• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಂಖ್ಯದ ಬಗ್ಗೆ ಒಂದು ವಿವೇಚನೆ

By ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರ
|

ಮೊನ್ನೆ ಮೈಸೂರಿನ ಪ್ರಖ್ಯಾತ ವಿದ್ವಾಂಸ-ಪ್ರಕಾಶಕ, ಡಿವಿಕೆ ಮೂರ್ತಿಯವರನ್ನು ಭೇಟಿ ಮಾಡಲು ಕೃಷ್ಣಮೂರ್ತಿಪುರದ ಅವರ ಮನೆಗೆ ಹೋಗಿದ್ದೆವು. ಸುಮಾರು ಎಂಭತ್ತೆರಡು ವರ್ಷದ ಇಳಿವಯಸ್ಸಿನಲ್ಲಿದ್ದೂ ನಮ್ಮನ್ನು ಆದರಾತಿಥ್ಯಗಳಿಂದ ಸತ್ಕರಿಸಿ, ತುಂಬ ಸಂತೋಷದಿಂದ ಮಾತನಾಡಿಸಿದರು. ನಮ್ಮ ಮಾತುಕತೆ ಅವರಿಗೆ ಪ್ರಿಯವಾದ ಎರಡು ವಿಷಯ- ಸಾಂಖ್ಯದರ್ಶನ ಮತ್ತು ಹಿಂದೀ ಲೇಖಕ ಪ್ರೇಮಚ೦ದರ ವಿಚಾರಧಾರೆಗಳ ಕಡೆ ವಾಲಿತು: ಅಬ್ಬಾ ಎಂತಹ ನೆನಪಿನ ಅಗಾಧ ಶಕ್ತಿ! ಅತಿ ಆಶ್ಚರ್ಯಕರ ರೀತಿಯಲ್ಲಿ, ಪುಂಖಾನುಪುಂಖವಾಗಿ ಅವರು ಉದ್ಧರಿಸುತ್ತಿದ್ದ ವಾಕ್ಯಬೃಂದಗಳು ಮತ್ತು ಉಲ್ಲೇಖಿಸುತ್ತಿದ್ದ ಸೂಕ್ತಿಗಳು, ಉವಾಚಗಳು ನಮ್ಮನ್ನು ನಿಬ್ಬೆರೆಗಾಗಿಸುತ್ತಿದ್ದವು. ಮಾನವೀಯತೆಯನ್ನು ಮೆರೆದ, ತಮ್ಮ ಸಣ್ಣಕತೆ, ನೀಳ್ಗತೆ, ಕಾದಂಬರಿ ಮತ್ತು ಪ್ರಬಂಧಗಳಲ್ಲಿ ಪ್ರೇಮಚಂದರು ಮಂಡಿಸಿರುವ ಎಲ್ಲ ಕಾಲಕ್ಕೂ ಅನ್ವಯಿಸುವ ಚಿಂತನೆಗಳ ಬಗ್ಗೆ ಡಿವಿಕೆ ಮೂರ್ತಿಯವರ ವಿಶ್ಲೇಷಣೆಯನ್ನು ಇನ್ನೊಂದು ಲೇಖನಕ್ಕೆ ಗ್ರಾಸವಾಗಿಟ್ಟುಕೊಳ್ಳೋಣ. ಅವರೊಂದಿಗೆ ಮಾತನಾಡಿ ಹೊರಬಂದ ಮೇಲೆ, ತಲೆಯಲ್ಲಿ ಇನ್ನೂ ಗುಂಯ್‌ಗುಟ್ಟುತ್ತಿದ್ದ ಅವರ ವ್ಯಾಖ್ಯಾನವನ್ನು ಆದಷ್ಟು ಬರಹಕ್ಕಿಳಿಸಿ, ಜೊತೆಗೆ ನಾನು ಓದಿದ ಸಂಬಂಧಪಟ್ಟ ನಾಲ್ಕಾರು ಗ್ರಂಥಗಳ ಆಧಾರದಿಂದ ಅದನ್ನು ಪೂರಕಗೊಳಿಸಿ ಪರಿಷ್ಕರಿಸಿ ಸಂತೋಷಪಡಲು ಆಶಿಸಿದೆ. ಈ ರೀತಿ, ಭಾರತೀಯ ತತ್ವಶಾಸ್ತ್ರಗಳಲ್ಲಿ ಒಂದು ಪ್ರಮುಖ ದರ್ಶನವಾದ ಸಾಂಖ್ಯದ ಬಗ್ಗೆ ಒಂದು ಸ್ಥೂಲ ವಿವೇಚನೆಯನ್ನ ಮಾಡುವುದು ಈ ಲೇಖನದ ಉದ್ದೇಶ.

