ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿಬಲ ಹೊಂದಿರುವ ರಾಶಿಗಳವರ ಗುಣಗಳಿವು

By ನಾಗನೂರಮಠ ಎಸ್.ಎಸ್.
|
Google Oneindia Kannada News

ಶನಿಬಲ ಬಂದರೆ ಏನೇನು ಬದಲಾವಣೆಯಾಗುತ್ತದೆ ಎಂದು ಈ ಮೊದಲು ನೀವು ಓದಿದ್ದೀರಿ. ಇನ್ನೊಂದು ಮಾತು ನೆನಪಿಟ್ಟುಕೊಳ್ಳಿ, ಶನಿದೇವನು ತನ್ನ ಕಾಡಾಟದಲ್ಲಿ ಬೇಡವೆಂದರೂ ಕಷ್ಟ ಕೊಡುತ್ತಾನೆ. ಅದೇ ರೀತಿ ಪ್ರಸನ್ನನಾಗಿರುವ ಶನಿದೇವ, ರಾಶಿಗೆ ಬಲ ಹೊಂದಿದ್ದರೆ ಏನೂ ಕೇಳದಿದ್ದರೂ ಎಲ್ಲವನ್ನೂ ಕೊಡುತ್ತಾನೆ. ಆದರೆ ಜಾತಕದ ಮೂಲಕ ಬಂದಿರುವ ಅವಕಾಶ ತಿಳಿದುಕೊಂಡು ಸದುಪಯೋಗ ಮಾಡಿಕೊಳ್ಳುವ ಬುದ್ಧಿವಂತಿಕೆ ತೋರಿಸಬೇಕು.

ಈಗ ವೃಷಭ, ಸಿಂಹ, ಧನಸ್ಸು ಹಾಗೂ ಕುಂಭ ರಾಶಿಯವರಿಗೆ ಶನಿದೇವನ ಬಲವಿದೆ. ಈ ರಾಶಿಗಳವರ ವಿಭಿನ್ನ ಗುಣ ತಿಳಿದುಕೊಳ್ಳೋಣ ಈ ಬಾರಿ.

ವೃಷಭ ರಾಶಿ : ಇವರಿಗೆ ರಾಶಿಯಿಂದ 6ನೇ ಸ್ಥಾನದಲ್ಲಿ ಶನಿದೇವನಿದ್ದಾನೆ. ಇವರು ಯಾವಾಗಲೂ ಮೈ ಬಗ್ಗಿಸಿ, ಬೆವರು ಸುರಿಸಿ ದುಡಿಯುವವರು. ಒಂದು ನಿಮಿಷ ಕೂಡ ಸುಮ್ಮನೇ ಕೂರಲ್ಲ. ಒಟ್ಟಿನಲ್ಲಿ ದಣಿವಿಲ್ಲದೆ ಯಾವುದಾದರೂ ಕೆಲಸ ಮಾಡುತ್ತಲೇ ಇರುವಂಥಹ ಗುಣ ಇವರದು. ಅಲ್ಲದೇ ಯಾವಾಗಲೂ ಏನಾದರೊಂದು ಹೊಸದನ್ನು ಹುಡುಕುತ್ತಲೇ ಬಿಜಿಯಾಗಿಯೇ ಇರುತ್ತಾರೆ. ಕಷ್ಟಕರ ಕೆಲಸಗಳನ್ನು ನಗುಮುಖದಿಂದ ಮಾಡಿ ಮುಗಿಸಿ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಏನಿದು, ಇಷ್ಟೊಂದು ಕೆಲಸ ಮಾಡಿದರೂ ಎಷ್ಟೊಂದು ಉತ್ಸಾಹವಿದೆಯಲ್ಲ ಇವರಿಗೆ ಎನ್ನುತ್ತಾರೆ ಉಳಿದವರು.

Shani favouring Taurus, Leo, Sagittarius, Aquarius

ಬೇರೆಯವರು ಏನಾದರೂ ಸಹಾಯ, ಸಹಕಾರ ಕೇಳಿದರೆ ಸಾಕು. ತಾವೇ ಮುಂದೆ ನಿಂತು ಎಲ್ಲ ರೀತಿಯಿಂದ ಸಹಾಯ ಮಾಡುವಷ್ಟು ದೊಡ್ಡ ಗುಣ ಇವರಲ್ಲಿರುತ್ತದೆ. ಇವರೇನಾದರು ಮಾತು ಕೊಟ್ಟರೆ ಮುಗೀತು. ಖಡಾಖಂಡಿತ ಮನಸ್ಸು ಇವರದು. ಎಲ್ಲರೊಂದಿಗೆ ಆಸಕ್ತಿ, ಸಂತಸದಿಂದ ಮಾತನಾಡುವುದು ಇವರಿಗೆ ಒಂಥರಾ ಹವ್ಯಾಸವಿದ್ದಂಗೆ. ಯಾರಿಗೂ ನೋವು ಆಗುವಂತೆ ಮಾತನಾಡುವುದಿಲ್ಲ. ಚಿಂತೆ ಎಂಬುದು ಇವರಿಗೆ ಗೊತ್ತೇ ಇಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದೆ ಏನಾದರೂ ಉಪಯೋಗವಿದೆಯಾ ಎಂದು ತಿಳಿದುಕೊಂಡೇ ಮುಖ್ಯವಾದ ಕೆಲಸ ಮಾಡುವ ಗುಣ ಇವರಲ್ಲಿರುತ್ತದೆ. ಇವರ ತಾಳ್ಮೆ, ಸಹನೆ ನೋಡಿ ಎಂಥಹವರಾದರೂ ಇವರನ್ನೇ ಮೆಚ್ಚುತ್ತಾರೆ. ತಮಗೆ ಎಂತಹುದೇ ಕಠಿಣ ಕಷ್ಟ ಬಂದರೂ ತಲೆಕೆಡಿಸಿಕೊಳ್ಳದೇ ನಗುತ್ತಲೇ ಇರುವಷ್ಟು ಧೈರ್ಯವಂತರು.

ಸಿಂಹ : ಈ ರಾಶಿಯಿಂದ ತೃತೀಯ ಸ್ಥಾನದಲ್ಲಿದ್ದಾನೆ ಮಹಾತ್ಮ. ಈಗ್ಗೆ ಎರಡೂವರೆ ವರ್ಷ ಹಿಂದೆ ಇವರು ಸಾಡೇಸಾತಿಯ ಬಿಗಿಮುಷ್ಟಿಯಿಂದ ಹೊರಬಂದಿದ್ದಾರೆ. ಯಾವಾಗಲೂ ಆತ್ಮವಿಶ್ವಾಸದಿಂದ ಗಾಂಭೀರ್ಯದ ಮಾತು ಮತ್ತು ನಡತೆ ಇವರಲ್ಲಿ ಇರೋದ್ರಿಂದ ಇವರನ್ನು ನೋಡಿದವರು ಗೌರವ ಕೊಡಲೇಬೇಕಾಗುತ್ತದೆ. ಬೇಕಾದಂಥಹ ದೊಡ್ಡವರಿರಲಿ, ಇವರು ಸುಮ್ಮನೇ ಅವರ ಮನಮೆಚ್ಚಿಸಲು ಸೆಲ್ಯೂಟ್ ಹೊಡೆಯುವುದಿಲ್ಲ. ತಪ್ಪು ಮಾಡಿದವರನ್ನು ಸುಲಭವಾಗಿ ಕ್ಷಮಿಸುವ ದೊಡ್ಡ ಗುಣ ಇವರಿಗೆ. ಎಂಥಹದೇ ಕಠಿಣ ಸಮಸ್ಯೆ ಬಂದರೂ ಅದರ ಬಗ್ಗೆ ಚರ್ಚಿಸದೇ, ಯಾರ ಮಾತು ಕೇಳದೆ ತಮ್ಮದೇ ನಿರ್ಧಾರ ಸರಿ ಎನ್ನುತ್ತಾರೆ.

ಈ ಗುಣ ಇವರಲ್ಲಿ ಹುಟ್ಟಿದಾಗಿನಿಂದಲೇ ಇರುತ್ತದೆ. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕು ಎನ್ನುವ ಛಲ ಕೂಡ ಹೆಚ್ಚು ಇವರಲ್ಲಿ. ಇವರು ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ದೈವಭಕ್ತಿ ಹಾಗೂ ನಡತೆ ಎಲ್ಲರೂ ಹೊಗಳುತ್ತಾರೆ. ವೈರಿಗಳು ಇವರ ಮುಂದೆ ಬರಲೂ ಹೆದರುತ್ತಾರೆ. ಇದರರ್ಥ ಮನಸ್ಸಿನಿಂದ ಮತ್ತು ವ್ಯಕ್ತಿಗತವಾಗಿ ಇವರು ಗಟ್ಟಿಮುಟ್ಟಾಗಿರುತ್ತಾರೆ. ಇವರಿಗೆ ಹಲವಾರು ಜನ ಸೇವಕರು ಬೇಕು. ಸ್ನೇಹಿತರನ್ನು, ಮನೆ ಮಂದಿಯನ್ನು ತಮ್ಮ ಸೇವಕರಂತೆ ಬಳಸಿಕೊಳ್ಳುತ್ತಾರೆ. ಬಡವ-ಶ್ರೀಮಂತ, ಮೇಲ್ಜಾತಿ-ಕೀಳ್ಜಾತಿ ಎಂದು ಮೇಲು-ಕೀಳು ಮಾಡದೇ ಎಲ್ಲರೊಂದಿಗೆ ಸಂತಸದಿಂದ ಇರುವ ವಿಶಾಲ ಗುಣ ಇವರಲ್ಲಿರುತ್ತದೆ.

ಧನಸ್ಸು : ಈ ರಾಶಿಗೆ ಹನ್ನೊಂದನೆಯವನಾಗಿದ್ದಾನೆ ಶನಿರಾಜನು. ಇವರು ಬಹಳ ಗಟ್ಟಿಮನಸ್ಸಿನವರು. ತಮ್ಮ ಮನಸ್ಸಿನಲ್ಲೇನು ಇರುತ್ತದೆಯೋ ಅದನ್ನೇ ಮಾತನಾಡುತ್ತಾರೆ. ಮನದಲ್ಲೊಂದು, ಹೊರಗೊಂದು ಎಂಬಂತಹ ಗುಣ ಇವರಲ್ಲಿರೋದಿಲ್ಲ. ಬೇರೆಯವರಿಗಿಂತ ವಿಭಿನ್ನ ರೀತಿಯ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಏನೇ ಮಾಡಿದರೂ ಹತ್ತು ಸಲ ಯೋಚನೆ ಮಾಡಿ ಮುಂದುವರೆಯುತ್ತಾರೆ. ಅಲ್ಲದೇ ಬೇರೊಬ್ಬರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ಸ್ವತಃ ತಾವೇ ಅರಿತುಕೊಳ್ಳಲು ಪ್ರಯತ್ನಿಸುತ್ತಾ ಒಂಥರಾ ಮತ್ತೊಬ್ಬರ ಮನಸ್ಸನೇ ಅರಿಯುವಷ್ಟು ಬುದ್ಧಿವಂತ ಕಿಲಾಡಿಗಳಿವರು. ಅಪ್ಪಿತಪ್ಪಿಯೂ ಅಡ್ಡದಾರಿ ಹಿಡಿಯುವವರಲ್ಲ. ಯಾವಾಗಲೂ ದೊಡ್ಡ ದೊಡ್ಡ ಆಲೋಚನೆಗಳು ಇವರ ಮನದಲ್ಲಿರುತ್ತವೆ. ಏನೇ ಮಾಡಿದರೂ ತಾವು ಮಾಡಿದ ನಿರ್ಧಾರ ಬದಲಿಸೋದಿಲ್ಲ. ಸ್ವಲ್ಪ ಹುಡುಗಾಟಿಕೆ ಬುದ್ದಿ ಹೆಚ್ಚಿದ್ದರೂ ತಾಳ್ಮೆಯಿಂದಲೇ ವರ್ತಿಸುತ್ತಿರುತ್ತಾರೆ.

