ಸರ್ವಜ್ಞ ವಚನಗಳಲ್ಲಿ ಒಗಟುಗಳು
![]() | ಶಿಕಾರಿಪುರ ಕೆ. ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು [email protected] |
ಶ್ರೀಸಾಮಾನ್ಯನ ಮನಮುಟ್ಟುವಂತೆ ಮಾತನಾಡುವ ಜನಪರ ಕವಿಗಳನ್ನು ಹೆಸರಿಸುವಾಗ ಕನ್ನಡದ ‘ಸರ್ವಜ್ಞ’, ತಮಿಳಿನ ‘ತಿರುವಳ್ಳುವರ್’, ತೆಲುಗಿನ ‘ವೇಮನ’ ಮತ್ತು ಹಿಂದಿಯ ‘ಕಬೀರ’ರನ್ನು ಸಮೀಕರಿಸುವುದು ಸಾಮಾನ್ಯ. ಕನ್ನಡ ಸಾಹಿತ್ಯ ಲೋಕದ ಈ ‘ಸರ್ವಜ್ಞ’ ಯಾರು, ಯಾವಾಗ ಇದ್ದ, ಎಲ್ಲಿದ್ದ- ಎಲ್ಲವೂ ನಿಗೂಢ ಚಿದಂಬರ ರಹಸ್ಯವಾಗಿ ಉಳಿದು, ಸಂಶೋಧಕರ ವಿವಿಧ ಅಭಿಪ್ರಾಯಗಳ ವಾದ-ವಿವಾದ, ಚರ್ಚೆಗೆ ಒಳಪಟ್ಟಿದೆ.
ಗೊಂದಲಕ್ಕೆ ನೀವು ಸಿದ್ಧರೆಂದರೆ ವಿವರಗಳ ತೊಂದರೆಯ ಹಂದರವನ್ನ ಬೇಕಾದಷ್ಟು ಹೆಣೆಯಬಲ್ಲೆ : ‘ಸರ್ವಜ್ಞ’ನ ಹೆಸರಿನ ಇನ್ನೂ ಮೂರು ಮಂದಿ ಕವಿಗಳು ಆಗಿ ಹೋಗಿದ್ದಾರೆ- ‘ಕಾಲಜ್ಞಾನ ವಚನ’ಗಳ ‘ಸರ್ವಜ್ಞ ಮುನಿ’ ಒಬ್ಬ, ಚೌಪದಿಗಳ ಕರ್ತೃ ‘ಸರ್ವಜ್ಞ’ ಇನ್ನೊಬ್ಬ, ಹಾಡಿನ ರೂಪದ ‘ಸರ್ವಜ್ಞಪದ’ಗಳ ರಚನಕಾರ ಮತ್ತೊಬ್ಬ. ಇದರ ಜೊತೆಗೆ, ಬಹಳ ಹಿಂದಿನದೆಂದು ನಿರ್ಧರಿಸಲ್ಪಟ್ಟ ಒಂದು ಹಸ್ತಪ್ರತಿಯಲ್ಲಿ , ಎಲ್ಲಾ ತ್ರಿಪದಿಗಳ ಕೊನೆಯಲ್ಲಿ ಇರುವ ಅಂಕಿತ ಮುದ್ರೆ ‘ಸರ್ವಜ್ಞ’ ಅಂತ ಇಲ್ಲ ; ಅದು ‘ಪರಮಾರ್ಥ’ ಎಂದಿದೆ; ತ್ರಿಪದಿಯ ಛಂದಸ್ಸಿಗೆ ‘ಪರಮಾರ್ಥ’ ಪದ ಹೊಂದಿಕೊಳ್ಳುವ ಹಾಗೆ ‘ಸರ್ವಜ್ಞ’ ಪದ ಅಲ್ಲ ; ಆದ್ದರಿಂದ ಈ ‘‘ಸರ್ವಜ್ಞ ವಚನ’’ಗಳ ಕರ್ತೃ ನಿಜವಾಗಿ ಆ ಹೆಸರಿನವನೇನಾ?- ಸಂಶೋಧಕರ ಈ ಅಭಿಮತವನ್ನು ಸಾರಾಸಗಟಾಗಿ ಅಲ್ಲಗಳೆದು ‘ಒಂದು ಹಸ್ತಪ್ರತಿಯಲ್ಲಿ ಹಾಗಿದ್ದರೆ ಅದೇ ನಿರ್ಣಾಯಕವೇ?’- ಎಂದೆಲ್ಲಾ ತಳ್ಳಿಹಾಕುವ ವಿದ್ವಾಂಸರೂ ಇದ್ದಾರೆ. ಹಿಂದಿನ ಬಹಳ ಕವಿಗಳ ಬಗ್ಗೆ ಹೀಗೆ ಗೊಂದಲ ಇದ್ದೇ ಇದೆ; ನಮ್ಮ ‘ಸರ್ವಜ್ಞ’ನೇನೂ ಇದಕ್ಕೆ ಹೊರತಲ್ಲ.
