ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉಡುಗೊರೆ'ಯಾಗಿ ಬಂದ ಚಪ್ಪಲಿಗೆ ಮ್ಯೂಸಿಯಂ!

By * ಯಶ್
|
Google Oneindia Kannada News

Museum for footwears hurled at politicians!
ಸುಬ್ಬು ಒಂದೇ ಸವನೆ ಬಾಲ ಸುಟ್ಟ ಬೆಕ್ಕಿನಂತೆ ಟೆರೇಸಿನ ಮೇಲೆ ಲುಂಗಿಯನ್ನು ಮೊಳಕಾಲಿನ ಮೇಲೆ ಏರಿಸಿಕೊಂಡು ಓಡಾಡುತ್ತಿದ್ದ. ನೇಸರ ಪಶ್ಚಿಮದಲ್ಲಿ ಮುಳುಗಿದ್ದರೂ ತಾಪ ಇಳಿಯದಿದ್ದರಿಂದ ಬನಿಯನನ್ನೂ ಬಿಸಾಕಿದ್ದ. ಏನೋ ಚಟಪಡಿಕೆ. ಒಮ್ಮೆ ಆಕಾಶ ಮಗದೊಮ್ಮೆ ರಸ್ತೆಯ ಮೇಲೆ ಕಣ್ಣಾಡಿಸುತ್ತಾ ಓಡಾಡುತ್ತಿದ್ದ. ಡಿಬ್ಬಿ ಸಾಹೇಬರ ದ್ವಿಚಕ್ರ ವಾಹನ ಮನೆ ಮುಂದೆ ನಿಲುಗಡೆಯಾಗುತ್ತಿದ್ದಂತೆ ಸುಬ್ರಾಯ್ ಭಟ್ಟನಿಗೆ ಒಂದು ಬಗೆಯ ನಿರಾಳ.

"ಯಾಕೋ ಲೇಟು ನನ್ ಮಗನೆ, ಎಷ್ಟೊತ್ತಿಂದ ಕಾಯ್ತಾ ಇದ್ದೀನಿ. ನಿನಗೇನೋ ವಿಷಯ ಹೇಳಬೇಕಾಗಿದೆ" ಅಂತ ಒಂದೇ ಬಾರಿಗೆ ಒದರಿದ ಸುಬ್ಬು.

ನಮ್ಮ ಡಿಬ್ಬಿಯೋ ಕುಕುಂಬರ್ ಕೂಲ್ ಮನುಷ್ಯ. ಜಗತ್ ಪ್ರಳಯವೇ ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಆತ, ಸ್ವಲ್ಪ ಮಟ್ಟಿಗೆ ಹೆದರುತ್ತಿದ್ದುದು ಸುಬ್ಬನ ಹೆಂಡತಿ ಸುಬ್ಬಿಗೆ ಮಾತ್ರ. ನೋಡಿದ್ರೆ, ಸುಬ್ಬ ಟೆರೇಸಿನ ಮೇಲೆ ಟೇಬಲ್ಲು, ಎರಡು ಕುರ್ಚಿ, ತುಂಬಿದ ಗ್ಲಾಸು, ಪ್ಲೇಟಲ್ಲಿ ಚಿಪ್ಸು ಎಲ್ಲಾ ತಯಾರು ಮಾಡಿಕೊಂಡು ಕುಳಿತಿದ್ದಾನೆ. ಡಿಬ್ಬಿಗೆ ಆಶ್ಚರ್ಯವೋ ಆಶ್ಚರ್ಯ. ಸುಬ್ಬಿ ಮನೇಲಿ ಇದ್ದಿದ್ದರೆ ಇಂಥದಕ್ಕೆಲ್ಲ ಅವಕಾಶವೇ ಕೊಡುತ್ತಿರಲಿಲ್ಲ ಎಂಬುದು ಡಿಬ್ಬಿಗೆ ತಿಳಿದ ವಿಷಯವೇ.