ಸತ್ಯವನ್ನು ಶೋಧಿಸಹೊರಟ ಭಾರತೀಯ ಚಿಂತಕರು ಬೇರೆ ಬೇರೆ ಹಾದಿಗಳನ್ನು ಹಿಡಿದರಷ್ಟೆ. ಅದರ ಪರಿಣಾಮವಾಗಿ ಚಾರ್ವಾಕ, ಬೌದ್ಧ, ಅರ್ಹತಾ, ರಾಮಾನುಜ, ಪೂರ್ಣಪ್ರಜ್ಞ, ನಕುಲೀಶ ಪಾಶುಪತ, ಶೈವ, ಪ್ರತ್ಯಭಿಜ್ಞಾ, ರಸೇಶ್ವರ, ಔಲೂಕ್ಯ, ಅಕ್ಷಪಾದ, ಜೈಮಿನಿ, ಪಾಣಿನಿ, ಪಾತಂಜಲ ಮತ್ತು ಶಾಂಕರ ದರ್ಶನ ಎಂಬ ಮುಖ್ಯ ದರ್ಶನಗಳೊಂದಿಗೆ ಈ ಸಾಂಖ್ಯ ದರ್ಶನವನ್ನು ಸರ್ವದರ್ಶನ ಸಂಗ್ರಹಕಾರರಾದ ಸಾಯಣಮಾಧವರು ತೌಲನಿಕವಾಗಿ ಸಮೀಕ್ಷಿಸಿದ್ದಾರೆ. ಪ್ರಮಾಣ, ಜಗತ್ತು, ಜೀವಾತ್ಮ, ಪರಮಾತ್ಮ, ತತ್ವ, ಬಂಧ, ಸಾಧನ, ಮಾರ್ಗ, ಮುಕ್ತಿ- ಈ ಒಂಬತ್ತು ಮಜಲುಗಳಲ್ಲಿ ಭಾರತೀಯ ಪ್ರಮುಖ ತತ್ತ್ವಶಾಸ್ತ್ರವನ್ನ್ನು ಅಧ್ಯಯನ ಮಾಡುವುದರಲ್ಲಿ ಒಂದು ಅನುಕೂಲವಿದೆ. ಇಮ್ಮಡಿ ಶ್ರೀ ಶಿವಬಸವಸ್ವಾಮಿಗಳ ಸರ್ವದರ್ಶನ ಸಂಗ್ರಹದ ವ್ಯಾಖ್ಯಾನ ಗ್ರಂಥ, ಸ್ವಾಮಿ ಶ್ರೀ ಓಮಾನಂದ ತೀರ್ಥರ ಪಾತಂಜಲ ಯೋಗ ಪ್ರದೀಪ, ಪ್ರೊ| ಎಂ. ಹಿರಿಯಣ್ಣ ಅವರ ಭಾರತೀಯ ತತ್ತ್ವಶಾಸ್ತ್ರದ ರೂಪುರೇಖೆಗಳು- ಮುಂತಾದವು ಸಾಂಖ್ಯದರ್ಶನ ಕುರಿತು ಅಧ್ಯಯನ ನಡೆಸಲು ತುಂಬಾ ಸಹಾಯಕವಾಗುತ್ತದೆ. ಅಂಕಿ-ಅಂಶಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನಿರೂಪಿಸುವ ಗಣಿತಶಾಸ್ತ್ರದ ಒಂದು ವಿಶಿಷ್ಟ ವಿಭಾಗವಾದ ಸಂಖ್ಯಾಶಾಸ್ತ್ರವನ್ನು ಸಾಮಾನ್ಯವಾಗಿ ಹೋಲುತ್ತದೆ ನಮ್ಮ ಸಾಂಖ್ಯದರ್ಶನ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಅಂಕಿ-ಅಂಶಗಳಿಗೆ ಪರ್ಯಾಯವಾಗಿ ಇಲ್ಲಿ ತತ್ತ್ವಗಳು ಎಂದುಕೊಳ್ಳಿ; ಸಾಂಖ್ಯದರ್ಶನದಲ್ಲಿ ಮುಖ್ಯವಾಗಿ ಇರುವುದು ಇಪ್ಪತ್ತೈದು ತತ್ತ್ವಗಳು. ಗಟ್ಟಿಯನ್ನು ಒಡೆದೊಡೆದು ವಿಭಾಗಿಸುತ್ತಾ ವಿಭೇದಗಳನ್ನು ಗುರುತಿಸುತ್ತಾ ಅವುಗಳ ಅನನ್ಯತೆಯ ಚಹರೆಯನ್ನು ಮನದಟ್ಟು ಮಾಡಿಕೊಳ್ಳುವುದು ನಮ್ಮ ಗುರಿ- ಎಂದು ಭಾವಿಸಿ ಮುಂದುವರಿಯಿರಿ; ಹಾದಿ ಸುಗಮವಾಗುತ್ತದೆ.

ಬುದ್ಧಿಗೆ ಐದು ವೃತ್ತಿಗಳು- ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಮತ್ತು ಸ್ಮೃತಿ. ಪ್ರಮಾಣವೆಂದರೆ ಯಥಾರ್ಥ ಜ್ಞಾನವನ್ನು ಪಡೆಯುವ ಒಂದು ಮುಖ್ಯ ಸಾಧನೆ. ಈ ಸಾಧನದಿಂದ ನಾವು ಏನನ್ನು ತಿಳಿದುಕೊಳ್ಳಬಲ್ಲೆವೋ ಅದೇ ಪ್ರಮೇಯ. ಸಾಮಾನ್ಯವಾಗಿ ಪ್ರಮಾಣಗಳು ಮೂರು ಬಗೆಯವು- ಪ್ರತ್ಯಕ್ಷ(ಕಣ್ಣಾರೆ ಕಾಣುವುದು), ಅನುಮಾನ(ತರ್ಕದಿಂದ ನಿರ್ಧರಿಸುವುದು) ಮತ್ತು ಶಬ್ದ(ಆಗಮಾದಿ ಶಾಸ್ತ್ರಗಳು ಹೇಳಿದುದದನ್ನು ನಂಬಿ ಒಪ್ಪುವುದು). ಈ ಮೂರೂ ಪ್ರಮೇಯಕ್ಕೆ ಮುಖ್ಯ ಸಾಧನ ಎಂಬುದರಲ್ಲಿ ಭಿನ್ನಮತವಿಲ್ಲ. ಅಲ್ಲದೆ, ಸಾಂಖ್ಯದರ್ಶನದ ಅನುಯಾಯಿಗಳಿಗೆ ಈ ಮೂರೂ ಪ್ರಧಾನವಾದ ಪ್ರಮಾಣಗಳೇ.

