December Horoscope: ವರ್ಷದ ಕೊನೆ ತಿಂಗಳು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!
ಕಾರ್ತಿಕ ಅಮಾವಾಸ್ಯೆಯಿಂದ ಪುಷ್ಯ ಶುಕ್ಲ ಪಾಡ್ಯದವರೆಗೆ.
ಮಾಸ ವಿಶೇಷ
ಡಿಸೆಂಬರ್ 16: ಸೂರ್ಯ ಧನಸ್ಸುರಾಶಿಗೆ ಪ್ರವೇಶ. ಧರ್ನುಮಾಸಾರಂಭ
ಡಿಸೆಂಬರ್ 25: ಕ್ರಿಸ್ ಮಸ್

ಮೇಷ ರಾಶಿಯ ಮಾಸ ಭವಿಷ್ಯ
ಈ ತಿಂಗಳ ಮೊದಲಲ್ಲಿ ಎರಡನೇ ಮನೆಯ ಅಧಿಪತಿ ಶುಕ್ರ ಭಾಗ್ಯ ಸ್ಥಾನದಲ್ಲಿದ್ದು ನಂತರ ಲಾಭಸ್ಥಾನಕ್ಕೆ ಪ್ರವೇಶವಾಗುತ್ತಾನೆ. ಶುಕ್ರ ಭಾಗ್ಯಸ್ಥಾನದಲ್ಲಿ ಹಾಗೂ ಲಾಭಸ್ಥಾನದಲ್ಲೂ ನಿಮಗೆ ಶುಭಕರ. ಈ ಮಾಸದ ಮಧ್ಯದಿಂದ ಶುಕ್ರ ಹತ್ತು-ಹನ್ನೊಂದನೇ ಮನೆಯ ಅಧಿಪತಿ ಶನಿಯ ಜೊತೆ ಲಾಭಸ್ಥಾನದಲ್ಲಿ ಇರುತ್ತಾರೆ. ಶುಕ್ರ ಶನಿ ಇಬ್ಬರೂ ಯುತಿಯೋಗದಲ್ಲಿ ಲಾಭಸ್ಥಾನದಲ್ಲಿ ಇರುವುದು ಬಹಳ ಶುಭಫಲಗಳನ್ನು ಕೊಡುತ್ತದೆ. ಹೊಸ ಉದ್ಯೋಗ ಸಿಗುವ ಸಮಯ. ಯಾವುದೇ ಕೆಲಸದಲ್ಲಿ ಯಶಸ್ಸು ಜಯ ಲಭಿಸುತ್ತದೆ.
ಆರನೇ ಮನೆಯಲ್ಲಿ ಕೇತು ಇರುವುದು ಕೂಡ ಹಣದ ಹರಿವನ್ನು ಉತ್ತಮಪಡಿಸುತ್ತದೆ. ಕೇತು ಮೂರು ಆರು ಹನ್ನೊಂದನೇ ಮನೆಯಲ್ಲಿ ಲಾಭಕರ. ಶತ್ರುಗಳನ್ನು ದೂರ ಮಾಡುತ್ತಾನೆ. 16ರ ನಂತರ ಸೂರ್ಯ ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಪ್ರವೇಶವಾಗುತ್ತಾನೆ. ಈ ಮಾಸ ನಿಮಗೆ ಅಧಿಕ ಶುಭಫಲಗಳನ್ನು ನೀಡುವ ಮಾಸವಾಗಿದೆ. ಎರಡನೇ ಮನೆಯಲ್ಲಿ ಗುರು, ಆರರಲ್ಲಿ ಕೇತು, ಲಾಭದಲ್ಲಿ ಶುಕ್ರ-ಶನಿ, ಭಾಗ್ಯದಲ್ಲಿ ಸೂರ್ಯ ಈ ಎಲ್ಲಗ್ರಹಗಳು ನಿಮಗೆ ಯಶಸ್ಸನ್ನೂ ಲಾಭವನ್ನೂ ಒಳ್ಳೆಯ ಬದಲಾವಣೆಯನ್ನೂ ತರುತ್ತದೆ. ಸುಬ್ರಹ್ಮಣ್ಯನ ಆರಾಧನೆ ಮಾಡಿ.