"ಯಾಕಪಾ ಸುಬ್ರಾಯ್, ಹೇಂತಿ, ಮರಿಸುಬ್ಬು ಮನ್ಯಾಗಿಲ್ಲೇನು? ಭಾರೀ ತಯಾರಿ ಮಾಡ್ಕೊಂಡು ಕುಂತೀಯಲ್ಲಾ? ಟೇಬಲ್ಲು, ಗ್ಲಾಸು, ಚಿಪ್ಸು ಅಬಾಬಾಬಾ" ಕಣ್ಣಲ್ಲಿ ಮಿಂಚಿನ ಸಂಚಾರ, ಮುಖದಲ್ಲಿ ನಗು ಡೇರೆ ಹೂವಿನಂತೆ ಅರಳಿ ನಿಂತಿತ್ತು.

"ತೌರ ಮನೆಗೆ ಹೋಗಿದ್ದಾರೆ ಇಬ್ರೂ. ಒಂದು ಸಖತ್ ವಿಚಾರ ಹೊಳೆದಿದೆ ಕುಡ್ಕೊಂಡು ಹೇಳ್ತೀನಿ ಬಾ" ಅಂತ ಇಬ್ಬರೂ ಮೋಸಂಬಿ ರಸ ತುಂಬಿದ ಗ್ಲಾಸುಗಳನ್ನು ಖಣಖಣಾಯಿಸಿದರು. ಕರುಂಕುರುಂ ಅನ್ನುತ್ತಲೇ ಸುಬ್ಬು ಮಾತಿಗೆ ಶುರು ಹಚ್ಚಿಕೊಂಡ. ಆತನಿಗೆ ಆದಷ್ಟು ಬೇಗನೆ ಮನದಲ್ಲಿದ್ದನ್ನೆಲ್ಲಾ ಹೇಳಿ ನಿರಾಳವಾಗಬೇಕೆಂಬ ತಹತಹ.

"ಗೊತ್ತಲ್ಲ, ದೇಶದಲ್ಲಿ ಎಲೆಕ್ಷನ್ ಭರಾಟೆ ಭಾರೀ ಜೋರಾಗಿದೆ. ಅವನು ಇವಳ್ನ ಗುಲಾಮ ಅನ್ನೋದು, ಇವಳು ಅವನ್ನ ಖದೀಮ ಅನ್ನೋದು. ಒಟ್ಟಿನಲ್ಲಿ ಓದುಗರಿಗೆ ಪೇಪರಿನಲ್ಲಿ, ಟಿವಿಗಳಲ್ಲಿ, ಇಂಟರ್ನೆಟ್ಟಿನಲ್ಲಿ ಓದಲು ಕೊರತೆಯಿಲ್ಲದಷ್ಟು ಸುದ್ದಿ. ಇದೆಲ್ಲದರ ಜೊತೆ, ಚಿದಂಬರಂ ಮೇಲೆ ಅಡ್ವಾಣಿ ಮೇಲೆ ಚಪ್ಪಲಿ ಎಸೆದ ಶೂರರ ಸುದ್ದಿ ಬೇರೆ."

"ಎಲಾ ಇವನ, ಇದರಾಗೇನು ಹೊಸಾ ಸುದ್ದಿ ಐತಿ" ಅಂತ ಡಿಬ್ಬಿ ರಾಗ ಎಳೆದ.

"ತಡ್ಕೊಳ್ಳೋ ಮಾರಾಯ. ಇದು ಹಳೇ ಸುದ್ದೀನೆ. ಖ್ಯಾತ ಪತ್ರಕರ್ತೆ ಶೋಭಾ ಡೇ ಕೂಡ ಮುಲಾಯಂ ಸಿಂಗ್ ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಚಪ್ಪಲಿಗಳು ಜಾಸ್ತಿ ಹಾರಾಟ ನಡೆಸಿಲ್ಲ ಅಂತ ಹೇಳಿದ್ದು ಕೂಡ ಹಳೇ ಸುದ್ದೀನೆ. ವಿಷಯ ಅದಲ್ಲ, ಪೀಠಿಕೆ ಅಂತ ಹೇಳಿದೆ ಅಷ್ಟೆ. ಆದರೆ, ಇದಕ್ಕೆ ಸಂಬಂಧಿಸಿದಂತೆಯೇ ಹೊಸ ವಿಚಾರವೊಂದು ತಲೆ ತಿನ್ನುತ್ತಿದೆ" ಅಂತ ಡಿಬ್ಬಿ ಕಡೆ ಎಡಹುಬ್ಬು ಏರಿಸಿ ನೋಡಿದ.

ದಿನಕ್ಕೆ ನೂರೆಂಟು ಇಬ್ಬರೂ ಹರಟುತ್ತಾರಾದರೂ ಏನೋ ಗಹನವಾದ ವಿಷಯ ಇಲ್ಲದಿದ್ದರೆ ತನ್ನನ್ನು ಹೀಗೆ ಫೋನು ಮಾಡಿ ಕರೆಸಿಕೊಳ್ಳುವ ಮನುಷ್ಯನಲ್ಲ ಸುಬ್ಬ ಅಂತ ಡಿಬ್ಬಿಗೆ ಗೊತ್ತಿತ್ತು. ಓಬೀಡಿಯೆಂಟ್ ಶ್ರೋತೃವಿನ ಥರ ಮುಂದೆ ಬಾಗಿ ಕುಳಿತ. ಸುಬ್ಬು ಶುರುಹಚ್ಚಿಕೊಂಡ.

"ಚೀನಾ ಪ್ರಧಾನಮಂತ್ರಿ ವೆನ್ ಜಿಯಾಬೋ ಅವರ ಮೇಲೆ ಜರ್ಮನ್ ದೇಶದ ಮಾರ್ಟಿನ್ ಜಾಂಕೇ ಶೂ ಎಸೆದು ಸುದ್ದಿ ಮಾಡಿದ. ಅಮೆರಿಕದ ಮಾಜಿ ಅಧ್ಯಕ್ಷ ಬುಶ್ ಮೇಲೆ ಇರಾಕ್ ಪತ್ರಕರ್ತ ಮುಂತೆದಾರ್ ಅಲ್ ಜೈದಿ ಪಾದರಕ್ಷೆ ಎಸೆದು ಜೈಲು ಸೇರಿದ. ನಮ್ಮ ಗೃಹ ಸಚಿವ ಚಿದಂಬರಂ ಮೇಲೆ ಬೂಟು ಎಸೆದು ಪತ್ರಕರ್ತ ಜರ್ನೇಲ್ ಸಿಂಗ್ ಸುದ್ದಿಗೆ ಗ್ರಾಸವಾದ. ಪ್ರಧಾನಿ ಅಭ್ಯರ್ಥಿ ಅಡ್ವಾಣಿ ಮೇಲೆ ಪಾವಸ್ ಅಗರವಾಲ್ ಎಂಬಾತ ಚಪ್ಪಲಿ ಎಸೆದು ಗಮನ ಸೆಳೆದ. ಇದೆಲ್ಲ ಸರಿ ಆದರೆ ಆ ಚಪ್ಪಲಿಗಳೇನಾದವು ಅನ್ನೋದು ನನ್ನ ಪ್ರಶ್ನೆ" ಅಂತ ಸುಬ್ಬು ಗಂಭೀರವದನನಾದ.

"ಇನ್ನೇನಾಗಿರ್ತೈತಿ, ಅವರು ಅದನ್ನೆಲ್ಲೋ ಎಸೆದಿರ್ತಾರ. ಯಾರೋ ಒಬ್ರು ಅದನ್ನು ತೊಗೊಂಡು ಹೋಗಿರ್ತಾರ. ಅಥವಾ ಎಲೆಕ್ಷನ್ ಸಭೆ ಮುಗಿದ ನಂತರ ಅಲ್ಲಲ್ಲಿ ಬಿದ್ದ ಚಪ್ಪಲಿಗಳಲ್ಲಿ ಇದೂ ಒಂದಾಗಿರ್ತೈತಿ" ಅಂದ ಡಿಬ್ಬಿ.

"ವಿಷಯ ಅಲ್ಲೇ ಇರೋದು. ಚಪ್ಪಲಿ ಎಸೆದಿರೋದು ಅಂತಿಂಥ ನಾಯಕರಿಗಲ್ಲ. ಅವರೆಲ್ಲಾ ರಾಷ್ಟ್ರೀಯ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಫಿಗರುಗಳು. ಬಿಬಿಸಿನಲ್ಲೂ ಇದು ಸುದ್ದಿ ಆಗಿರ್ತದೆ. ನಾನು ಹೇಳೋದೇನಂದ್ರೆ, ಈ ಪಾದರಕ್ಷೆಗಳನ್ನು ಒಂದೆಡೆ ಸೇರಿಸಿ ಮ್ಯೂಸಿಯಂ ಯಾಕೆ ಮಾಡಬಾರದು ಅಂತ" ಅಂತ ಸುಬ್ಬು ಕಣ್ಣು ಮಿಟುಕಿಸಿದ. ಇಂಥಾ ಐಡ್ಯಾ ಮಾಡಿರ್ತಾನ ಸುಬ್ಬು ಅಂತ ಡಿಬ್ಬಿ ಎಣಿಸಿರಲೇ ಇಲ್ಲ.

