ಪಾಕಿಸ್ತಾನದ ಘಟನೆಗೆ ಸಂತಾಪ ಸೂಚಿಸಿದ ಭಾರತ, ಪಾಕ್ ಆರೋಪಕ್ಕೆ ಖಡಕ್ ತಿರುಗೇಟು | Islamabad Incident
ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಯುದ್ಧ ನಡೆದಿತ್ತು, ಹಾಗೇ ಪಾಕಿಸ್ತಾನ ಮಾಡುವ ಎಲ್ಲಾ ಕುತಂತ್ರಗಳಿಗೆ ಭಾರತ ಸರಿಯಾದ ಉತ್ತರ ಕೊಡುತ್ತಲೇ ಬಂದಿದೆ. ಮತ್ತೊಂದು ಕಡೆ ಪಾಕ್‌ನ ನಿಜ ಬಣ್ಣ ಬಯಲು ಮಾಡುತ್ತಲೇ ಇರುತ್ತದೆ ಭಾರತ, ಹೀಗಿದ್ದರೂ ಭಾರತದ ವಿಚಾರದಲ್ಲಿ ಪಾಕ್‌ನ ಸರ್ಕಾರ & ರಾಜಕೀಯ ನಾಯಕರು ಪದೇ ಪದೇ ನಂಜು ತುಂಬಿದ ಮನಸ್ಸಿನಿಂದ ಮಾತನಾಡುತ್ತಾರೆ. ಇಷ್ಟೆಲ್ಲದರ ನಡುವೆ ಪಾಕಿಸ್ತಾನದಲ್ಲಿ ಇಂದು ಸಂಭವಿಸಿದ ಭೀಕರ ಸ್ಪೋಟಕ್ಕೆ ಭಾರತ ಸಂತಾಪವನ್ನು ಸೂಚಿಸಿದೆ. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಈಗ ನಲುಗಿ ಹೋಗಿರುವ ಸಮಯದಲ್ಲಿ ಭಾರತ ಸಂತಾಪ ಸೂಚಿಸಿದೆ.
ಉಗ್ರರಿಂದ ಪಾಕಿಸ್ತಾನ ನಲುಗಿ ಹೋಗುವಂತೆ ಆಗಿದ್ದು, ಇಂದು ದಿಢೀರ್ ಬಾಂಬ್ ದಾಳಿ ನಡೆಸಿರುವ ಪಾಪಿ ಉಗ್ರರ ಗುಂಪು ಬರೋಬ್ಬರಿ 31 ಪಾಕ್ ನಾಗರಿಕರ ಜೀವ ಬಲಿ ಪಡೆದು, 160 ಜನರನ್ನು ನರಳುವ ರೀತಿ ಮಾಡಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರದಲ್ಲಿ ಈ ರಣಭೀಕರ ಘಟನೆಯು ಸಂಭವಿಸಿದ್ದು, ಪ್ರಾರ್ಥನಾ ಮಂದಿರಲ್ಲಿ ಶುಕ್ರವಾರ ಹಿನ್ನೆಲೆ ಮಧ್ಯಾಹ್ನ ಭಾರಿ ಪ್ರಮಾಣದಲ್ಲಿ ಜನರು ಸೇರಿದ್ದರು. ಈ ಸಮಯವನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು ನೇರವಾಗಿ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ದಾಳಿ ನಡೆಸಿದ್ದಾರೆ. ಕಾವಲುಗಾರರು ತಡೆದಾಗ ತಳ್ಳಿಕೊಂಡು ಹೋಗಿ ಒಳಗೆ ನುಗ್ಗಿದ ಉಗ್ರ ತನ್ನನ್ನೇ ತಾನು ಸ್ಫೋಟಿಸಿಕೊಂಡು ಹಿಂಸೆಗೆ ಕಾರಣವಾಗಿದ್ದಾನೆ. ಈ ಭೀಕರ ಘಟನೆ ಬಗ್ಗೆ ಭಾರತವು ಸಂತಾಪ ಸೂಚಿಸಿದೆ.

ಪಾಕಿಸ್ತಾನದ ನೆಲದಲ್ಲಿ ನಿರಂತರ ಹಿಂಸೆ
ಏಷ್ಯಾದಲ್ಲಿ ಉಗ್ರರ ಕಾರ್ಖಾನೆಯಂತೆ ಆಗಿರುವ ಪಾಕಿಸ್ತಾನ ನೆಲದಿಂದ ಸಾಕಷ್ಟು ಸಮಸ್ಯೆಗಳು ಇದೀಗ ಎದುರಾಗುತ್ತಿವೆ. ಒಂದು ಕಡೆ ಅಫ್ಘಾನಿಸ್ತಾನ ಜನರಿಗೂ ಪಾಕಿಸ್ತಾನ ಉಗ್ರರಿಂದ ಸಮಸ್ಯೆ ಆಗುತ್ತಾ ಇದೆ, ಹಾಗೇ ಭಾರತದ ಮೇಲೆ ಬೇಕು ಅಂತಲೇ ಪಾಕಿಸ್ತಾನದ ಸರ್ಕಾರ ಹಾಗೂ ಸೇನೆ ಉಗ್ರರನ್ನು ಛೂ ಬಿಟ್ಟು ಹಿಂಸೆ ಮಾಡಿಸುತ್ತಿದೆ. ಹೀಗಿದ್ದಾಗ ಪದೇ ಪದೇ ನೆಮ್ಮದಿ ಹಾಳು ಮಾಡುವ ಕೆಲಸ ಇದೀಗ ಆಗುತ್ತಿದೆ, ಹೀಗಿದ್ದರೂ ಪಾಕಿಸ್ತಾನ ಮಾತ್ರ ಬದಲಾಗಿಲ್ಲ.
