ನವರಾತ್ರಿ ಮೊದಲ ದಿನ ಶೈಲ ಪುತ್ರಿಯ ಆರಾಧನೆ: ನೈವೇದ್ಯಕ್ಕೆ ಖಾರ ಪೊಂಗಲ್ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ
Navaratri recipes: ನವರಾತ್ರಿಯನ್ನು ದೇಶಾದ್ಯಂತ ವಿಶೇಷ, ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದ ನಾಡಹಬ್ಬವೂ ಆಗಿರುವ ನವರಾತ್ರಿಗೆ ರಾಜ್ಯದ ಎಲ್ಲ ರಾಜ್ಯಗಳ ದೇವಿ ದೇವಸ್ಥಾನದಲ್ಲೂ ಒಂಬತ್ತು ದಿನವೂ ವಿಶೇಷ ಪೂಜೆಗಳಿರುತ್ತವೆ. ಭಕ್ತಾದಿಗಳು ತಮ್ಮ ನೆಚ್ಚಿನ ದೇವಿ ದರ್ಶನ ಪಡೆದು ಪುನೀತರಾಗುತ್ತಾರೆ. ಅಷ್ಟೇ ಅಲ್ಲ ದೇವಿಗೆ ಬೆಲ್ಲದಿಂದ ಮಾಡಿದ ನೇವೇದ್ಯ ಅರ್ಪಿಸುವುದು ಹಾಗೂ ಚಿತ್ರಾನ್ನ, ಮೊಸರನ್ನ, ತೆಂಗಿನಕಾಯಿ ಅನ್ನ, ಹುಸುಲಿ ಮಾಡಿ ಅರ್ಪಿಸೋದು ಸರ್ವೇ ಸಾಮಾನ್ಯ. ನವರಾತ್ರಿಯ ಪ್ರತಿ ದಿನವೂ ಒಂದೊಂದು ವಿಶೇಷ ದೇವಿಯನ್ನು ಆರಾಧಿಸುವ ಪದ್ಧತಿ ಇದ್ದು, ಕರ್ನಾಟಕದಲ್ಲಿ ಮನೆ ಮನೆಯಲ್ಲಿಯೂ ಗೊಂಬೆ ಕೂರಿಸುವುದು ಮತ್ತೊಂದು ವಿಶೇಷ. ಪೌರಾಣಿಕ, ಐತಿಹಾಸಿಕ ಘಟನೆಗಳನ್ನು ಸಾರಿ ಹೇಳುವ ಗೊಂಬೆಗಳನ್ನು ಅಲಂಕರಿಸಿ, ಮುತ್ತೈದೆಯರನ್ನು ಕರೆದು ಅರಿಶಿಣ-ಕುಂಕುಮ ನೀಡಿ, ದೇವಿಯನ್ನು ಪೂಜಿಸುವುದು ಈ ಹಬ್ಬದ ಸಂಭ್ರಮ.

ನವರಾತ್ರಿ ಆಚರಣೆ ಭಾರತದ ಒಂದೆರಡು ರಾಜ್ಯಗಳಿಗೆ ಮಾತ್ರ ಸೀಮಿತಲ್ಲ ಅನ್ನೋದು ಮತ್ತೊಂದು ವಿಶೇಷ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವ-ಪಶ್ಚಿಮಗಳೆಲ್ಲೆಡೆ ದೇವಿಯನ್ನು ಅಷ್ಟೇ ಶ್ರದ್ಧಾ ಭಕ್ತಿಯಿಂದ ಜನರು ಆರಾಧಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ದೇವಿಯನ್ನು ಕಾಳಿ ರೂಪದಲ್ಲಿ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ನವರಾತ್ರಿಯೇ ಹೊಸ ಆರಂಭ. ಆಸ್ತಿ ಖರೀದಿಸೋದು, ವ್ಯಾಪಾರ ಒಪ್ಪಂದಗಳಿಗೆ ಶುಭ ಮಹೂರ್ತವೆಂದು ನಂಬಲಾಗುತ್ತದೆ.
ಮೊದಲ ದಿನ ಶೈಲಪುತ್ತರಿಯ ಪೂಜೆ
ನವರಾತ್ರಿ (avaratri) ಮೊದಲ ದಿನ ಶೈಲಪುತ್ರಿಯ ಪೂಜೆ. ಶ್ವೇತ ವರ್ಣ ಈ ದೇವಿಗೆ ಅಚ್ಚುಮೆಚ್ಚು. ಮಲ್ಲಿಗೆ ಹಾಗೂ ದಾಸವಾಳ ಇಷ್ಟ ಪುಷ್ಪಗಳು. ನವರಾತ್ರಿಯ ಸಂಕಲ್ಪ ಮಾಡಿ, ಮಾ ದುರ್ಗೆ ಪೂಜೆಗೆ ಶೈಲಿಪುತ್ರಿಯನ್ನು ಆರಾಧಿಸುವ ಮೂಲಕ ನಾಂದಿ ಹಾಡಲಾಗುತ್ತದೆ. ಶೈಲಿ ಅಂದ್ರೆ ಪರ್ವತ. ಹಿಮಾಲಯದ ರಾಜ ಹಿಮವತ್‌ನ ಮಗಳು ಶೈಲಪುತ್ರಿ. ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದು, ಎಡಗೈಯಲ್ಲಿ ಕಮಲವನ್ನು ಹಿಡಿದು ನಂದಿ ಮೇಲೆ ಸಾಗುವುದು ಇವಳ ವಿಶೇಷ. ನಂದಿ ಭೂ ಶಕ್ತಿಯನ್ನೂ, ಕಮಲ ಪರಿಶುದ್ಧತೆಯನ್ನೂ ಹಾಗೂ ತ್ರಿಶೂಲ ದೈವಿ ಶಕ್ತಿಯನ್ನು ಪ್ರತಿನಿಧಿಸುತ್ತದೆ.
ಸ್ಥರತೆ, ಧೈರ್ಯ ಹಾಗೂ ಉನ್ನತ ಮಟ್ಟದ ಅಧ್ಯಾತ್ಮ ಅರಿವನ್ನು ಜಾಗೃತಗೊಳಿಸುವ ಮೂಲಾಧಾರವನ್ನು ಆಳುವವಳು ಈ ಶೈಲಪುತ್ರಿ. ಚಂದ್ರನನ್ನು (moon) ಆಳುವ ಈ ದೇವಿ ಮನಸ್ಸು ಹಾಗೂ ಭಾವನೆಗಳನ್ನು ನಿಯಂತ್ರಿಸುವವಳು. ಭಾವನೆಗಳ ತೊಳಲಾಟ, ಒ್ತಡ ಹಾಗೂ ಗ್ರಹಗಳ ಧನಾತ್ಮಕ ಶಕ್ತಿ ತೊಲಗಿಸಲು ಈ ದೇವಿಯನ್ನು ಆರಾಧಿಸಬೇಕು. ಆಂತರಿಕ ನೆಮ್ಮದಿ, ದೈವಿ ಭಕ್ತಿಯನ್ನು ಸಾಧಿಸಲು ಈ ದೇವತೆಯನ್ನು ಆರಾಧಿಸುತ್ತಾರೆ. ಈ ದೇವಿಗೆ ಖಾರ ಹುಗ್ಗಿ ಹಾಗೂ ತುಪ್ಪದಿಂದ ಮಾಡಿದ ಸಿಹಿ ಇಷ್ಟ. ಈ ಎರಡೂ ಖಾದ್ಯವನ್ನು ಮಾಡೋದು ಹೇಗೆ?
Navaratri recipes: ಖಾರ ಹುಗ್ಗಿಗೆ ಬೇಕಾಗುವ ಪದಾರ್ಥಗಳು:
• ಅಕ್ಕಿ: 1 ಕಪ್
• ಹೆಸರುಬೇಳೆ: 1/2 ಕಪ್ (ಅಥವಾ ಸಮಪ್ರಮಾಣದಲ್ಲಿದ್ರೂ ನಡೆಯುತ್ತೆ)
• ತುಪ್ಪ: 3-4 ದೊಡ್ಡ ಚಮಚ
• ಜೀರಿಗೆ: 1 ಚಮಚ
• ಕಾಳುಮೆಣಸು (ಬಿಳಿಯದ್ದು): 1 ಚಮಚ (ಸ್ವಲ್ಪ ಜಜ್ಜಿದ್ದು)
• ಹಸಿಮೆಣಸಿನಕಾಯಿ: 2-3 (ಸೀಳಿದ್ದು)
• ಶುಂಠಿ: 1 ಇಂಚು (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದದ್ದು)
• ಕರಿಬೇವು: ಸ್ವಲ್ಪ
• ಗೇರುಬೀಜ (ಗೋಡಂಬಿ): 8-10
• ಇಂಗು: ಒಂದು ಚಿಟಿಕೆ
• ಅರಿಶಿನ ಪುಡಿ: 1/4 ಚಮಚ
• ಒಣಕೊಬ್ಬರಿ ತುರಿ (ಬೇಕಾದಲ್ಲಿ): 2 ಚಮಚ
• ಉಪ್ಪು: ರುಚಿಗೆ ತಕ್ಕಷ್ಟು
• ನೀರು: 5 ರಿಂದ 6 ಕಪ್ (ತಣಿದ ಮೇಲೆ ಹುಗ್ಗಿ ತುಂಬಾ ಗಟ್ಟಿಯಾಗುತ್ತದೆ)
ಮಾಡುವ ವಿಧಾನ:
ಮೊದಲು ಬೇಳೆಯನ್ನು ತುಸು ಹುರಿದುಕೊಳ್ಳಬೇಕು. ಮೊದಲೊಂದು ಬಾಣಲೆಯಲ್ಲಿ ಹೆಸರು ಬೇಳೆಯನ್ನು ಹಾಕಿ, ಅದು ಲಘುವಾಗಿ ಬಣ್ಣ ಬದಲಾಗಿ ಒಳ್ಳೆ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ಹೆಚ್ಚು ಹುರಿದರೆ ರುಚಿ ಕೆಡುತ್ತೆ ಎಂಬುವುದು ನೆನಪಲ್ಲಿರಲಿ. ನಂತರ ಅಕ್ಕಿ ಮತ್ತು ಹುರಿದ ಹೆಸರು ಬೇಳೆಯನ್ನು ಒಟ್ಟಿಗೆ ಸೇರಿಸಿ 2-3 ಬಾರಿ ಚೆನ್ನಾಗಿ ತೊಳೆದು ನೀರನ್ನು ಸೋಸಿ ಇಟ್ಟುಕೊಳ್ಳಿ.
ಆಮೇಲೆ ಕುಕ್ಕರ್‌ಗೆ ತೊಳೆದ ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ. ಅದಕ್ಕೆ 5 ರಿಂದ 6 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಮತ್ತು ಅರ್ಧ ಚಮಚ ತುಪ್ಪ ಹಾಕಿ, ಕುಕ್ಕರ್ ಮುಚ್ಚಳ ಮುಚ್ಚಿ 3 ರಿಂದ 4 ವಿಷಲ್ ಕೂಗಿಸಿ. ಈ ಮಿಶ್ರಣವು ಚೆನ್ನಾಗಿ ಮೃದುವಾಗಿ (ಮೆತ್ತಗೆ) ಬೇಯುವಂತೆ ನೋಡಿಕೊಳ್ಳಿ.
ಕುಕ್ಕರ್ ಮುಚ್ಚಲು ತೆಗೆಯಲು ಬರೋ ಮುನ್ನ ಬಾಣಲೆಯೊಂದರಲ್ಲಿ 3 ಚಮಚ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಗೇರುಬೀಜ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಜೀರಿಗೆ, ಜಜ್ಜಿದ ಕಾಳು ಮೆಣಸು, ಹಸಿಮೆಣಸಿನಕಾಯಿ, ಶುಂಠಿ, ಇಂಗು ಮತ್ತು ಕರಿಬೇವು ಹಾಕಿ ಲಘುವಾಗಿ ಬಾಡಿಸಿ.
ಕಡಯದಾಗಿ ಕುಕ್ಕರ್ ಹಬೆ ಆರಿದ ನಂತರ ಮುಚ್ಚಳ ತೆಗೆದು, ಬೆಂದ ಅನ್ನ ಮತ್ತು ಬೇಳೆಯನ್ನು ಸೌಟಿನ ಹಿಂಭಾಗದಿಂದ ಸ್ವಲ್ಪ ಮ್ಯಾಶ್ ಮಾಡಿ. ಈಗ ಸಿದ್ಧಪಡಿಸಿದ ಬಿಸಿ ಒಗ್ಗರಣೆ ಮತ್ತು ಕೊಬ್ಬರಿ ತುರಿಯನ್ನು ಕುಕ್ಕರ್‌ನಲ್ಲಿರುವ ಹುಗ್ಗಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಿಸಿಬಿಸಿಯಾದ, ಘಮಘಮಿಸುವ ಖಾರ ಹುಗ್ಗಿ ನೈವೇದ್ಯಕ್ಕೆ ಸಿದ್ಧ. ಇದನ್ನು ಕಾಯಿ ಚಟ್ನಿ ಅಥವಾ ಸಾಂಪ್ರದಾಯಿಕ ಹುಣಸೆಹಣ್ಣಿನ ಗೊಜ್ಜಿನೊಂದಿಗೆ ಸವಿಯಲು ಅತ್ಯಂತ ರುಚಿಕರವಾಗಿರುತ್ತೆ.


Click it and Unblock the Notifications
