• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಳು ಹೇಳದವ್ರು ಯಾರವ್ರೆ ಸುಳ್ಳು ಹೇಳದವ್ರು ಎಲ್ಲವ್ರೆ?

By * ರಾಘವೇಂದ್ರ ಶರ್ಮಾ, ತಲವಾಟ
|

(ಹಿಂದಿನ ಪುಟದಿಂದ)

ಹೈಸ್ಕೂಲು ಮುಗಿದು ಕಾಲೇಜು ದಿನಗಳಲ್ಲಂತೂ ನಿತ್ಯ ಸುಳ್ಳಿನ ಸರಮಾಲೆಯೇ ಸೃಷ್ಟಿಯಾಗುತ್ತದೆ. ಕ್ಲಾಸಿಗೆ ಚಕ್ಕರ್ ಹೊಡೆದು ಸಿನಿಮಾಕ್ಕೆ ಹೋಗಿ ಮನೆಗೆ ಲೇಟಾಗಿ ಬಂದು ಸ್ಪೆಷಲ್ ಕ್ಲಾಸ್ ಎಂಬ ಗಂಭೀರವಾದ ಸುಳ್ಳಿನಿಂದ ಹಿಡಿದು, ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಅಲ್ಲಿ ಇಲ್ಲಿ ಸುತ್ತಾಡುತ್ತಾ ಗುರುತಿನವರ ಬಳಿ ಸಿಕ್ಕುಬಿದ್ದಾಗ ಅವನು ನನ್ನ ಅಣ್ಣನಂತೆ ಅಥವಾ ತಂಗಿಯಂತೆ ಅನ್ನುತ್ತಾ, ಹಾಗೂ ಮನೆಯಲ್ಲಿ ಫೀ ಕಟ್ಟಲು ಕೊಟ್ಟ ದುಡ್ಡನ್ನು ಉಡಾಯಿಸಿ ಪಿಕ್‌ಪಾಕೆಟ್ ಆಯಿತು ಅಂತಲೋ ಹೀಗೆ ಆಯಾ ಕ್ಷಣಕ್ಕೆ ತಕ್ಕಂತ ಸುಳ್ಳುಗಳ ಸರಮಾಲೆಯನ್ನು ಸೃಷ್ಟಿಸಿಬಿಡುವಲ್ಲಿ ಯಶಸ್ವಿಯಾಗಿ ಪಳಗಿಬಿಡುತ್ತಾರೆ. ಮನೆಯವರೋ ಅದ್ಯಾವ ಮಾಯೆಯಿಂದಲೋ ಏನೋ ಮಕ್ಕಳು ಹೇಳುವುದು ಸುಳ್ಳು ಎಂದು ಆಲೋಚಿಸಲೂ ಹೋಗದೆ ಅಚಲವಾಗಿ ನಂಬಿಬಿಡುತ್ತಾರೆ.

