Bengaluru Waste: "ಸಿಎಂ ಬದಲಾದರೆ ಸಾಕೇ, ಬೆಂಗಳೂರು ಬದಲಾಗುವುದು ಯಾವಾಗ"
Bengaluru Waste: ಮುಖ್ಯಮಂತ್ರಿ ಬದಲಾದರೆ ಸಾಕೇ, ಬೆಂಗಳೂರು ಬದಲಾಗುವುದು ಯಾವಾಗ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಜಾಹೀರಾತಿಗೆ ಸೀಮಿತವಾಗಿದೆ. ಒಂದೆಡೆ ಮಳೆ ಬಂದರೆ ರಸ್ತೆಗಳಲ್ಲಿ ಪ್ರವಾಹ, ಮತ್ತೊಂದೆಡೆ ಗುಂಡಿಗಳ ಹಾವಳಿ, ಇನ್ನೊಂದೆಡೆ ಜೀವಹಾನಿ. ಈಗ ಬೆಂಗಳೂರಿನಲ್ಲಿ ಕಸ ವಿಲೇವಾರಿ ಕೂಡ ಸ್ಥಗಿತಗೊಳ್ಳುವ ಎಚ್ಚರಿಕೆ. ಗುತ್ತಿಗೆದಾರರ ಸಂಘವೇ ಗ್ರೇಟರ್ ಬೆಂಗಳೂರು ಆಡಳಿತದ ಮುಖ್ಯ ಆಯುಕ್ತರಿಗೆ ಪತ್ರ ಬರೆದು ಸೇವೆ ನಿಲ್ಲಿಸುವ ಎಚ್ಚರಿಕೆ ನೀಡಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ದರಿದ್ರ ಆಡಳಿತದ ಮತ್ತೊಂದು ಕೆಟ್ಟ ಬೆಳವಣಿಗೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಭಾವಿ ಸಿಎಂ ಡಿ.ಕೆ ಶಿವಕುಮಾರ್ ಅವರು "ಬ್ರ್ಯಾಂಡ್ ಬೆಂಗಳೂರು" ಎಂದು ದೊಡ್ಡ ಘೋಷಣೆ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಸದ ಸಮಸ್ಯೆ, ಹದಗೆಟ್ಟ ರಸ್ತೆಗಳು, ಸಂಚಾರ ದಟ್ಟಣೆ, ಮಳೆ ನೀರು ನಿರ್ವಹಣೆಯ ವೈಫಲ್ಯ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಜನರು ತತ್ತರಿಸಿದ್ದಾರೆ. ರಾಜ್ಯದ ಆರ್ಥಿಕ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ಕಾಂಗ್ರೆಸ್ ಸರ್ಕಾರ ಅಧಿಕಾರದ ಹಪಾಹಪಿಯಲ್ಲಿ ತೊಡಗಿದೆ. ಮಾತಲ್ಲಿ ಮಾತ್ರ "ಬ್ರ್ಯಾಂಡ್ ಬೆಂಗಳೂರು", ಆದರೆ ಜನರ ಅನುಭವದಲ್ಲಿ "ದುರಾವಸ್ಥೆಯ ಬೆಂಗಳೂರು" ಆಗಿದೆ. ಬೆಂಗಳೂರು ನಗರದ ಸಮಸ್ಯೆಗಳಿಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಜನರ ಸಹನೆಗೂ ಒಂದು ಮಿತಿ ಇದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಏರಿಕೆಯಾಗುದೆ. ಇದರಿಂದ ತ್ಯಾಜ್ಯ ವಿಲೇವಾರಿ ಮೇಲೆ ಪರಿಣಾಮ ಬೀರಲಿದೆ ಎಂದು ಕಸ ವಿಲೇವಾರಿ ಗುತ್ತಿಗೆದಾರರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ ಏರಿಕೆ, ಕನಿಷ್ಠ ವೇತನ ಹೆಚ್ಚಳ ಹಾಗೂ ಬಾಕಿ ಪಾವತಿಗಳ ಸಮಸ್ಯೆಯಿಂದಾಗಿ ನಗರದಾದ್ಯಂತ ತ್ಯಾಜ್ಯ ಸಂಗ್ರಹ ಸೇವೆಗಳನ್ನು ಯಾವುದೇ ಸಮಯದಲ್ಲಾರೂ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ ಎಂದು ಕಸ ವಿಲೇವಾರಿ ಗುತ್ತಿಗೆದಾರರ ಸಂಘದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಸ ವಿಲೇವಾರಿ ಸಮಸ್ಯೆ ವಿಪರೀತವಾಗಿದೆ.
Bengaluru Waste: ಕಸ ಗುತ್ತಿಗೆದಾರರ ಸಮಸ್ಯೆ
ಇನ್ನು ಬೆಂಗಳೂರಿನಲ್ಲಿ ಕಸ ಗುತ್ತಿಗೆದಾರರ ಸಮಸ್ಯೆಗೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣಾ ಘಟಕದ ಮುಖ್ಯಸ್ಥರಿಗೆ ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಕಸ ಸಂಗ್ರಹಣೆ, ಸಾಗಾಣಿಕೆ ಮತ್ತು ವಿಲೇವಾರಿ ಗುತ್ತಿಗೆದಾರರ ಸಂಘದ ತುರ್ತು ಸಭೆ ಕರೆಯುವಂತೆಯೂ ಮನವಿ ಮಾಡಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಅವರು ತಿಳಿಸಿದ್ದಾರೆ.
ಅಲ್ಲದೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗುತ್ತಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಮುನ್ಸೂಚನೆ ಕೊಡದೆ ಆದೇಶ ಹೊರಡಿಸುತ್ತಿದ್ದಾರೆ. ಇದರಿಂದ ಗುತ್ತಿಗೆದಾರರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ದೂರಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಸ ವಿಲೇವಾರಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.












Click it and Unblock the Notifications