ಮೂಲಭೂತವಾಗಿ ಸಾಂಖ್ಯ ಹೇಳುವುದು ಎರಡೇ ತತ್ವಗಳನ್ನು- ಪ್ರಕೃತಿ ಮತ್ತು ಪುರುಷ. ಪ್ರಕೃತಿಯು ಅವ್ಯಕ್ತ ತತ್ವವಾದರೆ, ಅದಕ್ಕೆ ಪೂರಕವಾಗಿ ಚೈತನ್ಯ ಸ್ವರೂಪವಾಗಿ ಇರುವುದೇ ಪುರುಷತತ್ವ. ಪುರುಷದ ವಿಚಾರ ಕೊನೆಯಲ್ಲಿ ನೋಡೋಣ. ಸತ್ತ್ವ, ರಜಸ್ ಮತ್ತು ತಮಸ್- ಎಂಬ ಮೂರು ಗುಣಗಳುಳ್ಳ ಪ್ರಕೃತಿಯೊಂದೇ ಜಗತ್ತಿಗೆ ಮೂಲ ಕಾರಣ. ಈ ಪ್ರಕೃತಿ ನಿತ್ಯವೂ ಹೌದು, ಅವ್ಯಕ್ತವೂ ಹೌದು. ಈ ಅವ್ಯಕ್ತಪ್ರಕೃತಿ ಜಗತ್ತಿನ ಎಲ್ಲಾ ವಸ್ತುಗಳಲ್ಲಿ ಇರುವ ಲಕ್ಷಣ. ಪ್ರಕೃತಿಯ ಈ ಮೂರು ಗುಣಗಳಲ್ಲಿ ಸತ್ತ್ವದ ಸ್ವಭಾವ ಪ್ರಕಾಶ, ರಜಸ್‌ನ ಸ್ವಭಾವ ಕ್ರಿಯೆ ಮತ್ತು ತಮಸ್‌ನ ಪ್ರಭಾವ ಯಥಾಸ್ಥಿತಿ. ಜಗತ್ತಿನ ಪ್ರತಿ ವಸ್ತುವಿನಲ್ಲೂ ಈ ಮೂರೂ ಗುಣಗಳು ಇದ್ದೇ ಇರುತ್ತವೆ, ಬೇರೆ ಬೇರೆ ಪ್ರಮಾಣಗಳಲ್ಲಿ. ಹೆಚ್ಚಿನ ಪ್ರಮಾಣದಲ್ಲಿ ಯಾವ ಗುಣ ಇರುತ್ತದೆಯೋ ಅದಕ್ಕೆ ಹೊಂದಿಕೊಂಡು ಎಲ್ಲ ವಸುಗಳ್ತೂ ರೂಪುಗೊಂಡು ಪ್ರಕಟಗೊಳ್ಳುತ್ತವೆ. ಪ್ರಕೃತಿ ಎಂಟು ಬಗೆಗಳಲ್ಲಿ ಗೋಚರಿಸುತ್ತದೆ- ಪ್ರಧಾನ (ಮೂಲಪ್ರಕೃತಿ), ಮಹತ್‌ತತ್ತ್ವ(ಚಿತ್ತ), ಅಹಂಕಾರ ಮತ್ತು ಐದು ತನ್ಮಾತ್ರಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ). ಆ ಪ್ರಕೃತಿಯ ಇನ್ನೊಂದು ಮುಖ ವಿಕೃತಿ. ವಿಕೃತಿಗಳು ಹದಿನಾರು. ಅವು- ಐದು ಮೂಲಭೂತಗಳು (ನೆಲ, ಜಲ, ಅಗ್ನಿ, ಗಾಳಿ ಮತ್ತು ಆಕಾಶ), ಐದು ಜ್ಞಾನೇಂದ್ರಿಯಗಳು (ಕಿವಿ, ಮೂಗು, ಕಣ್ಣು, ನಾಲಗೆ ಮತ್ತು ಚರ್ಮ), ಐದು ಕರ್ಮೇಂದ್ರಿಯಗಳು (ಕೈ, ಕಾಲು, ಮುಖ, ಉಪಸ್ಥ ಮತ್ತು ಗುದ) ಮತ್ತು ಮನಸ್ಸು. ಹೀಗೆ, ಇಪ್ಪತ್ತನಾಲ್ಕು ತತ್ತ್ವಗಳನ್ನು ಒಳಗೊಂಡದ್ದು ಪ್ರಕೃತಿ.