ವೃಷಭ ರಾಶಿಯ ಮಾಸ ಭವಿಷ್ಯ
ಈ ತಿಂಗಳ ಪ್ರಾರಂಭದಲ್ಲಿ ನಿಮ್ಮ ರಾಶಿಯ ಅಧಿಪತಿ ಶುಕ್ರ ಭಾಗ್ಯಸ್ಥಾನದಲ್ಲಿ ಇದ್ದು ಶುಭಫಲಗಳನ್ನು ನೀಡುತ್ತಾನೆ. ಈ ಮಾಸದ ಮಧ್ಯಭಾಗದಲ್ಲಿ ಸೂರ್ಯ ಎಂಟನೇ ಮನೆಗೆ ಪ್ರವೇಶವಾಗುತ್ತಾನೆ. ಶುಕ್ರ ಹತ್ತನೇ ಮನೆಗೆ ಪ್ರವೇಶವಾಗಿ ಶನಿಯೊಡನೆ ಯುತಿಯೋಗದಲ್ಲಿ ಇರುತ್ತಾನೆ. ಮೂರರಲ್ಲಿ ಕುಜ, ಹನ್ನೊಂದರಲ್ಲಿ ರಾಹು ಏಳನೇ ಮನೆಯಲ್ಲಿ ಬುಧ ಒಳ್ಳೆಯ ಆಯಕಟ್ಟಿನ ಜಾಗಗಳಲ್ಲಿ ಇದ್ದು ನಿಮಗೆ ರಕ್ಷಣೆ, ಬಲ ಹಣ ಎಲ್ಲವನ್ನೂ ಕೊಡುತ್ತಾರೆ.
ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ಗಂಡುಮಕ್ಕಳಿರುವವರಿಗೆ ಮಕ್ಕಳ ಕುರಿತು ಕೊಂಚ ಚಿಂತೆ ಇರುತ್ತದೆ. ಲಾಭಸ್ಥಾನದ ರಾಹು ನಿಮಗೆ ಬಹಳ ದೊಡ್ಡ ಶಕ್ತಿ. ಮುನ್ನುಗ್ಗುವ ಛಲ ಸಾಹಸಗಳು, ಅನೀರೀಕ್ಷಿತ ಧನಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ ನಿವಾರಣೆ ಹೀಗೆ ಬಹಳಷ್ಟು ಒಳಿತನ್ನು ರಾಹುವಿನಿಂದ ನಿರೀಕ್ಷಿಸಬಹುದು. ಉದ್ಯೋಗದಲ್ಲಿ ಒತ್ತಡಗಳು ಇರುತ್ತದೆ. ಆದರೆ ನೀವು ಶ್ರಮಜೀವಿ ಈ ಒತ್ತಡಗಳನ್ನು ನಿವಾರಿಸಿಕೊಳ್ಳಬಲ್ಲಿರಿ. ದೇವಿ ಆರಾಧನೆ ಮಾಡಿ.

ಮಿಥುನ ರಾಶಿಯ ಮಾಸ ಭವಿಷ್ಯ
ಈ ಮಾಸದ ಮದ್ಯದಿಂದ ಒಂಬತ್ತನೇ ಮನೆಯಲ್ಲಿ ಶುಕ್ರ ಶನಿಯ ಜೊತೆ ಇರುತ್ತಾನೆ. ಶುಕ್ರ ಭಾಗ್ಯಸ್ಥಾದಲ್ಲಿ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಆದರೂ ಈಗ ನಿಮಗೆ ಗುರುಬಲ ಇಲ್ಲ. ಬೇರೆ ಗ್ರಹಗಳೂ ವ್ಯತಿರಿಕ್ತ ಸ್ಥಾನದಲ್ಲಿ ಇವೆ. ಯಾವುದೂ ಸಹಕಾರಿ ಆಗಿಲ್ಲ. ಒತ್ತಡಗಳು, ಅನಾರೋಗ್ಯ ಹಣಕಾಸು ಚಿಂತೆ ಇರುತ್ತದೆ. ನೀವು ಬಯಸಿದಷ್ಟು ಧನಲಾಭ ಸಿಗುತ್ತಿಲ್ಲ. ನಿಮ್ಮ ಶ್ರಮ ಹೆಚ್ಚು ಹಾಗೂ ಫಲ ಕಡಿಮೆ ಆಗಿದೆ. ತಾಯಿಗೆ ಒತ್ತಡಗಳು ಇರುತ್ತದೆ. ಈ ಮಾಸದ ಮಧ್ಯಭಾಗದ ವರೆಗೂ ಸೂರ್ಯ ಆರನೇ ಮನೆಯಲ್ಲಿ ಇದ್ದು ಶುಭಫಲಗಳನ್ನು ಕೊಡುತ್ತಾನೆ.
ಸೂರ್ಯ ಬುಧರ ಬುಧಾದಿತ್ಯ ಯೋಗ ನಿಮಗೆ ಕೊಂಚ ಒಳಿತನ್ನು ಮಾಡುತ್ತದೆ. ನಿಮ್ಮ ಮಾತಿನಿಂದ ಲಾಭವಾಗುತ್ತದೆ. ಮಾನಸಿಕವಾಗಿ ಬಹಳ ಅಶಾಂತಿ ಅನುಭವಿಸುತ್ತಿದ್ದೀರಿ. ಹೀಗೆ ಕೆಲವು ದಿನಗಳು ಇರುತ್ತವೆ. ಕೇತು ಮೂರನೇ ಮನೆಗೆ ಪ್ರವೇಶವಾದಾಗ ಹಣದ ಹರಿವು ಉತ್ತಮವಾಗುತ್ತದೆ. ಯಾವುದೇ ನಿರ್ಧಾರ ಆತುರವಾಗಿ ತೆಗೆದುಕೊಳ್ಳಬೇಡಿ. ಹಣ ಖರ್ಚು ಮಾಡುವಾಗ ಹಿಡಿತ ಇರಲಿ. ಮಹಾವಿಷ್ಣುವಿನ ಆರಾಧನೆ ಮಾಡಿ.

ಕಟಕ ರಾಶಿಯ ಮಾಸ ಭವಿಷ್ಯ
ಹನ್ನೊಂದನೇ ಮನೆಯಲ್ಲಿ ಗುರು ಇದ್ದರೂ ವಕ್ರಿಯಾಗಿ ಇರುವುದರಿಂದ ಲಾಭ ಕಡಿಮೆ. ಬರಬೇಕಾದ ಬಾಕಿಗಳು ನಿಧಾನವಾಗುತ್ತದೆ. ಐದನೇ ಮನೆಯಲ್ಲಿ ಬುಧ ಇರುವುದು ಶುಭ ತರುತ್ತದೆ. ಈ ಮಾಸ ಮಧ್ಯದಿಂದ ಸೂರ್ಯ ಆರನೇ ಧನಸ್ಸು ರಾಶಿಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಶುಭಫಲಗಳು ಕಾಣಸಿಗುತ್ತದೆ. ಈ ಮಾಸದ ಮಧ್ಯದಿಂದ ಶುಕ್ರ ಹಾಗೂ ಶನಿ ಎಂಟನೇ ಮನೆಯಲ್ಲಿ ಯುತಿಯೋಗದಲ್ಲಿ ಇರುತ್ತಾರೆ. ಅಷ್ಠಮಶನಿಯ ಪ್ರಭಾವ ಶುಕ್ರನಿಂದ ಬಹಳಮಟ್ಟಿಗೆ ತಹಬದಿಗೆ ಬರುತ್ತದೆ.
ಇನ್ನು ನಿಮಗೆ ಅಷ್ಠಮ ಶನಿಯ ಪ್ರಭಾವ ದಿನೇ ದಿನೇ ಕಡಿಮೆಯಾಗುತ್ತದೆ. ನಿಮ್ಮ ರಾಶಿಯಿಂದ ಕುಜ ಎರಡನೇ ಮನೆಗೆ ಪ್ರವೇಶವಾದಾಗ ದೈಹಿಕ ಕಿರಿಕಿರಿ ಅನಾರೋಗ್ಯ ನಿಯಂತ್ರಣಕ್ಕೆ ಬರುತ್ತದೆ. ನೀವು ಈಶ್ವರನನ್ನು ಧ್ಯಾನ ಮಾಡಿ. ಲಾಭಸ್ಥಾನದ ಗುರುವಿನ ಫಲ ಕಡಿಮೆ ಇರುವುದರಿಂದ ಈಶ್ವರ ಧ್ಯಾನ ಪೂಜೆ ಮನಸ್ಸಿನ ಶಕ್ತಿಯನ್ನು ಹೆಚ್ಚುಮಾಡುತ್ತದೆ. ಬಿಳಿ ಹಳದಿ ಹೂಗಳಿಂದ ಈಶ್ವರನನ್ನು ಅರ್ಚಿಸಿ.

ಸಿಂಹ ರಾಶಿಯ ಮಾಸ ಭವಿಷ್ಯ
ನಿಮಗೆ ಈಗ ಪರೀಕ್ಷಾ ಕಾಲ. ನಾಲ್ಕನೇ ಮನೆಯಲ್ಲಿ ಇರುವ ಬುಧನಿಂದ ಮಾತ್ರ ಸದ್ಯಕ್ಕೆ ನಿಮಗೆ ರಕ್ಷಣೆ. ಏಳನೇ ಮನೆಯಲ್ಲಿ ಶನಿ ನಿಮ್ಮ ರಾಶಿಯನ್ನೇ ನೋಡುತ್ತಾನೆ, ಈ ಮಾಸದ ಮಧ್ಯದಿಂದ ಶುಕ್ರನೂ ಏಳನೇ ಮನೆ ಪ್ರವೇಶಿಸಿ ನಿಮ್ಮ ರಾಶಿಯನ್ನು ಶನಿಯ ಜೊತೆ ವೀಕ್ಷಿಸುತ್ತಾನೆ. ಶುಕ್ರ ಶನಿ ಇಬ್ಬರೂ ನಿಮ್ಮ ರಾಶಿಗೆ ಶತ್ರುಗಳಾದ್ದರಿಂದ ನಿಮಗೆ ಕಿರಕಿರಿ ತಪ್ಪಿದ್ದಲ್ಲ. ಎರಡನೇ ಮನೆಯಲ್ಲಿ ಕೇತು ಕೌಟುಂಬಿಕ ಅಶಾಂತಿ ಕೊಡುತ್ತಾನೆ. ಎಂಟರಲ್ಲಿ ರಾಹು ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾನೆ. ಆಹಾರ ಕ್ರಮದಲ್ಲಿ ಎಚ್ಚರಿಕೆ ಇರಲಿ.
