ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನ್ ದಾರ್ಶನಿಕ, ಸಂತ ಗುರುದೇವ ರಾನಡೆ

|
Google Oneindia Kannada News

Dr. Gurudev Ranade
ಕನ್ನಡ ಸೇರಿದಂತೆ ಹಿಂದಿ, ಮರಾಠಿ ಮತ್ತು ವಿದೇಶಿ ಭಾಷೆಗಳಲ್ಲಿ ಅಪಾರ ಪರಿಣತಿ, ಪಾಂಡಿತ್ಯ ಹೊಂದಿದ್ದ ಡಾ. ಗುರುದೇವ ರಾನಡೆಯವರಿಗೆ ತಮ್ಮ ಕುಟುಂಬದೊಡನೆ ಇದ್ದ ಆತ್ಮೀಯ ಒಡನಾಟದ ಮತ್ತು ಅವರ ವಿಚಾರಧಾರೆಯ ಬಗ್ಗೆ ಡಾ.'ಜೀವಿ' ಕುಲಕರ್ಣಿ ಈ ಅಂಕಣದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ.

ಇಪ್ಪತ್ತನೆಯ ಶತಮಾನದಲ್ಲಿ ಭಾರತವು ಕಂಡ ಹಲವಾರು ವಿರಳ ದಾರ್ಶನಿಕರಲ್ಲಿ ಡಾ| ಗುರುದೇವ ರಾನಡೆಯವರೂ ಒಬ್ಬರು. ಮಹರ್ಷಿ ಶ್ರೀ ಅರವಿಂದರಂತೆ ಸಂತ ರಾನಡೆಯವರು ವಿಶ್ವವಿದ್ಯಾಲಯದ ಅತ್ಯುಚ್ಚ ಪದವಿ ಗಳಿಸಿದ್ದರು (ಶಂಕರಶೇಟ್ ಸ್ಕಾಲರಶಿಪ್), ಹಾಗೆಯೇ ಸಂಸ್ಕೃತ ಭಾಷೆಯಲ್ಲಿ ಪರಿಣತಿ ಪಡೆದಿದ್ದರು. ಪಾಶ್ಚಾತ್ಯ ಭಾಷೆಗಳಾದ ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ಜರ್ಮನ್ ಮುಂತಾದ ಭಾಷೆಗಳನ್ನು ಬಲ್ಲವರಾಗಿದ್ದರು. ಪಾಶ್ಚಾತ್ಯ ತತ್ವಜ್ಞಾನದ ಗ್ರಂಥಗಳನ್ನು ಮೂಲದಲ್ಲಿಯೇ ಓದುವಷ್ಟು ಪಾಂಡಿತ್ಯ ಗಳಿಸಿದ್ದರು. ಭಾರತದ ರಾಷ್ಟ್ರಪತಿಯಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಿಂಬಾಳದಲ್ಲಿರುವ ಗುರುದೇವ ರಾನಡೆಯವರ ಆಶ್ರಮಕ್ಕೆ ಭೇಟಿಕೊಟ್ಟಾಗ, ನಾನು ಬರಿ ತತ್ತ್ವಜ್ಞಾನದ ಪ್ರಾಧ್ಯಾಪಕ, ಆದರೆ ನೀವು (ರಾನಡೆಯವರು) ಪ್ರಾಧ್ಯಾಪಕರು ಅಷ್ಟೇ ಅಲ್ಲ, ಅನುಭಾವಿಗಳು, ದೇವರನ್ನು ಸಾಕ್ಷಾತ್ಕರಿಸಿಕೊಂಡ ಸಂತವರೇಣ್ಯರು' ಎಂಬ ಉದ್ಗಾರ ತೆಗೆದಿದ್ದರಂತೆ. ಗುರುದೇವ ರಾನಡೆಯವರ ಮನೆ ಮಾತು ಮರಾಠಿಯಾಗಿದ್ದರೂ ಅವರು ಜಮಖಂಡಿಯಲ್ಲಿ ಜನಿಸಿದ್ದರಿಂದ ಅವರಿಗೆ ಕನ್ನಡ ಚೆನ್ನಾಗಿ ಬರುತ್ತಿತ್ತು. ಅವರು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರಿಂದ ಅವರು ಹಿಂದಿ ಭಾಷೆಯಲ್ಲಿಯೂ ಪರಿಣತಿ ಪಡೆದಿದ್ದರು. ಕನ್ನಡ, ಹಿಂದಿ ಮತ್ತು ಮರಾಠಿ ಸಾಹಿತ್ಯಗಳಲ್ಲಿಯ ಸಂತ ವಾಙ್ಮಯದ ಬಗ್ಗೆ ಮೂರು ಉದ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದರು. 'Pathway to God in Kannada Literature' ಗ್ರಂಥದ ಕನ್ನಡ ಅನುವಾದ, ಕನ್ನಡ ಸಂತರ ಪರಮಾರ್ಥ ಪಥ' ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪ್ರಕಾಶನಗೊಂಡಿದೆ. 'A Constructive Survey of Upanishadic Philosophy' ಎಂಬ ಗ್ರಂಥವನ್ನು ಕನ್ನಡದ ಉದ್ದಾಮ ಪಂಡಿತರಾದ ದ.ರಾ.ಬೇಂದ್ರೆ, ರಂ.ರಾ. ದಿವಾಕರ, ಶಂ.ಬಾ.ಜೋಶಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪ್ರಸ್ತುತ ಲೇಖನದಲ್ಲಿ ನಾನು ಗುರುದೇವ ರಾನಡೆಯವರ ಜೀವನ ಮತ್ತು ಕೃತಿಗಳ ಬಗ್ಗೆ ಬರೆಯುತ್ತಿಲ್ಲ. ನನ್ನ ಜೀವನದಲ್ಲಿ ಬಂದ ಗುರುದೇವ ರಾನಡೆಯವರ ಆತ್ಮೀಯ ಸಂಬಂಧದ ಬಗ್ಗೆ ಬರೆಯಲು ಯತ್ನಿಸುವೆ. ನಾನು ಒಂದು ವೇಳೆ ನಾಲ್ಕು ವರ್ಷ ಮೊದಲು ಜನಿಸಿದ್ದರೆ, ನನ್ನ ಮನೆಯ ಹಿರಿಯರು, ನನ್ನನ್ನು ಕೂಡ ಉಚ್ಚ ಶಿಕ್ಷಣಕ್ಕಾಗಿ ಅಲಹಾಬಾದಕ್ಕೆ ರಾನಡೆಯವರ ಬಳಿ ಕಳಿಸುತ್ತಿದ್ದರು. ಆ ಸಂಧಿ ನಮ್ಮ ಸೋದರರಂತಿರುವ ಕನ್ನೂರ ಮಾಸ್ತರ ಮಗ ಪ್ರಹ್ಲಾದ ಕುಲಕರ್ಣಿಯವರಂತೆ ನನಗೂ ದೊರೆಯುತ್ತಿತ್ತು.

Gurudev Ranade Ashram in Nimbalನಡೀ ಜಾಣಾ ನಿಂಬಾಳಕ್ಕ ನಾನೂ ನೀನೂ ಕೂಡಿ' ಎಂಬ ಹಾಡನ್ನು ನನ್ನ ಕಕ್ಕ ವೆಂಕಟೇಶ ಕಟ್ಟಿಯವರು (ವಿಜಾಪುರದ ಪಿ.ಡಿ.ಜೆ.ಹೈಸ್ಕೂಲಿನ ಸಂಸ್ಕೃತ ಅಧ್ಯಾಪಕರು) ಬರೆದಿದ್ದರು. ಆ ಹಾಡು ಹಾಡುತ್ತಲೇ ನಾವು ನಿಂಬಾಳಕ್ಕೆ ಗುರುದೇವರ ದರುಶನಕ್ಕಾಗಿ ಹೋಗುತ್ತಿದ್ದೆವು. ನಮ್ಮ ಅಜ್ಜ ರಾಮಚಂದ್ರ ಕೃಷ್ಣಾಜಿ ಕುಲಕರ್ಣಿ ಐದು ಹಳ್ಳಿಗಳ ಕುಲಕರ್ಣಿಯಾಗಿದ್ದರು. ಅದರಲ್ಲಿ ಎರಡು ಹಳ್ಳಿಗಳ ಹೆಸರು ಮಾತ್ರ ನನಗೆ ನೆನಪಿನಲ್ಲಿದೆ, ಅವುಗಳ ಹೆಸರು ಮಡಸನಾಳ ಮತ್ತು ಜಾಲೀಹಾಳ. ನಮ್ಮ ಅಜ್ಜ ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಪರಿಣತಿ ಪಡೆದಿದ್ದರು. ಎರಡೂ ಭಾಷೆಗಳಲ್ಲಿ ಕೀರ್ತನೆ(ಹರಿಕತೆ) ಹೇಳುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರು ಗುರು ಭಾವುಸಾಹೇಬ ಮಹಾರಾಜರ ಶಿಷ್ಯರಾಗಿದ್ದರು, ನಾಮಧಾರಕರ ಸಂಖ್ಯೆಯನ್ನು ವಿಜಾಪುರ ಜಿಲ್ಲೆಯಲ್ಲಿ ಬೆಳೆಸಿದ ಅನೇಕ ಸತ್ಪುರುಷರಲ್ಲಿ ಅವರೂ ಒಬ್ಬರಾಗಿದ್ದರು. ಗುರುದೇವ ರಾನಡೆಯವರಿಗೆ ನಮ್ಮ ಅಜ್ಜನ ಮೇಲೆ ಅಪಾರ ಮಮತೆ ಇತ್ತು. ಅವರನ್ನು ಗುರುಬಂಧು ಎಂದು ಅಪ್ಪಿಕೊಳ್ಳುತ್ತಿದ್ದರು, ನಮ್ಮ ವಿಜಾಪುರದ ಮನೆಗೆ ಭೇಟಿ ನೀಡುತ್ತಿದ್ದರು. ನಮ್ಮ ಅಜ್ಜ ಮೊದಲು ಶ್ರೀಮಂತರಾಗಿದ್ದರು. ನಂತರ ಎಲ್ಲ ಹೊಲಗಳನ್ನು ಮಾರಿ ಬಡತನ ಅನುಭವಿಸಿದರು. ಮಡಸನಾಳದಲ್ಲಿ ಒತ್ತೆಬಿದ್ದ ಹೊಲವನ್ನು ನಮ್ಮ ಆಪ್ತಸಂಬಧಿಕರಾದ ಕನ್ನೂರ ಮಾಸ್ತರರು ತಾವೇ ಹಣ ಸಂದಾಯ ಮಾಡಿ ಬಿಡಿಸಿಕೊಟ್ಟಿದ್ದರು. ಆದ್ದರಿಂದ ಮಡಸನಾಳದಲ್ಲಿ ನಮ್ಮ ಮನೆತನದ ಹೊಲದ ಅವಶೇಷ ಇಂದಿಗೂ ಉಳಿದೆದೆ. ಆದರೂ ನಮ್ಮ ಮನೆತನಕ್ಕೆ ಜಾಲೀಹಾಳ ಕುಲಕರ್ಣಿ ಎಂಬ ಹೆಸರೇ ಉಳಿಯಿತು. ಇಂದಿಗೂ ನಮ್ಮ ದೊಡ್ಡಪ್ಪನನ್ನು ಜಾಲೀಹಾಳ ಮಾಸ್ತರರೆಂದೇ ಜನ ನೆನೆಯುತ್ತಾರೆ. ಜಾಲೀಹಾಳ ಹಳ್ಳಿ ಮಹಾರಾಷ್ಟ್ರ ಸೇರಿತು, ಮಡಸನಾಳ ಕರ್ನಾಟಕದಲ್ಲಿ ಉಳಿಯಿತು. ಮಡಸನಾಳ ಬದಿಯಲ್ಲಿರುವ ಹಳ್ಳಿ ಕನ್ನೂರು. ಕನ್ನೂರ ಮಾಸ್ತರರು(ಹನುಮಂತರಾಯರು), ಜಾಲೀಹಾಳ ಮಾಸ್ತರರು(ನನ್ನ ಕಕ್ಕ ಹನುಮಂತರಾಯರು) ಭಾವೂ ಸಾಹೇಬರ ಶಿಷ್ಯರಾಗಿದ್ದರು(ನಾಮ ಪಡೆದಿದ್ದರು) ಅಷ್ಟೇ ಅಲ್ಲ, ಕೆಲವೇ ಶಿಷ್ಯರು ಪಡೆದ ಬೆಳ್ಳಿಯ ಖಡೆಯನ್ನು ಮಹಾರಾಜರಿಂದ ಪಡೆದಿದ್ದರು. ನನ್ನ ತಂದೆ ವಿಠ್ಠಲರಾಯರು ಅಂಬೂರಾವ ಮಹಾರಾಜರಿಂದ ನಾಮ ಪಡೆದಿದ್ದರು.