‘ಸರ್ವಜ್ಞ’ನ ವಚನಗಳ ಮಿಕ್ಕ ವಿಚಾರಗಳನ್ನು ವಿವರಗಳನ್ನ ಇನ್ನೊಂದು ತೌಲನಿಕ ಅಧ್ಯಯನದ ಲೇಖನಕ್ಕೆ ವಸ್ತುವಾಗಿರಿಸಿಕೊಂಡು, ಈಗ ಈ ತ್ರಿಪದಿಗಳ ಮೂಲಕ ಒಗಟಿನ ಪ್ರಪಂಚಕ್ಕೆ ಕಾಲಿರಿಸಲು ಪ್ರಯತ್ನಿಸುವೆ. ಉತ್ತರಗಳು ಕೊನೆಯಲ್ಲಿವೆ; ಆದರೆ ಈಗಲೇ ಅಲ್ಲಿಗೆ ಓಡಬೇಡಿ. ‘‘ಊರಿಂಗೆ ದಾರಿಯನು ಯಾರು ತೋರಿದರೇನು?’’ ಒಂದೆರಡು ಸುಳಿವು ಹೊಳವುಗಳನ್ನು ಸೂಚಿಸುತ್ತ, ಒಗಟುಗಳನ್ನು ಬಿಡಿಸಲು ನಾನೂ ನಿಮಗೆ ಕೈಮರವಾಗುತ್ತೇನೆ. ಬಹಳ ಮಂದಿಗೆ ಅದು ಬೇಡವೋ ಏನೋ. ಇರಲಿ, ಈ ನಮ್ಮ ಜಾನಪದ ಕವಿ ಹೇಳುತ್ತಾನೆ:
ಅರೆವ ಕಲ್ಲಿನ ಮೇಲೆ ಮರವು ಹುಟ್ಟಿದ ಕಂಡೆ,
ಮರದ ಮೇಲೆರಡು ಕರ ಕಂಡೆ, ವಾಸನೆಯು
ಬರುತಿಹುದ ಕಂಡೆ ಸರ್ವಜ್ಞ ।। 1 ।।
ಏನಿರಬಹುದು? ಯೋಚಿಸಿ. ಕಲ್ಲಿನ ಮೇಲೆ ಮರ; ಮರದ ಮೇಲೆ ಕೈಗಳು; ಏನಿದು ಜಾದೂ; ಇದೆಲ್ಲಿಂದ ಘಮ ಘಮ ವಾಸನೆ ಬರುತ್ತಾ ಇದೆ!- ಏನಿರಬಹುದು ಯೋಚಿಸಿ, ಹೇಳಿ.
***
ಆಡೆಂದರಾಡುವುದು; ಆಡ ಮರವೇರುವುದು;
ಕೂಡದೆ ಕೊಂಕಿ ನಡೆಯುವುದು, ಕಡಿದರೆ
ಬಾಡದದು ಹೇಳಿ ಸರ್ವಜ್ಞ ।।2।।
ಬಹುಶಃ ‘ಹಾಡುವುದು’ ಎಂದೂ ಹೇಳಬಹುದಾಗಿತ್ತೋ ಏನೋ. ಮೂಲೆಯಲ್ಲಿ ಮುಸುಕೆಳೆದುಕೊಂಡು ಮಲಗುವ, ಒರಗಿಸಿ ಮಲಗಿಸುವ ಮಂದಿಗೆ ಬೇಗ ಗೊತ್ತಾಗಬಹುದೋ ಏನೋ. ಇರಲಿ. ನೀವು ಬಿಡಿಸಿ ನುಡಿಸಿ ಬಿಡಿ.
