ಜನವರಿ 2018 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

By: ಪಂಡಿತ್ ಅನುಜ್ ಕೆ. ಶುಕ್ಲಾ
Subscribe to Oneindia Kannada

ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರು ಜನವರಿ 2018ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದು.

ವಾರ ಭವಿಷ್ಯ ಅಥವಾ ತಿಂಗಳ ಭವಿಷ್ಯ ಒಂದು ಬಾರಿ ನೋಡಿ ಮರೆತುಬಿಟ್ಟಿರುತ್ತೇವೆ. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ. ನಿಮ್ಮ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ಜ್ಯೋತಿಷ್ಯ ಕ್ಯಾಲೆಂಡರನ್ನು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಭವಿಷ್ಯಫಲ ಏನಿದೆ ಎಂದು ಇಲ್ಲಿ ಖುದ್ದಾಗಿ ನಾವೇ ನೋಡಿಕೊಳ್ಳಬಹುದು.

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ, ಎಂದು ಸಂತಸದ ಬುಗ್ಗೆ ಉಕ್ಕುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲ ಸಂಗತಿಗಳನ್ನು ಪಂಡಿತರು ವಿವಿಧ ಚಿಹ್ನೆಗಳ ಮುಖಾಂತರ ಅತ್ಯಂತರ ಸರಳವಾಗಿ ತಿಳಿಸಿಕೊಡುತ್ತಾರೆ.

ಯಾವ ಚಿಹ್ನೆ ಏನು ಹೇಳುತ್ತದೆ?

ಹೃದಯ - ಪ್ರೀತಿ ಪ್ರೇಮ ಪ್ರಣಯಕ್ಕೆ ಆ ದಿನ ಅತ್ಯಂತ ಸುದಿನವಾಗಿರುತ್ತದೆ.
ಮಿಂಚು - ಆ ದಿನ ನಿಮ್ಮ ಜೀವನದಲ್ಲಿ ಆಪತ್ತು ಬರಬಹುದು.
ಮನೆ - ಮನೆ ಅಥವಾ ಅಂಗಡಿಯನ್ನು ಆ ದಿನ ಕೊಳ್ಳಬಹುದು ಅಥವಾ ಮಾರಬಹುದು.
ಮುಗುಳ್ನಗೆ - ಆ ದಿನ ನಿಮ್ಮ ಜೀವನದಲ್ಲಿ ಸಂತಸ ಬರಬಹುದು.
ಚಿಂತೆ - ಯಾವುದೋ ವಿಷಯದಲ್ಲಿ ಚಿಂತೆ ಅಥವಾ ಖಿನ್ನತೆ ಆವರಿಸಬಹುದು.
ನಕ್ಷತ್ರ - ಆ ದಿನ ಜೀವನದಲ್ಲಿ ಸೌಭಾಗ್ಯದ ದಿನವಾಗಿರುತ್ತದೆ.
ನಾಣ್ಯ - ನಾಣ್ಯ ಇದ್ದ ದಿನ ಧನ ಲಾಭ ಆಗುವ ಸಂಭವನೀಯತೆ ಇರುತ್ತದೆ.

ಪ್ರತಿದಿನ ಬಿಡುವು ಸಿಕ್ಕಾಗಲೆಲ್ಲ ಈ ಕ್ಯಾಲೆಂಡರನ್ನು ನೋಡಬೇಕೆಂದಿದ್ದರೆ ಈ ಪುಟವನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಿ.

