• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚದುರಿಹೋಗುವ ಮುನ್ನ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

ಹತ್ತು ಡಬ್ಬಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿಟ್ಟಂಥ ಕಟ್ಟಡ ಅದು. ಒಂದು ಕಲ್ಲು ಬಿದ್ದರೆ ‘ಪಳಾರ್‌’ ಅಂತ ಗಾಜಿನ ಲೋಟವನ್ನು ಗಾರೆನೆಲದ ಮೇಲೆ ಎತ್ತಿ ಹಾಕಿದಂತೆ ಪುಡಿಪುಡಿಯಾಗುವುದೇನೋ ಎನ್ನುವಂತೆ ಸೂಕ್ಷ್ಮವಾಗಿ ಕಾಣುವ ಗಾಜಿನ ಗೋಡೆ. ಆಕಾಶವನ್ನು ಮುದ್ದುಮಾಡಿ ಅದರ ಬಣ್ಣವನ್ನು ಹೊತ್ತಂತಹ ಈ ನೀಲಿ ಗಾಜಿನ ಮೂಲಕ ಕಟ್ಟಡದ ಒಳಗಿನವರು ಹೊರಗಿನವರನ್ನು ನೋಡಬಹುದು. ಕಾರುಗಳು ಒಂದರ ಹಿಂದೊಂದು ವಿಧೇಯತೆಯಿಂದ ಇರುವೆಗಳಂತೆ ಚಲಿಸುವುದನ್ನು ಯಾವ ಅಚ್ಚರಿಯೂ ಇಲ್ಲದೆ ಕಾಣಬಹುದು. ದೂರದಲ್ಲಿ ಟ್ರೈನೊಂದು ನಿಂತು ರಸ್ತೆಯ ಟ್ರಾಫಿಕ್‌ ತಪ್ಪಿಸಿಕೊಂಡು ಬಂದ ಧೀರರನ್ನೆಲ್ಲಾ ಇಳಿಸಿ ಬಾಣಂತಿ ತಾಯಿಯಂತೆ ಹಗುರ ಹೊಟ್ಟೆಯಲ್ಲಿ ಮುಂದೆ ಹೋಗುವುದನ್ನು ನೋಡಬಹುದು. ಸ್ಯಾನ್‌ಫ್ರಾನ್ಸಿಸ್ಕೋದ ಸಿಲಿಕಾನ್‌ ವ್ಯಾಲಿಯನ್ನು ಕೂಡಿಸುವ ಬೆನ್ನೆಲುಬಿನಂತಹ ಫ್ರೀವೇ ಒಂದರಲ್ಲಿ ಕಾರು, ಬಸ್ಸು , ಟ್ರಕ್ಕು, ವ್ಯಾನುಗಳು ಯಾರೋ ಅಟ್ಟಿಸಿಕೊಂಡು ಬಂದಂತೆ ಶರವೇಗದಲ್ಲಿ ಮಿಂಚಿ ಮಾಯವಾಗುವುದ ಹಾಲಿವುಡ್‌ನ ಆಕ್ಷನ್‌ ಸಿನಿಮಾದಂತೆ ಕಣ್ಣು ತುಂಬಿಸಿಕೊಳ್ಳಬಹುದು. ಒಳಗಿನಿಂದ ಇವೆಲ್ಲವನ್ನೂ ನೋಡಬಹುದು, ಹೊರಗಿನಿಂದ ಮಾತ್ರ ಆಕಾಶವನ್ನು ಹೊದ್ದ ಡಬ್ಬಿಗಳು ಮಾತ್ರ. ಸ್ವಲ್ಪ ದಿನ ಫೈನಾನ್ಸ್‌ ಕಂಪನಿ, ಸ್ವಲ್ಪ ದಿನ ಬ್ರೋಕರೇಜ್‌ ಕಂಪನಿ, ಸ್ವಲ್ಪ ದಿನ ಮತ್ತೊಂದು ಫೈನಾನ್ಸ್‌ ಕಂಪನಿ ಹೀಗೆ ದಿನಗಳನ್ನು ನೂಕಿ ಈಗ ಸಾಫ್ಟ್‌ವೇರ್‌ ಕಂಪನಿಯಾಂದಕ್ಕೆ ತನುವನ್ನು ಅರ್ಪಿಸಿದೆ.

