ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಂಶೋಧನಾಚಾರ್ಯ ಆರ್.ಎಸ್.ಪಂಚಮುಖಿ

By Staff
|
Google Oneindia Kannada News

Kannada Scholar Raghavendracharya Panchamukhiದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸಮಕಾಲೀನರಾಗಿದ್ದ ರಾಘವೇಂದ್ರಾಚಾರ್ಯ ಸ್ವಾಮಿರಾಯಾಚಾರ್ಯ ಪಂಚಮುಖಿಯವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ವಿದ್ಯಾರತ್ನ, ವಿದ್ಯಾಭೂಷಣ, ಪಂಡಿತರಾಜ, ಹರಿದಾಸ ಸಾಹಿತ್ಯರತ್ನ ಎಂಬ ಪದವಿ ಪಡೆದಿರುವ ಸಂಶೋಧಕರಾಗಿದ್ದ ಪಂಚಮುಖಿಯವರ ಕುರಿತು ಇಲ್ಲಿಯವರೆಗೆ ಒಂದೂ ಸ್ಮರಣಗ್ರಂಥ ಬರದಿರುವುದು ಮಾತ್ರ ವಿಷಾದನೀಯ.

ಅಂಕಣಕಾರ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ರಾಘವೇಂದ್ರಾಚಾರ್ಯ ಸ್ವಾಮಿರಾಯಾಚಾರ್ಯ ಪಂಚಮುಖಿ (1898-1982) ಧಾರವಾಡದ ಮರೆಯಲಾರದ ಮಹನೀಯರಲ್ಲಿ ಒಬ್ಬರು. ಇವರು ವರಕವಿ ಬೇಂದ್ರೆಯವರ ಸಮಕಾಲೀನರು. ಬೇಂದ್ರೆಯವರು ಜನಿಸಿದ ಎರಡು ವರ್ಷಗಳ ನಂತರ ಇವರು ಜನಿಸಿದರು, ಬೇಂದ್ರೆಯವರು ಸ್ವರ್ಗಸ್ಥರಾದ ಮರುವರ್ಷ ಇವರು ಸ್ವರ್ಗಸ್ಥರಾದರು. ಬೇಂದ್ರೆಯವರು ಮುಂಬೈಯಲ್ಲಿ ಮಗನಂತಿರುವ ಡಾ.ಮಾಧವ ನಾತು ಅವರ ಆರೈಕೆಯಲ್ಲಿ ಕೊನೆಯ ಉಸಿರು ಎಳೆದರೆ, ಪಂಚಮುಖಿಯವರು ದೆಹಲಿಯಲ್ಲಿ ತಮ್ಮ ಮಗ ಡಾ| ವಾದಿರಾಜ ಆರ್. ಪಂಚಮುಖಿಯವರ ಆರೈಕೆಯಲ್ಲಿ ಕೊನೆಯ ಉಸಿರೆಳೆದರು. ಇಬ್ಬರೂ ಮುಂಬೈ ವಿಶ್ವವಿದ್ಯಾಲಯದ ಎಂ.ಎ.ಪದವಿ ಗಳಿಸಿದ ಬಗ್ಗೆ ಅಭಿಮಾನಪಡುತ್ತಿದ್ದರು. ಇಬ್ಬರೂ ಮುಂಬೈ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಪೀಠ ಪ್ರಾರಂಭವಾಗುವ ಮೊದಲು ಸಲಹೆಗಾರರಾಗಿದ್ದರು. ಇಬ್ಬರದೂ ಸಂಸ್ಕೃತ ಪಂಡಿತರ ಮನೆತನ. ಒಬ್ಬರು ಕನ್ನಡ ನಾಡು ಕಂಡ ಮಹಾಕವಿಗಳಾಗಿ ಬೆಳಗಿದರೆ, ಇನ್ನೊಬ್ಬರು ಮಹಾನ್ ಸಂಶೋಧಕರಾಗಿ ಹೆಸರು ಗಳಿಸಿದರು. ಇಬ್ಬರ ಶತಮಾನೋತ್ಸವ ನಡೆಯಿತು ಆದರೆ ಅರ್ಥಪೂರ್ಣವಾದ ಸ್ಮರಣಗ್ರಂಥ ಬರಲೇ ಇಲ್ಲ. ಇಬ್ಬರೂ ನನಗೆ ಅತ್ಯಂತ ಪ್ರಿಯರಾಗಿದ್ದರು, ನಾನೂ ಅವರಿಗೆ ಪ್ರಿಯನಾಗಿದ್ದೆ. ಇದು ನನ್ನ ಸುಕೃತ ಎಂದು ಭಾವಿಸಿರುವೆ.

