಮತ್ತೊಂಡಿಷ್ಟು ಹಣ ಖರ್ಚುಮಾಡಬೇಕಾದ ಪರಿಸ್ಥಿತಿ ಬಂತು.

ಇಂತಹ ಪರಿಸ್ಥಿಗಳು ಎಲ್ಲರಿಗೂ ಬಂದಿರುತ್ತವೆ ಹಾಗೂ ಸುಳ್ಳಿನ ಹಂದರದ ಜೀವನವನ್ನು ಎಲ್ಲರೂ ದಾಟಿಬಂದಿರುತ್ತಾರೆ. ಆದರೆ ನಾನು ಮಾತ್ರ ಸತ್ಯಹರಿಶ್ಚಂದ್ರ ಎಂಬ ಸುಳ್ಳನ್ನು ದೇವರಾಣೆ ಸಮೇತ ಹೇಳುತ್ತಾ ದಿನತಳ್ಳುತ್ತಿರುತ್ತಾರೆ ಅಷ್ಟೆ.

ಇನ್ನಷ್ಟು ಸುಳ್ಳುಗಳು ಮತ್ತಷ್ಟು ಸುಳ್ಳುಗಳು »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more