ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಲ್ಲೂ ರಾಜಕಾರಣಿಗಳ ಅದೇ ನಾತಲೀಲೆ!

By * ವಿಶ್ವೇಶ್ವರ ಭಟ್
|
Google Oneindia Kannada News

Lalu Prasad Yadav
ಇದು ನಮ್ಮ ರಾಜ್ಯದ ಕತೆಯಾಯಿತು ಬಿಡಿ ಎಂದು ಕತ್ತನ್ನು ಕೇಂದ್ರದ ಕಡೆ ಹೊರಳಿಸಿದರೆ ಅಲ್ಲೂ ಅದೇ ನಾತಲೀಲೆ! ಬೆಲೆ ಏರಿಕೆ ಕುರಿತು ಲೋಕಸಭೆಯಲ್ಲಿ ಬಿಜೆಪಿ ಹಾಗೂ ಎಡಪಕ್ಷಗಳು ಖೋತಾ ನಿರ್ಣಯ ಮಂಡಿಸಿದಾಗ ಯುಪಿಎ ಸರಕಾರ ಅದನ್ನೇನೋ ಸಲೀಸಾಗಿ ಸೋಲಿಸಿತು. ಆದರೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಮುಲಾಯಂ ಸಿಂಗ್ ಯಾದವ್‌ರ ಸಮಾಜವಾದಿ ಪಕ್ಷ, ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ, ಮಾಯಾವತಿಯ ಬಹುಜನ ಸಮಾಜ ಪಕ್ಷ ಹಾಗೂ ಶಿಬುಸೊರೇನ್‌ರ ಜಾರ್ಖಂಡ್ ಮುಕ್ತಿಮೋರ್ಚಾ ಹೇಗೆ ವರ್ತಿಸಿದವು ಎಂಬುದನ್ನು ನೋಡಿದರೆ ಎಂಥವರಿಗಾದರೂ ಅಸಹ್ಯವಾಗುತ್ತದೆ. ಈ ನಾಲ್ವರೂ ಕಾಂಗ್ರೆಸ್ ಬಗ್ಗೆ, ಅದರ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿರುದ್ಧ ಹೇಳದ ಬೈಗುಳಗಳಿಲ್ಲ. ತಮ್ಮ ತಮ್ಮ ರಾಜ್ಯಗಳಲ್ಲೂ ಇವರಿಗೆ ಕಾಂಗ್ರೆಸ್ ಪರಮವೈರಿ. ಹಿಂದಿನ ಸಲ ಯುಪಿಎ ಸರಕಾರದಲ್ಲಿ ಮಂತ್ರಿಯಾಗಿದ್ದ ಲಾಲೂ ಅವರನ್ನು ಕಾಂಗ್ರೆಸ್ ಈ ಸಲ ಹೊರಗಿಟ್ಟಿತು. ಆಗ ಲಾಲೂ ಕೋಪದಿಂದ ಏನೆಲ್ಲ ಬೈದರೆಂಬುದನ್ನು ನೆನಪಿಸಿಕೊಂಡರೆ ಅವರು ಇನ್ನೆಂದೂ ಕಾಂಗ್ರೆಸ್ ಸಹವಾಸ ಮಾಡಲಿಕ್ಕಿಲ್ಲ ಎಂದು ಅನೇಕರು ಅಂದುಕೊಂಡಿದ್ದರು.

ಆದರೆ ಇದೇ ಲಾಲೂ ಮೊನ್ನೆಯ ಖೋತಾ ನಿರ್ಣಯದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲೆಂದು ಸದನದಲ್ಲಿ ಮತದಾನದಲ್ಲಿ ಭಾಗವಹಿಸದೇ ಹೊರಗುಳಿದರು. ಹಾಗೆಂದು ಇದೇ ಲಾಲೂ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸನ್ನು ಹಿಗ್ಗಾಮುಗ್ಗಾ ಟೀಕಿಸಿದ್ಧರು. ಇದೇ ವಿಷಯದ ಬಗ್ಗೆ ಖೋತಾ ನಿರ್ಣಯ ಮಂಡಿಸಿದರೆ ಪುಣ್ಯಾತ್ಮ ಕಾಂಗ್ರೆಸ್ ಪರ! ಅದಕ್ಕೆ ಅವರ ಸಮಜಾಯಿಷಿ ಏನು ಗೊತ್ತಾ? ನನ್ನ ಹಾಗೂ ನನ್ನ ಪತ್ನಿ ರಾಬ್ಡಿದೇವಿ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿದ್ದು ಬಿಜೆಪಿ. ಕಾಂಗ್ರೆಸ್ಸೇನೂ ನನ್ನ ವಿರುದ್ಧ ಸಿಬಿಐ ತನಿಖೆಗೆ ಚಾಲನೆ ನೀಡಲಿಲ್ಲ. ಇಷ್ಟಾದ ಮೇಲೂ ಬಿಜೆಪಿ ಪರ ನಿಂತು ಯುಪಿಎ ಸರಕಾರದ ವಿರುದ್ಧ ಹೇಗೆ ಮತ ಚಲಾಯಿಸಲಿ?' ಲಾಲೂಗೆ ಮಾನ-ಮರ್ಯಾದೆ ಪದದ ಅರ್ಥವೇನಾದರೂ ಗೊತ್ತಾ? ಕಾಂಗ್ರೆಸ್‌ಗೆ ಆಗ ಬೇಡವಾದ ಲಾಲೂ ಈಗ ಬೇಕು. ಇದೆಂಥ ಮೈತ್ರಿ?

ಈ ಮುಲಾಯಂ ಸಿಂಗ್ ಯಾದವ್ ಸಹ ಇಷ್ಟೇ ಖದೀಮ. ಹಾವಿಗಾದರೆ ಎರಡೇ ನಾಲಗೆ. ಈ ಮುಲಾಯಂ ಎಂಬಾತನಿಗೆ ಅವೆಷ್ಟು ನಾಲಗೆಗಳೋ? ಅದು ಹೇಗೆ ಬೇಕಾದರೂ ಹೊರಳುತ್ತದೆ. ಆತ ಕಾಂಗ್ರೆಸ್ಸನ್ನು ಬೈದಷ್ಟೇ ಸಲ ಆಲಂಗಿಸಿಕೊಂಡಿದ್ದಾನೆ. ಉತ್ತರಪ್ರದೇಶಕ್ಕೆ ಬಂದು ಕಾಂಗ್ರೆಸ್ಸನ್ನು ಬೈಯುತ್ತಾನೆ. ದಿಲ್ಲಿ ಗಡಿಯೊಳಗೆ ಕಾಲಿಡುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಚುಂಗು ಹಿಡಿಯುತ್ತಾನೆ. ಈ ಇಬ್ಬರು ಯಾದವರಿಗೆ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗುವುದು ಬೇಕಾಗಿಲ್ಲ. ಈ ವಿಧೇಯಕ ಕುರಿತು ನಿಧಾನವಾಗಿ ಹೆಜ್ಜೆ ಹಾಕುವುದಾಗಿ ಕಾಂಗ್ರೆಸ್ ಇವರಿಬ್ಬರಿಗೆ ಆಶ್ವಾಸನೆ ನೀಡಿದೆ. ಹೀಗಾಗಿ ಇವರು ಕಾಂಗ್ರೆಸ್ ಪರ. ಇನ್ನು ಯಾವತ್ತಾದರೂ ಇವರು ಕಾಂಗ್ರೆಸ್ ವಿರುದ್ಧವಾಗಬಹುದು. ಕಾಂಗ್ರೆಸ್‌ಗೆ ಇವರು ಮಿಂಡರೆಂಬುದು ಗೊತ್ತು, ಆದರೆ ಹೊಳೆ ದಾಟುವತನಕ ಇವರು ಅಂಬಿಗರೇ! ಹೀಗಾಗಿ ಸಂಕಷ್ಟದಲ್ಲಿ ಇವರು ಬೇಕೇಬೇಕು.

ಮಾಯಾವತಿ ಯಾವ ಕ್ಷಣದಲ್ಲಿ ಕಾಂಗ್ರೆಸ್ ಪರ ಹಾಗೂ ವಿರುದ್ಧ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ವಿರುದ್ಧ ಎಂದು ಗೊತ್ತಾಗುವ ಹೊತ್ತಿಗೆ ಪರವಾಗಿರುತ್ತಾಳೆ. ಆದರೆ ಪ್ರತಿ ಸಲ ಬಣ್ಣ' ಬದಲಾಯಿಸುವಾಗಲೂ ಏನಾದರೂ ಸಂದಾಯವಾಗಬೇಕು. ಪ್ರತಿ ಬಣ್ಣ ಬದಲಾವಣೆಗೂ ಕಿಮ್ಮತ್ತಿದೆ. ಲಖನೌದಿಂದ ದಿಲ್ಲಿಗೆ ಐನೂರು ಕಿ.ಮೀ.ಗಳಾಗಬಹುದು. ಅಂದರೆ ಲಖನೌದಲ್ಲಿ ಹೇಳಿದ ಮಾತು ದಿಲ್ಲಿಯಲ್ಲಿ ಕೇಳುತ್ತದೆ. ಆದರೆ ಈಯಮ್ಮ ಲಖನೌದಲ್ಲಿ ಕಾಂಗ್ರೆಸ್ಸನ್ನು ತಕ್ಕಾಮಕ್ಕಾ' ಬೈದರೆ, ದಿಲ್ಲಿಗೆ ಬಂದು ತಾರಮ್ಮಯ್ಯ' ಎಂದು ಹೊಗಳುತ್ತಾಳೆ. ಖೋತಾ ನಿರ್ಣಯದ ಸಂದರ್ಭ ಕಾಂಗ್ರೆಸ್ಸನ್ನು ಬೆಂಬಲಿಸಲು ಮಾಯಾವತಿಗೆ ಯಾವ ಸಂಕೋಚವೂ ಕಾಡಲಿಲ್ಲ.

ಏಪ್ರಿಲ್ 16ರಂದು ಸಿಬಿಐ ಏನು ಹೇಳಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಮಾಯಾವತಿ ಲಂಚ ಪಡೆಯುತ್ತಿರುವ ಬಗ್ಗೆ ತನ್ನ ಬಳಿ ಸಾಕ್ಷ್ಯಗಳಿವೆಯೆಂದೂ, ಅವರನ್ನು ವಿಚಾರಣೆಗೆ ಒಳಪಡಿಸಲು ಬಯಸುವುದಾಗಿಯೂ ಸಿಬಿಐ ಸುಪ್ರೀಂಕೋರ್ಟ್‌ಗೆ ಹೇಳಿತ್ತು. ಅದಕ್ಕೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಸಿಕ್ಕಿತ್ತು. ಕೇವಲ ಒಂದು ವಾರ ಕಳೆಯುವುದರೊಳಗೆ ಬಹುಮತ ದೃಢಪಡಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂತು. ಆದರೆ ಇದೇ ಸಿಬಿಐ ಏಪ್ರಿಲ್ 23ರಂದು ಸುಪ್ರೀಂಕೋರ್ಟ್ ಎದುರು ನಿಂತು ರಾಗ ಬದಲಿಸಿತು. ಮಾಯಾವತಿ ಮನವಿಯಂತೆ ಅವರ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿಕೆ ಕೊಟ್ಟುಬಿಟ್ಟಿತು. ಅದಾಗಿ ಮೂರು ದಿನಗಳೊಳಗೆ ಮಾಯಾವತಿ ಪಕ್ಷದ ಸಂಸದರು ಸರಕಾರವನ್ನು ಬೆಂಬಲಿಸಲು ತುದಿಗಾಲ ಮೇಲೆ ನಿಂತಿದ್ದರು. ನಾವು ಸರಕಾರದ ಭಾಗವೇ ಆಗಿದ್ದೇವೆ. ಅವರಿಗೆ ನಮ್ಮ ಬಾಹ್ಯ ಬೆಂಬಲ ನೀಡುತ್ತೇವೆ' ಎಂದು ಬಹುಜನ ಸಮಾಜ ಪಕ್ಷದ ಸಂಸದರು ಬಹಿರಂಗವಾಗಿ ಹೇಳುತ್ತಾ ಕಾಂಗ್ರೆಸ್ ರಕ್ಷಣೆಗೆ ಟೊಂಕಕಟ್ಟಿ ನಿಂತುಬಿಟ್ಟಿದ್ದರು. ಮಾಯಾವತಿ ಮುಂದೆ ಸಿಬಿಐ ಎಂಬ ಗುಮ್ಮನನ್ನು ನಿಲ್ಲಿಸಿದರೆ ಕಾಂಗ್ರೆಸ್ ಮುಂದೆ ಶಿರಸಾಷ್ಟಾಂಗ ನಮಸ್ಕಾರ! ಈಯಮ್ಮ ಅವೆಷ್ಟು ಸಲ ಕಾಂಗ್ರೆಸ್ಸನ್ನು ಟೀಕಿಸಿದಳೋ, ಅವೆಷ್ಟು ಸಲ ಆ ಪಕ್ಷವನ್ನು ಬೆಂಬಲಿಸಿದಳೋ ಅವಳಿಗೇ ಗೊತ್ತಿರಲಿಕ್ಕಿಲ್ಲ. ರಾಗ ಬದಲಿಸುವುದರಲ್ಲಿ ಈ ಕುಮಾರಿ' (ಮಾಯಾವತಿ) ಅ ಕಿಶೋರಿ'(ಅಮೋಣಕರ್ )ಯನ್ನೂ ಮೀರಿಸಬಲ್ಲಳು.

ಇದೆಂಥ ವಿಚಿತ್ರವೋ ಗೊತ್ತಾಗುತ್ತಿಲ್ಲ, ಇಂದು ಅಧರ್ಮವೇ ಮೈತ್ರಿ ರಾಜಕಾರಣದ ಧರ್ಮವಾಗಿಬಿಟ್ಟಿದೆ. ಸಂಸತ್ತಿನಲ್ಲಿ ಸರಕಾರವನ್ನು ಉಳಿಸಿಕೊಳ್ಳಬೇಕಾದ ಸಂದರ್ಭ ಬಂದರೆ ಆಡಳಿತಾರೂಢ ಪಕ್ಷ ಯಾವುದೇ ಅನೈತಿಕ, ಅಕ್ರಮ ಕಾನೂನುಬಾಹಿರ ಕ್ರಮಕ್ಕಾದರೂ ಮುಂದಾದರೆ ತಪ್ಪಿಲ್ಲ ಎಂಬುದನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರು ಒಪ್ಪಿಕೊಳ್ಳುತ್ತಿದ್ದಾರೇನೋ ಎಂಬ ಸಂಶಯ ಬಲವಾಗುತ್ತಿದೆ. ಅದಕ್ಕಾಗಿ ಸಂಸದರ ಖರೀದಿಗೆ, ಪಕ್ಷಗಳ ಹರಾಜಿಗೆ ಆಡಳಿತಾರೂಢ ಪಕ್ಷ ಮುಂದಾದರೆ ಯಾರಿಗೆ ಏನೂ ಅನಿಸುವುದೇ ಇಲ್ಲ.

ಶಿಬು ಸೊರೇನ್‌ನಂಥ ಪರಮಭ್ರಷ್ಟ ಹಾಗೂ ಸಮಯಸಾಧಕ ರಾಜಕಾರಣಿ ಜಾರ್ಖಂಡ್‌ನಲ್ಲಿ ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗುತ್ತಾನೆ. ಅದೇ ಆಸಾಮಿ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ಕೊಡುತ್ತಾನೆ. ಈತ ಅದೆಂಥ ಫಟಿಂಗನಿರಬಹುದು? ಹೀಗೆ ಮಾಡಿದ್ದಕ್ಕೆ ಬಿಜೆಪಿಯವರು ಸೈದ್ಧಾಂತಿಕ ನೆಲೆಗೆ ಜೋತುಬಿದ್ದು ಬೆಂಬಲ ವಾಪಸ್ ಪಡೀತೀವಿ ಅಂತಾರೆ. ಹಾಗೆ ಮಾಡ್ಬೇಡಿ, ಬೇಕಾದ್ರೆ ನೀವೇ ಸಿಎಂ ಆಗಿ' ಅಂದ್ರೆ ಬೆಂಬಲ ವಾಪಸ್ ಪಡೆಯಲು ಹೋದ ಬಿಜೆಪಿ ಮಂದಿ ಗಕ್ಕನೆ ನಿಂತು ಹೌದಾ ಹಾಗಾದರೆ ಬೆಂಬಲ ವಾಪಸ್ ಪಡೆಯೊಲ್ಲ ಬಿಡಿ, ಸಿಎಂ ಪಟ್ಟ ನಮಗೆ ಕೊಟ್ಬಿಡಿ' ಅಂತಾರೆ. ಬಿಜೆಪಿಯದೂ ಎಂಥ ಸಮಯಸಾಧಕತನ ನೋಡಿ. ಯಾರನ್ನು ನಂಬೋದು. ಯಾರನ್ನು ಬಿಡೋದು, ಕಾರಣ ಎಲ್ಲರೂ ಮೂರನ್ನೂ ಬಿಟ್ಟವರು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X