ಚೆನ್ನೈನ ಯುಎಸ್ ಕಾನ್ಸಲ್ ಜನರಲ್ ಆಗಿ ಮರಿಯಾನಾ ಎಲ್ ನೈಶುಲರ್ ಅಧಿಕಾರ ಸ್ವೀಕಾರ
ಚೆನ್ನೈ: ನಗರದ ಅಮೆರಿಕ ರಾಯಭಾರ ಕಚೇರಿಯಲ್ಲಿ ಸೋಮವಾರ (ಮಾರ್ಚ್ 2) ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್ ಆಗಿ ಮರಿಯಾನಾ ಎಲ್.ನೈಶುಲರ್ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, "ನಮ್ಮ ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂದ ಗೌರವ ಎಂದೇ ಭಾವಿಸುತ್ತೇನೆ" ಎಂದರು.
"ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮತ್ತು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಅವರ ನೇತೃತ್ವದಲ್ಲಿ, ಅಮೆರಿಕನ್ನರು ಮತ್ತು ಭಾರತೀಯರಿಬ್ಬರಿಗೂ ನೈಜ ಫಲಿತಾಂಶಗಳನ್ನು ನೀಡುವ ಪಾಲುದಾರಿಕೆಯನ್ನು ಬಲಪಡಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ" ಎಂದು ನುಡಿದರು.

"ಎರಡೂ ದೇಶಗಳ ನಡುವಣ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಲು, ಅಮೆರಿಕದ ಉದ್ಯಮಗಳನ್ನು ಬೆಂಬಲಿಸಲು ಮತ್ತು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಜನರ ನಡುವಿನ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.
ಮರಿಯಾನಾ ಎಲ್.ನೈಶುಲರ್ ಅವರು ಚೆನ್ನೈಗೆ ಬರುವ ಮೊದಲು, ತಾಷ್ಕೆಂಟ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ಹಲವು ಪ್ರಮುಖ ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಅವರು ಜೆರುಸಲೆಮ್ ಮತ್ತು ಅಮ್ಮನ್ ರಾಯಭಾರ ಕಚೇರಿಗಳಲ್ಲಿ ಉಪ ಆರ್ಥಿಕ ಕೌನ್ಸಿಲರ್ ಆಗಿ, ವಾಷಿಂಗ್ಟನ್ ಡಿಸಿ, ದುಬೈ, ಸ್ಕೋಪೆ ಮತ್ತು ಮಾಸ್ಕೋಗಳಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ದಕ್ಷಿಣ ಭಾರತದೊಂದಿಗೆ ಅಮೆರಿಕದ ವ್ಯಾಪಾರ, ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ತಮ್ಮ ಕಾರ್ಯಕಾಲದಲ್ಲಿ ವಿಶೇಷ ಒತ್ತು ನೀಡುವುದಾಗಿ ನೈಶುಲರ್ ತಿಳಿಸಿದ್ದಾರೆ.
ಕಾನ್ಸಲ್ ಜನರಲ್ ಮರಿಯಾನಾ ಎಲ್.ನೈಶುಲರ್ ಅವರ ಕಿರು ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications