• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು!

By * ವಿಶ್ವೇಶ್ವರ ಭಟ್
|

'ನೀವು ನಮಗೆ ರಿಚರ್ಡ್ ಬ್ರಾನ್‌ಸನ್‌ನ ಹುಚ್ಚನ್ನು ಹತ್ತಿಸಿಬಿಟ್ರಿ. ನಮಗಂತೂ ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ಅವನ ಬಗ್ಗೆ ಇನ್ನೇನಾದರೂ ಇದ್ದರೆ ಬರೆಯಿರಿ. ನಾನು ನನ್ನ ವಿದ್ಯಾರ್ಥಿಗಳನ್ನೆಲ್ಲ ಕುಳ್ಳಿರಿಸಿಕೊಂಡು ಅವನ ಬಗ್ಗೆ ಹೇಳುತ್ತೇನೆ' ಎಂದು ಮೈಸೂರಿನ ಹೈಸ್ಕೂಲ್ ಶಿಕ್ಷಕಿ ಶಾಂತಲಾ ಐದಾರು ವಿದ್ಯಾರ್ಥಿಗಳೊಂದಿಗೆ ನಮ್ಮ ಕಾರ್ಯಾಲಯಕ್ಕೆ ಬಂದಿದ್ದರು. 'ಈ ಮಾತನ್ನು ಫೋನಿನಲ್ಲಿ ಹೇಳಬಹುದಿತ್ತು, ಆದರೆ ನಾವು ಅವನ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದೇವೆಂಬುದನ್ನು ಈ ಮೂಲಕ ತಿಳಿಸಲು ಖುದ್ದಾಗಿ ಬಂದಿದ್ದೇವೆ' ಎಂದರು ಶಾಂತಲಾ ಮೇಡಂ. ಫೇಸ್‌ಬುಕ್‌ನಲ್ಲೂ ಇದೇ ವರಾತ. 'ಬ್ರ್ಯಾನ್‌ಸನ್ ಬಗ್ಗೆ ಯಾಕೆ ನಿಲ್ಲಿಸಿದಿರಿ. ದಯವಿಟ್ಟು ಮುಂದುವರಿಸಿ' ಎಂದವರು ಅವೆಷ್ಟೋ ಮಂದಿ. ಕಟ್ಟುಪಾಡಿಗೆ ಅಂಟಿಕೊಂಡವನಂತೆ ಒಂದೇ ವಿಷಯದ ಬಗ್ಗೆ ನಾನು ಬರೆಯುವುದಿಲ್ಲ. ಆದರೆ ಓದುಗರೇ ಬೇಕು ಅಂದ್ರೆ ಇಲ್ಲವೆಂದು ಹೇಳುವುದಾದರೂ ಹೇಗೆ? ಈ ಸಂದರ್ಭದಲ್ಲಿ ಆತ ಬರೆದ ಒಂದು ಬರಹ ಸಿಕ್ಕಿತು. ಶಾಂತಲಾ ಮೇಡಂ ಹಾಗೂ ಅವರ ವಿದ್ಯಾರ್ಥಿಗಳು ನೆನಪಾದರು. ಇನ್ನು ನೀವುಂಟು ಹಾಗೂ ಬ್ರ್ಯಾನ್‌ಸನ್. ನಡುವೆ ನಾನ್ಯಾಕೆ?