ಉತ್ತರಾದಿ ಮಠದ ಹಿಂದಿನ ಸ್ವಾಮಿಗಳಾಗಿದ್ದ ಶ್ರೀಶ್ರೀ ಸತ್ಯಪ್ರಮೋದತೀರ್ಥರ ಪೂರ್ವಾಶ್ರಮದ ತಂದೆ ಗುತ್ತಲ ರಂಗಾಚಾರ್ಯರು ವಿಕ್ಟೋರಿಯಾ ಹೈಸ್ಕೂಲಿನಲ್ಲಿ(ಇಂದಿನ ವಿದ್ಯಾರಣ್ಯ ಹೈಸ್ಕೂಲ್‌ನಲ್ಲಿ) ಶಿಕ್ಷಕರಾಗಿದ್ದಾಗ ಪಡೆದ ಎರಡು ಉತ್ತಮ ವಿದ್ಯಾರ್ಥಿಗಳೆಂದರೆ ಬೇಂದ್ರೆ ಹಾಗೂ ಪಂಚಮುಖಿ. ಬೇಂದ್ರೆಯವರು ಪುಣೆಯಿಂದ ಬಿ.ಎ.ಪರೀಕ್ಷೆ ಕಟ್ಟಿ ಧಾರವಾಡಕ್ಕೆ ಮರಳಿದಾಗ ಅವರ ರಿಜಲ್ಟ್ ಆಗುವ ಮೊದಲೇ ಶಾಲೆಗೆ ಬಂದು ಶಿಕ್ಷಕನಾಗಲು ಕರೆಯಿತ್ತವರು ಗುತ್ತಲ ಮಾಸ್ತರರು. ಅವರು ಗುರುಗಳ ಆಜ್ಞೆಯನ್ನು ಶಿರಸಾ ವಹಿಸಿದ್ದರು. ಪಂಚಮುಖಿಯವರು ವಿದ್ಯಾರ್ಥಿಯಾಗಿದ್ದಾಗ ಒಂದು ಇಂಗ್ಲಿಷ್ ಅವತರಣಿಕೆಯನ್ನು ಶಿಷ್ಯನಿಗೆ ಕೊಟ್ಟು, ಇದನ್ನು ಸಂಸ್ಕೃತದಲ್ಲಿ ಅನುವಾದಿಸು ನೋಡೋಣ ಎಂದಿದ್ದರಂತೆ. ಶಿಷ್ಯ ಅವರ ಆಹ್ವಾನವನ್ನು ಸ್ವೀಕರಿಸಿದ. ಗುರುಗಳಿಗೋ ಅಚ್ಚರಿ. ಅವರು ಬಯಸಿದ್ದು ರಜತ, ಶಿಷ್ಯ ನೀಡಿದ್ದು ಸುವರ್ಣ. ಸಂಸ್ಕೃತಕಾವ್ಯದಲ್ಲಿ ಅನುವಾದ ಮಾಡಿದ್ದ, ಅದೂ ಕೂಡ ಕಠಿಣವಾದ ವೈದರ್ಭೀ ಶೈಲಿಯಲ್ಲಿ! ಬಹುಶಃ ಪಂಚಮುಖಿಯವರಲ್ಲಿ ಆಗ ಅಂಕುರಿಸಿದ್ದ ಕಾವ್ಯ ಬೀಜ ಮುಂದೆ ಹೆಮ್ಮರವಾದದ್ದು ಅವರ 80ನೆಯ ವರ್ಷದಲ್ಲಿ. ಅದುವೆ ಶ್ರೀ ಗುರುಸಾರ್ವಭೌಮ ಸಪ್ತರಾತ್ರೋತ್ಸವ'' ಎಂಬ ಸಂಸ್ಕೃತ ಚಂಪೂ ಕಾವ್ಯ. 20ನೆಯ ಶತಮಾನದ ಶ್ರೇಷ್ಠ ಸಂಸ್ಕೃತ ಕಾವ್ಯವೆಂಬ ಹೆಗ್ಗಳಿಕೆ ಅದಕ್ಕೆ. ಅರ್ಥಶಾಸ್ತ್ರಜ್ಞ ಹಿರಿಯ ಮಗ (ವಾದಿರಾಜ) ಸಂಸ್ಕೃತದಲ್ಲಿ ಟಿಪ್ಪಣಿ ಬರೆದ. ಅದರ ಕನ್ನಡಾನುವಾದ ಇನ್ನೂ ಬಂದಿಲ್ಲ. ಪಂಚಮುಖಿಯವರ ಸಂಸ್ಕೃತ ಪಾಂಡಿತ್ಯ ಹಾಗೂ ತತ್ತ್ವಜ್ಞಾನಕ್ಕೆ ಅವರಿತ್ತ ಕಾಣಿಕೆಯನ್ನು ಅನುಲಕ್ಷ್ಕಿಸಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ದೊರೆತಿತ್ತು.