***
ಇನ್ನು ಬಲ್ಲರೆ ಕಾಯಿ, ಮುನ್ನೂರ ಅರವತ್ತು ;
ಹಣ್ಣು ಹನ್ನೆರಡು, ಗೊನೆ ಮೂರು, ತೊಟ್ಟೊಂದು;
ಚೆನ್ನಾಗಿ ಹೇಳಿ ಸರ್ವಜ್ಞ ।।3।।
ಎಷ್ಟು ಕಾಲ ಬೇಕು ಸ್ವಾಮಿ, ‘‘ಕಾಲದೊಳು ಮಳೆಗಾಲ, ಮಾಲೆಯೋಳು ಮಲ್ಲಿಗೆಯು, ಬೇಸಗೆಯ ಕಾಲವೇ ಲೇಸು’’, ನಿಜ; ತುಂಬಾ ಸಮಯ ತೆಗೆದುಕೊಳ್ಳಬೇಡಿ, ಬೇಗ ಬೇಗ ಹೇಳಿ- ಎಂದು ಕೇಳಿಕೊಳ್ಳುತ್ತಾನೆ, ನಮ್ಮ ಕವಿ.
***
ಕತ್ತಿಗದು ಹರಿದಿಹುದು, ಮತ್ತೆ ಬರುತೇಳುವದು;
ಕಿತ್ತು ಬಿಸಾಡಲಿದು ನೆಡದು; ಕವಿ ಜನರು
ಅರ್ತಿಯಿಂ ಪೇಳಿ ಸರ್ವಜ್ಞ ।।4।।
ಹೊಳೆಯದಿದ್ದರೆ, ಸಾಮಾನ್ಯವಾಗಿ ಜನ ಏನು ಮಾಡುತ್ತಾರೆ, ಹೇಳಿ? ಕೈ ಬೆರಳ ಮೇಲೆತ್ತಿ, ಎಲ್ಲಿಟ್ಟು, ಯೋಚಿಸುತ್ತಾ, ‘‘ತಾಗಿ ಬಾಗುವುದರಿಂದ ತಾಗದಿರುವುದು ಲೇಸು’’ ಎಂದು ಏನನ್ನು ಕೆರೆದುಕೊಳ್ಳುತ್ತಾರೆ? ಈಗ ಹೊಳೆಯಿತೆ?
***
ಕಪ್ಪು ಬಣ್ಣದ ಸೀರೆ ಒಪ್ಪುವಳು ಗಗನದಲಿ;
ಕಪ್ಪಿನ ಸೀರೆ ಬಿಳಿಯಾಗೆ ಅವಳನ್ನು
ಅಪ್ಪುವವರಿಲ್ಲ ಸರ್ವಜ್ಞ ।।5।।
ಇದು ಸುಲಭ. ಕಪ್ಪು ಬಣ್ಣದ ನೀರೆಯನ್ನ, ಹುಡುಗಿಯನ್ನು ಜರಿಯುವ ಮಾತಿದಲ್ಲ ; ನೀರೂರಿಸುವ, ಮಲ್ಹಾರ ರಾಗ ‘ಘನನ ಘನನ ಘನ’ ಎಂದು ಹಾಡಿಸುವ ‘ಘನ ಶ್ಯಾಮಸುಂದರಿ’ ಈಕೆ. ಗೊತ್ತಾಯಿತೇ?
***
ಕಲ್ಲರಳಿ ಹೂವಾಗಿ, ಎಲ್ಲರಿಗೆ ಬೇಕಾಗಿ,
ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ
ಬಲ್ಲವರು ಹೇಳಿ ಸರ್ವಜ್ಞ ।।6।।
ಮಣ್ಣು, ಕಣ್ಣು- ಅಲ್ಲ ; ಬೆಣ್ಣೆಯಂತೆ ತಣ್ಣಗೂ ಇದಿಲ್ಲ ; ಎಲೆ ಅಡಿಕೆ ಜಗಿಯುವ ಜನ ಮರೆಯಾಲ್ಲ- ಎಂದರೆ ಹೊಳೆಯುತ್ತದೆಯೇ?
