ಬಿಡದಿ ಟೌನ್‌ಶಿಪ್: ಈ ಮೂಲಕ ನಿರ್ಮಾಣ ಯೋಜನೆ ಜಾರಿ ಮಾಡಲಿದ್ದೇವೆ ಎಂದ ಸರ್ಕಾರ, ಏನಿದು ಪ್ಲ್ಯಾನ್
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಈ ಯೋಜನೆಯನ್ನು ಜಾರಿ ಮಾಡುವುದಕ್ಕೆ ಸರ್ಕಾರವು ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಬಿಡಿದಿ ಟೌನ್ ಶಿಪ್ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರೆದಿರುವ ಪತ್ರದ ಸಂಬಂಧ ಉತ್ತರಿಸಿದ ಅವರು, ಸಿಎಂ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ, 26ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ಸಚಿವರು ಮತ್ತು ಅಧಿಕಾರಿಗಳೆಲ್ಲ ವಿಧಾನಸೌಧದಲ್ಲಿ ಇರುತ್ತೇವೆ, ನಿಮಗೆ ಯಾರೆಲ್ಲ ಅಧಿಕಾರಿಗಳೆಲ್ಲರ ಸಹಕಾರ ಬೇಕು ಅವರ ಜೊತೆ ಬನ್ನಿ, ಸಾಧಕ - ಬಾಧಕಗಳನ್ನು ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆ ಪತ್ರವನ್ನು ನಾನು ಸಹ ನೋಡಿದ್ದೀನಿ. ಅದಕ್ಕೆ ಅವರು ಪ್ರತಿಯಾಗಿ ಉತ್ತರ ಕೊಟ್ಟಿದ್ದಾರೆ. ನೀವು ಬಿಡದಿಗೆ ಬನ್ನಿ, ಅಲ್ಲಿನ ರೈತರನ್ನು, ಸಂಬಂಧಪಟ್ಟವನ್ನು ಕರೀತೀವಿ, ಅಲ್ಲೇ ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆದರೆ 26ಕ್ಕೆ ಬೇಡ, ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ, 27ಕ್ಕೆ ಬನ್ನಿ ಎಂದು ಕುಮಾರಸ್ವಾಮಿ ಅವರು ಕರೆದಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಏನು ತೀರ್ಮಾನ ತಗೋತಾರೆ ಎಂಬುದನ್ನು ನೋಡಬೇಕು.

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ಸಂಪುಟದಲ್ಲಿ ಚರ್ಚೆ ಆಗಿದೆ. ಬಿಡಿಎ, ಹಡ್ಕೊ ಇವುಗಳಿಂದ ಯಾವ ರೀತಿ ಅನುದಾನ ಒದಗಿಸಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಿದೆ. ಆದರೆ ಈ ಯೋಜನೆ ಈಗ ರಾಜಿಕೀಯ ತಿರುವು ಪಡೆಯುತ್ತಿರುವುದರಿಂದ ಇದನ್ನು ರಾಜಕೀಯದಿಂದ ದೂರ ಇಟ್ಟು ಯಾವ ರೀತಿ ಯೋಜನೆಯನ್ನು ಜಾರಿ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಹಳೆಯ ಹೇಳಿಕೆಗಳನ್ನು ತೋರಿಸಿ, ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ಬಿಟ್ಟು ಬಂದು ಅವರು ಸಲಹೆ ನೀಡಲಿ. ಆಗ ನಾವು ಸಹ ಅವರ ಅನುಮಾನಗಳಿಗೆ, ಆರೋಪಗಳಿಗೆ ಸೂಕ್ತ ಉತ್ತರ ನೀಡುತ್ತೇವೆ. ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದನ್ನು ಸರ್ಕಾರ ಕೊಡಲು ಸಿದ್ಧವಿದೆ. ಆದರೆ ಕುಮಾರಸ್ವಾಮಿ ಅವರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರೆ ರಾಜಕೀಯ ಕಾರಣಕ್ಕಾಗಿ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎನ್ನುವುದು ನಮ್ಮ ಉದ್ದೇಶವೂ ಆಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಪೂರ್ಣ ಒಪ್ಪಿಗೆಯ ಮೇಲೆ ಯೋಜನೆಯನ್ನು ಮಾಡಬೇಕು ಎಂದು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ, ನಾವು ಅಂಥವರಿಗೆ ಅವರ ಬೇಡಿಕೆಯನ್ನು ನೋಡಿ ಸಮಾಧಾನಕರ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ. ಅವರು ಕೃಷಿಯಲ್ಲಿ ಮುಂದುವರೆಯುತ್ತಾರೆ. ನಾವು ಈ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿದ್ದೇವೆ ಆದರೆ ಅವರು ರಾಜಕೀಯ ಮಾಡಲು ಹೊರಟರೆ ಕಷ್ಟ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಆಣೆ ವಿಚಾರ
ಬಿಜೆಪಿ ಶಾಸಕರ ಅಡ್ಡ ಮತದಾನ ಸಂಬಂಧ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡುವ ಬಗ್ಗೆ ಬಿಜೆಪಿ ಅಧ್ಯಕ್ಷರ ಮಾತಿಗೆ ಸಂಬಂಧಿಸಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಈ ವಿಚಾರವನ್ನು ಮಂಜುನಾಥ ಸ್ವಾಮಿಗೆ ಬಿಟ್ಟುಬಿಡೋಣ ಎಂದರು.
ತಹಶೀಲ್ದಾರರ ಬಡ್ತಿಯ ಜೊತೆಗೆ ಇನ್ನು ಯಾವೆಲ್ಲಾ ಕೆಲಸ ಕಾರ್ಯಗಳು ಬಾಕಿ ಇವೆ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಂದಿನ ಎರಡು ದಿನಗಳ ಒಳಗೆ ಒಂದು ಪತ್ರಿಕಾಗೋಷ್ಠಿಯನ್ನು ಮಾಡಲಿದ್ದೇನೆ. ಸುಮಾರು ವಿಷಯಗಳನ್ನು ನಾನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಹಿಂದಿನ ಸಚಿವೆರಾದ ಕೃಷ್ಣ ಬೈರೇಗೌಡರು ಬಹಳಾ ಒಳ್ಳೆ ಕೆಲಸವನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಸಹ ಮಾಡುವ ಕಡೆ ಯೋಚನೆ ಮಾಡಬೇಕು. ಅದನ್ನು ಸಹ ಮಾಡಲಾಗುವುದು ಎಂದಿದ್ದಾರೆ.














Click it and Unblock the Notifications