ಇಪ್ಪತ್ತೈದನೆಯ ಚೇತನ ತತ್ತ್ವಕ್ಕೆ ಪುರುಷ ಎನ್ನುತ್ತಾರೆ. ಈ ಚೇತನ ತತ್ತ್ವವು ವ್ಯಷ್ಟಿ(ಪಿಂಡ) ರೂಪದಲ್ಲಿ ಇದ್ದಾಗ ಶರೀರದೊಂದಿಗೆ ಮಿಶ್ರಿತವಾಗಿರುತ್ತದೆ. ಹೃದಯದ ಒಳಗೇ ಆಕಾಶದ ರೂಪದಲ್ಲಿ ಅನ್ನಮಯವಾಗಿ ಮನೋಮಯವಾಗಿ ಅಮೃತಮಯ ಮತ್ತು ಜ್ಯೋತಿರ್ಮಯವಾಗಿ ಈ ಪುರುಷ ಇರುತ್ತದೆ. ಇದೇ ಚೇತನ ತತ್ತ್ವವು ಸಮಷ್ಟಿ(ಬ್ರಹ್ಮಾಂಡ) ರೂಪದಲ್ಲಿದ್ದಾಗ ಜಗತ್ತನ್ನೆಲ್ಲಾ ಆವರಿಸಿಕೊಂಡಿರುತ್ತದೆ. ಸಾವಿರಾರು ತಲೆಗಳ ಸಾವಿರಾರು ಕಣ್ಣುಗಳ ಸಾವಿರಾರು ಕಾಲುಗಳ ಈ ಪುರುಷ ವಿಶ್ವವನ್ನೆಲ್ಲ ಆವರಿಸಿಕೊಂಡು ಇದ್ದರೂ, ಜಗತ್ತನ್ನೂ ಮೀರಿ ಹತ್ತು ಅಂಗುಲದಷ್ಟು ಅದರ ಮೇಲಿರುತ್ತಾನೆ- ಎಂದು ಶ್ವೇತಾಶ್ವತರ ಉಪನಿಷತ್ (3:14) ಹೇಳಿದಾಗ ಈ ಸಮಷ್ಟಿಯ ರೂಪದ ಚೇತನ ತತ್ತ್ವದ ಒಂದು ಬೃಹತ್ ಸ್ವರೂಪ ನಮಗೆ ಅರಿವಾಗುತ್ತದೆ. ಜಡತತ್ತ್ವಕ್ಕೆ ಭಿನ್ನವಾಗಿ ಈ ಶುದ್ಧಚೇತನತತ್ತ್ವ ಶುದ್ಧಜ್ಞಾನಸ್ವರೂಪವೂ ಹೌದು. ಈ ಪುರುಷ ಎಷ್ಟು ಬೃಹತ್ ಆಗಿ ಮಹಿಮೆಯುಳ್ಳದೆಂದರೆ ಇದರ ಕೇವಲ ಕಾಲುಭಾಗ ಮಾತ್ರ ಈ ಜಗತ್ತು. ಉಳಿದುದೆಲ್ಲಾ ಅಮೃತಸ್ವರೂಪವಾದ ಬೆಳಕಿನಲ್ಲೇ ಲೀನವಾಗಿ ಹೋಗಿದೆ- ಎಂದು ಋಗ್ವೇದ (10:10:3) ಎಂದು ಹೇಳಿದಾಗ ಈ ಪುರುಷನ ಭವ್ಯತೆಯ ಚಿತ್ರಣ ಇನ್ನೂ ಹೆಚ್ಚು ಮನದಟ್ಟಾಗುತ್ತದೆ.

ಪ್ರಕೃತಿಯಿಂದ ಹೊರ ಹೊಮ್ಮುವುವು ಪಂಚಭೂತಗಳು ಎಂದೆವಲ್ಲ, ಅದೇ- ಪ್ರಥ್ವೀ ಅಪ್ ತೇಜಸ್ ವಾಯು ಮತ್ತು ಆಕಾಶ; ಇಲ್ಲಿ ಒಂದು ವಿಚಾರ ಗಮನಾರ್ಹ: ಪಾಶ್ಚಾತ್ಯ ದರ್ಶನಗಳಲ್ಲಿ ನಾಲ್ಕೇ ಮೂಲಭೂತಗಳನ್ನು (ಎಲಿಮೆಂಟ್ಸ್)- ಪೃಥ್ವೀ ಅಪ್ ತೇಜಸ್ ಮತ್ತು ವಾಯುಗಳನ್ನು- ಪರಿಗಣಿಸುತ್ತಾರೆ. ಭಾರತೀಯರು ಈ ನಾಲ್ಕಕ್ಕೂ ಮೂಲವಾದ ಮತ್ತು ಅಂತ್ಯವೂ ಆದ ಇನ್ನೊಂದಿದೆ, ಅದೇ ಆಕಾಶ'- ಎಂದು ಒಂದು ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಡಿವಿಕೆ ಮೂರ್ತಿಯವರು ಉಲ್ಲೇಖಿಸಿ ಹೇಳಿದ್ದು ಇದೇ ಛಾಂದೋಗ್ಯ ಉಪನಿಷತ್ತಿನ (1:9)ರ ಪ್ರವಹಣನ ಆ ಮಾತುಗಳನ್ನ: ಈ ಲೋಕದ ಗೊತ್ತುಗುರಿಯಾದರೂ ಏನು? ಅದೇ ಆಕಾಶ (ಅಸ್ಯ ಲೋಕಸ್ಯ ಕಾ ಗತಿರ್ ಇತಿ? ಆಕಾಶ ಇತಿ ಹ ಉವಾಚ!). ಸಕಲ ಚರ ಅಚರ ಭೂತಗಳೂ ಈ ಆಕಾಶತತ್ತ್ವದಿಂದಲೇ ಹುಟ್ಟುತ್ತವೆ; ಆ ಆಕಾಶದಲ್ಲೇ ಲೀನವಾಗುತ್ತವೆ (ಸರ್ವಾಣಿ ಹ ವಾ ಇಮಾನಿ ಭೂತಾನಿ ಆಕಾಶಾದ್ ಏವ ಸಮುತ್ಪದ್ಯನ್ತೇ; ಆಕಾಶಂ ಪ್ರತಿ ಅಸ್ತ೦ ಯನ್ತಿ). ಆದ್ದರಿಂದ, ಈ ಆಕಾಶವೇ ಎಲ್ಲದಕ್ಕಿಂತ ದೊಡ್ದದು (ಆಕಾಶ: ಏವ ಹಿ ಏಭ್ಯ: ಜ್ಯಾಯನ್); ಅದೇ ಎಲ್ಲಕ್ಕೂ ಆಶ್ರಯ (ಅಕಾಶ: ಪರಾಯಣಮ್)! ಇಲ್ಲಿ ಹೇಳಿರುವ ಆಕಾಶತತ್ತ್ವ ಭೂತಾಕಾಶವಲ್ಲ, ಪರಮಾತ್ಮ- ಎನ್ನುವ ಮಾತೂ ಇದೆ, ಅದಿಲ್ಲಿ ಬೇಡ. ಸಾಂಖ್ಯದಲ್ಲಿ ಪುರುಷನೇ ಆತ್ಮ. ಜೀವಾತ್ಮ ಎಂದರೆ ಏನು? ನಮ್ಮ ಅನುಭವಕ್ಕೆ ನಾನು' ಎಂಬುದು ಯಾವುದು ಗೋಚರವಾಗುತ್ತದೆಯೋ ಅದೇ ಜೀವಾತ್ಮ. ಇದಕ್ಕೆ ಚೇತನ ಎಂಬ ಇನ್ನೊಂದು ಹೆಸರೂ ಉಂಟು. ಪುರುಷ ಶುದ್ಧಚೈತನ್ಯ ಸ್ವರೂಪ. ಪುರುಷನು ಚೈತನ್ಯಕ್ಕೆ ಆಶ್ರಯನೇ ಹೊರತು ತಾತ್ವಿಕವಾಗಿ ನಿಷ್ಕ್ರಿಯ. ಜೊತೆಗೆ ಪ್ರಕೃತಿಗಿಂತ ಸಂಪೂರ್ಣವಾಗಿ ಭಿನ್ನ.

ಈಗ ಪರಮಾತ್ಮ ಅಥವಾ ಈಶ್ವರನ ವಿಚಾರಕ್ಕೆ ಬರೋಣ: ಪ್ರಕೃತಿ ಮತ್ತು ಪುರುಷರಿಗಿಂತ ಬೇರ್ಪಟ್ಟ ಈಶ್ವರನನ್ನು ಸಾಂಖ್ಯ ಒಪ್ಪುವುದಿಲ್ಲ. ಒಂದು ಬಗೆಯಲ್ಲಿ ಸಾಂಖ್ಯ ನಿರೀಶ್ವರ. ಭಾರತೀಯ ವಿಚಾರಶಾಸ್ತ್ರ ಎರಡು ಬಗೆಯವು. ವೇದವನ್ನ ಅಥವಾ ಅದರಿಂದ ಹೊಮ್ಮುವ ವಿಚಾರಗಳಿಗೆ ಬದ್ಧವಾಗಿರುವ ವೈದಿಕ ದರ್ಶನಗಳು ಇದಕ್ಕೆ ಭಿನ್ನವಾಗಿ ವೇದವನ್ನು ಪ್ರಮಾಣವೆಂದು ಒಪ್ಪದ ಚಾರ್ವಾಕ, ಜೈನ, ಬೌದ್ಧ ದರ್ಶನಗಳು ಅವೈದಿಕ ದರ್ಶನಗಳು ಎಂದು ಕರೆಯುತ್ತಾರೆ. ಸಾಂಖ್ಯ ವೈದಿಕ ದರ್ಶನವಾದರೂ ಪ್ರಮುಖವಾಗಿ ಈಶ್ವರತತ್ವವನ್ನ ಒಪ್ಪದೇ ಇರುವುದಕ್ಕೆ ಒಂದು ಕಾರಣವುಂಟು. ಈಶ್ವರನನ್ನ ಒಪ್ಪಿದರೆ ಆವಾಗ ಈ ಪ್ರಪಂಚದಲ್ಲಿ ಏನೇನು ಬಗೆಬಗೆಯ ಅಸಮಾನತೆಯಿದೆಯೋ, ಅದರಿಂದ ಏನೇನು ದೋಷಗಳು ಹುಟ್ಟುತ್ತವೆಯೋ ಅವಕ್ಕೆಲ್ಲಾ ಈಶ್ವರನೇ ಭಾಗಿಯಾಗಬೇಕಾಗುತ್ತದೆ. ನಿರೀಶ್ವರ ಸಾಂಖ್ಯರಿಗೆ ಇದು ಒಪ್ಪಿಗೆಯಿಲ್ಲ. ಪ್ರಕೃತಿ ಪುರುಷರಿಗಿಂತ ಮೇಲಾಗಿ ಇನ್ನೊಂದು ತತ್ವವನ್ನು ಜಗತ್ತಿನ ಆಗು-ಹೋಗುಗಳಿಗೆ ಹೊಣೆಯಾಗಿಸುವುದನ್ನು ಸಾಂಖ್ಯ ಬಯಸುವುದಿಲ್ಲ. ಪ್ರಕೃತಿಯ ಮೂರೂ ಗುಣಗಳ ಅವಸ್ಥೆಯ ಪರಿಣಾಮವೆಂದರೆ ಸಾಮ್ಯಾವಸ್ಥೆಯಲ್ಲಿ ಲಯ ಮತ್ತು ವಿಷಮಾವಸ್ಥೆಯಲ್ಲಿ ಜಗತ್ ಸೃಷ್ಟಿ. ಪ್ರಕೃತಿಯ ಮೂರೂ ಗುಣಗಳ ಅವಸ್ಥಾ ವಿಶೇಷವೇ ಸೃಷ್ಟಿ ಮತ್ತು ಪ್ರಳಯ. ಪ್ರಕೃತಿ ಮತ್ತು ಪುರುಷ ಸಂಪರ್ಕದಿಂದ ಜಗತ್ತು ಸೃಷ್ಟಿಯಾಗುತ್ತದೆ. ಹೀಗಾಗಿ ಪ್ರಕೃತಿಗೇ ಜಗತ್ತಿನ ಕರ್ತೃತ್ವ ಒದಗಿ ಬರುತ್ತದೆ. ಸೃಷ್ಟಿಯಲ್ಲಿ ಮೂರು ಭೇದಗಳಿವೆ- ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವ. ಯಾವುದು ಆತ್ಮದೊಂದಿಗೆ ತನ್ನೊಂದಿಗೇ ನೇರ ಸಂಬಂಧ ಇಟ್ಟುಕೊಳ್ಳುತ್ತದೆಯೋ ಅದು ಅಧ್ಯಾತ್ಮ; ಬುದ್ಧಿ ಅಹಂಕಾರ ಮನಸ್ಸು ಇಂದ್ರಿಯಗಳು ಮತ್ತು ಶರೀರ ಈ ಗುಂಪಿನವು. ಹೊರಗಿನ ಬೇರೆ ಪ್ರಾಣಿಗಳ ವಿವಿಧ ಸೃಷ್ಟಿಯ ಸಂಬಂಧ ಇಟ್ಟುಕೊಳ್ಳುವಂತಹುವು ಅಧಿಭೂತ ಅನ್ನಿಸಿಕೊಳ್ಳುತ್ತವೆ. ಹಸುಕರುಗಳು, ಕುದುರೆ, ಪಶುಪಕ್ಷಿ ಪ್ರ್ರಾಣಿಗಳು ಇತ್ಯಾದಿ. ಇವೆರಡೂ ಅಲ್ಲದೇ ದಿವ್ಯಶಕ್ತಿಗಳ ಸಂಬಂಧವಿದ್ದರೆ ಅದು ಅಧಿದೈವ- ನೆಲ ಬಾನು ಸಿಡಿಲು ಇತ್ಯಾದಿ. ಪ್ರಾಣಿ ಸೃಷ್ಟಿಗಳು ಹದಿನಾಲ್ಕು ಬಗೆಯವು. ಅವುಗಳಲ್ಲಿ ಎಂಟು ದೈವೀ ಸೃಷ್ಟಿಗಳು (ಬ್ರಾಹ್ಮ ಪ್ರಾಜಾಪತ್ಯ ಐಂದ್ರ ದೈವ ಗಾಂಧರ್ವ ಪಿತ್ರ್ಯ ವಿದೇಹ ಪ್ರಕೃತಿಲಯ.) ತಿರ್ಯಕ್ ಯೋನಿಗಳ ಸೃಷ್ಟಿಗಳು ಐದು ಬಗೆಯವು. - ಪಶು-ಪಕ್ಷಿ, ಸರೀಸೃಪ, ಜಂತು, ಕೀಟ ಮತ್ತು ಸ್ಥಾವರ; ಹದಿನಾಲ್ಕನೆಯದೇ ಮಾನುಷೀ ಸೃಷ್ಟಿ.

ಈಗ ಬಂಧದ ವಿಚಾರ: ಪ್ರಕೃತಿ ಮತ್ತು ಪುರುಷರ ಗುಣ ಲಕ್ಷಣಗಳನ್ನು ಈಗಾಗಲೇ ತಿಳಿದಾಯ್ತಲ್ಲ. ಐದು ಜ್ಞಾನೇಂದ್ರಿಯಗಳು, ಪಂಚಪ್ರಾಣಗಳು, ಐದು ಕರ್ಮೇಂದ್ರಿಯಗಳು- ಶಾರೀರಿಕ ಕರ್ಮಗಳನ್ನು ನಡೆಸುವ ಸಾಧನಗಳು. ಮೂಲಭೂತ ಹತ್ತು ಬಗೆಯ ಧರ್ಮಗಳಿಂದ ಒಂಬತ್ತು ರೀತಿಯ ತುಷ್ಟಿಗಳು. ಎಂಟು ತೆರನ ಸಿದ್ದಿಗಳು ಲಭಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲಿ ಸಾಧನೆಗೆ ಅಡ್ಡವಾಗಿ ಬರುವ ಅವಿದ್ಯೆ ಐದು ಬಗೆಯವು - ಅವಿದ್ಯಾ ಅಸ್ಮಿತಾ ರಾಗ ದ್ವೇಷ ಮತ್ತು ಅಭಿನಿವೇಶ. ಹದಿನೆಂಟು ಬಗೆಯ ಅಶಕ್ತಿಗಳೂ ಎದುರಾಗುತ್ತವೆ. ಒಟ್ಟಾರೆ, ಪ್ರಕೃತಿಯ ಧರ್ಮವನ್ನ ಪುರುಷನಲ್ಲೂ ಪುರುಷನ ಧರ್ಮವನ್ನ ಪ್ರಕೃತಿಯಲ್ಲೂ ಆರೋಪಿಸಿಕೊಂಡಾಗ ಬಂಧ ಉಂಟಾಗುತ್ತದೆ. ಇದೂ ಒಂದು ಸಹಜ ಪ್ರಕ್ರಿಯೆ. ಬಂಧಗಳು ಮೂರು ವಿಧ -ವೈಕೃತಿಕ, ದಾಕ್ಷಣಿಕ ಮತ್ತು ಪ್ರಾಕೃತಿಕ ಎಂದು. ಪುರುಷನು ಸದಾ ಪರಿವರ್ತನೆ ಆಗುವ ಪ್ರಕೃತಿಗಿಂತ ತಾನು ಬೇರೆ ಎಂಬ ವಿವೇಚನೆಯನ್ನ ತಳೆಯುವುದೇ ಸಾಂಖ್ಯರು ಉಪದೇಶಿಸುವ ಒಂದು ಮುಖ್ಯಸಾಧನ. ಇದು ಬರೀ ನಂಬಿಕೆಯಾಗಿ ಉಳಿಯಬಾರದು ಅನುಭವದಲ್ಲಿ ಅಳವಡಿಸಿಕೊಳ್ಳಬೇಕು ಎಂದೂ ಸಾಂಖ್ಯ ಒಜ್ಜೆ ಹಾಕುತ್ತದೆ.