***

ಹೋದಲ್ಲಿ ಬಂದಲ್ಲಿ ಜನ ನನ್ನನ್ನು ಕೇಳುತ್ತಾರೆ- 'ಯಾವಾಗಲೂ ನೀವು ಉತ್ಸಾಹದಲ್ಲಿರುತ್ತೀರಾ. ಸದಾ ನಗುನಗುತ್ತೀರಾ. ಬೇರೆಯವರನ್ನೂ ಸಂತಸಪಡಿಸುತ್ತೀರಾ. ಬಿಲಿಯನರ್ ಆಗಿದ್ದರೂ ಸ್ವಲ್ಪವೂ ಟೆನ್‌ಶನ್ ಮಾಡಿಕೊಳ್ಳುವುದಿಲ್ಲ. ಸಿಬ್ಬಂದಿ ಮೇಲೆ ರೇಗುವುದಿಲ್ಲ. ಯಾವತ್ತೂ ಹೊಸ ಹೊಸ ಸಾಹಸಕ್ಕೆ ಮುಂದಾಗುತ್ತೀರಾ. ಸವಾಲುಗಳನ್ನು ಸಲೀಸಾಗಿ ಎದುರಿಸುತ್ತೀರಾ. ಬ್ರ್ಯಾನ್‌ಸನ್ ಯಾವ ಹೊಸ ಸಾಹಸಕ್ಕೆ ಸ್ಕೆಚ್ ಹಾಕುತ್ತಿರಬಹುದು ಎಂದು ಯೋಚಿಸುತ್ತಿರುವಾಗಲೇ ಅದನ್ನು ಮಾಡಿ ಮುಗಿಸಿ ಮುಂದಿನದಕ್ಕೆ ಯೋಚಿಸುತ್ತಾ ಕುಳಿತಿರುತ್ತೀರಾ. ಇವೆಲ್ಲ ಹೇಗೆ ಸಾಧ್ಯವಾಗುತ್ತದೆ ನಿಮಗೆ? ನೀವು ಹೇಗೆ ಕೆಲಸ ಮಾಡುತ್ತೀರಾ? ಕೆಲಸದ ಹೊರತಾಗಿ ಹೇಗೆ ಸಮಯ ಕಳೆಯುತ್ತೀರಾ? ನಿಮ್ಮ ಖಯಾಲಿಗಳೇನು? ನಮಗೂ ಸ್ವಲ್ಪ ಹೇಳಬಾರದಾ?' ತಕ್ಷಣ ನಾನು ನಕ್ಕು ಸುಮ್ಮನಾಗುತ್ತೇನೆ. ಆದರೆ ಅವರು ಸುಮ್ಮನೆ ಬಿಡುವುದಿಲ್ಲ. ಹೇಳಲೇಬೇಕೆಂದು ಪ್ರೀತಿಯಿಂದ ಜಗಳ ತೆಗೆಯುತ್ತಾರೆ, ಮುನಿಸಿಕೊಳ್ಳುತ್ತಾರೆ.

ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಆ ಹಣವನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ!
ಆಗ ನಾನು ಅವರಿಗೆ ಹೇಳುತ್ತೇನೆ- ನಿಮ್ಮಲ್ಲಿ ಏನಿದೆಯೋ ನನ್ನಲ್ಲಿ ಇರುವುದೂ ಅದೇ. ಎಲ್ಲರಲ್ಲೂ ಒಂದು ಅದಮ್ಯ ಶಕ್ತಿಯಿರುತ್ತದೆ. ಅದೇನೆಂಬುದು ನಮಗೆ ಗೊತ್ತಿರುತ್ತದೆ. ನಮ್ಮ ಶಕ್ತಿಯೇನೆಂಬುದು ನಮಗೆ ಗೊತ್ತಿಲ್ಲದಿದ್ದಾಗ ಮಾತ್ರ ಇಂಥ ಪ್ರಶ್ನೆಗಳು ಏಳುತ್ತವೆ. ನಾವೆಲ್ಲರೂ ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತೇವೆ. ಅದೇನೆಂದರೆ ನನ್ನಿಂದ ಇವೆಲ್ಲ ಸಾಧ್ಯನಾ?' ಎಂಬ ನಕಾರಾತ್ಮಕ ಪ್ರಶ್ನಾರೋಗ. ನನ್ನಿಂದ ಸಾಧ್ಯವಿಲ್ಲವೇಕೆ? ನನ್ನಿಂದ ಇದು ಸಾಧ್ಯ!' ಎಂದು ಕೇಳಿಕೊಂಡರೆ, ಮನವರಿಕೆ ಮಾಡಿಕೊಂಡರೆ ಎಲ್ಲವೂ ಸಲೀಸು. ಅರ್ಧ ಕೆಲಸ ಮುಗಿದಂತೆ. ಹಾಟ್‌ಏರ್ ಬಲೂನ್‌ನಲ್ಲಿ ನನಗೆ ವಿಶ್ವಪರ್ಯಟನೆ ಮಾಡಬೇಕೆಂದು ಅನಿಸಿತು. ಗೆಳೆಯರ ಮುಂದೆ ಇದನ್ನು ಹೇಳಿಕೊಂಡಾಗ ಎಲ್ಲರೂ ನಿರುತ್ಸಾಹದ ಗಾಳಿಯನ್ನೇ ಊದಿದರು. ನೂರರಲ್ಲಿ ಒಬ್ಬನೂ ಯಸ್, ಫೆಂಟಾಸ್ಟಿಕ್, ಗೋ ಅಹೆಡ್' ಅಂತ ಹೇಳಲಿಲ್ಲ. ಯಾರು ಏನನ್ನು ಮಾಡಬೇಕೋ ಅದನ್ನೇ ಮಾಡಬೇಕು. ನೀನು ಹೋಗಿ ಹೋಗಿ ಹಾಟ್‌ ಏರ್ ಬಲೂನ್‌ನಲ್ಲಿ ಹಾರುತ್ತೀನಿ ಅಂತಿದೀಯಲ್ಲಾ, ನಿನಗೆ ತಲೆಕೆಟ್ಟಿದೆಯಾ? ಏನಾದರೂ ಅನಾಹುತವಾದ್ರೆ? ನಿನ್ನ ಜೀವಕ್ಕೆ ಅಪಾಯವಾದ್ರೆ?' ಎಂದೇ ಎಲ್ಲರೂ ರಾಗ ಎಳೆದರು. ಇನ್ನು ಸಾವಿರ ಮಂದಿಯನ್ನು ಕೇಳಿದ್ದರೂ ಅವರೆಲ್ಲ ಹಾಗೇ ಹೇಳುತ್ತಿದ್ದರು. ಜೀವಕ್ಕೆ ಅಪಾಯವಾದ್ರೆ, ಸತ್ತು ಹೋದ್ರೆ ಎಂಬ ಪ್ರಶ್ನೆಯೇ ಅವರಿಗೆ ದೊಡ್ಡದಾಗಿ ಕಾಣುತ್ತಿತ್ತು.