Shani favouring Taurus, Leo, Sagittarius, Aquarius

ತಮಗೆ ಬೇಕಾದವರನ್ನು ಮತ್ತು ತಮ್ಮ ಮನಸ್ಸಿಗೆ ಹಿಡಿಸಿದವರೊಂದಿಗೆ ಮಾತ್ರ ಗೆಳೆತನ ಮಾಡುವುದು ಇವರಿಗೆ ಇಷ್ಟ. ತಮಗಿಷ್ಟವಿಲ್ಲದ ಅಂತಿಂಥ ವಸ್ತುಗಳನ್ನಾಗಲಿ, ಸ್ನೇಹಿತರನ್ನಾಗಲಿ ಹತ್ತಿರ ಕೂಡ ಸೇರಿಸಲ್ಲ. ಎಲ್ಲದರಲ್ಲೂ ಒಳ್ಳೆ ಕ್ವಾಲಿಟಿ ನೋಡುತ್ತಾರೆ. ಮಹತ್ವದ ಆಸೆ ಇಟ್ಟುಕೊಂಡಿರುತ್ತಾರೆ. ತಮ್ಮ ಆಸೆ ಈಡೇರಿಸಿಕೊಳ್ಳಲು ರಿಸ್ಕ್ ತೆಗೆದುಕೊಂಡು, ಯಾವ ರೀತಿ ಜೀವನ ಮಾಡಬೇಕೆಂದು ಬಯಸಿರುತ್ತಾರೋ ಹಾಗೇಯೇ ಜೀವಿಸುವಂಥಹ ಜೀವಿ ಇವರು. ಎಲ್ಲರೊಂದಿಗೆ ಬೆರೆಯಲು ಸ್ವಲ್ಪ ನಾಚಿಕೊಂಡರೂ ಹಣ ಖರ್ಚು ಮಾಡುವ ಸಂದರ್ಭ ಬಂದರೆ ಮುಖವನ್ನು ಗಡಿಗೆ ತರಹ ಮಾಡಿಕೊಳ್ಳುತ್ತಾರೆ.

ಕುಂಭ : ಈ ರಾಶಿಗೆ ನವಮ ಸ್ಥಾನದಲ್ಲಿದ್ದಾನೆ ಶನಿದೇವನು. ಇವರು ನೋಡಲು ಸಾಫ್ಟ್ ಆಗಿ ಮುದ್ದು ಮುದ್ದಾಗಿ ಕಾಣುತ್ತಿದ್ದರೂ ಇವರ ದೇಹ ಮತ್ತು ಮನಸ್ಸು ಬಹಳ ಸ್ಟ್ರಾಂಗ್ ಆಗಿರುತ್ತದೆ. ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲೂ ಉತ್ಸಾಹ ತುಂಬಿ ತುಳುಕುತ್ತಿರುತ್ತದೆ ಇವರಲ್ಲಿ. ತಮಗೆ ವಯಸ್ಸಾದರೂ ಕೂಡ ಹುರುಪಿನಿಂದಲೇ ಇರುವಷ್ಟು ಚುರುಕುತನ ಇವರಲ್ಲಿರುತ್ತದೆ. ಬೇರೆಯವರನ್ನು ಬೇಗನೇ ಅರ್ಥ ಮಾಡಿಕೊಂಡು ಅವರ ಜೊತೆ ಹೇಗಿರಬೇಕೋ ಹಾಗೆಯೇ ಇರುವಂತಹ ತಿಳಿವಳಿಕೆಯುಳ್ಳವರಿವರು.

ಮುಂದಾಲೋಚನೆ ಜಾಸ್ತಿಯೇ ಇರುವುದರಿಂದ ಇವರು ತಮ್ಮ ಮನಸ್ಸನ್ನು ಯಾವಾಗಲೂ ಜಾಗೃತವಾಗಿಯೇ ಇಟ್ಟುಕೊಂಡಿರುತ್ತಾರೆ. ಎಲ್ಲದರಲ್ಲೂ ಆಸಕ್ತಿ ಹೆಚ್ಚಿಸಿಕೊಂಡು ಏನೇ ಹೊಸದನ್ನು ನೋಡಿದರೂ ಅದರ ಬಗ್ಗೆ ತಿಳಿದುಕೊಳ್ಳಲು ತವಕಿಸುತ್ತಾರೆ. ಇವರ ಬಳಿ ಏನಾದರು ರಹಸ್ಯವಾದ ವಿಷಯವನ್ನು ಹೇಳಿದ್ದರೆ ಅದನ್ನು ಅಪ್ಪಿತಪ್ಪಿಯೂ ಬೇರೆಯವರಲ್ಲಿ ಹೇಳುವುದಿಲ್ಲ ಅಷ್ಟೊಂದು ಮನಸ್ಸು ಮತ್ತು ನಾಲಿಗೆ ಮೇಲೆ ಹತೋಟಿ ಇರುತ್ತದೆ ಇವರಿಗೆ.

ತಮ್ಮ ಕುಟುಂಬದವರ ವಿಷಯಕ್ಕೆ ಬಂದರೆ ಯಾರನ್ನೂ ಬಿಡಲ್ಲ. ತಕ್ಕ ಶಾಸ್ತಿ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಎಲ್ಲರನ್ನ ಬೇಗನೇ ನಂಬಿ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾರೆ. ತಾವೇನೆ ಮಾಡಿದರೂ ಅದು ಶಾಶ್ವತವಾಗಿರಬೇಕು ಎಂದು ಬಯಸುತ್ತಾರೆ. ಯಾವಾಗಲೂ ಕುಟುಂಬದವರ ಅಥವಾ ಸ್ನೇಹಿತರ ಕಾರ್ಯಕ್ರಮಗಳಲ್ಲಿ ಹುರುಪಿನಿಂದ ಭಾಗವಹಿಸಿ, ಸಂತಸ ಪಡುತ್ತಾರೆ. ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡು ಒಂದೊಂದಾಗಿ ಈಡೇರಿಸಿಕೊಳ್ಳುವಂತ ಗುಣ ಇವರದು. ಬೇರೆಯವರಿಗೆ ಸಹಾಯ ಮಾಡುವುದಾದರೆ ಏನಾದರೂ ಲಾಭ ಬೇಕು ಇವರಿಗೆ.

ಈಗಾಗಲೇ ಈ ರಾಶಿಗಳವರು ಶನಿದೇವನ ಬಲದಿಂದ ಯಾವುದೇ ತೊಂದರೆ, ತಾಪತ್ರಯವಿಲ್ಲದೆ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೂ ಈ ರಾಶಿಗಳವರಲ್ಲಿ ಕೆಲವೊಂದು ದುರ್ಗುಣಗಳು ಇರುತ್ತವೆ. ಆ ಗುಣಗಳು ಅವರಿಗೇನೆ ಗೊತ್ತಿದೆ. ಅಂತಹ ಗುಣ ಕಮ್ಮಿ ಮಾಡಿಕೊಂಡು ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು. ಶನಿದೇವನು ಬಲವಾಗಿರುವ ಈ ಸಮಯದಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ ಇವರಿಗೆ. ಈ ಸುಸಂದರ್ಭದಲ್ಲಿ ದುರ್ಗುಣಗಳು ತುಂಬಿ ತುಳುಕುತ್ತಿದ್ದರೆ ಶನಿದೇವನ ಬಲವನ್ನು, ಶನಿಕಾಟವನ್ನಾಗಿ ಪರಿವರ್ತಿಸಿಕೊಂಡು "ಸುಮ್ಮನಿರಲಾರದೇ ಹುಳು ಬಿಟ್ಟುಕೊಂಡರು" ಎನ್ನುವ ಹಾಗೆ ಆಗುತ್ತದೆ.