ಹಳ್ಳಿಯಲ್ಲಿರುವ ನಮ್ಮ ಪರಿಚಯದವರೊಬ್ಬರು ಮಗನನ್ನು ಪಿ.ಯು.ಸಿ ಓದಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಟ್ಟಿದ್ದರು. ಅವರು ಸಿಕ್ಕಾಪಟ್ಟೆ ಗುಮಾನಿಯ ಪ್ರಾಣಿ. ಹಾಗಾಗಿ ಮಗನ ಹಾಸ್ಟೆಲ್ ಫೀ, ಬಸ್ ಚಾರ್ಜ್ ಮುಂತಾದವುಗಳನ್ನೆಲ್ಲಾ ವಿವರವಾಗಿ ಕೇಳಿ ಲೆಕ್ಕಾಚಾರ ಹಾಕಿ ತಿಂಗಳಿಗೊಂದು ಸಾರಿ ಕರಾರುವಕ್ಕಾಗಿ ತಲುಪಿಸುತ್ತಿದ್ದರು. ಮಗನಿಗೋ ಹುಚ್ಚು ಖಯಾಲಿ, ಕ್ಲಾಸಿನ ಇತರೆ ಹುಡುಗರಂತೆ ಜುಂ ಅಂತ ಇರಬೇಕೆಂಬ ಆಸೆ. ಆದರೆ ಅಪ್ಪ ಕಾಸು ಬಿಚ್ಚಲಾರ, ಕೊಡುವ ಪ್ರತಿಯೊಂದು ಪೈಸೆಗೂ ಲೆಕ್ಕಾಚಾರ. ಹಾಗಾಗಿ ಮಗ ಅಪ್ಪನಿಂದ ಹೆಚ್ಚು ಹಣ ವಸೂಲಿ ಮಾಡಲು ಕಾಲೇಜು ಶುರುವಾಗಿ 2 ತಿಂಗಳನಂತರ ಉಪಾಯವೊಂದನ್ನು ಯೋಚಿಸಿದ. ಅದರ ಪ್ರಕಾರ ಟ್ಯೂಶನ್ ಗೆ ಹೋಗುವ ಕುರಿತು ಮನೆಗೆ ಫೋನ್ ಮಾಡಿದ. ಎಲ್ಲಾ ಸಬ್ಜೆಕ್ಟ್ ಸೇರಿ 12 ಸಾವಿರ ರೂಪಾಯಿ ಆಗುತ್ತದೆ, ಲೆಕ್ಚರರ್ ಹತ್ತಿರ ಮಾತನಾಡಿದ್ದೇನೆ ಎಂದ. ಅಪ್ಪನಿಗೆ ಸಂಶಯ, ಆದರೆ ಮಗನ ವಿದ್ಯಾಭ್ಯಾಸ ಕಡೆಗಣಿಸುವಂತಿಲ್ಲ. ಆಯಿತು ನಾಡಿದ್ದು ನಾನು ಬಂದು ಹಣ ನೀಡುತ್ತೇನೆ ಎಂದ. ಮಗನಿಗೆ ಈಗ ಪಚೀತಿ. ಅದಕ್ಕೋಸ್ಕರ ಅಪ್ಪ ಬೆಂಗಳೂರಿಗೆ ಬರುತ್ತಾರೆ ಅಂದುಕೊಂಡಿರಲಿಲ್ಲ. ಹೇಗೂ ದುಡ್ಡು ಕಳುಹಿಸುತ್ತಾರೆ, ಮಜ ಉಡಾಯಿಸದರಾಯಿತು. ಮಿಕ್ಕ ಸಮಯದಲ್ಲಿ ಚೆನ್ನಾಗಿ ಓದಿ ಪಾಸ್ ಮಾಡಿದರಾಯಿತು ಎಂದು ಅಂದಾಜಿಸಿದ್ದ. ಈಗ ಟ್ಯೂಷನ್ ಕುರಿತು ಹೇಳಿಯಾಗಿದೆ ಆದ್ದರಿಂದ ತಪ್ಪಿಸಿಕೊಳ್ಳುವಂತಿರಲಿಲ್ಲ. ಅಪ್ಪ ಬೆಂಗಳೂರಿಗೆ ಬಂದಾಯಿತು ಮಗನ ಟ್ಯೂಷನ್ ಮಾಸ್ಟರ್ ಪರಿಚಯ ಆಯಿತು 12 ಸಾವಿರ ಕೊಟ್ಟಾಯಿತು. ಅಪ್ಪ ವಾಪಸಾದರು. ಇದು ಪಿಯುಸಿಯ ಎರಡು ವರ್ಷವೂ ನಡೆಯಿತು. ಅಪ್ಪನಿಗೆ ಇದರ ಒಳಗುಟ್ಟು ಎರಡೂ ವರ್ಷವೂ ತಿಳಿಯಲೇ ಇಲ್ಲ. ಮಗ ಕಾಲೇಜಿನ ಜವಾನನ್ನು ಬುಕ್ ಮಾಡಿಕೊಂಡು ಆತನೇ ಟ್ಯೂಷನ್ ಮಾಸ್ಟರ್ ಎಂದು ಹೇಳಿ ಲೆಕ್ಕಾಚಾರಸ್ತ ಅಪ್ಪನಿಂದ 24 ಸಾವಿರ ವಸೂಲಿ ಮಾಡಿ ಮಜಾ ಉಡಾಯಿಸಿದ್ದ. ಆದರೆ ಒಂದು ಒಳ್ಳೆಯ ಸಂಗತಿಯೆಂದರೆ ಮಿಕ್ಕ ಸಮಯದಲ್ಲಿ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ಮಗ ಪಡೆದಿದ್ದ. ಹಾಗಾಗಿ ಈ ಸುಳ್ಳು ಹೆಚ್ಚಿನ ಹಾನಿ ತರಲಿಲ್ಲ.

ಇತ್ತೀಚೆಗೆ ಮೊಬೈಲ್ ಎಂಬ ಮಾಯೆ ಬಂದಮೇಲಂತೂ ಸುಳ್ಳಿನ ಚಟ ದಿನದಿಂದ ಹೆಚ್ಚಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಪ್ರಕಾಶ ಅಂತ ಜಾನುವಾರು ಇನ್ ಸ್ಪೆಕ್ಟರ್. ದನ ಎಮ್ಮೆಗಳಿಗೆ ಬೆದೆಗೆ ಬರಲು ಅಥವಾ ಖಾಯಿಲೆ ಬೀಳಲು ಹೊತ್ತುಗೊತ್ತು ಇರುವುದಿಲ್ಲ ಹಾಗಾಗಿ ಇವನ ಫೋನ್ ರಿಂಗುಣಿಸಲು ಹೊತ್ತುಗೊತ್ತು ಇರುತ್ತಿರಲಿಲ್ಲ. ದಿನವಿಡಿ ಅಲ್ಲಿಗೆ ಬಾ ಇಲ್ಲಿಗೆ ಬಾ ಎಂದು ಮೊಬೈಲ್ ವಾಣಿ ಹೊಡೆದುಕೊಳ್ಳುತ್ತಿರುತ್ತಿತ್ತು. ದಿನನಿತ್ಯ ತಿರುಗಾಡಿ ದಣಿವಾದಾಗ ಬರುವ ಮೊಬೈಲ್ ಫೋನಿಗೆ ಆತ ಮನೆಯಲ್ಲಿದ್ದರೂ ಪೇಟೆಯಲ್ಲಿದ್ದೀನಂತಲೋ ಅಥವಾ ದೂರದ ಊರಿನ ಹೆಸರು ಹೇಳಿ ಅಲ್ಲಿ ಇದ್ದೀನಿ ಅಂತಲೋ ಸುಳ್ಳು ಹೇಳುವುದು ವಾಡಿಕೆ. ಮೊಬೈಲ್ ಫೋನಿಗೆ ಅವರು ಕಾಲ್ ಮಾಡಿದ್ದರಿಂದ ಸರಿ ಎಂದು ಅವರು ನಂಬಿಕೊಳ್ಳುತ್ತಿದ್ದರು. ಆ ಅಭ್ಯಾಸ ಅದೆಷ್ಟು ಹಾಸುಹೊಕ್ಕಾಗಿ ಅವನನ್ನು ಅಂಟಿಕೊಂಡಿತೆಂದರೆ ಒಂದು ದಿನ ಮಟಮಟ ಮಧ್ಯಾಹ್ನ ಆತ ಮನೆಯಲ್ಲಿದ್ದಾಗ ಲ್ಯಾಂಡ್ ಲೈನ್ ರಿಂಗಣಿಸಿತು. ಅತ್ತ ಕಡೆಯ ದನಿ ಪ್ರಕಾಶ ನಮ್ಮನೆ ದನ ಕೂಗ್ತಾ ಇದೆ, ಬಾ. ಅಂತ ಹೇಳಿತು. ಈ ಜಾನುವಾರು ಇನ್ ಸ್ಪೆಕ್ಟರ್ ಬೆಳಿಗ್ಗೆಯಿಂದ ತಿರುಗಿ ತಿರುಗಿ ಸುಸ್ತಾಗಿದ್ದ. ತಡಬಡ ಮಾಡಲೇ ಇಲ್ಲ ಅಯ್ಯೋ ಬರ್‍ತಿದ್ದೆ , ಆದ್ರೆ ನಾನು ಈಗ ಶಿವಮೊಗ್ಗದಲ್ಲಿದ್ದೇನೆ, ಮನೆಗೆ ಬರೋದು ರಾತ್ರಿಯಾಗುತ್ತೆ ಅಂತ ಅಭ್ಯಾಸಬಲದ ಮೇಲೆ ಓಳು ಬಿಟ್ಟ. ಮರುಕ್ಷಣ ಅತ್ತಕಡೆಯ ಧ್ವನಿ ಗುರು ನಾನು ಫೋನ್ ಮಾಡಿದ್ದು ನಿನ್ನ ಲ್ಯಾಂಡ್ ಲೈನಿಗೆ, ಅದನ್ನೇ ಎತ್ತಿಕೊಂಡು ಶಿವಮೊಗ್ಗಕ್ಕೆ ಹೋಗಿದ್ದೀಯಾ? ಅಂತ ಕೇಳಿದಾಗ ಪ್ರಕಾಶ ಅಚಾನಕ್ ಸಿಕ್ಕಿಬಿದ್ದು ತಲೆಚಚ್ಚಿಕೊಳ್ಳುವುದೊಂದೇ ಬಾಕಿ.

ಹೀಗೆ ಸುಳ್ಳು ಹೇಳುವುದು ಅಭ್ಯಾಸವಾಗಿಬಿಟ್ಟರೆ ಅದಕ್ಕೆ ಸತ್ಯದ ಯೋಚನೆಯೂ ಇರುವುದಿಲ್ಲ. ಆದರೂ ಸುಳ್ಳು ಸಂಪೂರ್ಣ ಅಭ್ಯಾಸವಾಗಿಬಿಟ್ಟರೆ ಸುಳ್ಳಿಗೆ ಸುಳ್ಳು ಪೋಣಿಸಿ ಸರಮಾಲೆ ಕಟ್ಟುವ ಚಾಣಾಕ್ಷರಿದ್ದಾರೆ. ಅವರಿಗೆ ಜನರು ಪೊಕಳೆ, ಪಟಾಕಿ, ರೀಲ್ ಮಾಸ್ಟರ್ ಮುಂತಾದ ಅಡ್ಡ ಹೆಸರಿನಿಂದ ಗುರುತಿಸುತ್ತಾರೆ.

ನಂತರದ್ದು ಅವರರವರ ವೃತ್ತಿಘನತೆಗೆ ಸಂಬಂಧಪಟ್ಟಂತಹ ಸುಳ್ಳುಗಳು. ಲೇಬರ್‌ಗಳು ಇಂದು ಕೆಲಸ ಆಗದು ನಾಳೆ ಕೆಲಸಕ್ಕೆ ಬರುತ್ತೀನಿ ಎನ್ನುವುದಕ್ಕೆ ಸುಳ್ಳು ಹೇಳುತ್ತಿದ್ದರೆ, ಕೆಲವರು ತಾವು ನಾಳೆ ಕೆಲಸಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಸಕಾರಣದ ಸುಳ್ಳು ರಜೆ ಚೀಟಿ ಬರೆಯುತ್ತಾರೆ. ಓನರ್ ಕೆಲಸಗಾರರ ಸಂಬಳ ಹೆಚ್ಚಿಸಲು ಆಗದು ಎನ್ನುವುದಕ್ಕೆ ಸುಳ್ಳು ಕಾರಣ ಹೇಳುತ್ತಿರುತ್ತಾನೆ. ಸಂಪಾದಕರು ಲೇಖನಗಳ ಒತ್ತಡದಿಂದ ನಿಮ್ಮ ಕತೆ ಪ್ರಕಟವಾಗುತ್ತಿಲ್ಲ ಎಂತಲೂ ಬರಹಗಾರರು ನನ್ನ ಕತೆ ಮುಂದಿನ ವಾರ ಬರುತ್ತೆ ಅಂತಲೂ ಓದುಗ ದೊರೆ ನಿಮ್ಮ ಕತೆ ಚೆನ್ನಾಗಿತ್ತು ಅಂತಲೂ ಸುಳ್ಳು ಹೇಳುತ್ತಲೇ ಇರುತ್ತಾರೆ.

ನನ್ನ ಸ್ನೇಹಿತನ ಗುರುಗಳೊಬ್ಬರು ಪರಮ ಗುರಿಯ ಮಾರ್ಗದಲ್ಲಿ ನಡೆಸುವ ಲೋಕದ ಸುಳ್ಳೂ ಸತ್ಯದ ತಾಕತ್ತನ್ನು ಹೊಂದಿದೆ. ಗುರಿಯ ಮಾರ್ಗದಿಂದ ಜಾರಿಸುವ ಪ್ರಾಪಂಚಿಕ ಸತ್ಯಕ್ಕೆ ಯಾವುದೇ ಬೆಲೆ ಇಲ್ಲ. ಎಂದು ಹೇಳಿದ್ದಾರಂತೆ. ಹಾಗಾಗಿ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚಿನ ಬೆಲೆ ಎಂದಾಯಿತು. ಹಾಗಾಗಿ ಸಂಪಾದಕರು ಸೇರಿದಂತೆ ನೀವುಗಳು ಈ ನನ್ನ ಲೇಖನಕ್ಕೆ ಸುಳ್ಳು ಹೇಳುತ್ತೀರೋ ಸತ್ಯ ಹೇಳುತ್ತೀರೋ ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more