ಮೇಷ

ಮೇಷ

ಹೊಸವರ್ಷದ ಹುಮ್ಮಸ್ಸಿನಲ್ಲಿ ದುಡಿದ ದೇಹದ ಬದಲು, ಆಚಾರವಿಲ್ಲದ ನಾಲಿಗೆಗಳು ಆಡಿದ ಮಾತಿನಿಂದ ಹೆಚ್ಚು ಘಾಸಿಯಾಗುವ ಸಾಧ್ಯತೆಯಿದೆ. ನಿಮ್ಮ ಮಾತುಗಳಿಗೆ ಕಿಮ್ಮತ್ತಿಲ್ಲದ ಜಾಗದಲ್ಲಿ ಹೆಚ್ಚು ಹೊತ್ತು ಇರಬಾರದು. ಕೆಲವು ಶಕ್ತಿಗಳು ನಿಮ್ಮನ್ನು ಅನಗತ್ಯವಾಗಿ ಸಂಕಷ್ಟಕ್ಕೆ ದೂಡಲು ಯತ್ನಿಸುತ್ತಿರುತ್ತವೆ. ಅವುಗಳ ಪ್ರೇರೇಪಣೆಗೆ ಒಳಗಾಗಬೇಡಿ. ಕೈಯಲ್ಲಿರುವ ಕಾಂಚಾಣ ಉಳಿಸಿಕೊಳ್ಳುವುದು ಮಾತ್ರವಲ್ಲ, ಬರಬೇಕಾದ ಹಣವನ್ನು ಮರಳಿಪಡೆಯುವ ಬಗ್ಗೆ ಯೋಚಿಸಿ. ಮಂಡಿ ನೋವಿನ ಬಗ್ಗೆ ಯಾರೂ ನಿಮಗೆ ಅನುಕಂಪ ತೋರುವುದಿಲ್ಲ. ಅನುಕಂಪ ಗಳಿಸಲೂ ಯತ್ನಿಸಬೇಡಿ. ನರಳಾಡುವ ಬದಲು, ನೋವು ಕಡಿಮೆಯಾಗಿಸಲು ನೀವು ಮಾಡುತ್ತಿರುವ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಪ್ರಯತ್ನ ಮುಂದುವರಿಸಿ. ಎಲ್ಲಕ್ಕಿಂತ ಹೆಚ್ಚಾಗಿ ಸಿಟ್ಟನ್ನು ನಿಯಂತ್ರಣದಲ್ಲಿಡಿ.

ವೃಷಭ

ವೃಷಭ

ಜಂಘಾಬಲವೇ ಉಡುಗಿಹೋಗುವಂಥ ಘಟನೆ ನಡೆದಾಗಲೂ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳುತ್ತಿದ್ದ ನೀವು, ಕ್ಷುಲ್ಲಕ ಕಾರಣಕ್ಕೆ ಘಟಿಸಿದ ಘಟನೆಯಿಂದ ವಿಚಲಿತರಾಗುವುದು ಏಕೆ? ಆತ್ಮವಿಶ್ವಾಸಕ್ಕೆ ಪೆಟ್ಟುಬೀಳುವಂಥ ಸಂದರ್ಭ ಎದುರಾದರೂ ನಿಮ್ಮತನವನ್ನು ಕಳೆದುಕೊಳ್ಳಬೇಡಿ. ಜೊತೆಗೆ ಜೀವನದಲ್ಲಿ ಎಂದೆಂದಿಗೂ ತಳೆದಿರುವಂಥ ನಿರ್ಣಯ ತೆಗೆದುಕೊಳ್ಳುವ ಪ್ರಮೇಯ ಬಂದರೂ ಬರಬಹುದು, ಅದು ಧನಾತ್ಮಕವೂ ಆಗಿರಬಹುದು, ಋಣಾತ್ಮಕವೂ ಆಗಿರಬಹುದು. ಹಲ್ಲು ಅಲುಗಾಡುವಾಗಲೇ ಕೀಳಿಸುವುದು ಉತ್ತಮವೇ ಹೊರತು, ಹುಳುಕಾಗುವವರೆಗೆ ಕಾಯುವುದೇಕೆ?

ಮಿಥುನ

ಮಿಥುನ

ಅನಾರೋಗ್ಯ ಬಂದ ಮೇಲೆ ವೈದ್ಯ ಬಳಿ ಧಾವಿಸುವ ಬದಲು, ಇಂತಹ ರೋಗವು ಬರಬಹುದಾ, ಬಂದರೆ ಏನು ಮಾಡುವುದು, ಹಣ ಹೇಗೆ ಹೊಂದಿಸುವುದು ಎಂದು ಚಿಂತಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಜಮಾನಾ ಇದು. ಇದಕ್ಕೆ ನೀವು ಎಷ್ಟು ಸಿದ್ಧರಾಗಿದ್ದೀರಿ? ಸಿದ್ಧತೆ ಮಾಡಿಕೊಂಡಿಲ್ಲದಿದ್ದರೆ ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಿ. ಉತ್ತಮ ಉದ್ಯೋಗವೇನೋ ಸಿಗಬಹುದು, ಕೈಯಲ್ಲಿ ನಾಲ್ಕಾಸು ಅಡ್ಡಾಡಲೂಬಹುದು. ಆದರೆ, ಹಣಕಾಸು ನಿಪುಣರ ಸಲಹೆ ಪಡೆದು ಸೂಕ್ತವಾಗಿ ಹಣ ತೊಡಗಿಸಿ, ವೃದ್ಧಿಯಾಗುವಂತೆ ನೋಡಿಕೊಳ್ಳಿ. ಇಂದಲ್ಲದಿದ್ದರೂ ಮುಂದಾದರೊಂದು ದಿನ ಉಪಯೋಗಕ್ಕೆ ಬಂದೇಬರುತ್ತದೆ. ಮುಂದಾಲೋಚನೆ ಎಂದಿದ್ದರೂ ಒಳ್ಳೆಯದೇ.

