ವಿಚಾರವಾದಿ ಎಚ್.ನರಸಿಂಹಯ್ಯ ಜನ್ಮಶತದಿನೋತ್ಸವ; ಒಂದೆರಡು ನೆನಪುಗಳು...
"Lord Baba - give me Favre leuba"
"ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ"
ಹೀಗೆಂದು ಸಾಯಿ ಬಾಬಾರನ್ನು ಪ್ರಶ್ನಿಸಿದ್ದು ಎಚ್. ನರಸಿಂಹಯ್ಯ ಅವರು. ಇದರ ಹಿನ್ನೆಲೆ ಇಷ್ಟೇ. ಸಾಯಿ ಬಾಬಾ ತನ್ನ ಭಕ್ತರಿಗೆ ಆಶೀರ್ವದಿಸಲು ಚೂಂ ಮಂತ್ರ ಮಾಡಿ ನಿಂಬೆ ಹಣ್ಣು, ಉಂಗುರು, ಚೈನ್, ಎಚ್.ಎಂ.ಟಿ ವಾಚ್, ಬೂದಿ... ಹೀಗೆ ಏನೆಲ್ಲಾ ಕೊಡುತ್ತಿದ್ದರು ಎಂಬುದು ಬಾಬಾ ಇದ್ದ ಕಾಲದ ಪ್ರತೀತಿ, ನಂಬಿಕೆ ಮತ್ತು ಅದನ್ನು ಕಂಡವರಿಗೆ ಸತ್ಯ?!
ಹೇಳೀ ಕೇಳೀ ವೈಜ್ಞಾನಿಕ ಮನೋಭಾವದ ಎಚ್.ಎನ್. ಆಯ್ತಪ್ಪಾ ನಿಮ್ಮ ಬಾಬಾ ಮಂತ್ರದಿಂದ ಆ ವಸ್ತುಗಳನ್ನೆಲ್ಲಾ ಸೃಷ್ಟಿಸೋದಾದ್ರೆ ನಾನು ಕೇಳಿದ್ದನ್ನೂ ಕೊಡಲಿ. ನಿಂಬೆ ಹಣ್ಣಿನ ಬದಲು ಕುಂಬಳಕಾಯಿ ಕೋಡೋಕೆ ಹೇಳಿ. ಎಚ್.ಎಂ.ಟಿ ವಾಚ್ ಬದಲು ಫೇವರ್ ಲ್ಯೂಬಾ ಗಡಿಯಾರ ಕೊಡೋಕೆ ಹೇಳಿ ಎಂದು ಬಾಬಾ ಅಹಂಗೆ ಪ್ರಶ್ನೆಯ ಮೂಲಕ ಧಮಕಿ ಹಾಕಿದ್ದರು ಎಂದು ನಮಗೆ ಶಾಲೆಯಲ್ಲಿ ಮಾಸ್ತರುಗಳು ಹೇಳುತ್ತಿದ್ದರು...
ಇವರಿಗೆ ನೋಟು ಬೇಡ, ನೋಟಿನ ಮೇಲಿನ ಫೋಟೋ ಸಾಕು!
ಖ್ಯಾತ ಭೌತಶಾಸ್ತ್ರಜ್ಞ, ವೈಜ್ಞಾನಿಕ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞರೂ ಆಗಿದ್ದ ಎಚ್ ನರಸಿಂಹಯ್ಯನವರದ್ದು ಇಂದು 100ನೇ ಜನ್ಮದಿನ. 1972 ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ತಂದವರು. 1942ರಲ್ಲಿ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯತಾವಾದಿಗಳು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ರಾಜ್ಯದ ಶಿಕ್ಷಣ ಕ್ಷೇತ್ರದ ದಿಗ್ಗಜರನ್ನು ಸ್ಮರಿಸಿಕೊಳ್ಳುವುದಾದರೆ ಮೊದಲು ನೆನಪಾಗುವುದೇ ಇವರ ಹೆಸರು... ಅವರ ನೂರನೇ ಜನ್ಮದಿನದ ಈ ಸಂದರ್ಭದಲ್ಲಿ ಕೆಲ ಸಂಗತಿಗಳ ಸ್ಮರಣೆ ಇಲ್ಲಿದೆ...