12ನೇ ಮನೆಯಲ್ಲಿ ನೀಚ ಕುಜ ನಿಮ್ಮ ಆಸ್ತಿಪಾಸ್ತಿಗಳ ಮೇಲೆ ತಕರಾರುಗಳನ್ನು ತರುತ್ತಾನೆ. ಎಚ್ಚರಿಕೆಯಿಂದ ಇರಿ. ನಿಮಗೆ ಈಗ ಗುರು ಬಲ ಇಲ್ಲ. ಗುರು ದಶಮಸ್ಥಾನದಲ್ಲಿ ಇದ್ದು ವೃತ್ತಿಕ್ಷೇತ್ರದಲ್ಲಿ ಒತ್ತಡಗಳನ್ನು ಕೊಡುತ್ತಾನೆ. ತಂತಿಯ ಮೇಲೆ ಹೆಜ್ಜೆಯಿಟ್ಟಂತೆ ಈಗ ನಿಮಗೆ ಎಚ್ಚರಿಕೆಯ ನಡೆ ಇರಬೇಕು. ಏನೇ ನಿರ್ಧಾರ ತೆಗೆದುಕೊಂಡರೂ ಆಪ್ತರೊಡನೆ ಸಮಾಲೋಚನೆ ಮಾಡಿ ತೆಗೆದುಕೊಳ್ಳಿ. ಮನೆಯಲ್ಲಿ ಇರುವವರಿಂದಲೇ ನಿಮಗೆ ವಿರೋಧ ಇದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಾರೆ. ಈ ಎಲ್ಲ ಸಂಗತಿಗಳನ್ನೂ ಮನದಲ್ಲಿ ಇಟ್ಟುಕೊಂಡು ಮುಂದುವರೆಯಿರಿ.

ಕನ್ಯಾ ರಾಶಿಯ ಮಾಸ ಭವಿಷ್ಯ
ಒಂಬತ್ತನೇ ಮನೆಯಲ್ಲಿ ಗುರು, ಮೂರರಲ್ಲಿ ಬುಧ, ಲಾಭದಲ್ಲಿ ಕುಜ ಆರನೇ ಮನೆಯಲ್ಲಿ ಶನಿ ಈ ಎಲ್ಲರೂ ನಿಮಗೆ ಶುಭಫಲ ಕೊಡುತ್ತಾರೆ. ಆದರೆ ಗುರು ವಕ್ರಿಯಾಗಿರುವುದರಿಂದ ಹೆಚ್ಚು ನಿರೀಕ್ಷೆ ಮಾಡುವ ಹಾಗಿಲ್ಲ. ಗುರುವಿನ ವಕ್ರತೆ ಹೋಗುವವರೆಗೂ ಕಾಯಬೇಕು. ಆರನೇ ಮನೆಯ ಶನಿ ನಿಮಗೆ ಅಧಿಕ ಧನಲಾಭ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸುತ್ತಾನೆ. ಆದರೆ ಕೇತು ನಿಮ್ಮ ರಾಶಿಯಲ್ಲಿ ಇರುವುದರಿಂದ ಆರೋಗ್ಯಕ್ಕೆ ಹಾನಿಯಿದೆ. ಏಳನೇ ಮನೆಯಲ್ಲಿ ರಾಹು ಕೂಡ ಸಂಗಾತಿಯ ಆರೋಗ್ಯಕ್ಕೆ ಧಕ್ಕೆ ತರುತ್ತಾನೆ.
ನಿಮ್ಮ ದಶಾಭುಕ್ತಿ ನೋಡಿಕೊಳ್ಳಿ. ಕನ್ಯಾರಾಶಿಯ ಕೆಲವರಿಗೆ ಶಸ್ತ್ರಚಿಕಿತ್ಸೆ ಆಗುವ ಸಂಭವವೂ ಇದೆ. ಈ ಮಾಸದ ಕೊನೆವರೆಗೂ ಶುಕ್ರ ಐದನೇ ಮನೆಯಲ್ಲಿ ಇರುತ್ತಾನೆ. ಹೆಣ್ಣುಮಕ್ಕಳಿಗೆ ಶುಭವಾಗುತ್ತದೆ. ಅಲಂಕಾರಿಕ ಸಾಮಗ್ರಿಗಳ, ವಸ್ತ್ರಗಳ ಮಾರಾಟಗಾರರಿಗೆ ಒಳ್ಳೆಯದು. ಹಣದ ಅಭಾವ ಇಲ್ಲದಿದ್ದರೂ ಬೇರೆ ಬೇರೆ ಕಿರಿಕಿರಿಗಳಿಂದ ನಿಮ್ಮ ಮನಸ್ಸಿಗೆ ಹಿತ ಇರುವುದಿಲ್ಲ. ಧನ್ವಂತರಿ ದೇವರನ್ನು ಆರಾಧಿಸಿ. 'ಧಂ ಧನ್ವಂತರಿ ನಾರಾಯಣ ನಮೋಸ್ತುತೇ' ಎಂದು ಸಾಧ್ಯವಾದಷ್ಟು ಜಪಿಸಿ.