ಕರ್ಕಾಟಕ

ಕರ್ಕಾಟಕ

ವಯಸ್ಸು, ಮನಸ್ಸು ಮಾಗಿದಂತೆ ನಮ್ಮಲ್ಲಿ ಪ್ರಬುದ್ಧತೆ ತಾನಾಗಿಯೇ ಪ್ರತ್ಯಕ್ಷವಾಗುತ್ತದೆ. ಈ ಪ್ರಬುದ್ಧತೆಯನ್ನು ಜೀವನದುದ್ದಕ್ಕೂ ಕಾಪಾಡಿಕೊಂಡು ಹೋಗುವುದೇ ನಿಜವಾದ ಚಾಲೆಂಜ್. ಪ್ರತಿಬಾರಿ ಅದ್ಭುತವಾದ ರಸಂ ಅಥವಾ ಸಾರು ತಯಾರಿಸುವುದು ಸಾಧ್ಯವಿಲ್ಲ ತಾನೆ? ಆದರೆ, ನಾವು ಮಾಡುವ ಅಡುಗೆ ತೀರ ಹಾಳಾಗದಂತೆ ಮಾಡುವ ನೋಡಿಕೊಳ್ಳುವುವುದು ನಿಮ್ಮಲ್ಲಿ ಖಂಡಿತ ಸಾಧ್ಯವಿದೆ. ಪರಿಸ್ಥಿತಿ ಹೇಗಿದೆಯೆಂದರೆ, ನೀವು ಹೆಜ್ಜೆ ಇಟ್ಟಲ್ಲೆಲ್ಲ ಗೆಲುವು ನಿಮ್ಮದೆ. ಆದರೆ, ಯುದ್ಧ ಮಾಡುವ ಮನಸ್ಥಿತಿ ನಿಮ್ಮಲ್ಲಿಲ್ಲದಿದ್ದರೆ ಕತ್ತಿ ಗುರಾಣಿ ತ್ಯಾಗ ಮಾಡಿ ವಾನಪ್ರಸ್ಥಾಶ್ರಮಕ್ಕೆ ಹೊರಟುಬಿಡಿ.

ಸಿಂಹ

ಸಿಂಹ

ನಿಮ್ಮ ಪ್ಲಾನಿಂಗ್ ಸರಿಯಿಲ್ಲವೋ, ಗಳಿಸಿದ ಆದಾಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೋ ಅಥವಾ ಜೇಬಿಗೇ ತೂತುಬಿದ್ದಿದೆಯೊ! ಅಂತೂ ಗಳಿಸಿದ ಹಣ ಎಣಿಸುವ ಮೊದಲೇ ಕೈಜಾರಿ ಹೋಗುತ್ತಿರುವುದಕ್ಕೆ ನಿಮ್ಮನ್ನು ನೀವೇ ಶಪಿಸಿಕೊಳ್ಳಬೇಕು. ಮಹತ್ವಾಕಾಂಕ್ಷೆ ಒಳ್ಳೆಯದೆ, ಆದರೆ, ಒಂದು ಯೋಜನೆ ಫಲಿಸಲಿಲ್ಲವೆಂದರೆ, ಅದನ್ನು ವರ್ಷಗಟ್ಟಲೆ ಮುಂದುವರಿಸಿಕೊಂಡು ಹೋದರೆ ಏನು ಪ್ರಯೋಜನ? ಕೈಜಾಡಿಸಿಕೊಂಡು ಮತ್ತೊಂದಕ್ಕೆ ಕೈಹಾಕುವುದು ನಿಮ್ಮ ಪಾಲಿಗೆ ಜಾಣತನ. ಸಾಧ್ಯವಾದ ಮಟ್ಟಿಗೆ ದೂರದ ಪ್ರಯಾಣವನ್ನು, ಅನಗತ್ಯ ಖರ್ಚುಗಳನ್ನು ಬಿಟ್ಟುಬಿಡಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಈಗಲಾದರೂ ಕಲಿತುಕೊಳ್ಳಿ.