***
ಕಾಲಿಲ್ಲದೆ ಹರಿಗು, ತೋಳಿಲ್ಲದೆ ಹೊರಗು,
ನಾಲಿಗಿಲ್ಲದಲೆ ಉಲಿವುದು; ಕವಿಕುಲದ
ಮೇಲುಗಳು ಪೇಳಿ ಸರ್ವಜ್ಞ ।।7।।
(ಪಾಠಾಂತರದಲ್ಲಿ : ‘ಕಾಲಿಲ್ಲದಲೆ’, ತೋಳಿಲ್ಲದಲೆ’, ‘ನಾಲಿಗಿಲ್ಲದಲೆ’-ಎಂದಿದೆ)
ನಡೆದಾಡಲು ಕಾಲು ಬೇಕು; ತೆವಳುವವರೂ ಇದ್ದಾರೆ. ಹೊಟ್ಟೆಯಿಂದಲೇ ಹರಿದಾಡುವ ಸರೀಸೃಪಗಳು ಇಲ್ಲವೇ? ಇದು ಹಾಗೆಯೇ. ದೂರದೂರ ಎಸೆಯಲು, ಬಾಚಿ ತಬ್ಬಿಕೊಳ್ಳಲು ತೋಳುಗಳೇ ಬೇಕಿಲ್ಲ ; ನಾಲಿಗೆ (ಎಂದರೆ, ಅದು ಇರುವ ಬಾಯಿ) ಇಲ್ಲದೆಲೆ ಶಬ್ದ ಮಾಡುವ ಸೋಜಿಗ ಇದರದ್ದು. ಇದು ಯಾರು?
** ** **
ಕೋಡಗವು ಕುದುರೆಯಲಿ, ನೋಡುತ ಹುಟ್ಟಿ
ಕಾಡಾನೆಗೆರಡು ಗರಿಮೂಡಿ, ಗಗನದಿಂ-
ದಾಡುವುದ ಕಂಡೆ ಸರ್ವಜ್ಞ ।।8।।
‘‘ಗಿಳಿಗೆ ಪಂಜರ ಲೇಸು; ಸುಳಿಗಾಳಿ ಲೇಸು ಬೆವರಿಂಗೆ’’; ಯಾರು ಕರೆಯಬೇಕು ಇಳೆಯ ಬೆಳೆಗೆ? ‘‘ಮೇಲೆ ನೋಡೆ ಕಣ್ಣ ತಣಿಪ ನೀಲ ಪಟದಿ ವಿವಿಧರೂಪ ಜಾಲಗಳನು ಬಣ್ಣಿಸಿರ್ಪ ಚಿತ್ರಚತುರ’’ನ ಕುಂಚ ಆಡಿದಂತೆಲ್ಲಾ ವೇಷ-ರೂಪ ಬದಲಾಯಿಸಿ ಮೇಲೆ ಹರಿದಾಡುವ ಈ ವನ್ಯ ಪ್ರಾಣಿಗಳಾವುವು?
***
ತನ್ನ ಸುತ್ತಲೂ ಮಿಣೆಯು, ಬೆಣ್ಣೆ ಕುಡಿವಾಲುಗಳ
ತಿನ್ನದಲೆ ಹಿಡಿದು ತರುತಿಹುದು, ಕವಿಗಳೇ,
ನನ್ನಿಯಿಂ ಪೇಳಿ ಸರ್ವಜ್ಞ ।।9।।
‘‘ತಾ ಬಿಟ್ಟ ಹಣ್ಣುಗಳ ಮರ ತಿನ್ನಲುಂಟೆ?’’ ಹಾಲು ಮೊಸರು ಬೆಣ್ಣೆಗಳ ಕುಡಿಕೆ ಮಡಕೆಗಳ ಒಳ ಕೈಚಾಚುವುದುಂಟೆ? ಮುಗ್ಗದ ಹೋಳಿಗೆಯಂತಿಪ್ಪ ಅದನೆಲ್ಲಾ ಹೊತ್ತು ಬಾನಿಂದ ಇಳಿಬಿದ್ದು ನಿಂತೆ ನಾನು; ಹೇಳಿ ಯಾರು?