ರಾಘವೇಂದ್ರಾಚಾರ್ಯರಿಗೆ 7ನೆಯ ವರ್ಷವೇ ಉಪನಯನ. ತಂದೆಯೇ ಪ್ರಥಮ ಗುರು. ಸಂಸ್ಕೃತ ಕಾವ್ಯ, ನಾಟಕ ಅಲಂಕಾರಶಾಸ್ತ್ರಗಳ ಪಾಠ ಮಾಡಿದರು, ನಂತರ ವೇದಾಂತದ ಪ್ರವೇಶ. (ರಾಘವೇಂದ್ರಚಾರ್ಯರು ತಮ್ಮ ಮೂರು ಜನ ಗಂಡು ಮಕ್ಕಳಿಗೆ, ವಾದಿರಾಜ(ಅರ್ಥಗಣಕಶಾಸ್ತ್ರಜ್ಞ), ಪಾರ್ಥಸಾರಥಿ(ಅರ್ಥಶಾಸ್ತ್ರಜ್ಞ), ಆನಂದತೀರ್ಥ(ಇಂಜಿನೀಯರ್) ಇವರುಗಳಿಗೆ, ಗುರುವಾಗಿ ಮನೆಯಲ್ಲೇ ಪಾಠಹೇಳಿ ಸಂಸ್ಕೃತ ಪಂಡಿತರನ್ನಾಗಿ ರೂಪಿಸಿದ್ದಾರೆ). ರಾಘವೇಂದ್ರಾಚಾರ್ಯರು ತಮ್ಮ ಕುಲಗುರುಗಳಾದ ಮಂತ್ರಾಲಯದ ಮಹಾಸ್ವಾಮಿಗಳ ಬಳಿಯಲ್ಲಿ ಶಾಸ್ತ್ರಾಧ್ಯಯನ ನಡೆಸಿದರು. 1917ರಲ್ಲಿ ಮೆಟ್ರಿಕ್ ಉಚ್ಚ ವರ್ಗದಲ್ಲಿ ಪಾಸಾದರು. ಅದೇ ವರ್ಷ ಧಾರವಾಡದಲ್ಲಿ ಕರ್ನಾಟಕ ಕಾಲೇಜು ಪ್ರ್ರಾರಂಭವಾಗಿತ್ತು. ಅಲ್ಲಿಯ ವಿದ್ಯಾರ್ಥಿಯಾದರು. ಅದೇ ವರ್ಷ ಅವರ ಲಗ್ನವಾಯಿತು. (ಆ ಕಾಲದಲ್ಲಿ ಬೇಗ ಮದುವೆ ಮಾಡುವ ಪದ್ಧತಿ ಇತ್ತು. ಗೋಕಾಕರ ಮದುವೆ ಕೂಡ ಅವರು ವಿದ್ಯಾರ್ಥಿಯಾಗಿದ್ದಾಗ ಆಗಿತ್ತು.) ಮದುವೆಯಿಂದ ಅವರ ಅಭ್ಯಾಸಕ್ಕೆ ತಡೆಯುಂಟಾಗಲಿಲ್ಲ. ಮುಂದೆ ಪದವಿಗಾಗಿ ಪುಣೆಯ ಡೆಕ್ಕನ್ ಕಾಲೇಜು ಸೇರಿದರು. 1919ರಲ್ಲಿ ಗಾಂಧೀಜಿಯವರ ಚಳವಳಿಯಲ್ಲಿ ಭಾಗವಹಿಸಿ ಕಾಲೇಜು ತ್ಯಜಿಸಿದರು. ಬಾಗಲಕೋಟೆಗೆ ಬಂದು ರಾಷ್ಟ್ರೀಯ ಶಾಲೆ ತೆರೆದು ಅಲ್ಲಿ ಶಿಕ್ಷಕರಾದರು. ಎರಡು ವರ್ಷಗಳ ನಂತರ ಮತ್ತೆ ಪುಣೆಗೆ ತೆರಳಿ ಪದವಿಗಾಗಿ ಅಭ್ಯಸಿಸಿದರು. ಕನ್ನಡ ಮತ್ತು ಸಂಸ್ಕೃತ ವಿಷಯಗಳಲ್ಲಿ ಪ್ರಥಮ ವರ್ಗದಲ್ಲಿ ಪ್ರಥಮಸ್ಥಾನ ಪಡೆದರು. ಅವರಿಗೆ ದಕ್ಷಿಣಾ ಫೆಲೋಶಿಫ್' ದೊರೆಯಿತು. (ಗೋಕಾಕರು ಕೂಡ ದಕ್ಷಿಣಾ ಫೆಲೋ ಗೌರವ ಪಡೆದಿದ್ದರು.) 1925ರಲ್ಲಿ ಎಂ.ಎ.ಪದವಿ ಗಳಿಸಿದರು. ಸಂಸ್ಕೃತ ವೇದಾಂತ ಇವರ ಐಚ್ಛಿಕ ವಿಷಯವಾಗಿತ್ತು. ಅಲ್ಲಿಯೂ ಇವರಿಗೆ ಪ್ರಥಮಶ್ರೇಣಿ ಲಭಿಸಿತ್ತು.