ಮತ್ತೆ ಮುಂದುವರಿಸುತ್ತ, "ಚಪ್ಪಲಿ ಎಸೆದಿರುವುದು ಅವಮಾನದ ವಿಷಯವೇ ಇರಬಹುದು. ಆದರೆ, ನಮ್ಮ ನೇತಾರರಿಗೆ ಇದು ಒಂದು ಪಾಠ ಕಲಿಸಿದೆ ಎಂಬುದನ್ನು ಮರೆಯಬಾರದು. ಚಪ್ಪಲಿ ಎಸೆದವನ ಭಾವನೆಗಳಿಗೂ ಬೆಲೆ ನೀಡಬೇಕಲ್ವೆ? ಮತೀಯ ಭಾವನೆಗಳಿಗೆ ರಾಜಕಾರಣಿಗಳು ಎಳ್ಳಷ್ಟೂ ಕಿಮ್ಮತ್ತು ನೀಡುವುದಿಲ್ಲ. ಬಾಯಿಗೆ ಬಂದಿದ್ದು ಒರಲುತ್ತಾರೆ. ಆತ್ಮಚಿಂತನೆ ಮಾಡಿಕೊಳ್ಳುವಷ್ಟೂ ವ್ಯವಧಾನ ಅವರಲ್ಲಿರುವುದಿಲ್ಲ. ಎಸೆದ ಚಪ್ಪಲಿಗಳದೇ ಮ್ಯೂಸಿಯಂ ಮಾಡಿದರೆ, ಮುಂದೆ ರಾಜಕಾರಣಿಗಳೂ ಜಾಗರೂಕರಾಗಿರುತ್ತಾರೆ, ಎಚ್ಚರವಹಿಸುತ್ತಾರೆ. ಅದಕ್ಕೇ ಶೋಭಾ ಡೇ ಹೇಳಿದ್ದು, ಮುಲಾಯಂ ಪ್ರಚಾರ ಸಭೆಗಳಲ್ಲಿ ಜಾಸ್ತಿ ಚಪ್ಪಲಿಗಳು ಹಾರಾಟ ನಡೆಸಿಲ್ಲ ಅಂತ." ಸುಬ್ಬು ತನ್ನ ಮಾತು ಮುಗಿಸಿದ್ದ.

ಡಿಬ್ಬಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಇಲ್ಲಿ ಗಂಭೀರತೆಯೂ ಇದೆ, ತಮಾಷೆಯೂ ಇದೆ. ವಿಚಾರವೂ ಇದೆ, ರಾಜಕಾರಣಿಗಳ ಬಗ್ಗೆ ತಾತ್ಸಾರವೂ ಇದೆ. ಶಿಕ್ಷಿತ, ಅಶಿಕ್ಷಿತ ಜನಸಾಮಾನ್ಯರ ಬಗ್ಗೆ ವಿಶ್ಲೇಷಣೆಯೂ ಇದೆ. "ವಾಜಮೈತಿ ಬಿಡು ನಿನ್ನ ಮಾತು. ಇಂಥಾ ಘಟನೆ ನಮ್ಮ ಕರ್ನಾಟಕದಲ್ಲೆಲ್ಲೂ ನಡೆದಿಲ್ಲ. ನಮ್ಮ ಮತದಾರರನ್ನು ಸುಶಿಕ್ಷಿತರು, ಸಾತ್ವಿಕರು ಅಂತ ಕರೆಯಬಹುದಾ? ಅಥವಾ ನಮ್ಮ ಜನರಿಗೆ ಅಷ್ಟೊಂದು ಧೈರ್ಯ ಇಲ್ಲ ಅಂತ ತಿಳಿಯಬಹುದಾ?" ಡಿಬ್ಬಿ ಮರುಪ್ರಶ್ನೆ ಹಾಕಿದ್ದ.

