ಚೆನ್ನಾಗಿ ಓದಿದ್ರೂ ಪರೀಕ್ಷೆಯಲ್ಲಿ ಗೊಂದಲವೇಕೆ ? CBSE ವಿದ್ಯಾರ್ಥಿಗಳಿಗೆ ಸವಾಲಾಗಿರುವ ಹೊಸ ಮಾದರಿ ಪ್ರಶ್ನೆಗಳು
ನವದೆಹಲಿ: ತಿಂಗಳುಗಟ್ಟಲೆ ರಾತ್ರಿ ಹಗಲು ಎನ್ನದೆ ಓದಿ, ಪಠ್ಯಪುಸ್ತಕದ ಪ್ರತಿ ಸಾಲನ್ನೂ ಬಾಯಿಪಾಠ ಮಾಡಿ ಪರೀಕ್ಷಾ ಕೊಠಡಿಗೆ ಹೋಗುವ ವಿದ್ಯಾರ್ಥಿಗಳು, ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಕಂಗಾಲಾಗುತ್ತಿದ್ದಾರೆ. "ನಾನು ಎಲ್ಲವನ್ನೂ ಓದಿದ್ದೆ, ಆದರೆ ಉತ್ತರ ಬರೆಯಲು ಗೊತ್ತಾಗಲಿಲ್ಲ" ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಸಿಬಿಎಸ್‌ಇ (CBSE) ವಿದ್ಯಾರ್ಥಿಗಳಿಂದ ಸಾಮಾನ್ಯವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಪಠ್ಯಕ್ರಮದ ಹೊರಗಿನ ಪ್ರಶ್ನೆಗಳಲ್ಲ, ಬದಲಿಗೆ ಸಿಬಿಎಸ್‌ಇ ಅಳವಡಿಸಿಕೊಂಡಿರುವ 'ಸಾಮರ್ಥ್ಯ ಆಧಾರಿತ ಪ್ರಶ್ನೆಗಳ' (Competency-Based Questions) ಹೊಸ ಮಾದರಿ.
ಕಳೆದ ಕೆಲವು ವರ್ಷಗಳಿಂದ ಸಿಬಿಎಸ್‌ಇ ತನ್ನ ಮೌಲ್ಯಮಾಪನ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಕೇವಲ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ಬದಲಾಗಿ, ವಿದ್ಯಾರ್ಥಿಗಳಿಗೆ ವಿಷಯ ಎಷ್ಟು ಅರ್ಥವಾಗಿದೆ ಮತ್ತು ಅದನ್ನು ಅವರು ನೈಜ ಜೀವನದಲ್ಲಿ ಹೇಗೆ ಅನ್ವಯಿಸುತ್ತಾರೆ ಎಂಬುದನ್ನು ಪರೀಕ್ಷಿಸಲು ಮಂಡಳಿ ಮುಂದಾಗಿದೆ. 2026ರ ಬೋರ್ಡ್ ಪರೀಕ್ಷೆಗಳಲ್ಲಿ ಇಂತಹ ಪ್ರಶ್ನೆಗಳ ಪ್ರಮಾಣ ಶೇಕಡಾ 50 ರಷ್ಟಿರಲಿದೆ ಎಂಬುದು ವಿದ್ಯಾರ್ಥಿಗಳ ಆತಂಕವನ್ನು ಹೆಚ್ಚಿಸಿದೆ.