ರಾತ್ರಿ ಎಲ್ಲಾ ಕೂತು ಕೂತು ಮಂಗಳಗ್ರಹದಂತೆ ಕೆಂಪಗೆ ಕಣ್ಣನ್ನು ಮಾಡಿಕೊಂಡು ಆಕಳಿಸುವ ಸೆಕ್ಯುರಿಟಿಯವರನ್ನು ಬೆಳಗ್ಗೆ ಏಳು ಗಂಟೆಗೆ ಆಗ ತಾನೇ ಸ್ಯಾಂಡ್‌ವಿಚ್‌ ಮತ್ತು ಆಮ್ಲೆಟ್‌ ತಿಂದು ಜೊತೆಗೆ ಕಾಫಿ ಕುಡಿದು ಬಂದ ಫ್ರೆಶ್‌ ಆದ ಮುಖಗಳಿಂದ ಬದಲಿಸಲಾಗುತ್ತದೆ. ಈ change of guard ಆದ ಮೇಲೆ ಫ್ರೆಶ್ಶಾದ ಮುಖಗಳು ಒಂದು ಹೊರಗೆ, ಒಂದು ಒಳಗಿನ ಎಲ್ಲಾ ಫ್ಲೋರ್‌ಗಳ ತಪಾಸಣೆಗೆ ಎಂದು ದ್ರಾಕ್ಷಿಗೊಂಚಲಿನಂತಿರುವ ನೂರಾರು ಕೀಗಳನ್ನು ಹಿಡಿದು ಸ್ವಲ್ಪ ಓಡಾಡಿ ತಮ್ಮ ಜಡತ್ವವನ್ನು ಕಳೆದುಕೊಳ್ಳುವ ಹೊತ್ತಿಗೆ ಒಬ್ಬೊಬ್ಬರೇ ಕೆಲಸಗಾರರ ಆಗಮನವಾಗುತ್ತದೆ.

ಮಿಷೆಲ್‌ ಬಹಳ ಬೇಗನೆ ಆಫೀಸಿಗೆ ಬರುವವಳು. ಅವಳ ದಿನ ಬೆಳಗ್ಗೆ 5 ಗಂಟೆಗೆ 24 hours fitness centre ಗೆ ಹೋಗುವ ಮೂಲಕ ಪ್ರಾರಂಭವಾಗುತ್ತದೆ. ಆರೂವರೆಗೆ ಮನೆಗೆ ಬಂದು ಸ್ನಾನಮಾಡಿ ಏಳಕ್ಕೆಲ್ಲಾ ಆಫೀಸಿನಲ್ಲಿ ಅವಳು. ಸೇಲ್ಸ್‌ ಅನಲಿಸ್ಟ್‌. ಅರಳು ಹುರಿದಂತೆ ಮಾತನಾಡಬಲ್ಲಳು.

ರಾಮಕೃಷ್ಣ ಶಾಸ್ತ್ರಿ ಎಲಿವೇಟರ್‌ ತೆಗೆದುಕೊಳ್ಳುವುದಿಲ್ಲ. ಸುರುಳಿ ಸುರುಳಿಯಂತೆ ವೃತ್ತಾಕಾರದಲ್ಲಿ ಚಲಿಸುವ ಮೆಟ್ಟಿಲುಗಳನ್ನು ಒಂದೊಂದಾಗೇ ಹತ್ತುತ್ತಾ ಹೊರಗಿನ ಲೋಕವನ್ನು ಗಾಜಿನ ಗೋಡೆಯಿಂದ ನೋಡುತ್ತಾನೆ. ಹೆಂಡತಿಗೆ ಏಳು ತಿಂಗಳು ಈಗ. ಇವತ್ತು ಸಂಜೆ ಡಾಕ್ಟರರ ಅಪಾಯಿಂಟ್‌ಮೆಂಟ್‌ ಇದೆ.