ಒಮ್ಮೆ ಭಾವೂಸಾಹೇಬ ಮಹಾರಾಜರು ನಮ್ಮ ಹಳ್ಳಿಗೆ ಬಂದಿದ್ದರು. ನಮ್ಮ ಅಜ್ಜ ಅವರನ್ನು ಸತ್ಕರಿಸಿದರು. ಹಿರಿಯ ಮಗ ಹನುಮಂತ ಭಜನೆ ಮಾಡುವಾಗ ಚೆನ್ನಾಗಿ ಕುಣಿಯುತ್ತಿದ್ದ. ನಮ್ಮ ಜೊತೆಗೆ ಪ್ರವಾಸಕ್ಕೆ ನಿನ್ನ ಮಗನನ್ನು ಕಳಿಸಿಕೊಡು' ಎಂದು ಮಹಾರಾಜರು ಕೇಳಿದರು. ನಮ್ಮ ಅಜ್ಜಿಗೆ (ಲಕ್ಷ್ಮೀಬಾಯಿಯವರಿಗೆ) ತಮ್ಮ ಮಗನನ್ನು ಮಹಾರಾಜರೊಡನೆ ಪ್ರವಾಸಕ್ಕೆ ಕಳಿಸುವ ಮನಸ್ಸು ಇರಲಿಲ್ಲ. ಪತಿಯನ್ನು ಬದಿಗೆ ಕರೆದು ಕಳಿಸದಿರಲು ಸನ್ನೆ ಮಾಡಿದ್ದರು. ನಮ್ಮ ಅಜ್ಜ ಮಾತುಕೊಟ್ಟಾಗಿತ್ತು. ಮಗನನ್ನು ಕಳಿಸಿಬಿಟ್ಟರು. ನಮ್ಮ ಕಕ್ಕ, ಆಗ ಬಾಲಕನಾಗಿದ್ದ ಹನುಮಂತರಾಯ, ಮಹಾರಾಜರೊಡನೆ ಪ್ರವಾಸಕ್ಕೆ ಹೊರಟ. ಅವರೆಲ್ಲರು ಹಿಂಚಗೇರಿ ತಲುಪಿದಾಗ ಅಲ್ಲಿ ಪ್ಲೇಗ್ ಬಂದಿತ್ತು. ಬಾಲಕ ಹನುಮಂತನಿಗೆ ಪ್ಲೇಗಿನ ಜ್ವರ ಸೋಂಕಿತು. ಒಂದು ಕೋಣೆಯಲ್ಲಿ ಮಲಗಿಬಿಟ್ಟ. ವಿಪರೀತ ಜ್ವರ. ಮಹಾರಾಜರಿಗೆ ಚಿಂತೆಯಾಯಿತು. ಅವರಿಗೆ ಈ ಹುಡುಗನ ತಾಯಿಯ ಸಮ್ಮತಿ ದೊರೆತಿರಲಿಲ್ಲ ಎಂಬ ಸಂಗತಿ ಗೊತ್ತಾಗಿತ್ತು. ಮಹಾತ್ಮರು ಅರಿಯದಿರುವ ಸಂಗತಿ ಇದೆಯೇ? ಈ ಹುಡುಗನ ಜೀವಕ್ಕೇನಾದರೂ ಆಪತ್ತು ಬಂದರೆ ಈ ಹುಡುಗನ ತಾಯಿ ತಮ್ಮನ್ನು, ಅಷ್ಟೇ ಅಲ್ಲ ತನ್ನ ಪತಿರಾಯನನ್ನು ಎಂದೂ ಕ್ಷಮಿಸಲಿಕ್ಕಿಲ್ಲ ಎಂಬುದನ್ನೂ ಅರಿತಿದ್ದರು. ಮಹಾರಾಜರು ಹುಡುಗನ ರೋಗ ನಿವಾರಣೆಗಾಗಿ ತಮ್ಮ ಇಷ್ಟದೇವರಲ್ಲಿ ಪ್ರಾರ್ಥಿಸಿದರು. ಅಂದಿನ ಧ್ಯಾನವನ್ನು ಅವರು ಒಂದು ಕಾಲಿನಲ್ಲಿ ನಿಂತು ಮಾಡಿದ್ದರಂತೆ. ಅಂದು ಸಂಜೆ ಆರತಿಯ ಸಮಯ ಬಂತು. ಭಜನೆಯಲ್ಲಿ ತಾಳಹಾಕುತ್ತ ಮಕ್ಕಳು ಕುಣಿಯುವುದನ್ನು ಆನಂದಿಸುತ್ತ, ಮಲಗಿದ ಬಾಲಕನ ಬಗ್ಗೆ ಚಿಂತಿಸುತ್ತ ಇದ್ದಾಗ, ಒಂದು ಆಶ್ಚರ್ಯದ ಘಟನೆ ನಡೆಯಿತು. ಕೆಂಡದಂತೆ ಸುಡುವ ಜ್ವರದಿಂದ ಬಳಲುತ್ತ ಮಲಗಿದ ಬಾಲಕ ಹನುಮಂತ ಸಭಾಗೃಹಕ್ಕೆ ಬಂದಿದ್ದ. ಎಲ್ಲ ಬಾಲಕರಿಗಿಂತ ಚೆನ್ನಾಗಿ ಕುಣಿಯುವ ಖ್ಯಾತಿ ಅವನದಾಗಿತ್ತು. ಸಭಾಗೃಹದ ಒಂದು ಗೋಡೆಯ ಗೂಟವನ್ನು ಹಿಡಿದುಕೊಂಡು ನಿಂತಲ್ಲೆ ಕುಣಿಯತೊಡಗಿದ್ದ. ಈ ದೃಶ್ಯ ಕಂಡ ಗುರು ಭಾವುಸಾಹೇಬ ಮಹಾರಾಜರು ಕಣ್ಣುಗಳಿಂದ ಆನಂದ ಬಾಷ್ಪ ಸುರಿಸಿದ್ದರು. ಭಜನೆ, ಆರತಿ ಮುಗಿದಾಗ ಮಗುವನ್ನು ಗುರುಗಳು ಅಪ್ಪಿಕೊಂಡರು. ಮಗುವಿನ ಮೈ ಬೆವರಿನಿಂದ ತಪ್ಪನೆ ತೊಯ್ದಿತ್ತು. ಜ್ವರ ಮಾಯವಾಗಿತ್ತು. ಅಂದು ಹೋಗಿದ್ದ ಜ್ವರ ಮತ್ತೆ ಬರಲೇ ಇಲ್ಲ. ಈ ಸಂಗತಿ ತಿಳಿದ ನಮ್ಮ ಅಜ್ಜನಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಹೆಂಡತಿಗೆ ಹೇಳಿದರಂತೆ, ನಮ್ಮ ಮಗನಿಗ ಅಪಮೃತ್ಯು ಯೋಗವಿತ್ತು, ಗುರುಗಳು ಪರಿಹರಿಸಲೆಂದೇ ಅವನನ್ನು ತಮ್ಮೊಂದಿಗೆ ಕಳಿಸಿಕೊಡಲು ಬಲವಂತ ಮಾಡಿದ್ದರು'' ಎಂದು.