ತುಲಾ ರಾಶಿಯ ಮಾಸ ಭವಿಷ್ಯ
ಈಗ ಗುರು ಎಂಟನೇ ಮನೆಯಲ್ಲಿ ಇರುವುದು ಮಾನಸಿಕ ಒತ್ತಡ ಹಣಕಾಸಿ ನ ತಾಪತ್ರಯ ಮೊದಲಾದ ಸಂಕಟಗಳು ಎದುರಾಗುತ್ತಿವೆ. ನೀವು ಎಷ್ಟೇ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೂ ಹೊಸ ಹೊಸ ಸಮಸ್ಯೆಗಳು ಉದ್ಭವವಾವಗುತ್ತಲೇ ಇದೆ. ಈಗ ನಿಮೆ ಆರನೇ ಮನೆಯಲ್ಲಿ ಇರುವ ರಾಹು ಬಹುದೊಡ್ಡ ಶಕ್ತಿ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಗುರುಬಲ ಶನಿಬಲ ಇಲ್ಲದೇ ಇದ್ದರೂ ಕೊಂಚ ಮಟ್ಟಿಗೆ ಜೀವನ ಸಮತೋಲನದಲ್ಲಿ ಸಾಗುತ್ತಿದೆ. ನಾಲ್ಕನೇ ಮನೆಯಲ್ಲಿ ಶುಕ್ರ ಈ ಮಾಸದ ಕೊನೆವರೆಗೂ ಇರುತ್ತಾನೆ.
ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ವಾಹನದಿಂದ ಲಾಭ ಇದೆ. ಗೃಹಾಲಂಕಾರಕ್ಕೆ ಖರ್ಚು ಮಾಡುತ್ತೀರಿ. ದೊಡ್ಡ ವಾಹನ ಕೊಳ್ಳುವ ಯೋಗ ಇದೆ. ವಾಹನಕ್ಕೆ ಸಂಬಂಧಪಟ್ಟ ವ್ಯಾಪಾರಸ್ಥರಿಗೆ ಒಳ್ಳೆಯ ವಹಿವಾಟು ನಡೆಯುತ್ತದೆ. ಎರಡನೇ ಮನೆಯಲ್ಲಿ ಬುಧ ಇದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಸೂರ್ಯ ಮೂರನೇ ಮನೆಯಲ್ಲಿ ಇರುವುದು ಸಹ ನಿಮಗೆ ಶಕ್ತಿಯನ್ನು ಛಲವನ್ನೂ ಕೊಟ್ಟು ಕಾಪಾಡುತ್ತದೆ. ಈ ತಿಂಗಳಲ್ಲಿ ಏನಾದರೂ ಒಳ್ಳೆಯ ಸುದ್ದಿ ಕೇಳುತ್ತೀರಿ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈ ಮಾಸ ಪೂರ್ತಿ ಗುರುಬಲ ಇದೆ. ಎರಡನೇ ಮನೆಯಲ್ಲಿ ಸೂರ್ಯ, ಮೂರನೇ ಮನೆಯಲ್ಲಿ ಶುಕ್ರ, ಹನ್ನೊಂದನೇ ಮನೆಯಲ್ಲಿ ಕೇತು, ಏಳನೇ ಮನೆಯಲ್ಲಿ ಗುರು ಇದ್ದು ಸಮಯ ಬಹಳ ಚೆನ್ನಾಗಿದೆ. ನೀವು ಅಂದುಕೊಂಡಿದ್ದ ಕೆಲಸಗಳು ನಿರಾಯಾಸವಾಗಿ ನೆರವೇರುತ್ತದೆ. ಹೊಸ ಉದ್ಯೋಗ ಸಿಗುವುದು, ಉದ್ಯೋಗದಲ್ಲಿ ಬಡ್ತಿ, ಮದುವೆ ಆಗುವುದು, ಮನೆ ಕಟ್ಟುವುದು, ಲೋನ್ ಸ್ಯಾಂಕ್ಷನ್ ಆಗುವುದು ಮೊದಲಾದ ಗುಣಾತ್ಮಕ ಕೆಲಸಗಳು ನೆರವೇರುತ್ತದೆ. ವಿದೇಶ ಪ್ರವಾಸ ಯೋಗ ಇದೆ.
ನಿಮ್ಮ ಪ್ರಾಜೆಕ್ಟ್ ಗಳೆಲ್ಲ ನೀವು ಅಂದುಕೊಂಡ ರೀತಿಯಲ್ಲೇ ನೆರವೇರಿ ನಿಮ್ಮ ಮನಸ್ಸಿಗೆ ನಿರಾಳವಾಗುತ್ತದೆ. ಸಹೋದರಿಯರಿಂದ ಲಾಭ ಇದೆ ಇದೆ. ಸಹೋದರಿಯರ ನೆರವು ದೊರೆಯುತ್ತದೆ. ಐದನೇ ಮನೆಯಲ್ಲಿ ರಾಹು ಇರುವುದು ಸಂತಾನಕ್ಕೆ ಕೊಂಚ ದೋಷಕಾರಕ. ಮಕ್ಕಳಿಂದ ವಿರೋಧ ಅನುಭವಿಸಬೇಕಾಗಬಹುದು. ಅಥವಾ ಮಕ್ಕಳು ಅವರ ವೃತ್ತಿಯಿಂದ ಬೇರೆ ಊರಿನಲ್ಲಿ ನೆಲೆಸಿ ನಿಮ್ಮ ಮನಸ್ಸಿಗೆ ನೋವಾಗಬಹುದು. ಇನ್ನು ಕೆಲವೇ ದಿನಗಳಲ್ಲಿ ಪಂಚಮ ಶನಿಯ ಪ್ರಭಾವಕ್ಕೆ ಒಳಗಾಗುತ್ತೀರಿ. ಪ್ರತಿಯೊಂದು ತೀರ್ಮಾನ ಯೋಚಿಸಿ ಮಾಡಿ. ಲಕ್ಷ್ಮಿನರಸಿಂಹನ ಪ್ರಾರ್ಥನೆ ಮಾಡಿ.

ಧನಸ್ಸು ರಾಶಿಯ ಮಾಸ ಭವಿಷ್ಯ
ಆರನೇ ಮನೆಯಲ್ಲಿ ಗುರು ಇದ್ದು ನಿಮ್ಮ ಸಾನಮಾನ ಸ್ಥಿಗತಿಗಳು ಚಂಚಲಗೊಳ್ಳುವ ಸಾಧ್ಯತೆ ಇದೆ. ತೀರಾ ಆಪ್ತರ ವಿಯೋಗ ನಿಮ್ಮನ್ನು ಹೈರಾಣಾಗಿಸುತ್ತದೆ. ನಿಮ್ಮ ಯೋಜನೆಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯದೆ ಟೆನ್ಷನ್ ಕೊಡುವ ಸಾದ್ಯತೆ ಇದೆ. ಮೂರರಲ್ಲಿ ಶನಿ ಇದ್ದರೂ ಈಗ ಬಲ ಕಡಿಮೆ ಆಗಿದೆ. ಈ ಮಾಸ ಪೂರ್ತಿ ಎರಡನೇ ಮನೆಯಲ್ಲಿ ಶುಕ್ರ ಇರುವುದೇ ನಿಮಗೆ ಕೊಂಚ ಬಲ. ಬರಗಾಲದಲ್ಲಿ ತಂಗಾಳಿ ಬೀಸಿದ ಹಾಗೆ ಆಗಾ ಶುಕ್ರನಿಂದ ಕೆಲವು ಶುಭಫಲಗಳನ್ನು ಕಾಣುವಿರಿ. ವೃತ್ತಿಯಲ್ಲಿ ಸಮಸ್ಥಿತಿ ಇರುತ್ತದೆ.
ವೃತ್ತಿಸ್ಥಾನದಲ್ಲಿ ಕೇತು ಇರುವುದರಿಂದ ಯಾವುದೇ ಬದಲಾವಣೆಗಳು ಈಗ ಸಾಧ್ಯವಿಲ್ಲ. ವರ್ಗಾವಣೆ ಬಡ್ತಿ ಮುಂತಾದವು ಮುಂದಕ್ಕೆ ಹೋಗುತ್ತದೆ. ನಿಮ್ಮ ರಾಶಿಗೇ ಈ ಮಾಸದ ಮಧ್ಯಭಾಗದಲ್ಲಿ ಸೂರ್ಯ ಬರುತ್ತಾನೆ. ಇದೂ ಕೂಡ ಕೊಂಚ ಒತ್ತಡಗಳನ್ನು ಸೃಷ್ಟಿಸುತ್ತದೆ. ಯಾವುದೇ ನಿರ್ಧಾರ ಮಾಡುವಾಗ ಆತುರ ಬೇಡ. ನಾಲ್ಕಾರು ಬಾರಿ ಯೋಚಿಸಿ ಮುಂದುವರೆಯಿರಿ. ಈಶ್ವರನನ್ನು ಧ್ಯಾನ ಮಾಡಿ. ಗುರುರಾಯರ ಸ್ತೋತ್ರ ಹೇಳಿಕೊಳ್ಳಿ.