ಈ ಪ್ರಶ್ನೆಗಳೇ ಎಲ್ಲರನ್ನೂ ಬಾಧಿಸಿದರೆ ವಿಮಾನ ಇರುತ್ತಿರಲಿಲ್ಲ, ಕ್ಷಿಪಣಿಗಳನ್ನು ಕಂಡುಹಿಡಿಯುತ್ತಿರಲಿಲ್ಲ, ಹಡಗನ್ನು ಯಾರೂ ನಿರ್ಮಿಸುತ್ತಿರಲಿಲ್ಲ, ಆಕಾಶದಿಂದ ಯಾರೂ ನೆಗೆಯುತ್ತಿರಲಿಲ್ಲ, ಆಳ ಸಮುದ್ರದ ರಹಸ್ಯ ಭೇದಿಸುತ್ತಿರಲಿಲ್ಲ, ಅಂಟಾರ್ಟಿಕಾಕ್ಕೆ ಹೋಗುತ್ತಿರಲಿಲ್ಲ, ಹಿಮಾಲಯ ಏರುತ್ತಿರಲಿಲ್ಲ, ಕಾಡಿನಲ್ಲಿ ಬೇಟೆಗೆ ಹೋಗುತ್ತಿರಲಿಲ್ಲ, ಬಹುಮಹಡಿ ಕಟ್ಟಡ ಕಟ್ಟುತ್ತಿರಲಿಲ್ಲ. ಎಲ್ಲರೂ ಮನೆಯಲ್ಲಿ ಸುಮ್ಮನೆ ಕೈಕಾಲು ಚೆಲ್ಲಿ ಕುಳಿತಿರುತ್ತಿದ್ದರು. ಸಾಹಸಕ್ಕೆ ಯಾರೂ ಮುಂದಾಗುತ್ತಿರಲಿಲ್ಲ. ಹೀಗೆ ಹೇಳುವವರನ್ನು ಕಂಡರೆ ಅವರ ತಲೆಮೇಲೆ ಹಿಡಿದು ಮೊಟಕಬೇಕು ಎಂದೆನಿಸುತ್ತಿತ್ತು. ನನ್ನಿಂದ ಏನಾದರೂ ಅಲ್ಪಸ್ವಲ್ಪ ಸಾಹಸವಾಗಿದ್ದರೆ, ಈ ನೆಗೆಟಿವ್ ಪ್ರತಿಕ್ರಿಯೆಗೆ ನನ್ನ ಪ್ರತಿಭಟನೆಯ ಸಂಕೇತವಾಗಿ ಮೂಡಿದ ಉತ್ತರ- ನಾನು ಸಾಧಿಸಿ ತೋರಿಸುತ್ತೇನೆ ನೋಡ್ತಾ ಇರಿ. ನೀವು ರಾಂಗ್ ಎಂದು ನಾನು ಸಾಬೀತು ಮಾಡಬಲ್ಲೆ.' ಯಾರಾದರೂ ನನ್ನ ಬಳಿ ಬಂದು ನಿನ್ನಿಂದ ಇದು ಸಾಧ್ಯ ಇಲ್ಲ' ಎಂದು ಹೇಳುವ ಧೈರ್ಯ ಮಾಡುವುದಿಲ್ಲ. ಹೇಳಿದ ಕ್ಷಣದಲ್ಲೇ ಸಾಧ್ಯ ಮಾಡಿ ತೋರಿಸಲು ಪಣತೊಡುತ್ತೇನೆ ಹಾಗೂ ಸಾಧ್ಯ ಮಾಡಿ ತೋರಿಸುತ್ತೇನೆ.