***
ನಳಿದೋಳಿನಾಕೆ ತಾ ಸುಳಿದೆಗೆದು ಬೆಳೆದಿಹಳು
ಕಳೆಯುಳ್ಳ ಹಸುಳೆ ಹಲವಾಗೆ, ತಾನಾಗಿ
ಅಳಿದು ಹೋಗುವಳು ಸರ್ವಜ್ಞ ।।10।।
(ಪಾಠಾಂತರ: ‘ನಳಿದೋಳಿ ಸಾಕೆ, ತಾ ಸುಳಿದೆಗೆದು ಬೆಳೆದಿಹಳು’, ‘ಅಳಿಯ ಹೋಗುವಳು’)
ನೀಳ ತೋಳಿನ ಬಾಲೆ; ಪದರ ಪದರ ಬಿಚ್ಚುತ್ತಾ ಬೆಳೆವ ಬೆಡಗಿ; ಅವಳ ನವಜಾತ ಶಿಶುಗಳೂ ಮೋಹಕ ಕಳೆ ತುಂಬಿದ ಹಸುಳೆಗಳೇ; ಆದರೆ, ಪಾಪ, ಅವು ಎಲ್ಲವೂ ಉಳಿಯವು, ಕೆಲವು ಹುಟ್ಟುತ್ತಿದ್ದಂತೆಯೇ ಕಾಲವಶವಾಗುವುವು- ಈಕೆ ಯಾರಿರಬಹುದು?
***
ನೆತ್ತಿಯಲಿ ಉಂಬುವುದು, ಸುತ್ತಲೂ ಸುರಿಸುವುದು,
ಎತ್ತಿದರೆ ಎರಡು ಹೋಳಹುದು, ಕವಿ ತಿಳಿದ-
ರುತ್ತರವ ಪೇಳಿ ಸರ್ವಜ್ಞ ।।11।।
(ಪಾಠಾಂತರ: ‘ಸುತ್ತಲೂ ಸೇರಿಸುವದು’; ‘ಎತ್ತಿನರೆ ಎರಡು ಹೇಳಹುದು’; ‘ಕವಿಗಳಿದ-ಕುತ್ತರವ’)
ವಿವರಣೆ ಅನವಶ್ಯಕ. ಒಗಟನ್ನು ಬಿಡಿಸಿ.
** ** **
ಮಂಡೆ ಬಾಯಾಳಗಿಕ್ಕು, ಚಂಡಿಗೆಯು ಹೊರಗಿಕ್ಕು,
ಹೆಂಡತಿಯು ಕಡೆಯೆ ಬರುತಿಕ್ಕು, ಕಡೆಗೊಂದು
ಉಂಡೆಯಂತಕ್ಕು ಸರ್ವಜ್ಞ ।।12।।
(ಪಾಠಾಂತರ: ‘ಮಂಡಿ ಬಾಯಾಳಗಿಕ್ಕು’)
ಚಂಡಿಕೆ ಎಂದರೆ ಕೂದಲು, ಶಿಖೆ, ಜುಟ್ಟು- ಇದು ಹೊರಗೆ ನಿಂತು ಆಟ ಆಡುತ್ತಿದೆ. ಮಂಡೆಯೆಂದರೆ ತಲೆ; ‘ಮಂಡಿ’ಯಾದರೆ ಮೊಳಕಾಲು- ಇದು ಬಾಯಿ ಹಾಕಿ ಒಳಹೊಕ್ಕಿದೆ. ಇದು ಬರುವುದು, ಇದನ್ನು ತರುವುದು ಹೆಂಡತಿಯ ಕಡೆಯಿಂದಲೇ. (ತಮಿಳಿನಲ್ಲಿ ಈ ಹೆಂಡತಿ ‘ಪೆಂಡಾಟಿ’ ಪೆಣ್ ಜಾತಿ, ಸ್ತ್ರೀ-ಕುಲ; ಕನ್ನಡದಲ್ಲಿ ಹೆಣ್ಣು ಕೂಸು ‘ಹೆಂಗಸು’ ಆದಂತೆ!) ಇರಲಿ, ಇದು ಅವರ ಆಯುಧ! ‘ಕಡೆಗೆ’ ಬರುವುದು ಏನು? ಒಂದು ಉಂಡೆ! ನಾನಾರು?