"ಅಲ್ಲಾ, ಅದ್ಯಾರೋ ಸಚಿವರು ತಮಗೆ ಬಂದ ಹೂವಿನಹಾರ, ಶಾಲು, ಉಡುಗೊರೆಯಾಗಿ ಬಂದ ಮೂರ್ತಿಗಳನ್ನೆಲ್ಲಾ ಸೇರಿಸಿ ಶೋಕೇಸಿನಲ್ಲಿ ಇಟ್ಟಿದ್ದಾರಂತ ಎಲ್ಲೋ ಓದಿದ್ದೆ. ಹಾಗೆಯೇ ಬೇರೆ ಯಾವುದೇ ಸಂಸ್ಥೆ ರಾಜಕಾರಣಿಗಳಿಗೆ 'ಉಡುಗೊರೆ'ಯಾಗಿ ಬಂದ ಪಾದರಕ್ಷೆಗಳನ್ನು ಸೇರಿಸಿ ಮ್ಯೂಸಿಯಂ ಯಾಕೆ ಮಾಡಬಾರದು?" ಸುಬ್ಬುವಿನ ಮುಖವೇ ಪ್ರಶ್ನಾರ್ಥಕ ಚಿಹ್ನೆಯಂತಾಗಿತ್ತು.

ಡಿಬ್ಬಿಯ ಪ್ರಶ್ನೆಗಳಿಗೆ ಸುಬ್ಬುವಿನ ಎಡಬಿಡಂಗಿ ಚಿಂತನೆಗಳಿಗೆ ಇಬ್ಬರಲ್ಲಿಯೂ ಉತ್ತರವಿರಲಿಲ್ಲ. ಇತ್ತ ಮೋಸಂಬಿ ಜ್ಯೂಸಿನ ಕೊನೆಹನಿಗಳನ್ನು ಡಿಬ್ಬಿ ಗಂಟಲಿಗಿಳಿಸುತ್ತಿದ್ದಂತೆ ಪಕ್ಕದ ಮನೆ ಪ್ರೊಫೆಸರ್ ಸುರಪುರ ಅವರ ಮನೆಯಲ್ಲಿ ನಾಯಿಮರಿ ಬೊಗಳಲು ಶುರುಮಾಡಿತು. ಮ್ಲಾನವದನನಾಗಿ ಕುಳಿತಿದ್ದ ಡಿಬ್ಬಿಯ ಮುಖದಲ್ಲಿ ಒಮ್ಮಲೇ ಕಾಂತಿ ಕಾಣಿಸಿಕೊಂಡಿತು.

"ಸುರಪುರ ಮಾಮಾರ ನಾಯಿ ತೊಗೊಂಡಾರೇನ್ಪಾ?" ಅಂತ ಕೇಳಿದ. ಚಿಂತನಾ ಲೋಕದಿಂದ ಮತ್ತೆ ವಾಸ್ತವಕ್ಕೆ ಜಾರಿದ ಸುಬ್ಬು ಮುಖದ ಗಂಟು ಸಡಲಿಸಿಕೊಂಡು. "ಇದರದೂ ಒಂದು ಸ್ವಾರಸ್ಯಕರ ವಿಷಯ ಇದೆ. ಹೇಳ್ಲಾ?" ಅಂತ ಕಣ್ಣು ಮಿಟುಕಿಸಿದ ಸುಬ್ಬು. "ಈಗ ಹೇಳಿದ್ದ ಸಾಕು, ಮತ್ತ ಬರ್ತೇನಿ" ಅಂತ ಡಿಬ್ಬಿ ಸಾಹೇಬರು ಟಾಟಾ ಮಾಡುತ್ತ ಹೊರಟೇಬಿಟ್ಟರು.

ಹರಿಯಾಣ ಸಿಎಂ ಮೇಲೆ ಮತ್ತೆ ಬೂಟಿನ ದಾಳಿಹರಿಯಾಣ ಸಿಎಂ ಮೇಲೆ ಮತ್ತೆ ಬೂಟಿನ ದಾಳಿ

English summary
Subbu asks, why there should not be a museum for footwears thrown at politicians? A political satire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X