ಬೆಂಗಾಲಿ ಹುಡುಗ ಅಲೋಕ್‌ ರಫಿಯ ಹಾಡನ್ನು ಗುನುಗುಡುತ್ತಾ ಯಾವ ಆವೇಗ ಆತಂಕಗಳಿಲ್ಲದೆ ಬರುತ್ತಾನೆ. ಅವನ ಕೆಲಸ ಬೆಳಗ್ಗೆ ನಿಧಾನವಾಗಿ ಶುರುವಾಗಿ ಸಂಜೆ ನಿಧಾನವಾಗಿ ಎಲ್ಲರೂ ಹೋದ ಮೇಲೆ ಮುಗಿಯುತ್ತದೆ.

ನಗಯ್‌ ವಾಂಗ್‌ಗೆ ಎಲಿವೇಟರ್‌ನಲ್ಲಿ ನಿಂತಾಗ ಏಕೋ ಊರು ಹಾಂಕಾಂಗ್‌ನ ನೆನಪಾಗುತ್ತದೆ. ಈ ಬೇಸಿಗೆಯಲ್ಲಿ ಹೋಗಬೇಕು. ಈ ಸಲ ಮದುವೆಯಾಗಿ ಅವಳನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಎಂಗೇಜ್‌ಮೆಂಟ್‌ ಆದ ಮೇಲೆ ಎಷ್ಟೋ ದಿನ ಮದುವೆಯಾಗದೆ ಇದೇನು ಬದುಕು?

ಆ್ಯಂಡ್ರ್ಯೂ, ಡೇವ್‌, ಅನೂಷ, ಅರವಿಂದ್‌, ಮೈಕ್‌, ಜಿಯಾಂಗ್‌ ಹೀಗೆ ಸಣ್ಣ ಕಣ್ಣಿನ, ದೊಡ್ಡ ಮೂಗಿನ, ಅಗಲ ಹಣೆಯ, ಉದ್ದ ಕಿವಿಯ, ದಪ್ಪ ಮೀಸೆಯ, ನುಣುಪು ಕೆನ್ನೆಯ ಬಿಳಿ-ಕಪ್ಪು-ಹಳದಿ-ಕಂದುಗಳ ನೂರಾರು ಮುಖಗಳು ಸಾವಿರಾರು ದಿನಗಳಲ್ಲಿ ಸಾವಿರಾರು ಕಾಲುಗಳು ತುಳಿಯುತ್ತಾ ತುಳಿಯುತ್ತಾ ಜೀವ ಸವೆಸಿದ ಅದೇ ಎಲಿವೇಟರುಗಳನ್ನು ತುಳಿಯುತ್ತವೆ. ಕತ್ತಿಯ ಅಲುಗಿನಷ್ಟು ಹರಿತವಾದ ಮತ್ತು ಗಾಜಿನ ಗೋಲಿಯಷ್ಟು ಶುಭ್ರವಾದ ಮತ್ತೊಂದು ದಿನ ಪ್ರಾರಂಭವಾಗಿದೆ.

ಪ್ರೋಗ್ರಾಮರ್ಸ್‌ ಜಾದು ಮಾಡುತ್ತಾರೆ. ಹೂವಿನ ಹಾರದಂತೆ ಪೋಣಿಸಿಕೊಂಡ ಮೈಲುಗಟ್ಟಲೆ ಹಾಯುವ ಕೋಡ್‌ ಅವರ ಕಂಪ್ಯೂಟರ್‌ ಸ್ಕಿೃೕನ್‌ನ ಮೇಲೆ ಕಾಣುತ್ತದೆ. ಮತ್ತೊಮ್ಮೆ ‘ಛೂ! ಮಂತ್ರಗಾಳಿ’ ಹೇಳುವುದರೊಳಗೆ ಅಗೋ ಎಲ್ಲಿ ಹಿಡಿಯಬೇಕೋ ಅಲ್ಲಿ ಹಿಡಿದಿದ್ದಾನೆ. ಎಲ್ಲಿ ಹಾರದಿಂದ ಹೂವಿನ ಎಸಳೊಂದು ತಪ್ಪಿಸಿಕೊಂಡಿದೆಯೋ ಅದಕ್ಕೆ ಮತ್ತೊಂದು ಗಂಟು ಹಾಕುತ್ತಿದ್ದಾನೆ.

ರಾಮಕೃಷ್ಣ ಶಾಸ್ತ್ರಿ ತಾನು ಬರೆದದ್ದಕ್ಕೆಲ್ಲಾ ವಿವರವಾಗಿ ಕಾಮೆಂಟ್ಸ್‌ ಬರೆಯುತ್ತಾನೆ. ವಿಚಿತ್ರವಾಗಿ ಅವನಿಗೆ ಪೊಲಿಟಿಕ್ಸ್‌ನಲ್ಲಿ ಆಸಕ್ತಿ. ಅದೂ, ಹತ್ತು ಸಾವಿರ ಮೈಲಿಗಳಾಚೆಯಲ್ಲಿ ಎಂದೋ ಆಗಿಹೋದ ರಾಜಕೀಯ ಮತ್ತು ರಾಜಕಾರಣಿಗಳು:

‘ಈ ಜಾವ ಮೆಥಡ್‌ ಒಂದು ರೀತಿಯಲ್ಲಿ ಮುರಾರ್ಜಿ ದೇಸಾಯಿಯಂತೆ. ತನ್ನ outputಏ ಮತ್ತೆ input ಆಗುತ್ತದೆ. ಮುರಾರ್ಜಿ ದೇಸಾಯಿ ಈ ಥರ ಎಷ್ಟು ಸಲ ಫಿಲ್ಟರ್‌ ಮಾಡುತ್ತಿದ್ದರೋ ಗೊತ್ತಿಲ್ಲ. ಇದು ಮಾತ್ರ ಒಂದೇ ಬಾರಿ’.

‘ಈ ಪ್ರೋಗ್ರಾಂ ಪಿ.ವಿ.ನರಸಿಂಹರಾಯರಂತೆ. ಒಂದು ಗಂಟೆ ಯೋಚಿಸಿದ ಮೇಲೆ ಉತ್ತರ ಹೊಳೆಯದೆ ನಿದ್ದೆ ಮಾಡುತ್ತದೆ’.

‘ಈ ಪ್ರೊಸೀಜರ್‌ ದೇವೇಗೌಡರ ಸರಕಾರದಂತೆ. ಬ್ರೆಜಿಲ್‌ನಲ್ಲಿ ಮಗುವೊಂದು ಅಂಬೆಗಾಲಿಕ್ಕಿದರೆ ಇದು ಇಲ್ಲಿ ಆ ಕಂಪನಕ್ಕೆ ಕುಸಿದು ಬೀಳುತ್ತದೆ’.

ವಾಂಗ್‌ ಸಿಡಿಮಿಡಿಗೊಳ್ಳುತ್ತಾನೆ. ಈ ಶಾಸ್ತ್ರಿ ಏಕೆ ಇಲ್ಲೆಲ್ಲಾ ತನ್ನ ಅಂಕಲ್‌ಗಳ ಬಗ್ಗೆ ಬರೆಯುತ್ತಾನೆ ಎಂದು!

ಬೇಜಾರಾದಾಗ ಅಲೋಕ್‌ ಮತ್ತು ಜಗದೇವ್‌ ಸಿಂಗ್‌ ತಮ್ಮ ತಮ್ಮ ಕ್ಯೂಬಿನೊಳಗಿಂದಲೇ ಚೆಂಡಿನಾಟವಾಡುತ್ತಾರೆ. ಶರವೇಗದಲ್ಲಿ ಚೆಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾಯುತ್ತದೆ. ಮಾರ್ಕೆಟಿಂಗ್‌ನ ಬಿಲ್‌ ಇವರನ್ನು ಹಾಯುವಾಗ ‘ಟೆರಿಫಿಕ್‌’ ಎನ್ನುತ್ತಾನೆ. ಅವನಿಗೆ ಜಾವ ಬರುವುದಿಲ್ಲ, ಅದು ಬೇಕಾಗೂ ಇಲ್ಲ.

