ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ 5 ರಷ್ಟು ಹೆಚ್ಚಳ: ಇಲ್ಲಿದೆ ಹೊಸ ಟಿಕೆಟ್ ದರದ ಸಂಪೂರ್ಣ ಮಾಹಿತಿ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋದ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಹಂಚಿಕೊಂಡಿದೆ. ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರವು ಶೇ 5ರಷ್ಟು ಅಧಿಕೃತವಾಗಿ ಹೆಚ್ಚಳವಾಗಿದ್ದು, ಹೊಸ ಬೆಲೆಯು ಫೆಬ್ರವರಿ 9ರಿಂದ ಜಾರಿಗೆ ಬರಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಮೆಟ್ರೋ ರೈಲ್ವೇಸ್ ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ ಪ್ರಕಾರ ವಾರ್ಷಿಕ ದರ ಪರಿಷ್ಕರಣೆಯನ್ನು ಪ್ರಕಟಿಸಿದೆ. ದರ ನಿಗದಿ ಸಮಿತಿಯ ಪ್ರಕಾರ ಬಿಎಂಆರ್‌ಸಿಎಲ್‌ಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29ರಿಂದ 10ರ ರವರೆಗೆ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು ಎಂದು ಬಿಎಂಆರ್‌ಸಿಎಲ್ ಹೇಳಿದೆ.

| ಅಂತರ (ಕಿ. ಮೀ) | ಪ್ರಸ್ತುತ ದರ (ರೂ.) | ಪರಿಷ್ಕೃತ ದರ (ರೂ.) |
|---|---|---|
| 0 - 2 | 10 | 11 |
| 2 - 4 | 20 | 21 |
| 4 - 6 | 30 | 32 |
| 6 - 8 | 40 | 42 |
| 8 - 10 | 50 | 53 |
| 10 - 15 | 60 | 63 |
| 15 - 20 | 70 | 74 |
| 20 - 25 | 80 | 84 |
| 25 - 30 | 90 | 95 |
| > 30 | 90 | 95 |
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಾರ್ಷಿಕ ದರ ಪರಿಷ್ಕರಣೆ ಮಾಡಿದ್ದು, ಹೊಸ ದರವು ಫೆಬ್ರವರಿ 9ರಿಂದ ಜಾರಿಗೆ ಬರಲಿದೆ. ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ಅನುಸರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. BMRCL ನಿಂದ FFC ಶಿಫಾರಸು ಮಾಡಲಾದ ದರಗಳನ್ನು ಜಾರಿಗೆ ತಂದ ದಿನಾಂಕದಿಂದ 1 ವರ್ಷ (9 ಫೆಬ್ರವರಿ 2025) ಮುಕ್ತಾಯಗೊಂಡ ನಂತರ, ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
96.10 ಕಿ.ಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ, ಕನಿಷ್ಠ 1 ರೂಪಾಯಿ ಹಾಗೂ ಗರಿಷ್ಠ 5 ರೂಪಾಯಿಯಷ್ಟು ಹಚ್ಚಳವಾಗಿದೆ. 2024 - 25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು, ಹಣಕಾಸು ವರ್ಷ 2023-24 (31 ಮಾರ್ಚ್ 2024) ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ 10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ. ಆದಾಗ್ಯೂ, FFC ನಿಬಂಧನೆಗೆ ಅನುಗುಣವಾಗಿ ದರ ಪರಿಷ್ಕರಣೆಯನ್ನು ಕೇವಲ ಶೇ 5% ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಬೆಂಗಳೂರು ಮೆಟ್ರೋ ಪ್ರಯಾಣ ದರ ಹೆಚ್ಚಳ, ಎಷ್ಟು ಹೆಚ್ಚಳ ಇಲ್ಲಿದೆ ಸಂಪೂರ್ಣ ಮಾಹಿತಿ
— oneindiakannada (@OneindiaKannada) February 5, 2026
Read more: https://t.co/2QD8vOIS7U
.
.#NammaMetro #BengaluruMetro #FareHike #MetroPrice2026 #CommutersAlert #OneindiaKannada pic.twitter.com/7DWBPdkXoV
ಮುಖ್ಯವಾಗಿ, BMRCL ಸ್ಮಾರ್ಟ್-ಕಾರ್ಡ್/NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ಪ್ರಯಾಣಿಕ-ಸ್ನೇಹಿ ರಿಯಾಯಿತಿಗಳು ಮುಂದುವರಿಯಲಿವೆ.