ಈಗ ನಾವು ಕೊನೆಯ ಘಟ್ಟಕ್ಕೆ ಮುಟ್ಟಿದ್ದೇವೆ ಅದೇ ಮೋಕ್ಷ. ಪುರುಷನು ಈ ಘಟ್ಟದಲ್ಲಿ ಪ್ರಕೃತಿಯ ಸಂಪರ್ಕವನ್ನು ಸಂಪೂರ್ಣವಾಗಿ ಬಿಡಿಸಿಕೊಂಡುಬಿಟ್ಟಿರುತ್ತಾನೆ; ತನ್ನ ನಿಜಸ್ವರೂಪದಲ್ಲಿ ಗೋಚರಿಸುತ್ತಾನೆ. ಮೋಕ್ಷಕ್ಕೆ ಬೇರೆ ಬೇರೆ ಪಾರಿಭಾಷಿಕ ಪದಗಳಿವೆಯಲ್ಲ -ಕೈವಲ್ಯ, ಅಪವರ್ಗ, ಮುಕ್ತಿ, ಜೀವನ್ಮುಕ್ತಿ, ಸಾಯುಜ್ಯ ಇತ್ಯಾದಿ- ಅವೆಲ್ಲ ಮೋಕ್ಷಸ್ಠಿತಿಯನ್ನು ವಿವರಿಸುವ ಏಕಪದಗಳೇ. ಸಾಂಖ್ಯರ ಪ್ರಕಾರ ಈ ಮೋಕ್ಷದ ಸ್ಥಿತಿಯಲ್ಲಿ ಯಾವ ಆನಂದವೂ ಇಲ್ಲ. ಹಾಗೇ ದುಃಖದ ಲವಲೇಶವೂ ಇಲ್ಲ. ಜೀವಾತ್ಮವು ಚೈತನ್ಯಸ್ವರೂಪವನ್ನ ಪಡೆಯುವ ಸ್ಥಿತಿಯೇ ಸಾಂಖ್ಯರ ಮೋಕ್ಷ.

ಜಗತ್ತಿನ ತತ್ವಶಾಸ್ತ್ರ ವಿದ್ವಾಂಸರುಗಳನ್ನು ವಿಸ್ಮಿತಗೊಳಿಸಿದ ಭಾರತ ವರ್ಷದ ಪ್ರಾಚೀನ ಪ್ರಸಿದ್ಧ ದರ್ಶನವೆಂದರೆ ಸಾಂಖ್ಯವೇ. ಇದರ ಹೆಗ್ಗಳಿಕೆಯನ್ನ ಹಿಗ್ಗಾಮುಗ್ಗ ಹೊಗಳಿರುವುದುಂಟು: ಸಾಂಖ್ಯಕ್ಕೆ ಸಮನಾದ ಜ್ಞಾನ ಇನ್ನೊಂದಿಲ್ಲ- ಎನ್ನುತ್ತ ಮಹಾಭಾರತವು ಇದನ್ನು ಗುರುತಿಸುತ್ತದೆ. ಕಪಿಲ ಋಷಿಯನ್ನೇ ಸಾಂಖ್ಯದ ಮೂಲ ಪುರುಷ ಎಂದು ಹೇಳುವುದು ಸಂಪ್ರದಾಯ. ಗೀತೆಯಲ್ಲೂ(3:3) ಇದನ್ನೇ, ಬಹಳ ಹಿಂದೆಯೇ ಸತ್ಯಶೋಧನೆಯಲ್ಲಿ ಎರಡು ಮಾರ್ಗಗಳನ್ನ ಜನ ಅವಲಂಬಿಸುತ್ತಿದ್ದರು. ಕಪಿಲ ಮುಂತಾದ ಋಷಿಗಳ ಸಾಂಖ್ಯಯೋಗದಿಂದ ಜ್ಞಾನಮಾರ್ಗವನ್ನೂ ಹಿರಣ್ಯಗರ್ಭ ಮುಂತಾದ ಋಷಿಗಳ ಸಿದ್ಧಾಂತದ ಪ್ರಕಾರ ಕರ್ಮಯೋಗದ ಮಾರ್ಗವನ್ನೂ ಜನ ಅನುಸರಿಸುತ್ತಿದ್ದರು, ಅಂತ ಇದೆ. ಇವೆರಡರ ಸಮೀಕರಣವನ್ನ ಗೀತಾಚಾರ್ಯ (5:4-6) ತತ್ತ್ವವೇತ್ತರಿಗೆ ಸಾಂಖ್ಯ ಮತ್ತು ಯೋಗ ಒಂದೇ; ಸಾಂಖ್ಯ ಕೊಂಚ ಕಠಿಣವಾಗಿರಬಹುದು ಅಷ್ಟೆ- ಎಂದು ವಿವರಿಸುತ್ತಾನೆ. ಒಟ್ಟಾರೆ ಸಾಂಖ್ಯನಿಷ್ಠರಲ್ಲಿ ಜ್ಞಾನವೇ ಪ್ರಧಾನ. ಸಾಂಖ್ಯಸಿದ್ಧಾಂತಕ್ಕೆ ಸಂಬಂಧಿಸಿದ ಪ್ರಸ್ತಾಪಗಳು ಉಪನಿಷತ್ತುಗಳಲ್ಲಿಯೇ ಸಿಗುತ್ತವೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (1:5:2) ಇದರ ಬಗ್ಗೆ ಒಂದು ಉಲ್ಲೇಖವಿದೆ. ಕಪಿಲ ಮುನಿಯಿಂದ ಹಿಡಿದು ವಿಜ್ಞಾನ ಭಿಕ್ಷುವಿನವರೆಗೆ ಹಲವರು ಸಾಂಖ್ಯದ ಪ್ರಮುಖ ಆಚಾರ್ಯರುಗಳು. ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ ಕಪಿಲ ಮಹರ್ಷಿಯು ತನ್ನ ತಾಯಿಗೆ ಸಾಂಖ್ಯದ ಉಪದೇಶ ಕೊಟ್ಟನೆಂಬ ಮಾತು ಬರುತ್ತದೆ. ಒಂದು ಕಾಲದಲ್ಲಿ ಸಾ೦ಖ್ಯದ ಪ್ರಭಾವ ತಪ್ಪಿಸಿಕೊಳ್ಳಲಾರದಷ್ಟು ದಟ್ಟವಾಗಿ ಹರಡಿದ್ದಿರಬೇಕು. ಅದಕ್ಕೇ ಆದರ ತಥಾಕಥಿತ ಆದ್ಯಪ್ರವರ್ತಕನನ್ನು ನೆನೆಯದೇ ಯಾರೂ ಮುಂದುವರಿಯುತ್ತಿರಲಿಲ್ಲ. ಪ್ರಾಚೀನ ಶಾಸ್ತ್ರೀಂii (ಕ್ಲಾಸಿಕಲ್) ಸಾಂಖ್ಯದ ಮುಖ್ಯ ಗ್ರಂಥ ಯಾವುದು? ಇತ್ತೀಚಿನ ಸಂಶೋಧಕರ ಪ್ರಕಾರ ಇಪ್ಪತ್ತೆರಡು ಸೂತ್ರಗಳು ಮಾತ್ರ ಇರುವ ತತ್ತ್ವಸಮಾಸವೇ ಸಾಂಖ್ಯದರ್ಶನದ, ಕಪಿಲ ಪ್ರಣೀತ ಮುಖ್ಯ ಗ್ರಂಥ. ಕಪಿಲ ಮುನಿ ಪ್ರಣೀತ ಸಾಂಖ್ಯ ಗ್ರಂಥದ ಭಾಷ್ಯವೊಂದನ್ನು ಎಪ್ಪತ್ತು ಶ್ಲೋಕಗಳ ಸಾಂಖ್ಯಕಾರೀಕಾ (ಸಾಂಖ್ಯ ಸಪ್ತತಿ) ಎಂಬ ಹೆಸರಲ್ಲಿ ಈಶ್ವರಕೃಷ್ಣ ಎಂಬುವನು ಕ್ರಿ.ಶ. ಐದನೇ ಶತಮಾನದಲ್ಲಿ ಬರೆದನು. ವಿವರಣೆ ಉದಾಹರಣೆ ಉಲ್ಲೇಖಗಳೊಂದಿಗೆ ಇದ್ದು ಅರ್ಥದುಷ್ಟವಾದ ಕೆಲವೊಮ್ಮೆ ಕ್ಲಿಷ್ಟವಾದ ಸೂತ್ರಗಳನ್ನ ಸಮರ್ಥವಾಗಿ ವಿಶದೀಕರಿಸಿರುವುದರಿಂದ ಈಶ್ವರಕೃಷ್ಣನ ಈ ಸಾಂಖ್ಯಕಾರಿಕೆ ತುಂಬಾ ಪ್ರಚಾರದಲ್ಲಿತ್ತು. ಆಸಕ್ತ ಲಿಪಿಕಾರರೂ ತಮ್ಮ ತಮ್ಮ ಹಸ್ತಪ್ರತಿಗಳನ್ನ ಬರೆದಿಟ್ಟುಕೊಳ್ಳುವಾಗ ಮೂಲ ಗ್ರಂಥವನ್ನ ಬಿಟ್ಟು ಈ ಭಾಷ್ಯಗ್ರಂಥವನ್ನೇ ಪ್ರತಿಮಾಡಿಕೊಳ್ಳತೊಡಗಿದರು. ಹೀಗಾಗಿ ನಾವೀಗ ಸಾಂಖ್ಯಕಾರಿಕೆಯ ಸಹಾಯದಿಂದ ಮೂಲ ಗ್ರಂಥವನ್ನ ಪುನರ್ ನಿರ್ಮಾಣ ಮಾಡುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more