ಈ ಕತೆಯನ್ನು ನಾನು ದಾಖಲಿಸಲು ಒಂದು ಕಾರಣವಿದೆ. ನಾವು ನಿಂಬಾಳಕ್ಕೆ ಹೋದಾಗ ಗುರುದೇವ ರಾನಡೆಯವರು ಈ ಕತೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದರು. ನೆರೆದ ಭಕ್ತ ಜನರ ಮುಂದೆ ತಮ್ಮ ಗುರುಗಳ ಅಗಾಧ ಮಹಿಮೆಯನ್ನು ಕೊಂಡಾಡುತ್ತಿದ್ದರು. ನಾನು ಕೂಡ ಈ ಕತೆ ನಮ್ಮ ಕಕ್ಕ ಹೇಳುವುದನ್ನು ಕೇಳಿದ್ದೇನೆ. ನಮ್ಮ ಮನೆತನಕ್ಕೆ ಸಂಬಂಧಿಸಿದ ಇನ್ನೊಂದು ಕತೆ ಇದೆ. ಅದನ್ನು ಕೂಡ ಗುರುದೇವ ರಾನಡೆಯವರು ಹಲವಾರು ಸಲ ಕೇಳುತ್ತಿದ್ದರು. ಅದು ನನಗೆ ನೆನಪಿದ್ದ ಮಟ್ಟಿಗೆ ಹೀಗಿದೆ:

ಗುರು ಭಾವೂಸಾಹೇಬ ಮಹಾರಾಜರು ನಮ್ಮ ಹಳ್ಳಿಯ ಮನೆಗೆ ಬರುತ್ತಿದ್ದರು ಎಂಬುದನ್ನು ಈ ಮೊದಲೇ ಪ್ರಸ್ತಾಪಿಸಿದ್ದೇನೆ. ಬೇಸಿಗೆಯಕಾಲ. ನೀರಿನ ಅಭಾವ. ಆಗ ಗುರುಗಳ ಸವಾರಿ ನಮ್ಮ ಹಳ್ಳಿಗೆ ಬಂತು. ಗುರುಮಹಾರಾಜರಿಗೆ ಕುಡಿಯಲು ನೀರು ತರಲು ನಮ್ಮ ಅಜ್ಜ ಹೊರಗೆ ಹೋದರು. ಒಂದು ಒರತೆಯಲ್ಲಿ ನೀರು ಜುಳುಜುಳು ಹರಿಯುತ್ತಿತ್ತು. ಬಹಳ ಮುಗ್ಧ ಹೆಂಗಳೆಯರು ಸಾಲಾಗಿ ನಿಂತಿದ್ದರು. ನಮ್ಮ ಅಜ್ಜ ಹಳ್ಳಿಯ ಹಿರಿಯನಲ್ಲವೇ. ಅವನು ಎಲ್ಲರನ್ನು ಸರಿಸಿ ನೀರು ತುಂಬಿದ. ಪಾತ್ರೆ ಸ್ವಚ್ಛಗೊಳಿಸಲು ಸ್ವಲ್ಪ ನೀರನ್ನು ಚೆಲ್ಲಿದ. ಸುತ್ತಲೂ ನಿಂತ ಹೆಂಗಳೆಯರು ಮರುಗುತ್ತಿದ್ದರು. ನೀರು ತುಂಬಿಕೊಂಡು ಮನೆಗೆ ನಮ್ಮ ಅಜ್ಜ ಬಂದರು. ಗುರುಗಳು ಅಲ್ಲಿ ನಡೆದ ದೃಶ್ಯ ದೂರದಿಂದ ನೋಡಿರಬೇಕು. ನೀರು ಕುಡಿಯುವಾಗ ಗುರುಗಳು ನಮ್ಮ ಅಜ್ಜನನ್ನು ಉದ್ದೇಶಿಸಿ ಅಂದರಂತೆ, ಬಾಬಣ್ಣ, ನೀನು ಇದರಲ್ಲಿ ಶುದ್ಧ ನೀರು ತಂದಿಲ್ಲ, ಹಳಹಳಿ ತುಂಬಿ ತಂದಿರುವೆ'' ಎಂದು, ಆಗ ನಮ್ಮ ಅಜ್ಜ, ಇದು ಶುದ್ಧವಾದ ನೀರೆ ಆಗಿದೆ. ನಾನು ರಾಡಿ ಇದ್ದನ್ನೆಲ್ಲ ಚೆಲ್ಲಿ, ಒರತೆಯನ್ನು ಸ್ವಚ್ಛಮಾಡಿ ಒಳ್ಳೆಯ ನೀರನ್ನೇ ತಂದಿದ್ದೇನೆ ಗುರುಗಳೆ'' ಎಂದರು. ನೀನು ನೀರನ್ನು ತಡವಾಗಿ ತಂದಿದ್ದರೂ ನಡೆಯುತ್ತಿತ್ತು, ಸರತಿಯಲ್ಲಿ ನಿಂತು ತರಬೇಕಾಗಿತ್ತು. ಇದರಲ್ಲಿ ನೀನು ಆ ಮಹಿಳೆಯರ ಹಳಹಳಿಯನ್ನು ಹಿಡಿದು ತುಂಬಿಕೊಂಡು ಬಂದಿರುವೆ!'' ಎಂಬ ಉದ್ಗಾರ ಗುರುಗಳು ತೆಗೆದಿದ್ದರಂತೆ. ಈ ಕಥೆ ಹಳಹಳಿ' ಕಥೆಯೆಂದೇ ಪ್ರಸಿದ್ಧವಾಗಿದೆ. ಈ ಕಥೆಯನ್ನು ಕೂಡ ಗುರುದೇವ ರಾನಡೆಯವರು ನಮ್ಮಿಂದ ಅನೇಕ ಸಲ ಕೇಳಿಸಿಕೊಂಡಿದ್ದಾರೆ.

ನಮ್ಮ ಅಜ್ಜ 1948ರಲ್ಲಿ ವಿಜಾಪುರದಲ್ಲಿ ಸ್ವರ್ಗಸ್ಥರಾದರು. ಶರಣರ ಸಾವು(ಮಹಿಮೆ) ಮರಣದಲ್ಲಿ' ಎಂಬ ಮಾತಿಗೆ ನಮ್ಮ ಅಜ್ಜನವರ ಸಾವು ಒಂದು ಉದಾಹರಣೆಯಾಗಿತ್ತು. ಅವರು ಮುಂಬೈಯಲ್ಲಿ ತಮ್ಮ ಕೊನೆಯ ಮಗ (ನನ್ನ ಚಿಕ್ಕಪ್ಪ) ಸ್ವಾಮಿರಾಯನ ಮನೆಯಲ್ಲಿ ಇದ್ದರು. ತಮಗೆ ಅಂತಿಮ ಕಾಲ ಸಮೀಪಿಸಿದೆಯೆಂದೂ, ತಾವು ತಮ್ಮ ವಿಜಾಪುರದ ನೆಲದಲ್ಲೇ ಕೊನೆಯ ಉಸಿರು ಎಳೆಯುವ ಬಯಕೆಯನ್ನು ವ್ಯಕ್ತಪಡಿಸಿ, ಬೇಗನೆ ಮರಳಿ ಕಳಿಸಲು ದುಂಬಾಲುಬಿದ್ದರಂತೆ. ಅಲ್ಲಿಂದ ಪುಣೆಗೆ ಅವರನ್ನು ಕಳಿಸಲಾಯಿತು, ಅಲ್ಲಿ ಅವರ ಇನ್ನೊಬ್ಬ ಮಗ (ಇನ್ನೊಬ್ಬ ಚಿಕ್ಕಪ್ಪ) ಕೃಷ್ಣರಾಯ ಇದ್ದ. ಅಲ್ಲಿಯೂ ಹಟಮಾಡಿ ವಿಜಾಪುರಕ್ಕೆ ಬಂದರು. ಹಿರಿಯ ಮಗ ಹಣಮಣ್ಣನಿಗೆ (ನಮ್ಮ ದೊಡ್ಡಪ್ಪನಿಗೆ) ತಮ್ಮ ಕೊನೆ ಸಮೀಪಿಸಿದೆ ಎಂದು ಹೇಳಿದಾಗ, ಹಿರಿಯ ಮಗ ಅಳತೊಡಗಿದ. ನೀನು ತಿಳಿದವ, ನಾಮಧಾರಕ, ನೀನೂ ಅತ್ತರೆ ಹೇಗೆ? ಜಾತಸ್ಯ ಮರಣ ಧ್ರುವಂ ಅಲ್ಲವೆ'' ಎಂದು ಹೇಳಿ ಸಾಂತ್ವನ ಮಾಡಿದ್ದರು. ಪಂಚಾಂಗ ನೋಡಿ ಒಂದು ಒಳ್ಳೆಯ ದಿನ ನಿಶ್ಚಯಿಸಿದರು. ಅಂದು ಹಣಮಣ್ಣನಿಗೆ ರಜೆ ತೆಗೆದುಕೊಳ್ಳಲು ಹೇಳಿದರು. ಮನೆಯವರು, ನೆರೆಹೊರೆಯವರೂ ಊಟ ಮುಗಿಸಿದ ಮೇಲೆ, ಇನ್ನು ಆರತಿ ಹಚ್ಚು'' ಎಂದರು. ಮಗನಿಗೆ ಅರ್ಥವಾಗಲಿಲ್ಲ. ಹೇಚಿ ದಾನ ದೇಗಾ ದೇವಾ ತುಝ ವಿಸರನ ಹ್ವಾವಾ..' ಅಂದರು. ಆರತಿ ನಂದಿದಾಗ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ಅದೇ ಸಮಯದಲ್ಲಿ ನಾನು