***
ಸಂದಮೇಲ್ ಸುಡುತಿಹುದು, ಬೆಂದಮೇಲುರಿದಿಹುದು
ಬಂಧುಗಳನೆದ್ದು ಬಡಿದಿಹುದು, ಕವಿಗಳಲಿ
ನಂದನರು ಹೇಳಿ ಸರ್ವಜ್ಞ ।।13।।
ಅರ್ಥ ಸ್ಪಷ್ಟ.
***
ಹತ್ತು ಸಾವಿರ ಕಣ್ಣು, ನೆತ್ತಿಲಾದರು ಬಾಲ;
ಹುತ್ತಿನಾ ಹುಳುವ ಹಿಡಿಯುವುದು, ಕವಿಜನರ
ಮೊತ್ತವಿದ ಪೇಳಿ ಸರ್ವಜ್ಞ ।।14।।
(ಪಾಠಾಂತರ: ‘ಹುತ್ತದಾ ಹುಳು’)
ಬಹಳ ಅನ್ನುವುದಕ್ಕೆ ನಮ್ಮಲ್ಲಿ ‘ಸಾವಿರಾರು’ ಎಂದು ಹೇಳುವುದು ವಾಡಿಕೆ. ಹಾಗೆ ಇಲ್ಲಿಯೂ ಅಷ್ಟೊಂದು ‘ಕಣ್ಣು’ಗಳು ಇದಕ್ಕೆ. ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುವುದು ಎಲ್ಲಿ? ಆದರೆ, ಇದಕ್ಕೆ ‘ಬಾಲ’ ಇರುವುದು ನೆತ್ತಿಯಲ್ಲಿ. ಇದಕ್ಕೆ ಪ್ರಿಯವಾದ ಆಹಾರವೆಂದರೆ- ಹುತ್ತದ ಹುಳಗಳು, ಕ್ರಿಮಿ ಕೀಟಗಳು ಅಷ್ಟೇ ಅಂದುಕೊಳ್ಳ ಬೇಡಿ; ಆಲಂಕಾರಿಕವಾಗಿ ಹೇಳುತ್ತಿದ್ದಾನೆ: ‘ಹುತ್ತದೊಳಗಿರುವ ಹುಳು’ ಯಾವುದು?, ಯೋಚಿಸಿ, ಅದೇನೇ ಇದು ಆಸೆ ಪಡುವ ಆಹಾರ. ಕಾಡು ಅಂದಕೂಡಲೇ ‘ಕವಿ’ಗಳಿಗೆ ಥಟ್ಟನೆ ವರ್ಣಿಸಲೊಂದು ಮೊತ್ತಮೊದಲು ಸಿಗುವ, ಮನಸ್ಸಿಗೆ ‘ಕವಿ’ಯುವ ವಸ್ತು ಯಾವುದು? ಹೇಳಿ. ಅದೇ ಈ ಒಗಟಿಗೆ ಉತ್ತರ.
***
ಹಲ್ಲು ನಾಲಿಗೆಯಿಲ್ಲ, ಸೊಲ್ಲು ಸೋಜಿಗವಿಲ್ಲ ;
ಕೊಲ್ಲದೆ ಮೃಗವ ಹಿಡಿಯುವುದು, ಲೋಕದೊಳ-
ಗೆಲ್ಲ ಠಾವಿನಲಿ ಸರ್ವಜ್ಞ ।।15।।
ಪಾಠಾಂತರ: ‘ಠಾವಿನಲಿ’ ಬದಲು ‘ಕಾವಿನಲಿ’.