ಚಂದ್ರಲೋಕಕ್ಕೆ ಹೋಗ್ತೀಯಾ' ಅಂತ ಕೇಳಿದರೆ ಹೂಂ, ರೆಡಿ' ಅಂದುಬಿಡುತ್ತೇನೆ. ಈಗ ನಾನು ಚಂದ್ರಲೋಕಕ್ಕೆ ಹೋಗುವ ಎಲ್ಲ ತಯಾರಿ ಮಾಡುತ್ತಿದ್ದೇನೆ, ನಿಮಗೆ ಗೊತ್ತಿರಲಿ. ನಿಮ್ಮನ್ನು ನಿಲ್ಲಿಸುವ, ನಿಯಂತ್ರಿಸುವ ಶಕ್ತಿಯಿರುವುದು ನಿಮಗೆ ಮಾತ್ರ. ಈ ಕೆಲಸವನ್ನು ನಾವು ಬಹುತೇಕ ಸಂದರ್ಭಗಳಲ್ಲಿ ಬೇರೆಯವರಿಗೆ ಕೊಟ್ಟುಬಿಡುತ್ತೇವೆ. ಹೀಗಾಗಿ ಅವರು ನಮ್ಮನ್ನು ಆಳುತ್ತಾರೆ. ನಮ್ಮ ಸಾಮರ್ಥ್ಯ, ಶಕ್ತಿಯನ್ನು ಕುಗ್ಗಿಸಿಬಿಡುತ್ತಾರೆ. ಹಿಮಾಲಯ ಏರುವ ತನಕ ಅದೇ ದೊಡ್ಡ ಸಾಹಸವೆನಿಸುತ್ತದೆ. ಒಮ್ಮೆ ಏರಿದ ಬಳಿಕ ಅದಕ್ಕೂ ಎತ್ತರದ ಪರ್ವತವನ್ನೇರಬಹುದು ಎಂಬ ವಿಶ್ವಾಸ ಮೂಡುತ್ತದೆ. ಚಿಕ್ಕ ಬೆಟ್ಟವೇರದವನಿಗೆ ಹಿಮಾಲಯ ಕನಸಿನ ಮಾತೇ ಸರಿ. ಮೊದಲು ಮನೆಯಿಂದ ಹೊರಬಿದ್ದು ಪರ್ವತವೇರಲು ತೊಡಗಬೇಕು. ಹಿಮಾಲಯದ ತುತ್ತತುದಿಯಿಂದ ನೋಡಿದಾಗ ಜಗತ್ತು ನಮಗೆ ಬೇರೆ ರೀತಿಯಲ್ಲೇ ಕಾಣಿಸುತ್ತದೆ. ಅದನ್ನು ಮನೆಯಲ್ಲಿ ಆಲಸಿಯಾಗಿ ಬಿದ್ದುಕೊಂಡವನಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಅಂಥವರಿಗೆ ಹೇಳಲೂಬಾರದು. ಹೀಗಾಗಿ ಯಾರಾದರೂ ನನ್ನನ್ನು ನಿಮಗೆ ಇವೆಲ್ಲ ಹೇಗೆ ಸಾಧ್ಯವಾಯಿತು?' ಎಂದು ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.

ಬನ್ನಿ ನನ್ನ ಜತೆ, ತೋರಿಸುತ್ತೇನೆ ನೀವು ಅಂದುಕೊಂಡಂತೆ ಜಗತ್ತು ವಿಶಾಲವಾಗಿಲ್ಲ, ಬಹಳ ಚಿಕ್ಕದಾಗಿದೆ. ಮನೆಯಲ್ಲಿ ಕುಳಿತವನಿಗೆ ಮಾತ್ರ ಹಾಗೆ ಅನಿಸಬಹುದು. ಜಗತ್ತು ಸುತ್ತುವವನಿಗೆ ಅದು ಚಿಕ್ಕದೇ. ಸಮುದ್ರದ ತಳ ಮುಟ್ಟಿ ಬಂದವ, ಆಳವಾದ ಬಾವಿಯಲ್ಲಿ ನಡೆದು ಹೋಗುತ್ತಾನೆ ಎಂಬ ಮಾತನ್ನು ಕೇಳಿರಬಹುದು. ಮೋಡದ ಮೇಲಿಂದ ಜಿಗಿದವನಿಗೆ ಮಾತ್ರ ಹಕ್ಕಿಯ ಸ್ವಾತಂತ್ರ್ಯವೇನೆಂಬುದು ಅರ್ಥವಾದೀತು. ನೀವು ಮೇಲಿಂದ ಜಿಗಿಯುವ ತನಕ ನಿಮ್ಮ ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದೂ ಗೊತ್ತಾಗುವುದಿಲ್ಲ. ನನಗೆ ಪ್ರತಿಕ್ಷಣವೂ ಅದ್ಭುತವೆನಿಸುತ್ತದೆ. ಏನೂ ಮಾಡದೇ ಸುಮ್ಮನೆ ಕಳೆದರೆ ನನಗೇ ನಾನು ದ್ರೋಹ ಮಾಡಿಕೊಂಡಷ್ಟು ಬೇಸರವಾಗುತ್ತದೆ. ಆದ್ದರಿಂದ ನಾನು ಹೊಸ ಉದ್ಯಮಕ್ಕೆ ಕೈಹಾಕುತ್ತೇನೆ, ಸಾಹಸಕ್ಕೆ ಮುಂದಾಗುತ್ತೇನೆ, ಆಕಾಶದಿಂದ ಜಿಗಿಯುತ್ತೇನೆ, ಹಡಗಿನಲ್ಲಿ ಜಗತ್ತು ಸುತ್ತುತ್ತೇನೆ, ಚಂದ್ರಲೋಕದ ಕನಸು ಕಾಣುತ್ತೇನೆ. ಇದು ನನಗೊಂದೇ ಸಾಧ್ಯವಾಗುತ್ತದೆಯೆಂದು ಭಾವಿಸಿದರೆ ಅದು ತಪ್ಪು. ಇದು ಪ್ರತಿಯೊಬ್ಬರಿಂದಲೂ ಸಾಧ್ಯ. ನನಗೆ ಇರುವಂತೆ ಉಳಿದವರಿಗೂ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿದೆ. ಹಾಗೆಂದು ಇವನ್ನೆಲ್ಲ ಸಾಧಿಸಿದ ಮೊದಲ ವ್ಯಕ್ತಿ ನಾನಲ್ಲ. ನಾನೂ ಸಹ ಸಾಧನೆ ಮಾಡಿದವರಿಂದ ಪ್ರೇರಣೆ ಪಡೆದವ. ಸಾಧನೆಗೆ ಮಿತಿಯಿಲ್ಲವೆಂಬುದು ನನಗೆ ಬಹಳ ಬೇಗ ಅರಿವಾಯಿತು. ಅದೇ ಪ್ರೇರಣೆ ನನ್ನನ್ನು ಕೈಹಿಡಿದು ಮುನ್ನುಗ್ಗುವಂತೆ ಮಾಡುತ್ತಿದೆ.

ಪ್ರತಿದಿನ ಹೊಸ ಸಂಗತಿಗಳನ್ನು ತಿಳಿಯುವುದು, ಹೊಸ ಹೊಸ ಜನರನ್ನು ಭೇಟಿ ಮಾಡುವುದು, ಹೊಸತನಕ್ಕೆ ಮುಖಮಾಡುವುದು ಖುಷಿಯ ಅಂಶಗಳೇ. ಇದೇ ನನಗೆ ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯಮ ಮಾಡುವುದಕ್ಕೆ ಕಾರಣ. ಹಣ ಮಾಡುವುದೇ ಮುಖ್ಯ ಅಲ್ಲ. ಹಣ ಹೇಗಿದ್ದರೂ ಬಂದೇ ಬರುತ್ತದೆ. ಹಣ ಮಾಡುವುದನ್ನು ಮೀರಿದ ಆಕರ್ಷಣೆ ನಮ್ಮನ್ನು ಅಂಥ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ನನಗೆ ಯಾವುದು ಸಂತಸ, ನೆಮ್ಮದಿ ತಂದುಕೊಡುತ್ತದೋ ಅದನ್ನು ಎದೆಗವುಚಿಕೊಂಡು ಮಾಡುತ್ತೇನೆ. ಅದರಿಂದ ಎಷ್ಟು ಹಣ ಬರುತ್ತದೆಂಬುದು ನನಗೆ ಮುಖ್ಯವಾಗುವುದಿಲ್ಲ. ಯಾವುದೇ ಕೆಲಸವನ್ನು ಹೀಗೆ ಭಾವಿಸಿದರೆ ಅದು ವಿಫಲವಾಗಲು ಸಾಧ್ಯವೇ ಇಲ್ಲ. ಈ ಸಂಗತಿ ನನಗೆ ಎಲ್ಲ ಉದ್ಯಮವನ್ನು ಆರಂಭಿಸಿದಾಗಲೂ ಮನವರಿಕೆಯಾಗಿದೆ.

ಮುಂದೆ ಓದಿ : ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more