ಕನ್ಯಾ

ಕನ್ಯಾ

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಪುರಂದರ ದಾಸರು ನಮ್ಮನ್ನು ಎಚ್ಚರಿಸುತ್ತಿದ್ದರೂ ನಾವು ಎಚ್ಚರಗೊಳ್ಳುವುದಿಲ್ಲ. ನಾಲಿಗೆ ಹರಿಯಬಿಡುವುದರಿಂದ ಮನಸ್ಸಿಗೆ ಮಾತ್ರವಲ್ಲ, ದೈಹಿಕವಾಗಿಯೂ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಮಲಗಿದವರನ್ನು ಎಚ್ಚರಿಸಬಹುದು, ಆದರೆ ಸತ್ತಂತಿಹರನ್ನು ಬಡಿದೆಚ್ಚರಿಸುವುದು ಹೇಗೆ? ಅನಗತ್ಯ ಆರೋಪಗಳು, ಬೇಡದ ದ್ವೇಷ, ನಾನು ಎಂಬ ಅಹಂಕಾರ ತಕ್ಕ ಪಾಠ ಕಲಿಸುತ್ತದೆ. ಹೆಗಲಿಗೆ ಹಾಕಿಕೊಂಡ ಟವೆಲ್ ಜಾಡಿಸಿಕೊಂಡ ಹಾಗೆ ಜಾಡಿಸಿಕೊಂಡು ಎದ್ದೇಳಿ, ಎಲ್ಲ ಆರೋಪಗಳನ್ನು ಸುಳ್ಳು ಮಾಡಿ, ದ್ವೇಷ ಕಟ್ಟಿಕೊಳ್ಳದೆ ಸ್ನೇಹ ಸಂಪಾದಿಸಿ, ಅಹಂಕಾರ ಬಿಟ್ಟು ಎಲ್ಲರೊಳಗೊಂದಾಗಿ.

ತುಲಾ

ತುಲಾ

ಜೀವನ ನಮ್ಮನ್ನು ಪ್ರತಿಕ್ಷಣ ಪರೀಕ್ಷಿಸುತ್ತಲೇ ಇರುತ್ತದೆ, ನಾವು ಅನುದಿನ ಪರೀಕ್ಷೆ ಬರೆಯುತ್ತಲೇ ಇರಬೇಕು. ಮಾತು ಮಾತ್ರವಲ್ಲ ಮೌನವೂ ಮನೆ-ಮನೆಸನ್ನು ಕದಡಬಹುದು. ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಅಭಿವ್ಯಕ್ತಿಯನ್ನು ಬದಲಿಸಿಕೊಳ್ಳುವುದು ಸದ್ಯದ ಅಗತ್ಯ. ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಒತ್ತಡ ಉಂಟಾಗಿ, ಇನ್ನೇನು ಬಿಟ್ಟೇಬಿಡೋಣ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಯಾವುದೇ ಕಾರಣಕ್ಕೂ ದುಡುಕಬೇಡಿ. ನಿಮ್ಮ ಸುವರ್ಣಕಾಲ ಆರಂಭವಾಗುತ್ತಿರುವುದರಿಂದ ಅಪಘಾತ ಅನಾಹುತಕ್ಕೆ ಕಾರಣವಾಗಬಹುದು. ಜೀವನದಲ್ಲಿ ಸ್ಪೀಡಂತೂ ಬೇಡವೇ ಬೇಡ.

ವೃಶ್ಚಿಕ

ವೃಶ್ಚಿಕ

ಅಸಾಧ್ಯವಾದ ಸಿಟ್ಟು ಮತ್ತು ಆಗಾಗ ಭುಗಿಲೇಳುವ ಅಸಮಾಧಾನಗಳು ನೀವೇ ಹುಡುಕಿಕೊಂಡಿರುವ, ಸ್ನೇಹ ಸಂಪಾದಿಸಿರುವ ಎರಡು ಶತ್ರುಗಳು. ಜಗತ್ತು ನೋಡುವುದಕ್ಕೆ ಸುಂದರವಾಗಿಯೇ ಇರುತ್ತವೆ, ಆದರೆ ಈ ಎರಡು ಕೆಟ್ಟ ಶತ್ರುಗಳಿಂದ ಎಲ್ಲವೂ ಕ್ರೂರವಾಗಿ, ಕುರೂಪಿಯಾಗಿ ಕಾಣುತ್ತದೆ. ನಿಮ್ಮಲ್ಲಿರುವ ಪ್ರತಿಭೆಗೆ ಎರಡು ಮಾತೇ ಇಲ್ಲ. ಅದನ್ನು ನಿಮ್ಮ ವ್ಯಕ್ತಿತ್ವಕ್ಕೆ ಸಾಣೆಹಿಡಿಯಲು ನೀವು ಬಳಸಿಕೊಳ್ಳಬೇಕು. ಛಲವಿರಬೇಕು ನಿಜ, ಆದರೆ ಹೊಂದಾಣಿಕೆಯಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ನಮ್ಮ ಶತ್ರುಗಳ ವಿರುದ್ಧ ಗೆಲುವು ಕೂಡ ಸಾಧ್ಯವಿಲ್ಲ. ಇದು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಗ್ರಹಸ್ಥರಿಗೆ ಕೂಡ ಅನ್ವಯವಾಗುತ್ತದೆ.

ಧನುಸ್ಸು

ಧನುಸ್ಸು

ನಿಮ್ಮ ಮುಖವೇ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇಲ್ಲಸಲ್ಲದ ಯೋಚನೆಗಳನ್ನು ತುಂಬಿಕೊಂಡು, ಹರಳೆಣ್ಣೆ ಕುಡಿದಂಥ ಮುಖ ಹೊತ್ತುಕೊಂಡು ಮುಖದರ್ಶನ ಮಾಡಿಸುತ್ತಿದ್ದರೆ, ನಿಮ್ಮ ಮೇಲೆ ಇರುವಂಥ ವಿಶ್ವಾಸವೂ ಹೊರಟುಹೋಗುತ್ತದೆ, ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುತ್ತೀರಿ. ಜೀವನವಿರುವುದೇ ನಾಲ್ಕು ದಿನಗಳಷ್ಟು. ಪ್ರತಿಕ್ಷಣವನ್ನು ಪುಟ್ಟ ಮಕ್ಕಳಂತೆ ಎಂಜಾಯ್ ಮಾಡಿ. ಮುಂದೇನಾಗುವುದೋ ಎಂಬ ಭಾರಹೊತ್ತು ಕಳೆಗುಂದಬೇಡಿ. ಅದೃಷ್ಟವೆಂಬುದು ನಮ್ಮ ಕೈಲಿಲ್ಲ, ಮುಂದೇನಾಗುವುದೋ ಎಂಬ ಭವಿಷ್ಯವನ್ನೂ ಯಾರಿಗೂ ಹೇಳಲು ಸಾಧ್ಯವಿಲ್ಲ. ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಬದುಕುವುದನ್ನು ಕಲಿಯಿರಿ.

ಮಕರ

ಮಕರ

ಸಾಲವೆಂಬ ಕಮಲದ ಹೂವಿನ ಬಳ್ಳಿಗೆ ಸಿಲುಕಿಕೊಂಡರೆ ಹೊರಗೆ ಬರುವುದು ಬಲುಕಷ್ಟ. ಇದಕ್ಕೆ ಉತ್ತಮ ಪರಿಹಾರವೆಂದರೆ ಸಾಲ ಮಾಡದಿರುವುದು. ಮಾಡಬೇಕಿದ್ದರೂ ಬೇಕಾದಷ್ಟೇ, ತೀರಿಸುವ ತಾಕತ್ತಿರುವಷ್ಟು ಮಾತ್ರ ಮಾಡಬೇಕು. ಪ್ರತಿಯೊಬ್ಬರೂ ಲೆಕ್ಕಾಚಾರ ಹಾಕುವವರೆ. ಕೋಟ್ಯಾಧಿಪತಿ ತನ್ನ ಬಳಿ ಕೊಳೆಯುವಷ್ಟ ಹಣವಿದೆಯೆಂದು ಬಿಟ್ಟಿ ಕೊಡುವುದಿಲ್ಲ. ನಾವು ಬಗ್ಗಿದಾಗ ಹಣಿಯಲು ಬೇಕಾದಷ್ಟು ಜನ ಪಕ್ಕದಲ್ಲೇ ಇರುತ್ತಾರೆ. ಅಂಥವರಿಂದ ತಪ್ಪಿಸಿಕೊಳ್ಳುವ ಬದಲು ಧೈರ್ಯದಿಂದ ಎದುರಿಸಿ ಮಟ್ಟಹಾಕಿ. ಏನೇ ಆಗಲಿ, ಕಣ್ಣ ಮುಂದಿದ್ದರೂ ಪರಿಶೀಲಿಸದೆ ಯಾವುದನ್ನೂ ಸ್ವೀಕರಿಸಬೇಡಿ. ಪ್ರತಿಹೆಜ್ಜೆಯೂ ಎಚ್ಚರಿಕೆಯಿಂದಿರಲಿ.

