Get Updates
Get notified of breaking news, exclusive insights, and must-see stories!

ಹೊಸ ಶಾಲೆ ಆರಂಭಿಸಲು ಇನ್ಮುಂದೆ ಬೇಕು ಈ 3 ಹೊಸ ಸರ್ಟಿಫಿಕೇಟ್: ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಈಗಾಗಲೇ ಅಗ್ನಿ ಸುರಕ್ಷತೆ (Fire Safety) ಮತ್ತು ಕಟ್ಟಡ ಸುರಕ್ಷತಾ ಪ್ರಮಾಣಪತ್ರಗಳನ್ನು ಪಡೆಯಲು ಹರಸಾಹಸ ಪಡುತ್ತಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊಸ ತಲೆನೋವನ್ನು ತಂದಿಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಶಾಲೆಗಳನ್ನು ನೋಂದಾಯಿಸಲು (New School Registration) ಬಯಸುವವರು ಇನ್ನು ಮುಂದೆ ಕೇವಲ ಕಟ್ಟಡದ ಭದ್ರತೆ ನೋಡಿದರೆ ಸಾಲದು, ವಿದ್ಯಾರ್ಥಿಗಳ ಮಾನಸಿಕ ಮತ್ತು ಡಿಜಿಟಲ್ ಸುರಕ್ಷತೆಗೂ ಗ್ಯಾರಂಟಿ ಕೊಡಬೇಕಿದೆ.

ಹೌದು, ಇಲಾಖೆಯು ಹೊಸದಾಗಿ ಶಾಲೆ ಆರಂಭಿಸಲು ಅರ್ಜಿ ಆಹ್ವಾನಿಸಿದ್ದು, ಶಾಶ್ವತ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವಾಗ ಮೂರು ಹೊಸ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸುವಂತೆ ಸೂಚಿಸಿದೆ. ಅವುಗಳೆಂದರೆ:

School

1.ಸಾಮಾಜಿಕ-ಭಾವನಾತ್ಮಕ-ವೈಯಕ್ತಿಕ ಸುರಕ್ಷತೆ (Social-Emotional-Personal Safety)

2.ಲೈಂಗಿಕ ಸುರಕ್ಷತೆ

3.ಸೈಬರ್ ಸುರಕ್ಷತೆ

ಖಾಸಗಿ ಶಾಲೆಗಳ ಆಕ್ಷೇಪವೇನು?

ಇಲಾಖೆಯ ಈ ಹೊಸ ನಿಯಮಾವಳಿಗಳು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (KAMS) ಕೆಂಗಣ್ಣಿಗೆ ಗುರಿಯಾಗಿವೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು, "ಈಗಾಗಲೇ ಇರುವ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಪಡೆಯುವುದೇ ದೊಡ್ಡ ಸವಾಲಾಗಿದೆ. ಇಲಾಖೆಯು ಪದೇ ಪದೇ ನಿಯಮಗಳನ್ನು ಬದಲಾಯಿಸುತ್ತಾ ಗೊಂದಲ ಸೃಷ್ಟಿಸುತ್ತಿದೆ. ಇದರ ನಡುವೆ ಈಗ ಮತ್ತೆ ಮೂರು ಹೊಸ ಪ್ರಮಾಣಪತ್ರಗಳನ್ನು ಕೇಳುತ್ತಿದ್ದಾರೆ. ಆದರೆ, ಈ ಪ್ರಮಾಣಪತ್ರಗಳನ್ನು ನೀಡುವ ಪ್ರಾಧಿಕಾರ ಯಾವುದು? ಅಥವಾ ಮಾನದಂಡಗಳೇನು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ," ಎಂದು ಕಿಡಿಕಾರಿದ್ದಾರೆ.

ಶಿಕ್ಷಕರಿಗೆ ಮಕ್ಕಳ ಮನಸ್ಸು ಓದಲು ಸಾಧ್ಯವೇ?

ಇಲಾಖೆ ಕೇಳಿರುವ 'ಸಾಮಾಜಿಕ ಮತ್ತು ಭಾವನಾತ್ಮಕ ಸುರಕ್ಷತೆ'ಯ ಬಗ್ಗೆಯೂ ಶಶಿಕುಮಾರ್ ಪ್ರಶ್ನೆಗಳನ್ನು ಎತ್ತಿದ್ದಾರೆ. "ಮಕ್ಕಳು ಶಾಲೆಯಲ್ಲಿ ಇರುವಷ್ಟು ಸಮಯ ಮಾತ್ರ ನಮ್ಮ ಜವಾಬ್ದಾರಿ. ಆದರೆ, ಮನೆಯಲ್ಲಿ ಅವರು ಎಂತಹ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಶಿಕ್ಷಕರಿಗೆ ಅಥವಾ ಆಡಳಿತ ಮಂಡಳಿಗೆ ತಿಳಿಯಲು ಸಾಧ್ಯವಿಲ್ಲ. ಮನೆಯಲ್ಲಿ ನಡೆಯುವ ಕೌಟುಂಬಿಕ ಕಲಹಗಳು ಅಥವಾ ಇತರೆ ಸಮಸ್ಯೆಗಳಿಂದ ಮಗು ನೊಂದಿದ್ದರೆ, ಅದಕ್ಕೆ ಶಾಲೆಯ ಆಡಳಿತ ಮಂಡಳಿ ಹೇಗೆ ಪ್ರಮಾಣಪತ್ರ ನೀಡಲು ಸಾಧ್ಯ?" ಎಂಬುದು ಅವರ ವಾದವಾಗಿದೆ.

ಸೈಬರ್ ಸುರಕ್ಷತೆ ಸರ್ಕಾರದ ಜವಾಬ್ದಾರಿ

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಅಂತರ್ಜಾಲದಲ್ಲಿ ಏನು ನೋಡುತ್ತಾರೆ ಎಂಬುದನ್ನು ನಿಯಂತ್ರಿಸುವುದು ಕಷ್ಟ. "ಸೈಬರ್ ಸುರಕ್ಷತೆ ಎಂಬುದು ಶಾಲೆಯ ವ್ಯಾಪ್ತಿಗೆ ಬರುವ ವಿಷಯವಲ್ಲ. ಮಕ್ಕಳ ಸೈಬರ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ನಿಯಮಗಳನ್ನು ರೂಪಿಸುವಂತೆ ನಾವು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗ ಏಕಾಏಕಿ ಶಾಲೆಗಳೇ ಸೈಬರ್ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದರೆ ಅದು ಅವಾಸ್ತವಿಕ," ಎಂದು ಶಶಿಕುಮಾರ್ ಹೇಳಿದ್ದಾರೆ.

ಆದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಈಗಾಗಲೇ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ, 'ಲೈಂಗಿಕ ಸುರಕ್ಷತೆ'ಯನ್ನು ಖಚಿತಪಡಿಸಲು ಶಾಲೆಗಳಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಲಾಖೆಯ ಸ್ಪಷ್ಟನೆ ಏನು?

ಖಾಸಗಿ ಶಾಲೆಗಳ ಈ ಗೊಂದಲಗಳಿಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

"ಇವೇನು ಹೊಸ ನಿಯಮಗಳಲ್ಲ. ಕಳೆದ ಹಲವು ವರ್ಷಗಳಿಂದಲೂ ಅರ್ಜಿ ನಮೂನೆಯಲ್ಲಿ ಈ ಸುರಕ್ಷತಾ ಕ್ರಮಗಳ ಬಗ್ಗೆ ಕಾಲಂಗಳು ಇದ್ದವು. ಆದರೆ ಶಾಲೆಗಳು ಕೇವಲ 'ಹೌದು' ಅಥವಾ 'ಇಲ್ಲ' ಎಂದು ಟಿಕ್ ಮಾಡುತ್ತಿದ್ದವು. ಯಾವುದೇ ಪ್ರಮಾಣಪತ್ರವನ್ನು ಕೇಳುತ್ತಿರಲಿಲ್ಲ. ಈಗಲೂ ಅಷ್ಟೇ, ಈ ಮೂರು ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿಗಳೇ ಸ್ವಯಂ ಘೋಷಣೆ (Self Declaration) ಮಾಡಿಕೊಂಡರೆ ಸಾಕು. ಬೇರೆ ಯಾವುದೇ ಪ್ರಾಧಿಕಾರದಿಂದ ಪ್ರಮಾಣಪತ್ರ ತರುವ ಅಗತ್ಯವಿಲ್ಲ," ಎಂದು ಅವರು ತಿಳಿಸಿದ್ದಾರೆ.

---------

ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್‌' ವೆಬ್‌ಸೈಟ್‌ನಲ್ಲಿದೆ

ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್‌ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್‌ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್‌, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್‌, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್‌, 'ಮೈಖೇಲ್' ವೆಬ್‌ಸೈಟ್ ಬೆಸ್ಟ್‌.

ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್‌ ಫಾಲೊ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+