ಇವರೆಲ್ಲ ಮೈಯೆಲ್ಲಾ ಕಣ್ಣಾಗಿರಬೇಕು : ಕನ್ಯಾ, ತುಲಾ, ವೃಶ್ಚಿಕದವರಿಗೆ ಸಾಡೇಸಾತಿ, ಮೀನಕ್ಕೆ ಅಷ್ಟಮ, ಮೇಷಕ್ಕೆ ಸಪ್ತಮ, ಮಿಥುನಕ್ಕೆ ಪಂಚಮ, ಮಕರಕ್ಕೆ ದಶಮ, ಕರ್ಕ ರಾಶಿಗೆ ಅರ್ಧಾಷ್ಟಮ, ಶನಿ ಕಾಡಾಟವಿದೆ. ಮಹಾರಾಜನ ಕಾಡಾಟದಲ್ಲಿನ ಈ ರಾಶಿಗಳವರು ಮೈಯೆಲ್ಲಾ ಕಣ್ಣಾಗಿರಬೇಕು. ತಮ್ಮನ್ನು ತಾವೇ ಮಗುವಿನ ತರಹ ನೋಡಿಕೊಳ್ಳುತ್ತ ಕಾಳಜಿಯಾಗಿರಬೇಕು. ಎಲ್ಲಿಯೂ "ಎಡವದಂತೆ" ಹುಷಾರಾಗಿರಬೇಕು. ಎಲ್ಲಾ ಆದ ಮೇಲೆ "ಅಯ್ಯ ಅಂದರೂ ಬರಲ್ಲ, ಅಪ್ಪ ಅಂದರೂ ಬರಲ್ಲ" ಹೋಗಿದ್ದು. ಸದ್ಭಕ್ತಿಯು ಇದ್ದರೆ, ದೇವರು "ನೆನದವರ ಮನದಲ್ಲಿ, ಕರೆದವರ ಎದುರಲ್ಲಿ" ಎಂಬ ಮಾತನ್ನು ಮನದಲ್ಲಿಟ್ಟುಕೊಳ್ಳಬೇಕು.

ಶನಿಕಾಟದಲ್ಲಿರುವ ರಾಶಿಗಳವರ ಗುಣಗಳಿವು? ಎಂಬುದು ಮುಂದಿನ ಲೇಖನದಲ್ಲಿ.

ವಾಸ್ತು ಟಿಪ್ಸ್ : ಮನೆಗೆ ಬಂದವರು ಮಾತನಾಡುವಾಗ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿರಬೇಕು. ನೀವು ಮನೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡಿರಬೇಕು.

ಶನಿದೇವನ ಕೃಪೆಗೆ : ನಿಮಗೆ ಗೊತ್ತಿರುವ ಬಡವರ ಮಕ್ಕಳೊಬ್ಬರಿಗೆ ಹೊಸ ಬೂಟು ತೆಗೆದುಕೊಳ್ಳಲು ಅಥವಾ ವಿದ್ಯಾಭ್ಯಾಸದ ಅನುಕೂಲಕ್ಕಾಗುವಷ್ಟು ಹಣ ನೀಡಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 25 : Impact of Sade Sati on zodiac signs. Presently Lord Shani is favouring Taurus, Leo, Sagittarius and Aquarius zodiac signs. These people will get fortune even they do not ask for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X