ಪಾಕ್ ಉಗ್ರರ ಬೆನ್ನಿಗೆ ನಿಂತು ಆಟ ನೋಡುತ್ತಿದ್ದು, ತನ್ನದೇ ದೇಶಲ್ಲೂ ಪಾಕ್‌ಗೆ ನೆಮ್ಮದಿ ಇಲ್ಲ. ಈಗ ಸ್ವತಃ ಪಾಕಿಸ್ತಾನ ಸಾಕಿರುವ ಉಗ್ರರು ಹಿಂಸಾಚಾರ ನಡೆಸುತ್ತಿದ್ದು, ಈ ಕುರಿತು ಭಾರತ ಕೂಡ ಖಡಕ್ ಪ್ರತಿಕ್ರಿಯೆ ನೀಡಿದೆ. ನಿಮ್ಮ ಒಳಗೆ ಇರುವ ಹುಳುಕನ್ನು ಮೊದಲಿಗೆ ಸರಿ ಮಾಡಿಕೊಳ್ಳಿ & ಆ ನಂತರ ಬೇರೆಯವರ ಮೇಲೆ ಆರೋಪ ಮಾಡಿ ಎಂದು ಪಾಕ್‌ಗೆ ಎಚ್ಚರಿಸಿದೆ. ಪಾಕಿಸ್ತಾನದ ಜನರು ಈಗಾಗಲೇ ತಮ್ಮ ದೇಶದ ವ್ಯವಸ್ಥೆ ವಿರುದ್ಧ ರೋಸಿ ಹೋಗಿದ್ದಾರೆ.
ತುರ್ತು ಪರಿಸ್ಥಿತಿ ಘೋಷಿದ ಸರ್ಕಾರ
ಉಗ್ರರು ನಡೆಸಿರುವ ಭೀಕರ ಬಾಂಬ್ ದಾಳಿ ಹಿನ್ನೆಲೆ ಇದೀಗ ಪಾಕಿಸ್ತಾನ ರಾಜಧಾನಿಯಲ್ಲಿ ಸೂಕ್ಷ್ಮವಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ ಅಲರ್ಟ್ ಆಗಿದ್ದು, ಯಾವುದೇ ರೀತಿ ಅಹಿತಕರ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಂಡಿದೆ ಎಂದು ಪಾಕ್ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸ್ವತಃ ಉಗ್ರರನ್ನು ಸಾಕಿದ್ದ ಪಾಕಿಸ್ತಾನಕ್ಕೆ ಈಗ ಅದೇ ಉಗ್ರ ಹುಳುಗಳಿಂದ ತೊಂದರೆ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಚರ್ಚೆ ಮಾಡ್ತಿದ್ದಾರೆ.
ಬಲೂಚಿಸ್ತಾನ ಭಾಗದಲ್ಲೂ ಹಿಂಸಾಚಾರ
ಪಾಕಿಸ್ತಾನ ಸರ್ಕಾರ ತಮ್ಮ ಪ್ರದೇಶದ ಬಗ್ಗೆ ತಾತ್ಸಾರ ಮಾಡುತ್ತಿದ್ದು, ಇದರಿಂದ ಅಭಿವೃದ್ಧಿ ಕೂಡ ಆಗುತ್ತಿಲ್ಲ ಎಂಬ ಆರೋಪ ಬಲೂಚಿಸ್ತಾನ ಜನರದ್ದು. ಹಾಗೇ ತಮ್ಮ ಮೇಲೆ ಬೇಕು ಅಂತಾ ಪಾಕ್ ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಆರೋಪವನ್ನು ಕೂಡ ಮಾಡುತ್ತಾರೆ. ಇಷ್ಟೆಲ್ಲದರ ನಡುವೆ, ದಿಢೀರ್ ಬಲೂಚಿಸ್ತಾನ ಬಂಡುಕೋರರು ಪಾಕ್ ಸೇನೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ತಿಕ್ಕಾಟಕ್ಕೆ ಇಳಿದ್ದರು. ಹೀಗಾಗಿ ಬಲೂಚಿಸ್ತಾನದಲ್ಲಿ ಗುಪ್ತಚರ ಕಾರ್ಯಾಚರಣೆ ಮೂಲಕ ಪಾಕ್ ಸೇನೆ ಬಂಡುಕೋರರ ಹತ್ಯೆಗೆ ಇಳಿದಿದೆ. ಮತ್ತೊಂದು ಕಡೆ ಪಾಕಿಸ್ತಾನ ಸೇನೆಯ ಈ ಕ್ರಮವನ್ನು ಬಲೂಚಿಸ್ತಾನ ಬಂಡುಕೋರರ ನಾಯಕರು ಹಾಗೂ ಬಲೂಚಿಸ್ತಾನ ನಿವಾಸಿಗಳು ಖಂಡಿಸಿದ್ದಾರೆ. ಹೀಗೆ ಎಲ್ಲಾ ತಿಕ್ಕಾಟದ ನಡುವೆ ಈವರೆಗೂ 216 ಬಂಡುಕೋರರ ಹತ್ಯೆ ಮಾಡಿದೆಯಂತೆ ಪಾಕ್.












Click it and Unblock the Notifications