***
ಎಚ್.ಎನ್ ಅವರ ಹುಟ್ಟೂರು ಹೊಸೂರು. ಗೌರಿಬಿದನೂರು ಮತ್ತು ಭೈರೇನಹಳ್ಳಿ ಮಾರ್ಗ ಮಧ್ಯೆ ಮುಖ್ಯರಸ್ತೆಯಿಂದ ಕೊಂಚ ಒಳಗೆ ಹೋಗಬೇಕು. ಅಲ್ಲಿಗೂ ಒಳ್ಳೆಯ ರಸ್ತೆಯಿದೆ. ಊರಿನಲ್ಲಿ ಪಾರ್ಕ್ ಇದೆ. ಅಲ್ಲಿಗೆ ಸಮೀಪದಲ್ಲೇ ಭೂಕಂಪ ಮಾಪನ ಮಾಡುವ ಕೇಂದ್ರವಿದೆ.
ನಾವು ಚಿಕ್ಕಂದಿನಲ್ಲಿ ಭೈರೇನಹಳ್ಳಿಯ ಆಜೂಬಾಜೂ ಹೊಲಗಳಲ್ಲಿ ತಿರುಗುತ್ತಿದ್ದವರು. ನರಸಿಂಹಯ್ಯ ಅವರ ಊರೊಳಗೆ ಹೋಗಿ ಬರುತ್ತಿದ್ದ ಬಸ್ ಗಳನ್ನು ಕಂಡು, ಬಸ್ ನಿಲ್ಲಿಸದ ಊರುಗಳನ್ನೂ ನೋಡಿದ್ದ ನಮಗೆ ಈಯಪ್ಪ ಭಲೇ ಭಯ ಇಟ್ಟೈತೆ ಬಸ್ಸುಗಳಿಗೆ ಅಂದುಕೊಳ್ಳುತ್ತಿದ್ದೆವು.
ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು
***
1997. ಅಕ್ಟೋಬರ್ 2. ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿನ ಜೆಡಿಎಸ್ ಪಕ್ಷದ ಕಚೇರಿಗೆ ಬಂದಿದ್ದರು. ಬಿ.ಎಲ್. ಶಂಕರ್ ಆಗ ಪಕ್ಷದ ಅಧ್ಯಕ್ಷ. ಕಾರ್ಯಕ್ರಮದ ವೇದಿಕೆ ಸೇಟು ಅಂಗಡಿ ಹಾಸಿಗೆ ದಿಂಬುಗಳಂತೆ ಅಲಂಕಾರಗೊಂಡಿತ್ತು. ಎಚ್.ಎನ್. ಬೇರೊಂದು ಕಾರ್ಯಕ್ರಮಕ್ಕೆ ಹೋಗುವುದಿದ್ದರಿಂದ ಕಾರ್ಯಕ್ರಮದ ಮಧ್ಯೆ ಹೊರಟರು. ಅಲ್ಲಿಯೇ ವೇದಿಕೆಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ನನ್ನತ್ತ ಕೈಮಾಡಿದ ಬಿ.ಎಲ್ ಶಂಕರ್ ಎಚ್.ಎನ್ ಅವರನ್ನು ಕಳುಹಿಸಿ ಕೊಡಲು ಸೂಚಿಸಿದರು.
ಅವರಿಗೆ ವೇದಿಕೆಯಲ್ಲಿ ಮರ್ಯಾದೆ ಮಾಡಿದ್ದ ವಸ್ತುಗಳನ್ನೆಲ್ಲಾ ಹಿಡಿದು ಹೊರಟ ನಾನು ಗೇಟಿನಾಚೆ ಇರುವ ದೊಡ್ಡ ದೊಡ್ಡ ಕಾರುಗಳತ್ತ ಯಾರಾದರೂ ಡ್ರೈವರ್ ನನ್ನತ್ತ ಬರುತ್ತಾರಾ ಎಂದು ನೋಡುತ್ತಿದ್ದೆ. ಎಚ್.ಎನ್ ಕಾರ್ಯಕರ್ತರೊಂದಿಗೆ ಫೋಟೊಗಳಿಗೆ ನಿಂತು ನಿಂತು ಬರುತ್ತಿದ್ದರು. ಗೇಟಿನಾಚೆ ಬಂದವರು ಆಟೋ ಹಿಡಿದು ಹೊರಟರು. ನಾನು ಕಕರು ಮಕರು...