ದೊಡ್ಡ ಕಾನ್ಫರೆನ್ಸ್‌ ರೂಮಿನಲ್ಲಿ ಸಿ. ಇ. ಒ, ಸಿ.ಎಫ್‌.ಒ, ಡೈರೆಕ್ಟರ್ಸ್‌, ಮತ್ತೆಲ್ಲಾ ಮುದುಕರು ಬಾಗಿಲು ಹಾಕಿಕೊಂಡು ಚರ್ಚಿಸುತ್ತಾರೆ. ಅವರ ಬೆಳಗಿನ ತಿಂಡಿ ಅಲ್ಲಿಗೇ ಸಪ್ಲೈ ಆಗುತ್ತದೆ. ಮಧ್ಯಾಹ್ನದ ಊಟ, ಮಧ್ಯೆ ಕಾಫಿ ಎಲ್ಲವೂ. ಬಾತ್‌ರೂಂಗೆ ಹೋಗಲು ಹೊರಗೆ ಬಂದಾಗ ಮಾತ್ರ ಈ ಪ್ರೋಗ್ರಾಮರ್ಸ್‌ನ್ನು ನೋಡಿ ಮುಗುಳುನಗುತ್ತಾರೆ.

ಅಲೋಕ್‌, ವಾಂಗ್‌ ಕೆಳಗಿಳಿದು ಹೋಗಿ ಸಿಗರೇಟ್‌ ಸೇದಿ ಬರುವ ಹೊತ್ತಿಗೆ ಊಟದ ಸಮಯವಾಗುತ್ತದೆ. ಕೆಳಗಿನ ಫ್ಲೋರಿನಲ್ಲೇ ಕೆಫೆ. ತಟ್ಟೆಗೆ ಹಾಕಿಕೊಂಡು ಬಾಗಿಲ ಹತ್ತಿರ ಬಂದರೆ ಚೂರೇಚೂರು ಇಂಗ್ಲೀಷ್‌ ಮತ್ತು ಬಹುತೇಕ ಸ್ಪಾನಿಷ್‌ನಲ್ಲಿ ಮಾತನಾಡುವ ಮೊದ್ದು ಮುಖದ ಹೆಂಗಸಿಗೆ ದುಡ್ಡುಕೊಡಬೇಕು. ‘ಇವಳಿಗೆ ಮುಂದೆರಡು ಕುಂಬಳ, ಹಿಂದೆರಡು ಹಲಸು’ ಎಂದು ಜಗದೇವ್‌ ಸಿಂಗ್‌ ರಾಮಕೃಷ್ಣ ಶಾಸ್ತ್ರಿಯ ಕಿವಿಯಲ್ಲಿ ಪಿಸುಗುಡುತ್ತಾನೆ. ‘ಸಂಸಾರಸ್ಥ ನಾನು. ನನ್ನೊಡನೆ ಹಾಗೆಲ್ಲಾ ಮಾತನಾಡಬಾರದು’ ಎನ್ನುತ್ತಾನೆ ಶಾಸ್ತ್ರಿ.

ಕರಿಯ ರಸ್ತೆಯ ಮೇಲೆ ರೋಲರ್‌ನ್ನು ಉರುಳಿಸಿದಂತೆ ದಿನಗಳು ಹೀಗೆಯೇ ವ್ಯತ್ಯಾಸ ಕಾಣದೆ ಕಳೆಯುತ್ತಿವೆ. ಶಾಸ್ತ್ರಿಯ ಹೆಂಡತಿಗಿನ್ನೂ ಡೆಲಿವರಿ ಆಗಬೇಕಿದೆ, ವಾಂಗ್‌ ಹಾಂಕಾಂಗ್‌ನಿಂದ ತನ್ನ ಪ್ರೇಯಸಿಯನ್ನು ಕರೆದುಕೊಂಡು ಬರಬೇಕಿದೆ.

ಮುದುಕರೆಲ್ಲಾ ಇವತ್ತೇಕೋ ಬಹಳ ದೀರ್ಘವಾದ ಮೀಟಿಂಗ್‌ನಲ್ಲಿದ್ದಾರೆ. ಕೈ ಕೈ ಮಿಲಾಯಿಸುವಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಅದೋ, ಈಗಾಗಲೇ ಸಿ.ಇ.ಒ ಮಾತನಾಡುತ್ತಿದ್ದಾನೆ ಎಂಪ್ಲಾಯ್ಸ್‌ನೆಲ್ಲಾ ಒಟ್ಟು ಸೇರಿಸಿ. ಬಲವಂತವಾಗಿ ದುಃಖದ ಭಾವವನ್ನು ತರಲು ನೋಡುತ್ತಿದ್ದಾನೆ. ಕರೀಕೋಟಿನ ಹಿಂದೆ ಅಡಗಿರುವ ಅವನೆದೆಯಲ್ಲಿ ನಿಜವಾಗಿಯೂ ದುಃಖವೇ ಅಥವಾ ತನಗೆ ಬೇಡದ ಕೆಲವರನ್ನು ಹೊರ ಅಟ್ಟಲು ಸುಸಮಯ ಎಂಬ ಒಳ ಖುಷಿಯೇ, cost cutting ನಿಂದ ಉಳಿತಾಯವಾಗುವ ಹಣದ ಮತ್ತು ಏರಬಹುದಾದ ಸ್ಟಾಕಿನ ಅಂದಾಜಿನ ಮುದವೇ ಹೇಳುವುದು ಕಷ್ಟ . ತಗ್ಗಿದ ದನಿ ಎಲ್ಲೋ ಬಾವಿಯ ಒಳಗಿಂದ ಮಾತನಾಡುತ್ತಿರುವಂತೆ ಕೇಳುತ್ತಿದೆ. It is most unfortunate ಎಂದು ಪದೇ ಪದೇ ಹೇಳುತ್ತಿದ್ದಾನೆ. ಕಂಪನಿ ಉಳಿಯಬೇಕೆಂದರೆ 30% ಹೊರಗೆ ಹೋಗಬೇಕು.

ಜಗಜಿತ್‌, ಶಾಸ್ತ್ರಿ , ವ್ಯಾಂಗ್‌ರೆಲ್ಲಾ ತಮ್ಮ ಬ್ಯಾಗ್‌ಗಳನ್ನು ತುಂಬಿಸುತ್ತಿದ್ದಾರೆ. ಕಾಫೀ ಮಗ್‌, ಸಣ್ಣ ಫ್ರೇಮಿನೊಳಗೆ ಫ್ಯಾಮಿಲಿಯ ಫೊಟೋ, ಇಯರ್‌ ಫೋನ್‌ ಎಲ್ಲಾ .. ಚೀಲದ ವಸ್ತುಗಳನ್ನು ಅಣಕಿಸುವಷ್ಟು ಚಿಂತೆಗಳು ತಲೆಯಲ್ಲಿ ತುಂಬಿಕೊಂಡು ಮೌನವಾಗಿ ನರಗಳನ್ನೆಲ್ಲಾ ತನ್ನ ಬಿಸಿಯಲ್ಲಿ ಬೇಯಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಹೆಂಡತಿಗೆ ಡೆಲಿವರಿ ಆಗಬೇಕು! ಹೆಲ್ತ್‌ ಇನ್ಶುರೆನ್ಸ್‌ದು ಏನು ಕಥೆಯೋ ಗೊತ್ತಿಲ್ಲ!