ಕುಂಭ

ಕುಂಭ

ಇತ್ತೀಚಿನ ವರ್ಷಗಳಲ್ಲಿ ಕಂಡಿರುವ ಕನಸುಗಳನ್ನು ಸಾಕಾರಗೊಳಿಸಲು ಇದಕ್ಕಿಂತ ಪ್ರಶಸ್ತವಾದ ಸಮಯ ಮತ್ತೊಂದಿಲ್ಲ. ಕೈಯಿಟ್ಟಿದ್ದೆಲ್ಲ ಚಿನ್ನವೆ, ಅವಕಾಶಗಳು ಕೂಡ ಬಾಗಿಲು ತೆರೆದು ಕಾದಿರುತ್ತವೆ. ಉದ್ಯೋಗದಲ್ಲಿ ಉನ್ನತಿಯನ್ನು ಆಶಿಸಬಹುದು, ಹಾಗೆಯೆ ವೈಯಕ್ತಿಕ ಜೀವನದಲ್ಲಿ ಕೂಡ ಹೊಗಳಿಕೆ ಹೊಳೆಯಂತೆ ತೇಲಿ ಬರುತ್ತವೆ. ಪ್ರತಿಯೊಂದು ಕ್ಷಣವನ್ನು ಆಸ್ವಾದಿಸಿ, ಸಾಧ್ಯವಾದರೆ ಬಡಬಗ್ಗರಿಗೆ ಕೈಲಾದಷ್ಟು ದಾನಧರ್ಮ ಮಾಡಿ. ಪುಣ್ಯಕ್ಷೇತ್ರ ಸಂದರ್ಶಿಸುವ ಅವಕಾಶ ಒದಗಿಬಂದರೆ ತಪ್ಪಿಸಿಕೊಳ್ಳಬೇಡಿ. ಅಶ್ವಿನಿ ದೇವತೆಗಳು ತಥಾಸ್ತು ಅನ್ನುತ್ತಿರುವಾಗ ಯಾಕೆ ಬೇಡ ಅಂತೀರಿ?

7 Days in a week : Each Day Indicates Characteristics Of That Particular Person | Oneindia Kannada
ಮೀನ

ಮೀನ

ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಆಳ ಅರಿಯದ ಹೊಳೆಯಲ್ಲಿ ಕಾಲಿಟ್ಟಂತೆ. ಈಜು ಬಂದರೂ ಸಾಕಷ್ಟು ನೀರನ್ನು ಕುಡಿಸಿಯೇ ನಮ್ಮನ್ನು ಕೈಬಿಡುತ್ತದೆ. ಅನಿರೀಕ್ಷಿತ ಸಂತಸಗಳಲ್ಲಿ ಖುಷಿಯನ್ನು ಕಾಣಿರಿ. ಸಹೋದರರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳಬೇಡಿ. ಏಕೆಂದರೆ, ಈಗಾಗಲೆ ಆಗಿರುವ ಗಾಯ ಮತ್ತೆ ಕೆರೆದಂತಾಗಿ ವೈಷಮ್ಯಕ್ಕೆ ತಿರುಗಿ, ಬದುಕುಪೂರ್ತಿ ಪರಸ್ಪರ ಮಾತನಾಡದಂತೆ ಮಾಡಿಬಿಡಬಹುದು. ಮನಸ್ಸಿನ ಮಾತನ್ನು ಮಾತ್ರವಲ್ಲ, ಹೃದಯದ ಮಾತು ಕೇಳಲು ಆರಂಭಿಸಿ. ಉತ್ತಮ ದಿನಗಳು ಮುಂದೆ ಕಾದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The calendars specially designed by astrologer Pandit Anuj K. Shukla shows days when the Moon, Sun, and planets favour particular zodiac sign. Astro Calendar for Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius and Pisces.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