ಭಾರತ ಸರಕಾರದ ಎಪಿಗ್ರಾಫಿ ಇಲಾಖೆಯಲ್ಲಿ ಭಾಷಾ ಪಂಡಿತರ ಅವಶ್ಯಕತೆ ಇತ್ತು. ಇವರು ಅಸಿಸ್ಟಂಟ್ ಎಪಿಗ್ರಾಫಿಸ್ಟ್ ಹುದ್ದೆಗೆ ನೇಮಕಗೊಂಡರು. ನೀಲಗಿರಿಯಲ್ಲಿ ಇವರಿಗೆ ಕೆಲಸ. ಆಚಾರ-ವಿಚಾರ-ಪಾಂಡಿತ್ಯ-ಶಿಸ್ತು ಆಚಾರ್ಯರ ಚತುರ್ ಮುಖಗಳಂತೆ ಇದ್ದವು. ನಿತ್ಯನೈಮಿತ್ತಿಕ ಕರ್ಮ, ಪೂಜೆ, ಜಪ ತಪಗಳಲ್ಲಿ ಸದಾನಿಷ್ಟರು, ಕರ್ಮಠರು ಎಂದರೂ ನಡೆಯುವುದು. ಆಹಾರದಲ್ಲಿ ಮಿತಾಹಾರಿಗಳು, ಏಕಾದಶಿ ವ್ರತ ಕಡ್ಡಾಯವಾಗಿತ್ತು. ಪ್ರಾತಃಕಾಲ ಸಾಯಂಕಾಲ ವಾಯುವಿಹಾರ. ಮಧ್ಯಾಹ್ನ ಮಲಗಿ ಗೊತ್ತೇ ಇರಲಿಲ್ಲ. ಮನೆಯಲ್ಲಿ ಸದಾ ಪಾಠಪ್ರವಚನ, ಆಫೀಸಿನಲ್ಲಿ ಸಂಶೋಧನೆ. ಉತ್ತರ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆ ಹಾಗೂ ಶಾಸನ ಸಂಗ್ರಹ ಪರೀಕ್ಷೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇರಿಸಿದವರಲ್ಲಿ ಪಂಚಮುಖಿಯವರೇ ಮೊದಲಿಗರು ಎನ್ನಲಾಗುತ್ತದೆ. ನೀಲಗಿರಿಯಲ್ಲಿರುವಾಗ ಎನ್.ಲಕ್ಷ್ಮೀನಾರಾಯಣರಾವ್ ಎಂಬ ಸಹೋದ್ಯೋಗಿಗಳೊಡನೆ ಉತ್ತರ ಕರ್ನಾಟಕದ ಪ್ರವಾಸ ಕೈಕೊಂಡು ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಅನೇಕ ಅಮೂಲ್ಯ ಶಾಸನಗಳನ್ನು ಸಂಗ್ರಹಿಸಿದ ಕೀರ್ತಿ ಇವರದು. ತಮ್ಮ ಉದ್ಯೋಗಾವಧಿಯಲ್ಲಿ ತಮಿಳು, ತೆಲುಗು ಶಾಸನ ವಿಭಾಗದಲ್ಲಿ ಕೆಲಸ ಮಾಡಿ ವಿದ್ವತ್‌ಪ್ರಪಂಚದಲ್ಲಿ ಹೆಸರು ಗಳಿಸಿದರು. 1926ರಿಂದ 1929ರ ಅವಧಿಯಲ್ಲಿ ಪಂಚಮುಖಿಯವರು ಧಾರವಾಡ, ವಿಜಾಪುರ, ಕಾರವಾರ ಮತ್ತು ಬೆಳಗಾವಿ ಜಿಲ್ಲೆಗಳನ್ನು ಸಂಚರಿಸಿ, ಹಳ್ಳಿಗಳನ್ನು ಸಂದರ್ಶಿಸಿ ಸಂಶೋಧನೆ ನಡೆಸಿ, ಶಾಸನಗಳ ಅಚ್ಚುತೆಗೆದು, ಓದಿ, ವ್ಯವಸ್ಥಿತವಾಗಿ ವರ್ಣನಾತ್ಮಕ ಯಾದಿಯನ್ನು ಸಿದ್ಧಪಡಿಸಿದರು. ಅವೆಲ್ಲವನ್ನು ಪ್ರಾಚ್ಯಶಾಸ್ತ್ರ ಇಲಾಖೆಯವರು ಪ್ರಕಟಿಸಿದರು. 1931ರಲ್ಲಿ ಕರ್ನಾಟಕದ ಅರಸು ಮನೆತನಗಳು'' ಎಂಬ ಇತಿಹಾಸ ಸಂಪುಟವನ್ನು ಎನ್.ಎಲ್.ರಾವ್ ಅವರೊಂದಿಗೆ ಬರೆದು ಪ್ರಕಟಿಸಿದರು.