ಗದುಗಿನಲ್ಲಿದ್ದೆ. ನಾನು ಊಟಕ್ಕೆ ಕುಳಿತಿದ್ದೆ. ಅಜ್ಜನ ನೆನಪಾಯಿತು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು. ನಾನು ಊಟ ಬಿಟ್ಟು ಶಾಲೆಗೆ ನಡೆದೆ. ನಾನು ಶಾಲೆಯಲ್ಲಿ ಇದ್ದಾಗಲೇ ನನ್ನ ತಂದೆ ನನ್ನನ್ನು ಕರೆಯಲು ಬಂದರು. ವಿಜಾಪುರಕ್ಕೆ ಹೋಗೋಣ ಎಂದರು. ಯಾಕೆ ಅಂದೆ. ನಿನ್ನ ಅಜ್ಜ ಇನ್ನಿಲ್ಲ'' ಎಂದರು. ನಾನೂ ಕಣ್ಣೀರಿಡುತ್ತ ಅವರನ್ನು ಹಿಂಬಾಲಿಸಿದ್ದ ನೆನಪು ಇಂದಿಗೂ ಹಚ್ಚಗೆ ಇದೆ. ಕೆಲವು ಸಮಯದ ನಂತರ ಗುರುದೇವ ರಾನಡೆಯವರು ವಿಜಾಪುರಕ್ಕೆ ಬಂದಾಗ ನಮ್ಮ ಅಜ್ಜನ ಬಗ್ಗೆ ವಿಚಾರಿಸಿದರು. ಅವರು ಸ್ವರ್ಗಸ್ಥರಾದ ವಿಷಯ ತಿಳಿದು ಒಂದು ನಿಮಿಷ ಮೌನರಾದರು. ತಮ್ಮ ವಿಷಾದ ವ್ಯಕ್ತಪಡಿಸಿದರು. ಎಲ್ಲರಿಗೂ ಆಶ್ಚರ್ಯವಾಗುವಂತೆ ಗುರುದೇವರು ನಮ್ಮ ಕಕ್ಕ ಹನುಮಂತರಾಯರಿಗೆ ಹೇಳಿದರು. ನಾನು ನಿಮ್ಮ ಮನೆಗೆ ಬರುತ್ತೇನೆ ನಡೆ'' ಎಂದು. ಸುತ್ತು ನೆರೆದ ಎಲ್ಲರಿಗೂ ಆಶ್ಚರ್ಯ. ನಮ್ಮ ಕಕ್ಕನಿಗೋ ಪರಮಾಶ್ಚರ್ಯ. ಏಕೆಂದರೆ ಸದ್ಗುರುಗಳ ಪಾದಧೂಳಿ ನಮ್ಮ ಮನೆಯಲ್ಲಿ ಬೀಳುತ್ತದೆ ಎಂದು. ಗುರುದೇವರು ನಮ್ಮ ಮನೆ ಪ್ರವೇಶಿಸುವಂತೆ ನಮ್ಮ ಕಕ್ಕ ಅಂದರು, ನಮ್ಮ ಮನೆ ಈಗ ಪವಿತ್ರವಾಯಿತು!'' ಎಂದು. ಗುರುದೇವರು ನಸುನಗುತ್ತ ಅಂದರು ಅಪವಿತ್ರವಿದ್ದರೆ ಪವಿತ್ರವಾಗಬೇಕು. ಇದು ಪವಿತ್ರವಾಗಿಯೇ ಇದೆಯಲ್ಲ! ಬಾಬಣ್ಣನ ಕೋಣೆಯಾವುದು ತೋರಿಸು'' ಎಂದು. ನಮ್ಮ ಕಕ್ಕ ಅವರನ್ನು ಒಳಗಿನ ಕೋಣೆಗೆ ಕರೆದೊಯ್ದರು. ಬಾಬಣ್ಣ ಎಲ್ಲ ಕೂಡುತ್ತಿದ್ದರು?'' ಎಂದು ಕೇಳಿದರು. ಆ ಸ್ಥಳದಲ್ಲಿ ತಾವು ಕೆಲ ನಿಮಿಷ ಧ್ಯಾನಾವಸ್ಥೆಯಲ್ಲಿ ಕುಳಿತುಕೊಂಡರು. ನಂತರ, ನೀನು ನಿಮ್ಮ ತಂದೆಯ ಬಗ್ಗೆ ಎಷ್ಟು ತಿಳಿದಿರುವೆಯೋ ನನಗೆ ಗೊತ್ತಿಲ್ಲ. ಅವರೊಬ್ಬ ಒಳ್ಳೆಯ ಸಂತರಾಗಿದ್ದರು. ಅವರ ಧ್ಯಾನದಿಂದ ಈ ಜಾಗೆ ಪವಿತ್ರವಾಗಿದೆ.'' ಎಂದು ಉದ್ಗಾರ ತೆಗೆದಿದ್ದರು.