ಉದ್ದನೆಯ ಪ್ರಶ್ನೆಗಳು ಸೃಷ್ಟಿಸುತ್ತಿವೆ ಆತಂಕ
ಸಾಮರ್ಥ್ಯ ಆಧಾರಿತ ಪ್ರಶ್ನೆಗಳ ಪ್ರಮುಖ ಲಕ್ಷಣವೆಂದರೆ ಅವುಗಳ ಉದ್ದ. ಕೇಸ್ ಸ್ಟಡೀಸ್ (Case Studies) ಅಥವಾ ಸನ್ನಿವೇಶ ಆಧಾರಿತ ಪ್ರಶ್ನೆಗಳು ಅರ್ಧ ಪುಟದಷ್ಟು ದೀರ್ಘವಾಗಿರುತ್ತವೆ. ಪರೀಕ್ಷೆಯ ಸೀಮಿತ ಸಮಯದಲ್ಲಿ ಇಷ್ಟು ದೊಡ್ಡ ಪ್ಯಾರಾಗ್ರಾಫ್‌ಗಳನ್ನು ಓದಿ ಅರ್ಥ ಮಾಡಿಕೊಳ್ಳುವುದೇ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿದೆ. "ಪ್ರಶ್ನೆ ಓದುತ್ತಲೇ ಸಮಯ ಕಳೆಯಿತು, ಅದರಲ್ಲಿರುವ ಮಾಹಿತಿಗಳನ್ನು (Data) ಅರ್ಥ ಮಾಡಿಕೊಳ್ಳುವಷ್ಟರಲ್ಲಿ ತಲೆ ಕೆಟ್ಟು ಹೋಯಿತು" ಎಂದು ವಿದ್ಯಾರ್ಥಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಪ್ರಶ್ನೆ ದೀರ್ಘವಾಗಿದ್ದರೂ ಅದಕ್ಕೆ ಬೇಕಾದ ಉತ್ತರ ಬಹಳ ಚಿಕ್ಕದಾಗಿರುತ್ತದೆ. ಆದರೆ, ವಿದ್ಯಾರ್ಥಿಗಳು ಪ್ರಶ್ನೆಯ ಉದ್ದ ನೋಡಿ, ಉತ್ತರವೂ ದೀರ್ಘವಾಗಿರಬೇಕು ಎಂದು ಭಾವಿಸಿ ಅನಗತ್ಯ ವಿವರಣೆ ಬರೆಯಲು ಹೋಗಿ ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ.
ಬಾಯಿಪಾಠದ ಅಭ್ಯಾಸಕ್ಕೆ ಬ್ರೇಕ್
ಇಂದಿಗೂ ಅನೇಕ ಶಾಲೆಗಳಲ್ಲಿ ಮತ್ತು ಕೋಚಿಂಗ್ ಸೆಂಟರ್‌ಗಳಲ್ಲಿ 'ಡೆಫಿನಿಷನ್' (ವ್ಯಾಖ್ಯಾನ) ಮತ್ತು 'ಫಾರ್ಮುಲಾ'ಗಳನ್ನು ಬಾಯಿಪಾಠ ಮಾಡಿಸುವುದೇ ಪ್ರಮುಖ ಬೋಧನಾ ವಿಧಾನವಾಗಿದೆ. ಆದರೆ ಪರೀಕ್ಷೆಯಲ್ಲಿ ನೇರವಾದ ಪ್ರಶ್ನೆಗಳ ಬದಲಿಗೆ, "ರಮೇಶ್ ಎಂಬುವವರು ಅಂಗಡಿಗೆ ಹೋದಾಗ..." ಎಂಬಂತಹ ಸನ್ನಿವೇಶಗಳನ್ನು ನೀಡಲಾಗುತ್ತದೆ. ವಿಷಯ ತಿಳಿದಿದ್ದರೂ, ಆ ಸನ್ನಿವೇಶಕ್ಕೆ ಅದನ್ನು ಹೇಗೆ ಹೊಂದಿಸಿ ಬರೆಯಬೇಕು ಎಂಬುದು ತಿಳಿಯದೆ ವಿದ್ಯಾರ್ಥಿಗಳು ಎಡವತ್ತಾರೆ.
"ವಿಶ್ಲೇಷಿಸಿ" (Analyse), "ಸಮರ್ಥಿಸಿ" (Justify) ಅಥವಾ "ಹೋಲಿಕೆ ಮಾಡಿ" (Compare) ಎಂಬ ಪದಗಳ ಅರ್ಥವನ್ನು ಗ್ರಹಿಸದೆ, ತಮಗೆ ಗೊತ್ತಿರುವ ಸಾಮಾನ್ಯ ಉತ್ತರವನ್ನೇ ಬರೆದು ಬರುತ್ತಾರೆ. ಇದರಿಂದ ಅಂಕಗಳು ಕಡಿತಗೊಳ್ಳುತ್ತಿವೆ ಎಂದು ಮೌಲ್ಯಮಾಪಕರು ಅಭಿಪ್ರಾಯಪಟ್ಟಿದ್ದಾರೆ.