1939ರಲ್ಲಿ ಕಾಂಗ್ರೆಸ್ ಮಧ್ಯಂತರ ಸರಕಾರ ರಚಿತವಾದಾಗ ಧಾರವಾಡದಲ್ಲಿ ಕನ್ನಡ ಸಂಶೋಧನಾ ಸಂಸ್ಥೆಯು ಸ್ಥಾಪಿತವಾಯ್ತು. ಅದಕ್ಕೆ ವಿದ್ಯಾರತ್ನ ಪಂಚಮುಖಿಯವರೇ ಪ್ರಥಮ ಡೈರೆಕ್ಟರರೆಂದು ನೇಮಕಗೊಂಡರು. ನಂತರ 4-6 ವರ್ಷಗಳಲ್ಲಿ ಅದನ್ನು ಭಾರತದ ಅತ್ಯುಚ್ಚ ಸಂಶೋಧನಾ ಸಂಸ್ಥೆಗಳಿಗೆ ಸರಿಗಟ್ಟುವಂತೆ ರೂಪಿಸಿದ ಕೀರ್ತಿ ಪಂಚಮುಖಿಯವರದು. ಬ್ರೂಸ್-ಫುಟ್‌ರ ತರುವಾಯ ಉತ್ತರ ಕರ್ನಾಟಕದ ಪ್ರಾಗೈತಿಹಾಸಿಕ(ಪ್ರಿ-ಹಿಸ್ಟಾರಿಕ್) ಶೋಧನೆ ಮಾಡಿದವರಲ್ಲಿ ಪಂಚಮುಖಿಯವರು ಮೊದಲಿಗರು. ಕರ್ನಾಟಕದಲ್ಲಿ ಉತ್ಖನನ ನಡೆಸಿ ಹಳೆಯ ಶಿಲಾಯುಗದಿಂದ ಆರಂಭಿಸಿ ಧಾತುಗಳ ಯುಗದವರೆಗೆ ಸುಸಂಬದ್ಧ ಚರಿತ್ರೆ ರಚಿಸಲು ಅವಶೇಷಗಳನ್ನು ಸಂಗ್ರಹಿಸಿದರು. ಇದರಂತೆ ವಡಗಾಂವದಲ್ಲಿ ಕ್ರಿ.ಪೂ.ಒಂದನೆಯ ಶತಮಾನದ ವೈದಿಕ, ಪ್ರಾಕೃತ, ಬ್ರಾಹ್ಮೀಲಿಪಿಯ ಯೂಪಶಾಸನವನ್ನು ಕಂಡುಹಿಡಿದು, ಓದಿ ಪ್ರಕಟಿಸಿದರು. ಭಟಕಳ್ ಸುತ್ತಲಿನ ನೆಲದಲ್ಲಿ ಹೂತಿಟ್ಟ ನೂರಾರು ಜೈನ ಧರ್ಮದ ಎರಕದ ಮೂರ್ತಿಗಳನ್ನು ಸಂಗ್ರಹಿಸಿ ದಕ್ಷಿಣ ಹಿಂದುಸ್ತಾನದಲ್ಲೇ ಅಪರೂಪವೆನಿಸುವ ಜೈನಕಲಾ ಪ್ರದರ್ಶನವನ್ನು ತಮ್ಮ ಸಂಸ್ಥೆಯ ಪರವಾಗಿ ಏರ್ಪಡಿಸಿದ ಕೀರ್ತಿ ಇವರದು. ಇದರಂತೆ ಪ್ರಾಚೀನ ನಾಣ್ಯಗಳ ಸಂಗ್ರಹ, ಶಿಲಾಶಾಸನ, ಧಾತು ಮತ್ತು ಶಿಲಾಮಯ ಕಲಾಕೃತಿಗಳನ್ನೂ ಸಂಗ್ರಹಿಸಿದರು.