ಮಕರ ರಾಶಿಯ ಮಾಸ ಭವಿಷ್ಯ
ಗುರು ಐದನೇ ಮನೆಯಲ್ಲಿ ಇದ್ದರೂ ನಿಮಗೆ ಪ್ರಯೋಜನವಾಗುತ್ತಿಲ್ಲ. ಗುರು ವಕ್ರಿಯಾಗಿದ್ದಾನೆ. ಗುರು ವಕ್ರತೆ ತ್ಯಜಿಸಿದಾಗ ನಿಮಗೆ ಶುಭಫಲಗಳು ಪ್ರಾರಂಭವಾಗುತ್ತದೆ. ಇನ್ನು ಕೆಲವೇ ದಿನಗಳನ್ನು ಸಾಡೆಸಾತಿಯ ಪ್ರಭಾವ ಕೂಡ ಮುಕ್ತಾಯವಾಗುತ್ತದೆ. ಈ ತಿಂಗಳಲ್ಲೇ ನಿಮಗೆ ಏನಾದರೂ ಶುಭಸುದ್ದಿ ಬರಬಹುದು. ಅರ್ಹರಿಗೆ ವಿವಾಹ ನಿಷ್ಕರ್ಷೆ, ಹೊಸ ಉದ್ಯೋಗ, ಬಡ್ತಿ ವಿದೇಶ ಪ್ರವಾಸ ಮೊದಲಾದ ಎಲ್ಲ ಶುಭ ಸಂಗತಿಗಳೂ ನಿಮಗೆ ಇವೆ. ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುತ್ತೀರಿ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಗತಿಗಳು ಈಗ ಕಾರ್ಯಪ್ರವೃತ್ತವಾಗುತ್ತದೆ.
ಜಡವಾಗಿರುವ ನಿಮ್ಮ ಮನಸ್ಸೂ ಕೂಡ ಮೈಕೊಡವಿ ಚಟುವಟಿಕೆಗೊಳ್ಳುತ್ತದೆ. ರಾಹು ಮೂರನೇ ಮನೆಯಲ್ಲಿ ಇರುವುದು ನಿಮಗೆ ಈಗ ಸಧ್ಯಕ್ಕೆ ಇರುವ ಶಕ್ತಿ. ರಾಹು ಮುನ್ನುಗ್ಗುವ ಛಲ, ಕಾರ್ಯಸಾಧನೆ, ಧೈರ್ಯ ಸಾಹಸಗಳನ್ನು ಕೊಡುತ್ತಾನೆ. ಅವಕಾಶಗಳು ಸಾಕಷ್ಟು ನಿಮ್ಮ ಮನೆ ಬಾಗಿಲು ಬಡಿಯುತ್ತದೆ. ಹಣಕಾಸಿನ ಸ್ಥಿತಿ ಸುಗಮವಾಗುತ್ತದೆ. ಏಳು ವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ಇನ್ನು ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯಿಂದ ಬಿಡುಗಡೆ ದೊರೆತು ನೀವು ನಿರಾಳವಾಗುತ್ತೀರಿ. ದುರ್ಗಾ ಪರಮೇಶ್ವರಿ, ಬಾಲಾಜಿ, ದತ್ತಾತ್ರೇಯ ಇವರ ಪ್ರಾರ್ಥನೆ ಮಾಡಿ.

ಕುಂಭ ರಾಶಿಯ ಮಾಸ ಭವಿಷ್ಯ
ಬಹಳ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೀರಿ. ಮಾನಹಾನಿ ಧನಹಾನಿ ಆರೋಪಣೆಗಳು ದೂಷಣೆಗಳು ಇವೆಲ್ಲವೂ ಇವೆ. ಕೆಲವು ನೀವೇ ಮಾಡಿಕೊಂಡ ಅಚಾತುರ್ಯಗಳಿಗೆ ಈಗ ಫಲವನ್ನು ಅನುಭವಿಸುತ್ತಿದ್ದೀರಿ. ಅಧಿಕಾರ ಇದ್ದರೂ ಆಪಾದನೆ ತಪ್ಪಲಿಲ್ಲ. ಎರಡನೇ ಮನೆಯಲ್ಲಿ ರಾಹು ಇರುವುದರಿಂದ ಕೌಟುಂಬಿಕವಾಗಿಯೂ ಅಶಾಂತಿ ಎದುರಿಸುತ್ತಿದ್ದೀರಿ. ನಿಮ್ಮ ರಾಶಿಯಲ್ಲೇ ಶನಿ ಇರುವುದು ಬಹಳ ಇಕ್ಕಟ್ಟಿನ ಪರಿಸ್ಥಿತಿ ಆಗಿದೆ. ಸಾಡೆಸಾತಿಯ ಮಧ್ಯಭಾಗದಲ್ಲಿ ಇರುವುದರಿಂದ ನಾಲ್ಕೂ ದಿಕ್ಕಿನಿಂದಲೂ ಸಂಕಷ್ಟಗಳು ಎದುರಾಗುತ್ತಿವೆ. ಯಾವ ಹೊಸ ಯೋಜನೆ ಕೈಗೆತ್ತಿಕೊಂಡರೂ ಯಶಸ್ಸು ಸಿಗದೆ ಕಂಗಾಲಾಗುತ್ತೀರಿ.
ಗುರು ನಾಲ್ಕನೇ ಮನೆಯಲ್ಲಿ ಇರುವುದು ಕ್ಲಿಷ್ಟ ಪರಿಸ್ಥಿತಿಗಳನ್ನು ಅನುಭವಿಸುವಂತೆ ಮಾಡಿದೆ. ಐಷಾರಾಮಿಯಲ್ಲಿದ್ದರೂ ವನವಾಸ ಅನುಭವಿಸುತ್ತಿರುವಂತೆ ಪರಿಸ್ಥಿತಿ. ಈ ಸಂಕಷ್ಟಗಳು ತಿಳಿಯಾಗಲು ಬಹಳ ಸಮಯ ಬೇಕು. ಈಗ ನೀವು ಹತ್ತಿರದ ದತ್ತಪೀಠಕ್ಕೆ ಹೋಗಿ ದರ್ಶನ ಮಾಡಿ ಬನ್ನಿ. ನಿಮ್ಮ ಗುರುಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆಯಿರಿ. ವಿಷ್ಣುಸಹಸ್ರನಾಮ ಹೇಳಿಕೊಳ್ಳುವುದು ಹನುಮಾನ್ ಚಾಲೀಸಾ ಹೇಳುವುದು ಕೂಡ ನಿಮ್ಮ ಕಠಿಣ ಪರಿಸ್ಥಿತಿಯನ್ನು ತಿಳಿ ಮಾಡುವಲ್ಲಿ ಸಹಾಯ ಮಾಡುತ್ತದೆ.

ಮೀನ ರಾಶಿಯ ಮಾಸ ಭವಿಷ್ಯ
ಕುಂಭರಾಶಿಗಿಂತ ನಿಮ್ಮ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಹಣಕಾಸು ದುಸ್ಥಿತಿ, ನಿರುದ್ಯೋಗ, ಮನೆಯಲ್ಲಿ ಹಿರಿಯರ ಅನಾರೋಗ್ಯ ಇವೆಲ್ಲವೂ ಇರುತ್ತದೆ. ಪ್ರೀತಿ ಪಾತ್ರರ ನಿರ್ಗಮನವೂ ಆಗಬಹುದು. ಮಾನಸಿಕ ಅಶಾಂತಿ ಇರುತ್ತದೆ. ನೀವು ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದೀರಿ. ರಾಹು ನಿಮ್ಮ ರಾಶಿಯಲ್ಲೇ ಇದ್ದಾನೆ, ಇದು ನಿಮ್ಮ ವೈಯುಕ್ತಿಕ ಬದುಕಿಗೆ ಬೆಳವಣಿಗೆಗೆ ತೊಡಕನ್ನು ಉಂಟುಮಾಡುತ್ತದೆ. ಸುಬ್ರಹ್ಮಣ್ಯನ ಆರಾಧನೆ ಮಾಡಿ.
ಅಷ್ಟೋತ್ತರ ಜಪಿಸಿ. ದುರ್ಗಾ ದೇವಿಯ ಸ್ತೋತ್ರ ಹೇಳಿಕೊಳ್ಳಿ. ವೃತ್ತಿಯಲ್ಲೂ ಒತ್ತಡಗಳು ಇರುತ್ತದೆ. ಖರ್ಚು ವಿಪರೀತವಾಗಿ ಇರುತ್ತದೆ. ನೀವು ಎಷ್ಟು ಮಿತವ್ಯಯ ಮಾಡಬೇಕೆಂದು ಎಣಿಸಿದರೂ ನಿಮ್ಮ ಹಿಡಿತ ಜಾರಿ ದುಂದು ವೆಚ್ಚ ಆಗೇಬಿಡುತ್ತದೆ. ಇನ್ನೂ ಕೆಲವು ಕಾಲ ಹೀಗೆ ಕಷ್ಟನಷ್ಟಗಳು ಇರುತ್ತವೆ. ಒಮ್ಮೆ ನಿಮ್ಮ ಸಾಡೆಸಾತಿಯ ಪ್ರಭಾವ ಕಡಿಮೆಯಾದಾಗ ಮೋಡದಿಂದ ಹೊರಬಂದ ಚಂದ್ರನಂತೆ ಪ್ರಕಾಶಿಸುವಿರಿ..












Click it and Unblock the Notifications