ಒಂದು ಪ್ರಾಣಿಯನ್ನು ಹಿಡಿಯಲು ಅದರ ವೈರಿಪ್ರಾಣಿಗೆ ಹಲವು ಸಾಧನಗಳಿವೆಯಲ್ಲ , ಅವು ಒಂದೂ ಬೇಡ. ಕಚ್ಚಿ ಹಿಡಿಯಲು ಹಲ್ಲೂ ಇಲ್ಲ ; ನುಂಗಲು ನಾಲಿಗೆಯೂ ಇಲ್ಲ. ದೊಡ್ಡ ಶಬ್ದಮಾಡಿ ಹೆದರಿಸುವ ಗೋಜೂ ಇಲ್ಲ. ಕೊಲ್ಲದೇನೇ ಉಪಾಯದಿಂದ ಹಿಡಿಯುವ ಕೈಚಳಕಕ್ಕೆ ನೀವು ‘ಭಲೆ ಭಲೆ’ ಎನ್ನಲೂಬಹುದು. ನಾನು ಯಾರು?
***
ಹಲ್ಲುಂಟು ಮೃಗವಲ್ಲ ; ಸೊಲ್ಲು ಸೋಜಿಗವಲ್ಲ ;
ಕೊಲ್ಲುವುದು ತನ್ನ ನಂಬಿದರ, ಅರಿದರಿದ
ಬಲ್ಲವರು ಹೇಳಿ ಸರ್ವಜ್ಞ ।।16।।
ಇನ್ನೊಂದು ಪ್ರಾಣಿ. ಮೇಲಿನದರ ತದ್ವಿರುದ್ಧ. ಇದಕ್ಕೆ ಹಲ್ಲುಗಳೂ ಇವೆ; ತುಂಬಾ ಶಬ್ದವನ್ನೂ ಮಾಡುತ್ತದೆ. ಅಷ್ಟೇ ಅಲ್ಲ , ಸ್ವಲ್ಪ ಹುಷಾರು ತಪ್ಪಿದರೆ, ತನ್ನನ್ನು ನಂಬಿ ಉಪಯೋಗಿಸಿಕೊಳ್ಳುವವರನ್ನೇ ಕೈ ಮೈ ಕಾಲುಗಳನ್ನ ಪರಚಿ, ಧಸಪಸ ಕೊಯ್ಯಲೂ ಬಹುದು, ಕೊಲ್ಲಲೂ ಬಹುದು. ಅರಿಯದವರ ಅರಿ. ನೀವು ಬಲ್ಲಿರೇನು ಇದರ ಪರಿ?
***
ಹುಟ್ಟಿದಾ ಮನೆ ಬಿಟ್ಟು ಸಿಟ್ಟಿನಲಿ ಹೊರಟಿಹಳು;
ಸಿಟ್ಟಿಳಿದು ಮನೆಗೆ ಬರುತಿಹಳು, ಕವಿಗಳಲಿ
ದಿಟ್ಟರಿದ ಹೇಳಿ ಸರ್ವಜ್ಞ ।।17।।
ಅಯ್ಯೋ, ಪಾಪ! ತೌರನ್ನೇ ತೊರೆದು, ಹುಟ್ಟಿದ ಹಟ್ಟಿಯನ್ನೇ ಬಿಟ್ಟು, ಬೆಟ್ಟದ ತುಟ್ಟ ತುದಿಗೆ ಮುನಿಸಿಕೊಂಡೇ ಹೋದಳಲ್ಲಾ ಬಿಸಿಯುಸಿರ ಬಿಸುಸುಯ್ವ ಈ ನೀರೆ. ಮತ್ತೆ ಖಂಡಿತಾ ಮನೆಗೆ ಬಂದಾಳು, ಒಮ್ಮೆ ಸಿಟ್ಟಿಳಿಯಿತೆಂದಾಗ, ತಂಬೆಲರ ತಂದಾಳು ಸುತ್ತ ಮುದ ಮೂಡಿಸಿಯಾಳು, ಅವಳು.
***
ಹೊತ್ತೇಳುತಲೆ ಕೆಂಪು, ಮತ್ತಾರುತಲೆ ಕಪ್ಪು,
ಹೆತ್ತವ್ವನೊಡಲನುರಿಸುವುದು, ಕವಿಗಳಿದ
ಅರ್ಥವನು ಹೇಳಿ ಸರ್ವಜ್ಞ ।।18।।
ನಿಧಾನಕ್ಕೆ ಓದಿಕೊಳ್ಳಿ; ಅರ್ಥ ಸ್ಪಷ್ಟ. ಒಗಟನ್ನ ಬಿಡಿಸಿ.
***
ಈಗ ಮೇಲಿನ ‘ಸರ್ವಜ್ಞ’ ಪದಗಳ ಮಾದರಿಯಲ್ಲೇ ಇರುವ ಈ ಒಗಟಿನ ತ್ರಿಪದಿಗಳನ್ನೂ ಬಿಡಿಸಲು ಪ್ರಯತ್ನಿಸಿರಿ.
ಅಕ್ಕನಿಗೆ ಆರ್ಕಣ್ಣು, ಮುಕ್ಕನಿಗೆ ಮೂರ್ಕಣ್ಣು,
ಚಿಕ್ಕವನು ಪಾಪಿ ನನಗೆ ಒಕ್ಕಣ್ಣು, ಯಾರ್ಯಾರು
ತಕ್ಕವರು? ಬಿಡಿಸಿ ಒಗಟನ್ನ ।।19।।
ಬದಿನಲ್ಲಿ ಹುಟ್ಟುವುದು, ಬದಿನಲ್ಲಿ ಬೆಳೆಯುವುದು
ಬದಿಯಲ್ಲಿ ಹೋಗುವರ ಸೆಳೆವುದು, ಎಲೆ ಬಾಲೆ
ಇದರರ್ಥ ಒಡೆದು ಬಿಡಿಸಮ್ಮ ।।20।।
ಚಿಕ್ಕ ಪ್ರಾಯದ ಬಾಲೆ, ಸೊಕ್ಕಿಗೇನೆಣೆಯಿಲ್ಲ,
ನಕ್ಕರೆ ಉದುರುವುದು, ಹಲ್ಲುಗಳು ಒಂದೊಂದು,
ಹೆಕ್ಕಿಕ್ಕಿ, ಬಿಡಿಸಿ ಒಗಟನ್ನ ।।21।।
ಅಯ್ಯಯ್ಯೋ ಜೋಗಿ, ಮೈಯ್ಯೆಲ್ಲ ಬೂದಿ,
ಕಯ್ಯಲ್ಲ, ಕಂಕುಳ ಕಾಮಾಕ್ಷಿ, ತಲೆಯಲ್ಲಿ
ಅಯ್ಯಗಳ ರುದ್ರಾಕ್ಷಿ, ಬಿಡಿಸಣ್ಣ ।।22।।
***
(ಉತ್ತರಗಳು: 1. ಸಾಣೆಕಲ್ಲಿನ ಮೇಲೆ ಗಂಧದ ಕೊರಡು; 2. ವೀಣೆಯ ತಂತಿ; 3. ಒಂದು ವರ್ಷ; 4. ತಲೆಗೂದಲು; 5. ಕಪ್ಪು ಮೋಡ; 6. ಸುಣ್ಣದ ಹರಳು; 7. ನದಿ; 8. ಮೋಡ; 9. ಹಗ್ಗದ ಜೋಳಿಗೆ, ನಿಲ, ಕಾವುಲಿ; 10. ಬಾಳೆಯ ಗಿಡ; 11. ಬೀಸುಗಲ್ಲು; 12. ಕಡಗೋಲು; 13. ಕೊಡಲಿಯ ಕಾವು; 14. ನವಿಲು; 15. ಬೇಡರ ಬಲೆ; 16. ಗರಗಸ; 17. ಹಬೆ, ಮೋಡ, ಮಳೆ; 18. ಒಲೆಯಲ್ಲಿ ಬೆಂಕಿ; 19. ಕೊಳಲು, ತೆಂಗಿನಕಾಯಿ, ಸೂಜಿ; 20. ಉತ್ತರಾಣಿ; 21. ದಾಳಿಂಬೆ ಹಣ್ಣು; 22. ಹರಳು ಗಿಡ)



Click it and Unblock the Notifications