1. ಪೀಕ್ ಸಮಯದಲ್ಲಿ ಶೇ 5 ರಿಯಾಯಿತಿ
2. ಪೀಕ್ ಅಲ್ಲದ ಸಮಯದಲ್ಲಿ ಶೇ 10 ರಿಯಾಯಿತಿ
3. ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ.
4. ವಾರ್ಷಿಕ ಹೆಚ್ಚಳ ಶೇ 5 ಪುವಾಸಿ ಕಾರ್ಡ್‌ಗಳು / ಗುಂಪು ಟಿಕೆಟ್‌ಗಳ ಮೇಲೆ ಅನ್ವಯಿಸುತ್ತದೆ.
| ಮಾನ್ಯತೆ | ಪ್ರಸ್ತುತ ದರ (ರೂ.) | ಪರಿಷ್ಕೃತ ದರ (ರೂ.) | ||
|---|---|---|---|---|
| ಸ್ಮಾರ್ಟ್ ಕಾರ್ಡ್ | ಮೊಬೈಲ್ ಕ್ಯೂಆರ್ | ಸ್ಮಾರ್ಟ್ ಕಾರ್ಡ್ | ಮೊಬೈಲ್ ಕ್ಯೂಆರ್ | |
| ಒಂದು ದಿನ | 300 | 250 | 313 | 263 |
| ಮೂರು ದಿನಗಳು | 600 | 550 | 628 | 578 |
| ಐದು ದಿನಗಳು | 900 | 850 | 943 | 893 |
ಭವಿಷ್ಯದಲ್ಲಿ ಬೆಲೆ ಏರಿಕೆ ತಪ್ಪಿಸುವ ಉದ್ದೇಶ
ಸಾರ್ವಜನಿಕರ ವಿರೋಧದ ನಡುವೆಯೂ ಬಿಎಂಆರ್‌ಸಿಎಲ್ ಬೆಲೆ ಏರಿಕೆ ಮಾಡಿದೆ. ಭವಿಷ್ಯದಲ್ಲಿ ಬೆಲೆ ಏರಿಕೆಯನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ. ಭವಿಷ್ಯದಲ್ಲಿ ದೊಡ್ಡ ಮತ್ತು ದಿಢೀರ್ ದರ ಹೆಚ್ಚಳದ ಅಗತ್ಯವನ್ನು ತಪ್ಪಿಸಲು, ಆರ್ಥಿಕ ಸುಸ್ಥಿರತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಈ ಅಲ್ಪ ವಾರ್ಷಿಕ ಪರಿಷ್ಕರಣೆಯನ್ನು ಮಾಡಿರುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.
ಮುಂದುವರಿದು ಈ ವಿಧಾನವು ಹಣದುಬ್ಬರ ಮತ್ತು ನಿರ್ವಹಣಾ ವೆಚ್ಚಗಳನ್ನು ಕ್ರಮೇಣವಾಗಿ ಸರಿದೂಗಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಪುಯಾಣಿಕರನ್ನು ತೀವ್ರ ದರ ಏರಿಕೆಗಳಿಂದ ರಕ್ಷಿಸಲು ಸಾಧ್ಯವಾಗಲಿದೆ. ಬೆಂಗಳೂರಿನ ಜನರ ಸುರಕ್ಷಿತ, ವಿಶ್ವಾಸಾರ್ಹ, ಸಮಯಪ್ರಜ್ಞೆ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ನಿಗಮವು ಬದ್ಧವಾಗಿದೆ. ನಿಗಮವು ಸಮತೋಲನ ದರದಲ್ಲಿ ವಿಸ್ತರಿಸುತ್ತಿರುವ ಜಾಲದಲ್ಲಿ ಉನ್ನತ ಗುಣಮಟ್ಟದ ಸೇವೆ, ಸುರಕ್ಷತೆ ಮತ್ತು ನಿರ್ವಹಣೆಯನ್ನು ಕಾಯ್ದುಕೊಳ್ಳುವ ಅಗತ್ಯದೊಂದಿಗೆ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಲಿದೆ ಎಂದೂ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications