ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯೆಂಬ ಕೋಟ್ಯಧಿಪತಿಗಳ ಕ್ಲಬ್!

By * ವಿಶ್ವೇಶ್ವರ ಭಟ್
|
Google Oneindia Kannada News

Parliament, house of crorepaties
ಏನೇನೂ ವ್ಯತ್ಯಾಸವಿಲ್ಲ, ಸ್ವಲ್ಪವೂ ಫರಕ್ ಇಲ್ಲ. ಕಳೆದ ವಿಧಾನಸಭೆ ಚುನಾವಣೆಗೂ, ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಗೂ ಏನೇನೂ ವ್ಯತ್ಯಾಸ ಕಾಣುತ್ತಿಲ್ಲ. ಅಷ್ಟಕ್ಕೂ ಏನಾದರೂ ವ್ಯತ್ಯಾಸವಿದ್ದರೆ ಈ ಸಲದ ಚುನಾವಣೆ ಮತ್ತಷ್ಟು ಹದಗೆಟ್ಟಿದೆ ಎಂಬುದಷ್ಟೆ. ಮುಂಬರುವ ಎರಡು-ಮೂರು ವಾರಗಳಲ್ಲಿ ಇದು ಇನ್ನೂ ಹದಗೆಡಬಾರದಷ್ಟು ಕೆಟ್ಟು ಕಿಲುಸಾರೆದ್ದು ಹೋದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಚುನಾವಣೆಯಲ್ಲಿ ಪರಿಸ್ಥಿತಿ ಏಕಾಏಕಿ ಸುಧಾರಿಸಿಬಿಡುತ್ತದೆಂಬ ಯಾವ ನಂಬಿಕೆಯೂ ಉಳಿದಿಲ್ಲ ಅಥವಾ ಹಠಾತ್ತನೆ ಅದು ಹುಟ್ಟುವ ಆಶಾಭಾವನೆಯಾಗಲಿ, ಸಾಧ್ಯತೆಗಳಾಗಲಿ ಕಾಣುತ್ತಿಲ್ಲ.

ಕಡಿಯುತ್ತೇನೆ, ಕೊಚ್ಚುತ್ತೇನೆ, ಕತ್ತರಿಸ್ತೇನೆ, ಸೀಳ್ತೇನೆ, ತಿಥಿ ಮಾಡ್ತೇನೆ, ದಮ್ಮಿದ್ದರೆ ಕಡೀರಿ ಎಂಬ ರೋಷಾವೇಷದ ಮಾತುಗಳನ್ನೆಲ್ಲ ಹೇಳಿಯಾಗಿದೆ. ಆದರೆ ಹಾಗೆ ಮಾಡುವುದು ಮಾತ್ರ ಬಾಕಿ ಉಳಿದಿದೆ. ಮನಸ್ಸು ಮಾಡಿದರೆ ನಮ್ಮ ರಾಜಕಾರಣಿಗಳಿಗೆ ಅದ್ಯಾವ ಮಹಾ? ಪ್ರಾಯಶಃ ಚುನಾವಣೆ ರಾಜಕೀಯ ಈ ಪರಿ ಹದಗೆಟ್ಟಿರಲಿಲ್ಲವೇನೋ. ಇನ್ನು ತತ್ತ್ವ, ಸಿದ್ಧಾಂತಗಳ ಬಗ್ಗೆ ಮಾತಾಡದಿರುವುದು, ಬರೆಯದಿರುವುದೇ ವಾಸಿ. ಯಾಕೆಂದರೆ ಹಾಗೆ ಮಾಡುವವರಿಗೆ ಒಂದು ತೊಟ್ಟು ಸಹಾನುಭೂತಿಯಾಗಲಿ, ಹನಿ ಅನುಕಂಪವಾಗಲಿ ಸಿಗದು.

ಈ ಚುನಾವಣೆಯಿದೆಯಲ್ಲ ಅದು ಯಾರ ನಿಯಂತ್ರಣ, ಹಿಡಿತಕ್ಕೆ ಸಿಗುವಂಥದ್ದಲ್ಲ. ನಿಯಂತ್ರಿಸಬೇಕಾದ ನಾಯಕರೇ ಕದನಕ್ಕಿಳಿದರೆ ತಡೆಯುವವರಾದರೂ ಯಾರು? ಅಲ್ಲದೇ ಎಲ್ಲರೂ ಇದೇ ಕೆಲಸಕ್ಕೆ ಇಳಿದರೆ ದೂಷಿಸುವುದಾದರೂ ಯಾರನ್ನು? ಚುನಾವಣೆ ರಾಜಕೀಯದ ರೀತಿ-ರಿವಾಜು, ನೀತಿ-ನಿಯತ್ತುಗಳೇ ಬದಲಾಗಿಬಿಟ್ಟಿವೆ. ಅದಕ್ಕೆ ತಕ್ಕಂತೆ ರಾಜಕಾರಣಿಗಳೂ ಬದಲಾಗಿಬಿಟ್ಟಿದ್ದಾರೆ. ಆದರೆ ಮತದಾರರಾದ ನಾವು ಬದಲಾಗದಿರುವುದರಿಂದ ರಾಜಕಾರಣಿಗಳನ್ನು ನಾವೇ ತಪ್ಪಾಗಿ ಭಾವಿಸುತ್ತಿದ್ದೇವಾ ಎಂಬ ಗುಮಾನಿ ನಮ್ಮ ಬಗ್ಗೆ ಮೂಡಲಾರಂಭಿಸಿದೆ. ಹೀಗಾಗಿ ನಾವು ಅವರನ್ನು ಪದೇಪದೆ ದೂಷಿಸುತ್ತೇವೆ. ರಾಜಕಾರಣಿಗಳ ಎಲ್ಲ ನಡೆ ನಮಗೆ ತಪ್ಪಾಗಿಯೇ ಕಾಣುತ್ತದೆ. ನಿನ್ನೆ ತನಕ ನಾನು ಕಾಂಗ್ರೆಸ್ ಅಭ್ಯರ್ಥಿ ಎಂದೇ ಹೇಳಿಕೊಂಡು ಬರುತ್ತಿದ್ದ ಎಲ್.ಆರ್. ಶಿವರಾಮೇಗೌಡ ಎಂಬ ಶುದ್ಧ ಅವಿವೇಕಿ ಬೆಳಗಾಗುತ್ತಲೇ ಬಟ್ಟೆ ಬದಲಿಸಿದಷ್ಟು ಸಲೀಸಾಗಿ, ಸರಿಯಾಗಿ ಬಟ್ಟೆಯನ್ನೂ ತೊಡದೇ ಟ್ರ್ಯಾಕ್‌ಸೂಟ್‌ನಲ್ಲಿ ಬಂದು ಬಿಜೆಪಿ ಸೇರುತ್ತಾನೆ. ನಮ್ಮ-ನಿಮ್ಮ ಕಣ್ಣಿಗೆ ಅದು ತಪ್ಪಾಗಿ ಕಾಣುತ್ತದೆ. ಇದೇನ್ರಿ ನಿನ್ನೆ ತನಕ ಕಾಂಗ್ರೆಸ್ ಅಂತಿದ್ದವ ಇಂದು ಬಿಜೆಪಿ ಸೇರಿ ಅದ್ಹೇಗೆ ನಾಮಪತ್ರ ಸಲ್ಲಿಸುತ್ತಾನ್ರಿ?" ಎಂದು ನಾವು ಪ್ರಶ್ನಿಸುತ್ತೇವೆ.

ಆದರೆ ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡರಿಗೆ ಅದು ತಪ್ಪಾಗಿ ಕಾಣುವುದಿಲ್ಲ. ಯಾಕೆಂದರೆ ಅವರು ನೀತಿ-ನಿಯಮ, ತತ್ತ್ವ-ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಇವುಗಳಲ್ಲಿ ನಂಬಿಕೆ ಇಟ್ಟುಕೊಂಡರೆ ತಾನೆ ಸಮಸ್ಯೆಯಾಗುವುದು? ಬಟ್ಟೆಯನ್ನೇ ತೊಡದವರ ಮುಂದೆ ಬೆತ್ತಲೆ ಅಂತ ಬೈದರೆ ಹೇಗೆ? ಷೇಮ್ ಷೇಮ್' ಎಂದು ಅಣಕಿಸಿದರೆ ಹೇಗೆ? ಬಿಜೆಪಿಯವರು ನೀತಿ, ನಿಯಮಗಳ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಶಿವರಾಮೇಗೌಡ, ಯೋಗೀಶ್ವರ್, ಚೆನ್ನಿಗಪ್ಪ ಮುಂತಾದ ಅನಿಷ್ಟ ರಾಜಕಾರಣಿಗಳನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ತತ್ತ್ವ ಸಿದ್ಧಾಂತ ಮರೆತಿದ್ದರಿಂದಲೇ ಅವರಿಗೆ ಪ್ರಯೋಜನವಾಗಿದೆ. ಹೀಗಾಗಿ ಶಿವರಾಮೇಗೌಡ, ಯೋಗೀಶ್ವರನಂಥವರು ಬಿಜೆಪಿಗೆ 'Big Catch' (ಭರ್ಜರಿ ಬೇಟೆ) ತರಹ ಕಾಣುತ್ತಾರೆ. ಇವರಿಗೆ winnability ಮುಖ್ಯವಾಗುತ್ತದೆಯೇ ಹೊರತು ಉಳಿದವೆಲ್ಲ ಗೌಣವಾಗುತ್ತವೆ. ಹೀಗಾಗಿ ನಮಗೆ ಅವರು, ಅವರಿಗೆ ನಾವು ತಪ್ಪಾಗಿ ಕಾಣುತ್ತೇವೆ. ಆದರೆ ನಾಯಕರು ಸರಿಯಾಗಿಯೇ ಯೋಚಿಸಿರುತ್ತಾರೆ ಅವರ ಮಟ್ಟಿಗೆ. ಯಾಕೆಂದರೆ ಅವರಿಗೆ ಶತಾಯ ಗತಾಯ ಗೆಲ್ಲಬೇಕು ಅಷ್ಟೆ. ಅಧಿಕಾರ ಹಿಡಿಯಬೇಕು ಇಷ್ಟೆ. ಅದಕ್ಕಾಗಿ ಯಾರನ್ನೇ ಆಗಲಿ, ಯಾವುದೇ ಆದರ್ಶಗಳನ್ನೇ ಆಗಲಿ ಬಲಿಕೊಡಲು ತಯಾರು.

ಇವೆಲ್ಲವುಗಳ ಪರಿಣಾಮದಿಂದ ಈಗಿನ ಚುನಾವಣೆ ಹೇಗಾಗಿದೆ ನೋಡಿ. ದುಡ್ಡು, ಅಧಿಕಾರವಿದ್ದವರು ಮಾತ್ರ ಚುನಾವಣೆಯಲ್ಲಿ ಸೆಣಸುವಂತಾಗಿದೆ. ನಿಮಗೆ ಎಲ್ಲ ಅರ್ಹತೆಗಳಿದ್ದೂ ಹಣವೊಂದು ಇಲ್ಲದಿದ್ದರೆ ಯಾವ ರಾಜಕೀಯ ಪಕ್ಷವೂ ಮೂಸಿ ನೋಡುವುದಿಲ್ಲ. ಹಣವೊಂದಿದ್ದರೆ ಬೇರೆ ಯಾವ ಅರ್ಹತೆಯೂ ಬೇಕಾಗಿಲ್ಲ. ಪಕ್ಷನಿಷ್ಠೆ, ತತ್ತ್ವನಿಷ್ಠೆ, ವಿದ್ಯಾರ್ಹತೆ, ಸಜ್ಜನಿಕೆ, ಸಂಭಾವಿತತನ, ಕಳಕಳಿ, ಸಾಮರ್ಥ್ಯ ಇವನ್ನೆಲ್ಲ ಯಾರೂ ಕೇಳುವುದಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವ ಅಭ್ಯರ್ಥಿಗೆ ನಾಯಕರು ಕೇಳುವ ಪ್ರಶ್ನೆಯೆಂದರೆ "ನಿನ್ನ ಬಳಿ ಹಣ ಇದೆಯಾ? ಎಷ್ಟು ಖರ್ಚು ಮಾಡುತ್ತೀಯಾ? ಪಕ್ಷಕ್ಕೆ ಕೊಟ್ಟು, ನಿನ್ನ ಚುನಾವಣೆ ವೆಚ್ಚಗಳನ್ನು ಭರಿಸಿಕೊಳ್ಳುವ ಶಕ್ತಿ ನಿನಗಿದೆಯಾ? ಹೂಂ ಅಂದರೆ ಬಲಗಾಲು ಇಟ್ಟು ಬಾ. ಇಲ್ಲ ಅಂತಾದರೆ ಮುಂದೆ ಮಾತಾಡಿ ಪ್ರಯೋಜನವಿಲ್ಲ." ರಾಜಕೀಯ ಪಕ್ಷಗಳ ಕದತಟ್ಟುವ ಅಭ್ಯರ್ಥಿಗಳಿಗೆ ಇದು ಚೆನ್ನಾಗಿ ಗೊತ್ತಾಗಿದೆ. ಅವರು ಬಾಗಿಲು ಬಡಿಯುವಾಗಲೇ ಹೇಳುತ್ತಾರೆ- ಸಾರ್, ನಾನು ನಿಮಗೆ, ಪಾರ್ಟಿ ಫಂಡ್‌ಗೆ ಇಂತಿಷ್ಟು ಅಂತ ಕೊಡ್ತೇನೆ. ನನ್ನ ಚುನಾವಣೆಗೆ ನೀವು ಖರ್ಚು ಮಾಡಬೇಕಿಲ್ಲ. ನಾನೇ ಎಲ್ಲ ವೆಚ್ಚಗಳನ್ನು ಭರಿಸಿಕೊಳ್ಳುತ್ತೇನೆ. ನನಗೆ ಟಿಕೆಟ್ ಕೊಟ್ಟರೆ ಸಾಕು."

ಒಂದೇ ಕ್ಷೇತ್ರಕ್ಕೆ, ಒಂದೇ ಪಕ್ಷದಿಂದ ಕನಿಷ್ಠ ಕನಿಷ್ಠ ನಾಲ್ಕು ಮಂದಿ ಉಮೇದುವಾರರಾದರೂ ಈ ರೀತಿ ಹೇಳಿದರೆ ನಾಯಕರಿಗಾದರೂ ಅದೆಂಥ ಧರ್ಮಸಂಕಟವಾಗಬೇಡ? ಕೊನೆಗೆ ತನ್ನ ಫಂಡಿಗೆ, ಪಾರ್ಟಿ ಫಂಡಿಗೆ ಹೆಚ್ಚು ಹಣ ಕೊಡುವ ಗೆಲ್ಲುವ ಅಭ್ಯರ್ಥಿಯೆನಿಸುವವನಿಗೆ (ಇಷ್ಟು ಕೊಟ್ಟವನ ಬಗ್ಗೆ ಅಷ್ಟೂ ಅನಿಸದಿದ್ದರೆ ಹೇಗೆ?) ಟಿಕೆಟ್ ಕೊಡಲಾಗುತ್ತದೆ. ಅನುಮಾನವೇ ಬೇಡ, ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಇದೇ ಮಾದರಿಯಲ್ಲಿ ಆಯ್ಕೆ ಮಾಡಿವೆ. ಈ ಬಾರಿ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಬಿಜೆಪಿಯಲ್ಲಿ ಕೊಡು-ಕೊಳ್ಳುವ ವ್ಯವಹಾರ ಬಹಳ ಹುಲುಸಾಗಿ ನಡೆದಿದೆ. ಪಾರ್ಟಿ ಫಂಡಿಗೆ, ನಾಯಕರ ಗಿಂಡಿಗೆ ಹಣ ಕೊಟ್ಟವರೇ ಅಭ್ಯರ್ಥಿಗಳಾಗಿದ್ದಾರೆ! ಈ ಮೊದಲು ಹೀಗಿರಲಿಲ್ಲ. ಪಕ್ಷದ ಕಾರ್ಯಕರ್ತರು, ನಾಯಕರು ಸಮಾಜದ ಗಣ್ಯರನ್ನು ಗುರುತಿಸಿ ಟಿಕೆಟ್ ಕೊಡುತ್ತಿದ್ದರು. ಅವರಿಗೆ ಪಕ್ಷವೇ ಫಂಡ್ ಮಾಡುತ್ತಿತ್ತು. ಪಕ್ಷದ ಕಚೇರಿಯಿಂದಲೇ ಬಾವುಟ, ಬಂಟಿಂಗ್, ಬ್ಯಾಡ್ಜ್, ಪೋಸ್ಟರ್ ರವಾನೆಯಾಗುತ್ತಿದ್ದವು. ನಾಯಕರ ಚುನಾವಣಾ ರ‌್ಯಾಲಿಯನ್ನು ಪಕ್ಷವೇ ಸಂಘಟಿಸುತ್ತಿತ್ತು. ಈಗ ಪಕ್ಷ ಇವನ್ನೆಲ್ಲ ತನ್ನ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಎಲ್ಲವನ್ನೂ ಅಭ್ಯರ್ಥಿಗಳ ಮೇಲೇ ಹೊರಿಸುತ್ತಾರೆ. ಅಭ್ಯರ್ಥಿಗಳೂ ಬೇಸರಿಸಿಕೊಳ್ಳುವುದಿಲ್ಲ. ಹೊರಲು ಮುಂದಾಗುತ್ತಾರೆ. ಅಷ್ಟಕ್ಕೂ ಅವರಿಗೆ ಅದ್ಯಾವ ಮರದ ತೊಪ್ಪಲು? ಎಲ್ಲ ಖರ್ಚು ನಿಭಾಯಿಸುವ, ಜತೆಯಲ್ಲಿ ತನ್ನ ಗಿಂಡಿಯನ್ನೂ ಭರ್ತಿಮಾಡುವ ಅಭ್ಯರ್ಥಿ ಎಲ್ಲಿದ್ದಾನೆಂದು ಎಲ್ಲ ಪಕ್ಷದ ನಾಯಕರು ಹೊಂಚುಹಾಕಿ ಹಿಡಿಯುತ್ತಾರೆ. ಅಂಥವರು 'ಗೆಲ್ಲುವ ಅಭ್ಯರ್ಥಿ'ಯಂತೆ ಕಂಗೊಳಿಸುತ್ತಾರೆ. ಅಂಥವರು ಯಾವುದೇ ಪಕ್ಷದಲ್ಲಿದ್ದರೂ ಸೈ, ಅವರನ್ನು ಹಿಡಿದುಕೊಂಡು ಟಿಕೆಟ್ ಕೊಡುತ್ತಾರೆ. ಹೀಗೆ ಟಿಕೆಟ್ ಪಡೆಯುವ ಅಭ್ಯರ್ಥಿ, ಪಾರ್ಟಿ ಫಂಡ್‌ಗೆ, ನಾಯಕರ ಗಿಂಡಿಗೆಂದು ಕನಿಷ್ಠ ಐದಾರು ಕೊಟಿ ರೂ.ಗಳನ್ನಾದರೂ ತೆತ್ತು, ಚುನಾವಣೆಯಲ್ಲಿ 15-20 ಕೋಟಿ ರೂ. ಖರ್ಚು ಮಾಡಲು ಸಿದ್ಧವಾಗಿಯೇ ಬಂದಿರುತ್ತಾನೆ. ಹೀಗಾಗಿ ಟಿಕೆಟ್ ಕೊಟ್ಟರೆ ಸಾಕು, ಉಳಿದುದೆಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ" ಎಂಬ ವೇದಘೋಷದೊಂದಿಗೇ ಆತ ಮಾತನ್ನು ಶುರುಮಾಡುತ್ತಾನೆ. ಇಂಥವರನ್ನೇ ಎಲ್ಲಿದ್ದರೂ ಹಿಡಿದು ತರುವಂತೆ ನಾಯಕರೂ ಹೇಳುತ್ತಾರೆ. ಆ ಕಾರಣದಿಂದ ಬಿಜೆಪಿಯವರು ತಮ್ಮ ಪಕ್ಷವನ್ನು ಬಿಟ್ಟು, ಕಾಂಗ್ರೆಸ್ ಜೆಡಿ(ಎಸ್) ನಲ್ಲಿದ್ದವರನ್ನು ಹಿಡಿದು ತರುತ್ತಾರೆ. ಯಾರಾದರೇನಂತೆ, ಹಣ ಖರ್ಚು ಮಾಡಬೇಕು ಹಾಗೂ ಗೆಲ್ಲಬೇಕು. ಪರಿಣಾಮವೇನಾಗಿದೆ ಗೊತ್ತಾ? ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ! ಒಬ್ಬೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಘೋಷಿಸಿಕೊಂಡ ಆಸ್ತಿ-ಪಾಸ್ತಿವಿವರಗಳನ್ನು ನೋಡಿದರೆ ದಿಗಿಲಾಗುತ್ತದೆ. ಗೊತ್ತಿರಲಿ, ಇವು ಅಭ್ಯರ್ಥಿಗಳೇ ಘೋಷಿಸಿಕೊಂಡವು! ಘೋಷಿಸಿಕೊಳ್ಳಲಾಗದ ಆಸ್ತಿ ಇದಕ್ಕಿಂತ ಕನಿಷ್ಠ ಐವತ್ತರಿಂದ ನೂರುಪಟ್ಟು ಇದೀತು.

ವಿಜಯವಾಡದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಲಗಡಪತಿ ರಾಜಗೋಪಾಲ ಎಂಬ ಉಮೇದುವಾರ ತನ್ನ ಆಸ್ತಿ 299 ಕೋಟಿ ರೂ. ಎಂದು ಹೇಳಿಕೊಂಡಿದ್ದಾನೆ. 2004ರಲ್ಲಿ ಈ ಮಹಾಶಯ ತನ್ನ ಆಸ್ತಿ 9.6 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದ! ಅಂದರೆ ಕಳೆದ ಐದು ವರ್ಷಗಳಲ್ಲಿ ಇವನ ಆಸ್ತಿ ಮೂವತ್ತುಪಟ್ಟು ಅಥವಾ ಶೇ. ಮೂರು ಸಾವಿರದಷ್ಟು ಜಾಸ್ತಿಯಾಗಿದೆ! ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ತಮ್ಮ ಆಸ್ತಿ 1.35 ಕೋಟಿ ರೂ. ಎಂದು ಘೋಷಿಸಿಕೊಂಡರೆ, ಕಡಪಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರ ಮಗ ವೈ.ಎಸ್. ಜಗನ್ ರೆಡ್ಡಿ ತಮ್ಮ ಆಸ್ತಿ 77ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.

542 ಲೋಕಸಭೆ ಕ್ಷೇತ್ರಗಳಿಗೆ ರ್ಸ್ಪಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಸ್ತಿ-ಪಾಸ್ತಿ ವಿವರ ಗಮನಿಸಿದರೆ ಎಲ್ಲರೂ ಕೋಟ್ಯಪತಿಗಳೇ. ಅದಕ್ಕಿಂತ ಕಡಿಮೆ ಆಸ್ತಿಯಿರುವ ಅಭ್ಯರ್ಥಿಗಳು ಇದ್ದಾರೆ ಅಂದ್ರೆ ಅವರ ಬಳಿ ಕೋಟಿಗಿಂತ ಕಡಿಮೆ ಹಣ ಇದೆ ಅಂತ ಅರ್ಥ ಅಲ್ಲ, ಅಷ್ಟನ್ನೂ ಘೋಷಿಸಿಕೊಳ್ಳಲು ಚೌಕಾಶಿ ಮಾಡಿದ್ದಾರೆ ಅಥವಾ ಧೈರ್ಯ ಸಾಕಾಗಿಲ್ಲ ಎಂದರ್ಥ. ಬಹುತೇಕ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರೇ ಹೆಚ್ಚು ಶ್ರೀಮಂತರು. ಪತಿ-ಪತ್ನಿಯರಿಬ್ಬರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿದರೆ ಕೋಟಿ ಮುಂದಿನ ಸೊನ್ನೆ ಎಣಿಸಲು ಹೆಣಗಬೇಕಾಗುತ್ತದೆ. ಅಂದರೆ ಈ ಐದುನೂರಾ ನಲವತ್ತೆರಡು ಗುಣಿಲೆ ಮೂರು ಅಂತಿಟ್ಟುಕೊಂಡರೆ, ಕಣದಲ್ಲಿರುವ 1626 ಮಂದಿಯೂಕೋಟ್ಯಧೀಶರೇ! ಅಂದರೆ ಆರಿಸಿ ಬರುವ 542 ಮಂದಿಯೂ ಕೋಟ್ಯಧೀಶರೇ! ಅಂದರೆ ಇನ್ನೆರಡು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಹದಿನೈದನೆ ಲೋಕಸಭೆಯ ಎಲ್ಲ ಸದಸ್ಯರೂ ಅವರೇ-ಕೋಟಿ ಕೋಟಿ ಅಪತಿಗಳು! ಅಂದರೆ ಈ ಒಂದು ವಿಷಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಂದೇ! ಅಂದರೆ ಮೊಟ್ಟಮೊದಲ ಬಾರಿಗೆ ಬಡಭಾರತದ ಸಂಸತ್ತು ಮಾತ್ರ ಶ್ರೀಮಂತರಿಂದಲೇ ಭರ್ತಿಯಾಗಲಿದೆ! ಮುಂದಿನ ಚುನಾವಣೆ ಹೊತ್ತಿಗೆ ಇದೇ ಸಂಸದರು ಕನಿಷ್ಠ ಹತ್ತುಪಟ್ಟು ಹೆಚ್ಚು ಶ್ರೀಮಂತರಾಗಿರುತ್ತಾರೆ. ಇವರು ಹೇಗೆ ಬಡವರ, ನಿರ್ಗತಿಕರ ಹಿತ ಕಾಯುತ್ತಾರೆ? ಅಂಥ ಒಂದು ನಿರೀಕ್ಷೆಯ ಸಣ್ಣ ಎಳೆಯನ್ನೂ ಇಟ್ಟುಕೊಳ್ಳಲಾಗದಂಥ ಸಂಕಟದ ಸ್ಥಿತಿಯಲ್ಲಿದ್ದೇವೆ.

ಇದರ ಪರಿಣಾಮವೇನಾಗುತ್ತದೆ ಗೊತ್ತಾ? ದೇಶದ ಆತ್ಮದಂತಿರುವ ಲೋಕಸಭೆಗೆ ವಿದ್ಯಾವಂತರು, ನಿಷ್ಠರು, ಪರಿಣತರು, ಯೋಗ್ಯರು ಕಾಲಿಡದಂತಾಗುತ್ತದೆ. ಸಂಸತ್ತೆಂಬುದು ಕೇವಲ ಶ್ರೀಮಂತರ ಒಂದು ಐಷಾರಾಮಿ ಕ್ಲಬ್ ಆಗುತ್ತದೆ. ಸದಸ್ಯರು ಕಾಲಕ್ಷೇಪ ಮಾಡಲು ಬರುತ್ತಾರೆ. ಲೋಕಸಭೆಯಲ್ಲಿ ಚರ್ಚೆ ಅರ್ಥ ಕಳೆದುಕೊಳ್ಳುತ್ತದೆ. ಸದಸ್ಯರು ತಮ್ಮ ಹಿತಾಸಕ್ತಿ ಕಾಪಾಡಲು ಸಂಸತ್ತನ್ನು ಒಂದು Coterie(ಒಳಗುಂಪು)ಯನ್ನಾಗಿ ಮಾಡಿ ಕೊಳ್ಳುತ್ತಾರೆ. ಬಡವರು, ಜನಸಾಮಾನ್ಯರ ಉದ್ಧಾರವೆಂಬ ಮಾತು ಅಣಕವಾಗುತ್ತದೆ. FICCI, FKCCI, CII ಎಂಬ ವಾಣಿಜ್ಯೋದ್ಯಮಿಗಳ ಸಂಘಗಳಂತೆ ಲೋಕಸಭೆಯೂ ಶ್ರೀಮಂತರ ಹಿತ ಕಾಯುವ, ಸಾಂವಿಧಾನಿಕ ಬದ್ಧತೆಯೊಂದಿಗೆ ಬಡವರನ್ನು ಬುಲ್‌ಡೋಜ್ ಮಾಡುವ ಸುವ್ಯವಸ್ಥಿತ ಶಾಸನಸಭೆಯಾಗಿ ಮಾರ್ಪಡುತ್ತದೆ. ಹಳೆ ಬ್ರಿಟಿಷ್ ಕ್ಲಬ್‌ಗಳಿಗೆ ಭಾರತೀಯರನ್ನು, ಭಾರತೀಯ ಉಡುಪು ಧರಿಸಿದವರನ್ನು ಸೇರಿಸಿಕೊಳ್ಳುತ್ತಿರಲಿಲ್ಲವಲ್ಲ, ಲೋಕಸಭೆಯೂ ಅಂಥ ಒಂದು elite ಕೂಟವಾಗುತ್ತದೆ. ಲೋಕಸಭೆ ಭಾರತ'ವನ್ನು ಪ್ರತಿನಿಧಿಸುವುದಿಲ್ಲ. ಅದು ಇಂಡಿಯಾ'ವನ್ನು ಪ್ರತಿನಿಸುತ್ತದೆ. ಭಾರತದಬಗ್ಗೆ ಯಾರೂ ಮಾತಾಡುವುದಿಲ್ಲ. ಮಾತಾಡಿದರೂ ಅದು ಗಂಟಲ ಮೇಲಿನದಾಗಿರುತ್ತದೆಯೇ ಹೊರತು ಹೃದಯಾಂತರಾಳದಿಂದ ಮೂಡಿದ್ದಾಗಿರುವುದಿಲ್ಲ. ಲೋಕಸಭೆಯೆಂಬುದು ಸದಸ್ಯರ ಶ್ರೀಮಂತಿಕೆಯನ್ನು ರಕ್ಷಿಸಿಕೊಳ್ಳಲು ಶಾಸನಬದ್ಧ ಮಾನ್ಯತೆ ನೀಡುವ ಸಂಸ್ಥೆಯಾಗುತ್ತದೆ. ಆಗ ಲೋಕಸಭೆಯನ್ನು ದೇಶದ ಆತ್ಮ' ಎಂದು ಕರೆಯುವುದಾದರೂ ಹೇಗೆ? ಆತ್ಮವೇ ಇಲ್ಲದ ದೇಶ ಹೇಗಿದ್ದೀತು? ಪರಮಾತ್ಮನೇ ಕಾಯಬೇಕು!

ರಾಜ್ಯಸಭೆಯಂತೂ ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಎಂಜಲು ಕಾಸು ಎಸೆದು ಬಂದ ಉದ್ಯಮಿಗಳು, ಹೆಂಡದ ದೊರೆಗಳು, ಪಡಪೋಸಿಗಳು, ತಲೆಹಿಡುಕರು, ಕಾಳಸಂತೆಕೋರರ ಲಕ್ಸುರಿ ಕ್ಲಬ್ ಆಗಿ ಬಹಳ ವರ್ಷಗಳೇ ಆದವು. ಇದರ ಪರಿಣಾಮ ಇಷ್ಟೇ ಅಲ್ಲ. ಇನ್ನು ಮುಂದೆ (ಈ ಚುನಾವಣೆ ಸೇರಿ) ಶ್ರೀಮಂತರು ಅಥವಾ ಶ್ರೀಮಂತರ ಮಕ್ಕಳು, ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಮಕ್ಕಳು, ಬಂಧುಗಳು, ಉದ್ಯಮಿಗಳು ಹಾಗೂ ಅವರ ಮಕ್ಕಳು ಮಾತ್ರ ಚುನಾವಣೆ ಕಣಕ್ಕಿಳಿಯುವಂತಾಗುತ್ತದೆ. ಉಳಿದವರ್‍ಯಾರಿಗೂ ಯಾವ ಪಕ್ಷವೂ ಟಿಕೆಟ್ ನೀಡುವುದಿಲ್ಲ. ಬಿಜೆಪಿ ಒಬ್ಬ ಖದೀಮನಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಒಬ್ಬ ಸುಬಗ ಸುಬ್ಬರಾಯನಿಗೆ ಟಿಕೆಟ್ ನೀಡುವುದು ಸಾಧ್ಯವೇ ಇಲ್ಲ. ಅದೂ ಸಹ ಒಬ್ಬ ಖದೀಮನನ್ನೇ ನಿಲ್ಲಿಸಬೇಕಾಗುತ್ತದೆ. ಯಾಕೆಂದರೆ ಖದೀಮನ ಜತೆಗೆ ಮತ್ತೊಬ್ಬ ಖಳ ಖದೀಮ ಹೋರಾಡಬಲ್ಲನೇ ಹೊರತು ಸಾಧು ಸಂಭಾವಿತನಲ್ಲ. ಬೇಕಿದ್ದರೆ ಚುನಾವಣೆ ಫಲಿತಾಂಶದ ನಂತರ ಗೌರಿಶಂಕರ ಸ್ವಾಮೀಜಿ ಹಾಗೂ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಕೇಳಿ ನೋಡಿ. ಈ ಎರಡೂ ಪಕ್ಷಗಳು ಖದೀಮರಿಗೆ ಮಣೆ ಹಾಕಿದರೆ ಜೆಡಿಎಸ್ ಸುಮ್ಮನಿದ್ದೀತೇ? ಇವರಿಬ್ಬರನ್ನೂ ಮೀರಿಸುವ ಖಳಕುಳನನ್ನು ನಿಲ್ಲಿಸುವುದು ಅನಿವಾರ್ಯವಾಗುತ್ತದೆ. ಈ ಮೂರೂ ಪಕ್ಷಗಳಿಂದ ಮೂವರು ನಿಂತ ಮೇಲೆ, ಒಂದೋ ಮಾನಮರ್‍ಯಾದೆಯಿದ್ದವರು ಕಣದಿಂದ ಹೊರಕ್ಕುಳಿಯಬೇಕು, ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಅಂದರೆ ಅವರು ಆರಿಸಿ ಬರುವ ಸಾಧ್ಯತೆಯಾದರೂ ಎಲ್ಲಿ? ಈ ಚುನಾವಣೆಯೇ ಅದಕ್ಕೆ ಸಾಕ್ಷಿ. ಇನ್ನು ಹತ್ತಿಪ್ಪತ್ತು ಕೋಟಿ ರೂ. ಖರ್ಚು ಮಾಡಿ ಆರಿಸಿ ಬಂದವನು ಸುಮ್ಮನಿರುತ್ತಾನಾ? ತೊಡಗಿಸಿದ ಬಂಡವಾಳಕ್ಕೆ ಕನಿಷ್ಠ ಹತ್ತರಷ್ಟನ್ನಾದರೂ ಲಾಭ ಮಾಡಿಕೊಳ್ಳದೇ ಬಿಡುತ್ತಾನಾ? ಇನ್ನು ಮುಂದೆ ದುಡ್ಡಿಲ್ಲದಿದ್ದರೂ ಯೋಗ್ಯರಾದವರಿಗೆ, ಸಮರ್ಥರಿಗೆ, ವಿಷಯಪರಿಣತರಿಗೆ, ನಿಜವಾದ ಮುತ್ಸದ್ದಿಗೆ ಚುನಾವಣೆಯೆಂಬ ಬಾಗಿಲು ಕ್ಲೋಸ್!

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇದೇ ಅಂಕಣದಲ್ಲಿ ಬರೆದಿದ್ದೆ. ಒಂದು ವೇಳೆ ಸಾಕ್ಷಾತ್ ಆ ಪುಣ್ಯಾತ್ಮ ಮಹಾತ್ಮ ಗಾಂಧಿಯೇನಾದರೂ ಪುನರವತರಿಸಿ ಚುನಾವಣೆಗೆ ಸ್ಪರ್ಧಿಸಬೇಕೆಂದಿರುವೆ. ದಯವಿಟ್ಟು ನನಗೆ ಟಿಕೆಟ್ ಕೊಡಿ" ಎಂದು ಪಕ್ಷಗಳ ಕಚೇರಿ ಅಥವಾ ನಾಯಕರ ಮನೆಬಾಗಿಲ ಮುಂದೆ ನಿಂತಿದ್ದರೆ, ಎಲ್ಲ ಪಕ್ಷಗಳ ನಾಯಕರೂ ಕತ್ತು ಹಿಡಿದು ಹೊರದಬ್ಬಿ ಟಿಕೆಟ್ ಬೇಕಂತೆ, ಟಿಕೆಟ್ಟು. ನಿನ್ನ ಮೂತಿನೋಡ್ಕೋ ಹೋಗಿ. ಇನ್ನೊಮ್ಮೆ ಈ ಕಡೆ ತಲೆಹಾಕಿದ್ರೆ ಹುಷಾರ್. ನಿನ್ನ ಆದರ್ಶ, ತತ್ತ್ವಗಳೆಲ್ಲ ನಿನ್ನ ಜತೆಗೇ ಹೋಗಿ ಅವೆಷ್ಟೋ ವರ್ಷಗಳಾದವು. ಈಗ ಅವನ್ನೆಲ್ಲ ಹೇಳಿ ಸೆಂಟಿಮೆಂಟ್ ಟಚ್ ಕೊಡಬೇಡ. ನಿನ್ನ ಆಚಾರ, ಉಪದೇಶಗಳೆಲ್ಲ ಬೀಜವಿಲ್ಲದ ನುಗ್ಗೇಕಾಯಿ ತಿಳ್ಕೊ" ಎಂದು ಗದರಿ ಹಂಗಿಸುತ್ತಿದ್ದರು.ಟಿವಿ ಚಾನೆಲ್‌ಗಳು ಗಾಂಧೀಜಿಗೆ ಟಿಕೆಟ್ ನಿರಾಕರಿಸಿದ್ದನ್ನುಒಂದು ಬ್ರೇಕಿಂಗ್ ನ್ಯೂಸ್ ಕೂಡ ಮಾಡದಷ್ಟು ನಿಕೃಷ್ಟವಾಗಿತೋರಿಸುತ್ತಿದ್ದವು. ನಾವು ಪತ್ರಿಕೆಯವರು ಒಂದನೆ ಪುಟದಲ್ಲಿಅಲ್ಲ, last but one ಪುಟದಲ್ಲಿ ಒಂದು ಪ್ಯಾರಾ ಗಾಂಧೀಜಿಗೆಟಿಕೆಟ್ ನಿರಾಕರಣೆ' ಎಂಬ ಹೆಡ್ಡಿಂಗ್ ಕೊಟ್ಟು ಪೇಜ್‌ಫಿಲ್ಲರ್ ತರಹ ಸುದ್ದಿ ಪ್ರಕಟಿಸುತ್ತಿದ್ದೆವು.

ಕಾರಣ, ಗಾಂಧೀಜಿ ಫೈಟ್ ಕೊಡಬಲ್ಲ ಕ್ಯಾಂಡಿಡೇಟ್ ಅಲ್ಲವೇ ಅಲ್ಲ. ಅವನೇನು ಗಣಿಧಣಿಯಾ? ರಿಯಲ್ ಎಸ್ಟೇಟ್ ಏಜೆಂಟಾ? ಉದ್ಯಮಿಯ ಮಗನಾ? ಅವನಪ್ಪ ರಾಜಕಾರಣಿಯಾ? ಸಿನಿಮಾ ನಟನಾ? ದಗಾ, ಮೋಸ, ವಂಚನೆ, ಅತ್ಯಾಚಾರ, ಕೊಲೆ... ಹೀಗೆ ಏನು ಮಾಡಿದ ಅನುಭವವಿದೆ? ಹೋಗಲಿ ಜಾತಿ ಬೆಂಬಲವಾದರೂ ಇದೆಯಾ? ಹೇಳಿ ಕೇಳಿ ಬನಿಯಾ. ಯೋಗ್ಯತೆ, ಆಚಾರ ಕಟ್ಟಿಕೊಂಡು ಏನು ಮಾಡಬೇಕು? ದುಡ್ಡೂ ಇಲ್ಲ, ಜಾತಿನೂ ಇಲ್ಲಾಂದ್ರೆ ಆರಿಸಿ ಬರೋದಾದರೂ ಹೇಗೆ? ಇಂಥವರನ್ನು ಕಟ್ಟಿಕೊಂಡು ಏಗೋದು ಹೇಗೆ? ಹೀಗೆಲ್ಲ ಯೋಚಿಸುತ್ತಿದ್ದ ರಾಜಕೀಯ ಪಕ್ಷಗಳ ಮುಖಂಡರು, ಇಂಪಾಸಿಬಲ್, ಟಿಕೆಟ್ ಸಾಧ್ಯಾನೇ ಇಲ್ಲ. ಚುನಾವಣೆಯಲ್ಲಿ ದುಡಿಸಿಕೊಳ್ಳೋಣ ಅಂದ್ರೆ ಯಾರು ಈಗ ಗಾಂಧಿಜಿ ಭಾಷಣ ಕೇಳ್ತಾರೆ? ಈಗ ಕೆಲಸ ಮಾಡಿದ್ದಕ್ಕೆ,ನಾಳೆ ನಿಗಮ-ಮಂಡಳಿಗಳೆಂಬ ಗಂಜಿಕೇಂದ್ರಕ್ಕೆ ಅಧ್ಯಕ್ಷನನ್ನಾಗಿ ಮಾಡು ಅಂತ ಕೇಳಿದರೆ? ಬೇಡವೇ ಬೇಡ, ಅವನನ್ನು ಹೊರಹಾಕ್ರೋ" ಎಂದು ಗದರಿ ಓಡಿಸುತ್ತಿದ್ದರು. ಒಂದು ಕಾಲವಿತ್ತು ಬಿಜೆಪಿ ಅಂದ್ರೆ ಒಳ್ಳೆಯ ಮಂದಿಗೆ ಟಿಕೆಟ್ ಕೊಡುತ್ತದೆಂಬ ನಂಬಿಕೆಯಿತ್ತು. ಅವರು ಆರಿಸಿ ಬರಲಿ, ಬಿಡಲಿ. ಯೋಗ್ಯರನ್ನು ಕರಕೊಂಡು ಬಂದು ಪಾರ್ಟಿಫಂಡಿನಿಂದ ದುಡ್ಡುಕೊಟ್ಟು ಚುನಾವಣೆ ಅಂಗಳಕ್ಕೆ ಕಳಿಸಿಕೊಡುತ್ತಿದ್ದರು. ಈಗ ಆ ಕಾಲವೆಲ್ಲ ಹೊರಟುಹೋಗಿದೆ. ಎಲ್ಲ ವಿಷಯಗಳಲ್ಲಿ ಬಿಜೆಪಿ ಉಳಿದ ಪಕ್ಷಗಳನ್ನೂ ಬೆಚ್ಚಿಬೀಳಿಸುವಷ್ಟು ಬೆಳೆದು ನಿಂತಿದೆ. ಇನ್ನು ಮುಂದೆ ಚುನಾವಣೆಯಲ್ಲಿ ನಾವು-ನೀವು ಕೇವಲ ಮತ ದಾರರು ಹಾಗೂ ಮತದಾರರೊಂದೇ. ನಿಮ್ಮಲ್ಲಿ ಚುನಾವಣೆಗೆ ಸೆಣಸುವಷ್ಟು ಹಣ ಇಲ್ಲ ಎಂದ ಮೇಲೆ ಆ ಆಸೆಯನ್ನು ಕೈಬಿಡಿ. ರಾಜಕೀಯ ಪಕ್ಷದ ಅಭ್ಯರ್ಥಿಯಿಂದ ಖರೀದಿಗೊಳಗಾಗದಂತೆ ಬಚಾವ್ ಆಗುವುದೂ ಕಷ್ಟ. ಪ್ರಜಾಪ್ರಭುತ್ವಕ್ಕೆ ಜಯವಾಗಲಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X