ನಮ್ಮ ಅಜ್ಜ ಕೂತುಕೊಳ್ಳುತ್ತಿದ್ದ ಆ ಕೋಣೆಯ ಬಗ್ಗೆ ಒಂದು ಮಾತು ಬರೆಯಬೇಕು. ಹಿಂದೊಮ್ಮೆ ಅವರಿಗೆ ಕಾಯಿಲೆಯಾಗಿತ್ತು. ಹಾಸಿಗೆಯಲ್ಲಿ ಮಲಗಿದ್ದರು. ಬಹಳ ದಿನ ಪಂಚಾಂಗ ನೋಡಿರಲಿಲ್ಲ, ಆದ್ದರಿಂದ ಇಂಚಗೇರಿಯಲ್ಲಿ ನಡೆವ ಸಪ್ತಾಹದ ನೆನಪೇ ಇರಲಿಲ್ಲ. ಆಗ ಭಾವೂ ಸಾಹೇಬರು ಕೋಣೆಯನ್ನು ಪ್ರವೇಶಿಸಿದಂತೆ ಭಾಸವಾಯ್ತು. ಅವರು ಎದ್ದು ತಮ್ಮ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಯಾಕೆ ಬಾಬಣ್ಣ , ಈ ಸಲ ಸಪ್ತಾಹಕ್ಕೆ ಇಂಚಗೇರಿಗೆ ಬರುವದಿಲ್ಲೇನೂ?'' ಎಂದಂತಾಯಿತು. ಮೇಲೆ ಎದ್ದಾಗ ಗುರುಗಳ ಮೂರ್ತಿ ಅದೃಶ್ಯವಾಗಿತ್ತು. ಲಗುಬಗೆಯಿಂದ ಪಂಚಾಂಗ ನೋಡಿದರು. ಹಿಂಚಗೇರಿಗೆ ಹೋಗಲು ತಯಾರಿ ನಡೆಸಿದರು. ಮಗ ಹನುಮಂತರಾಯನಿಗೆ ತನ್ನನ್ನು ಇಂಚಗೇರಿ ಸಪ್ತಾಹಕ್ಕೆ ಕಳಿಸಿಕೊಡಲು ಹೇಳಿದರು. ಮಗ ಹೇಳಿದ, ನಿಮಗೆ ಈಗಷ್ಟೇ ಸ್ವಲ್ಪ ಅರಾಮ ಆಗಿದೆ, ಸುಧಾರಿಸ್ಕೊಳ್ಳಿ, ಮುಂದಿನ ವರ್ಷ ಹೋಗುವಿರಂತೆ.'' ಆಗ ನಮ್ಮ ಅಜ್ಜ ಮಹಾರಾಜರು ದರ್ಶನಕೊಟ್ಟ ಸಂಗತಿ ಅರುಹಿದರು, ನಮ್ಮ ಕಕ್ಕನ ಮೈಯಲ್ಲಿ ರೋಮಾಂಚನವಾಗಿತ್ತು. ತಾನೂ ರಜೆ ಪಡೆದು ತಂದೆಯ ಜೊತೆಗೆ ಇಂಚಗೇರಿಗೆ ನಡೆದ. ಈ ಕತೆಯನ್ನೂ ಗುರುದೇವ ರಾನಡೆಯವರು ನಮ್ಮಿಂದ ಮತ್ತೆ ಮತ್ತೆ ಹೇಳಿಸುತ್ತಿದ್ದರು, ಕೇಳಿ ಆನಂದಿಸುತ್ತಿದ್ದರು. ತಮ್ಮ ಗುರುಗಳ ಕರುಣೆಯನ್ನು ಕೊಂಡಾಡುತ್ತಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X