ಪಂಚಮುಖಿಯವರು ಧಾರವಾಡದಲ್ಲಿ ಸ್ಥಾಪಿಸಿದ್ದ ಶಾಸನ ಲಿಪಿಯ ಬೆಳವಣಿಗೆಯ ಮಂಟಪವು ವಿದ್ವಾಂಸರ ಗಮನ ಸೆಳೆದಿತ್ತು. ಅಜಂತಾ, ಬದಾಮಿ, ಹಂಪಿ(ವಿಜಯನಗರ), ಕುಮಟಾಗಳಲ್ಲಿರುವ ಚಿತ್ರಗಳಿಂದ ಹಿಡಿದು ವಿಜಾಪುರದ ಆದಿಲ್‌ಶಾಹಿಯ ವರೆಗೆ ಚಿತ್ರಗಳ ಬೆಳವಣಿಗೆ ತೋರಿಸುವ ಚಿತ್ರಪ್ರದರ್ಶನ ನಿರ್ಮಿಸಿದರು. ಜಮಖಂಡಿಯ ಬಳಿಯಲ್ಲಿ ಕಲಹಳ್ಳಿ ಸಮೀಪದ ಗೊಂಬೀಗುಡ್ಡದಲ್ಲಿ ರೇಖಾಚಿತ್ರಗಳನ್ನು ಶೋಧಿಸಿ ಅವುಗಳಿಂದ ಚಿತ್ರಕಲೆಯ ಮೂಲವನ್ನು ಕಂಡುಹಿಡಿದರು. ಇವರ ಮಹತ್ತರವಾದ ಶೋಧಗಳು ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಮನ್ನಣೆ ಗಳಿಸಿದವು. ಲಂಡನ್ನಿನ ಡೈರೆಕ್ಟರ್ ಆಫ್ ಓರಿಯಂಟಲ್ ಸ್ಟಡಿಜ್ ಅವರು ಪಂಚಮುಖಿಯವರ ಅಮೌಲ್ಯ ಸಂಶೋಧನೆಯ ವ್ಯಾಪ್ತಿಯನ್ನು, ಉಚ್ಚಮಟ್ಟವನ್ನು ಪ್ರಶಂಶಿಸಿ ಪತ್ರ ಬರೆದು ಅವರನ್ನು ಗೌರವಿಸಿದರು. ಮಾರ್ಟಿಮರ್ ವ್ಹೀಲರ್, ಪ್ರೊ.ಜ್ವಾಯಿನರ್(ಲಂಡನ್ ಯುನಿವರ್ಸಿಟಿಯ ಪ್ರಾಧ್ಯಾಪಕ) ಮುಂತಾದವರು ಇವರ ಪ್ರಕಟನೆಗಳ ಮಹತ್ವವನ್ನು ಕೊಂಡಾಡಿದರು. ರಾಷ್ಟ್ರಕವಿ ಗೋವಿಂದ ಪೈ, ಮಹಾಮಹೋಪಾಧ್ಯಾಯ ಡಾ. ದತ್ತೋ ವಾಮನ ಪೋದ್ದಾರ್, ದಾ. ಸರ್ಕಾರ್, ಡಾ. ಜಯಕರ್, ಬಿ.ಜಿ. ಖೇರ್, ರಂ.ರಾ.ದಿವಾಕರ್ ಮುಂತಾದ ವಿದ್ವಾಂಸರು, ಸಂಶೋಧಕರು ಇವರ ಸಂಶೋಧನೆಗಳನ್ನು ಮುಕ್ತಕಂಠದಿಂದ ಹೊಗಳಿದರು. ಪಂಚಮುಖಿಯವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿದರು. ಇವರ ಮಾರ್ಗದರ್ಶನದಲ್ಲಿ ಹಲವಾರು ಪ್ರಾಧ್ಯಾಪಕರು ಮುಂಬಯಿ ಮತ್ತು ಕರ್ಣಾಟಕ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ. ಪದವಿ ಗಳಿಸಿದರು. ಶ್ರೀ ಪರಿಮಳ ಸಂಶೋಧನ ಮತ್ತು ಪ್ರಕಾಶನ ಮಂದಿರದ ಸಂಸ್ಥಾಪಕರಲ್ಲಿ ಒಬ್ಬರಾದ ವೇದಾಂತರತ್ನ ವೇದವ್ಯಾಸಾಚಾರ್ಯರು ಇವರ ಮಾರ್ಗದರ್ಶನದಲ್ಲಿ ಕರ್ನಾಟಕದ ಹರಿದಾಸರು (A critical Study of Haridasas of Karnataka) ಎಂಬ ಮಹತ್ವದ ಗ್ರಂಥವನ್ನು ರಚಿಸಿ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು.