ಸ್ವಂತ ವಾಕ್ಯದಲ್ಲಿ ಬರೆಯಲು ಭಯ
ಎನ್‌ಸಿಇಆರ್‌ಟಿ (NCERT) ಪುಸ್ತಕದಲ್ಲಿರುವ ವಾಕ್ಯಗಳನ್ನೇ ಯಥಾವತ್ತಾಗಿ ಬರೆದರೆ ಮಾತ್ರ ಹೆಚ್ಚು ಅಂಕ ಸಿಗುತ್ತದೆ ಎಂಬ ತಪ್ಪು ಕಲ್ಪನೆ ವಿದ್ಯಾರ್ಥಿಗಳಲ್ಲಿದೆ. ಹೀಗಾಗಿ, ಪ್ರಶ್ನೆಗೆ ತಕ್ಕಂತೆ ತಮ್ಮದೇ ಆದ ವಾಕ್ಯಗಳಲ್ಲಿ ಉತ್ತರ ರೂಪಿಸಲು ಅವರು ಹಿಂಜರಿಯುತ್ತಾರೆ. ಆದರೆ ವಾಸ್ತವದಲ್ಲಿ, ಮೌಲ್ಯಮಾಪಕರು ನಿಖರತೆ ಮತ್ತು ವಿಷಯದ ಸ್ಪಷ್ಟತೆಯನ್ನು ಮಾತ್ರ ನೋಡುತ್ತಾರೆ ಹೊರತು, ಪುಸ್ತಕದ ಸಾಲುಗಳನ್ನಲ್ಲ.
ಪರಿಹಾರವೇನು?
ಶಿಕ್ಷಕರು ಮತ್ತು ತಜ್ಞರ ಪ್ರಕಾರ, ವಿದ್ಯಾರ್ಥಿಗಳು ಈಗಿನಿಂದಲೇ ಕೇಸ್ ಸ್ಟಡಿ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಿಕೊಳ್ಳಬೇಕು.
1) ಕೀ ವರ್ಡ್ ಗುರುತಿಸಿ: ಪ್ರಶ್ನೆಯಲ್ಲಿ ಏನು ಕೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದರಲ್ಲಿರುವ ಪ್ರಮುಖ ಪದಗಳನ್ನು (Keywords) ಅಂಡರ್‌ಲೈನ್ ಮಾಡಿಕೊಳ್ಳಿ.
2) ಯೋಚಿಸಲು ಸಮಯ ಕೊಡಿ: ಬರೆಯಲು ಶುರು ಮಾಡುವ ಮುನ್ನ 30 ಸೆಕೆಂಡ್ ಉತ್ತರವನ್ನು ಮನಸ್ಸಿನಲ್ಲಿ ಯೋಜಿಸಿ.
3) ಅಪ್ಲಿಕೇಶನ್ ಕಲಿಯಿರಿ: ಒಂದು ವಿಷಯ ಓದಿದಾಗ, "ಇದನ್ನು ನಾನು ಎಲ್ಲಿ ಬಳಸಬಹುದು?" ಎಂದು ಪ್ರಶ್ನಿಸಿಕೊಳ್ಳಿ.
ಸಿಬಿಎಸ್‌ಇ ತಂದಿರುವ ಈ ಬದಲಾವಣೆ ವಿದ್ಯಾರ್ಥಿಗಳನ್ನು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಸಹಕಾರಿಯಾಗಿದೆ. ಆದರೆ ಇದಕ್ಕೆ ಹೊಂದಿಕೊಳ್ಳಲು ಸಮಯ ಮತ್ತು ಸರಿಯಾದ ಮಾರ್ಗದರ್ಶನದ ಅಗತ್ಯವಿದೆ.












Click it and Unblock the Notifications