ಮೆಲ್ಲಗೆ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾರೆ. ಮೇಲಿನ ಫ್ಲೋರಿನ, ಬೀಸುವ ದೊಣ್ಣೆಯನ್ನು ಸದ್ಯಕ್ಕೆ ತಪ್ಪಿಸಿಕೊಂಡ ಉಳಿದ ಜನರಂತೆಯೇ ಕೆಫೆಯ ಕಿಟಕಿಯಿಂದ ‘ಮುಂದೆರಡು ಕುಂಬಳ - ಹಿಂದೆರಡು ಹಲಸಿನ’ ಹೆಂಗಸು ಮೌನವಾಗಿ ಇವರನ್ನು ನೋಡುತ್ತಿದ್ದಾಳೆ. ಆವೇಗರಹಿತವಾಗಿ ಬರುವ ಅಲೆಗಳಂತೆ ಮೆಲ್ಲಗೆ ಕಟ್ಟಡವನ್ನು ದಾಟಿ ರಸ್ತೆಯನ್ನು ದಾಟುತ್ತಿರುವವರನ್ನು ಕಂಡಾಗ ಅವಳ ಕಣ್ಣುಗಳು ಒದ್ದೆಯಾಗುತ್ತವೆ. ಡೇವ್‌ನ ಬ್ಯಾಡ್ಮಿಂಟನ್‌ racquet ಹಸುರು ಮತ್ತು ಕೆಂಪು ಕವರನ್ನು ಹೊಂದಿ ಅವನು ನಡೆಯುವಾಗ ಅವನ ಭುಜದಿಂದ ಮೇಲಕ್ಕೂ ಕೆಳಕ್ಕೂ ಹರಿದಾಡುತ್ತಿದೆ. ಬಸ್ಸುಗಳು, ಕಾರುಗಳು, ಒಂದು ಆ್ಯಂಬುಲೆನ್ಸ್‌ ಇವರನ್ನು ದಾಟಿಕೊಂಡು ಹೋಗುತ್ತಿವೆ. ಬ್ಯಾಂಕ್‌ ಆಫ್‌ ಅಮೆರಿಕಾದ ಕಟ್ಟಡದ ಮರೆಯವರೆಗೂ ಅವಳಿಗೆ ಡೇವ್‌ನ ಬ್ಯಾಡ್ಮಿಂಟನ್‌ ರಾಕೆಟ್‌ ಜೋಗಿಯ ಭುಜವನ್ನೇರಿದ ಹಸುರು ಗಿಣಿಯಂತೆ ಕಾಣಿಸುತ್ತಾ ನಿಧಾನವಾಗಿ ಚೂರುಚೂರೇ ಮರೆಯಾಗುತ್ತದೆ.

ಚೈನಾದ ಶಿಪ್‌ಯಾರ್ಡ್‌ನಲ್ಲೋ, ಟೋಕಿಯೋದ ರೈಲ್ವೆ ಗುಜರಿಯಲ್ಲೋ, ನ್ಯೂಯಾರ್ಕ್‌ನ ಬ್ಯಾಂಕೊಂದರಲ್ಲೋ ಅನಾವರಣಗೊಳ್ಳಲು ತಯಾರಿರುವ ಸಾಫ್ಟ್‌ವೇರ್‌ ಪ್ರೋಗ್ರಾಂಗಳು ಮಾಲಿಕರಿಲ್ಲದೆ ಕಂಗಾಲಾಗಿ ಬತ್ತಿದ ಹೂವಿನ ಹಾರವಾಗಿವೆ.

ಮುಳ್ಳಯ್ಯನ ಗಿರಿ, ಧವಳಗಿರಿ, ಆಲ್ಫ್‌, ಕಿಲಿಮ್ಯಾಂಜರೋ, ರಾಕಿ ಮತ್ತೆಲ್ಲಾ ಪರ್ವತಗಳೂ ಮೌನವಾಗಿ ನಿಂತಿವೆ. ಕಾವೇರಿ, ಗೋದಾವರಿ, ಗಂಗಾ, ಯಮುನಾ, ನೈಲ್‌, ಅಮೆಜಾನ್‌, ಸಾಕ್ರೆಮೆಂಟೋ, ಮಿಸಿಸಿಪ್ಪಿ ಮತ್ತೆಲ್ಲಾ ನದಿಗಳೂ ಮೌನವಾಗಿ ಹರಿಯುತ್ತಿವೆ.

ಕೆಲವು ದೋಣಿಗಳು ಮಾತ್ರ ಹೊಯ್ದಾಡುತ್ತಿವೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more