ಬಳ್ಳಾರಿ ಕರ್ನಾಟಕಕ್ಕೆ ಸೇರಬೇಕೋ ಆಂಧ್ರಕ್ಕೆ ಸೇರಬೇಕೋ ಎಂಬ ವಿವಾದ ಎದ್ದಾಗ, ಕೇಂದ್ರ ಸರಕಾರದಿಂದ ಮಿಶ್ರಾ ಕಮೀಶನ್ ನಿಯಮಿಸಲಾಗಿತ್ತು. ಅದರ ಎದುರು ಬಳ್ಳಾರಿಯು ಕರ್ನಾಟಕಕ್ಕೆ ಸೇರಬೇಕು' ಎಂದು ಐತಿಹಾಸಿಕ ಹಾಗೂ ಶಾಸನಗಳ ಸಾಕ್ಷಿ ಆಧಾರಗಳನ್ನು ಒದಗಿಸಿ ವಿದ್ವತ್ಪೂರ್ಣವಾಗಿ ವಾದಮಾಡಿ ಕರ್ನಾಟಕದಲ್ಲಿ ಬಳ್ಳಾರಿ ಉಳಿಯುವಂತೆ ಮಾಡಿದವರು ಪಂಚಮುಖಿಯವರು ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

1953ರಲ್ಲಿ ಇವರು ನಿವೃತ್ತರಾದ ಮೇಲೆ ಧಾರವಾಡದ ಇತಿಹಾಸ ಸಂಶೋಧನಾ ಮಂಡಲದ ಕಾರ್ಯಾಧ್ಯಕ್ಷರಾಗಿ, ಪ್ರಧಾನ ಸಂಪಾದಕರಾಗಿ, ಕೆಲಸ ಮಾಡಿದರು. ಇವರು ಕನ್ನಡ-ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ 150ಕ್ಕಿಂತ ಹೆಚ್ಚು ಸಂಶೋದನ ಗ್ರಂಥ ರಚಿಸಿದ್ದಾರೆ. ಇವರು ಬರೆದ 400 ಪುಟಗಳ ಹರಿದಾಸ ಸಾಹಿತ್ಯ'' ಎಂಬ ಗ್ರಂಥವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. (ಪುನರ್ ಮುದ್ರಣದ ಅವಶ್ಯಕತೆ ಇದೆ.) ಕರ್ನಾಟಕದಲ್ಲಿ ಭಕ್ತಿಪಂಥದ ಉಗಮ ಮತ್ತು ವಿಕಾಸ, ಮುಖ್ಯವಾಗಿ ಹರಿದಾಸರ ವಿಷ್ಣುಭಕ್ತಿಯ ಕಥನವೇ ಈ ಗ್ರಂಥದ ವಸ್ತು. ಕನ್ನಡ ನಾಡಿನಲ್ಲಿ ಬೆಳಗಿದ, ದಾಸಕೂಟಕ್ಕೆ ಸೇರಿದ ಶ್ರೀನರಹರಿ ತೀರ್ಥರು, ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀರಾಘವೇಂದ್ರತೀರ್ಥರು, ಶ್ರೀವಿಜಯದಾಸರು, ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು, ಶ್ರೀಪ್ರಸನ್ನವೆಂಕಟದಾಸರು ಮೊದಲಾದ ಪ್ರಮುಖ ದಾಸರ ವಾಙ್ಮಯವನ್ನು ಹರಿದಾಸ ಸಾಹಿತ್ಯ ಗ್ರಂಥದಲ್ಲಿ ವೈಜ್ಞಾನಿಕವಾಗಿ ವಿವೇಚಿಸಿದ್ದಾರೆ.

ಇವರು ಕನ್ನಡದಲ್ಲಿ ಕರ್ನಾಟಕ ಜನಪದ ಗೀತಗಳು, ಸಂಸ್ಕೃತಿ ಸಂಗ್ರಾಮ, ಪುರಮದರದಾಸರ ಜೀವನ ಚರಿತ್ರೆ, ದೈತ್ಯಬಾಲಕ ಪ್ರಹ್ಲಾದ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಅನೇಕ ಸ್ತೋತ್ರಕಾವ್ಯಗಳನ್ನು ರಚಿಸಿದ್ದಾರೆ. ಇವರು ವಿಮರ್ಶಾತ್ಮಕವಾಗಿ ಸಂಪಾದಿಸಿ ಪ್ರಕಟಿಸಿದ ಕನ್ನಡ ಕೃತಿಗಳು- ಚಂದ್ರಹಾಸನ ಮದನ ತಿಲಕ, ಮತ್ತು ಕವಿಜಿಹ್ವಾಬಂಧನ, ಕುಮಾರವ್ಯಾಸನದೆಂದು ಹೇಳಲಾದ ಐರಾವತ; ಸಂಸ್ಕೃತ ಕೃತಿಗಳು - ಅಹೋಬಲ ಕವಿಯ ವಸಂತೋತ್ಸವ ಚಂಪೂ, ಶ್ರೀ ಗುರುರಾಜರ ತಂತ್ರದೀಪಿಕಾ ಮುಂತಾದವು.

ಸಮಗ್ರ ಕರ್ನಾಟಕ ಇತಿಹಾಸ ಯಾರೂ ಬರೆದಿರಲಿಲ್ಲ. ಈ ದಿಶೆಯಲ್ಲಿ ಪಂಚಮುಖಿಯವರು 3000 ಪುಟಗಳ ಗ್ರಂಥ ರಚಿಸಿದರು. ಈ ಗ್ರಂಥದಲ್ಲಿ ಕರ್ನಾಟಕದ ಇತಿಹಾಸವನ್ನು ಸಾಂಸ್ಕೃತಿಕ ಜೀವನದ ಗತವೈಭವವನ್ನು ಪರಿಚಯಮಾಡಿಕೊಟ್ಟಿದ್ದಾರೆ. ಅದರ ಮೊದಲ ಭಾಗ (650 ಪುಟ) ಪ್ರಕಟವಾಯ್ತು, ಉಳಿದ ಭಾಗ ಇನ್ನೂ ಹಸ್ತಪ್ರತಿಯಲ್ಲೇ ಇದೆ.

ಪಂಚಮುಖಿಯವರು ನ್ಯಾಯವೇದಾಂತ ಶಾಸ್ತ್ರಗಳಲ್ಲಿ ನುರಿತ ಪಂಡಿತರಾಗಿದ್ದರು . . . ಮೀಮಾಂಸಾ, ವ್ಯಾಕರಣ, ಧರ್ಮಶಾಸ್ತ್ರಗಳ ಪಾಂಡಿತ್ಯವು ಇವರಿಗೆ ಭಾರತೀಯ ಷಡ್ದರ್ಶನಗಳ ಮೇಲೆ ವಿದ್ವತ್ಪೂರ್ಣವಾಗಿ ಬರೆಯುವ, ಚರ್ಚಿಸುವ ಪ್ರೌಢಿಮೆ-ಪ್ರಭುತ್ವಗಳನ್ನು ತಂದುಕೊಟ್ಟಿದೆ. ಕಾವ್ಯ-ನಾಟಕ-ಅಲಂಕಾರಾದಿ ಸಾಹಿತ್ಯಶಾಸ್ತ್ರದಲ್ಲಂತೂ ಇವರದು ಅಸದೃಶ ಪಾಂಡಿತ್ಯ. ಇವರ ಗದ್ಯಪ್ರಬಂಧಗಳು, ಪತ್ರಗಳು, ಬಾಣಭಟ್ಟನ ಶೈಲಿಯನ್ನು ನೆನಪಿಗೆ ತರುತ್ತವೆ. ಗದ್ಯ-ಪದ್ಯಾತ್ಮಕ-ಕಾವ್ಯ ಪ್ರಬಂಧರಚನೆ ಇವರಿಗೆ ಲೀಲಾಜಾಲ. ಯಙ್‌ಲುಗಂತಪ್ರಯೋಗ, ಶಬ್ದ-ಅರ್ಥಾಲಂಕಾರಗಳ ಸಮ್ಮಿಲನ, ಪ್ರೌಢಶೈಲಿ, ಲಲಿತಪದವಿನ್ಯಾಸಗಳಿಂದೊಡಗೂಡಿ ಹೊರಹೊಮ್ಮುವ ಇವರ ಕಾವ್ಯವಾಹಿನಿಯು ಸರ್ವಾಲಂಕಾರ ಭೂಷಿತಳಾಗಿ, ಮಂದಹಾಸವನ್ನು ಹೊರಸೂಸುತ್ತಾ ಸುರುಚಿರ ನೂಪುರ-ಮಂಜೀರಗಳ ಮಂಜುಳನಿನಾದಗೈಯುತ್ತಾ ಮದಗಜಗಮನೆಯಾಗಿ ಸಾಕ್ಷತ್ ನುಡಿದೇವಿಯೇ ಬರುತ್ತಿರುವಳೋ ಎಂಬಂತೆ ಓದುಗನ ಮೈತಣಿಸುವುದು. ಇಂತಹ ವಾಗ್ದೇವಿಯ ವರಪುತ್ರನನ್ನು ಪಡೆದ ಭಾರತದ ವಿದ್ವನ್ಮಂಡಲಿ, ಮಾಧ್ವಸಮಾಜ, ಕನ್ನಡ ಜನಾಂಗ, ನಿಜವಾಗಿ ಧನ್ಯತೆಯನ್ನು ಪಡೆದಿದೆ. ಎಂದು ವಿದ್ಯಾವಾಚಸ್ಪತಿ ಪಂ. ರಾಜಾ. ಎಸ್. ಗುರುರಾಚಾರ್ಯರು ಬರೆಯುತ್ತಾರೆ.

ಪಂಚಮುಖಿಯವರಿಗೆ ವಿದ್ಯಾರತ್ನ, ವಿದ್ಯಾಭೂಷಣ, ಪಂಡಿತರಾಜ, ಹರಿದಾಸ ಸಾಹಿತ್ಯರತ್ನ ಎಂಬ ಪದವಿಗಳು ಪ್ರಶಸ್ತಿಗಳು ದೊರೆತವು. ಅವರ ಜನ್ಮ ಶತಮಾನೋತ್ಸವ ಆಗಿ ದಶ ವರ್ಷಗಳು ಕಳೆದವು. ಇನ್ನಾದರೂ ಅವರ ಬಗ್ಗೆ ಒಂದು ಸಂಸ್ಮರಣ ಗ್ರಂಥ, ಗೌರವಗ್ರಂಥ ಬರಲಿ ಎಂದು ಆಶಿಸುವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X