ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಸ್ವಾತಿಯಿಂದ ರೇವತಿ ನಕ್ಷತ್ರದವರೆಗೆ ಗುಣ- ಸ್ವಭಾವ

By ಶಂಕರ್ ಭಟ್
|
Google Oneindia Kannada News

ಜ್ಯೋತಿಷ್ಯ ಪ್ರಕಾರ ಹನ್ನೆರಡು ರಾಶಿಗಳಿವೆ. ಇನ್ನು ಹನ್ನೆರಡು ರಾಶಿಗಳಿಗೆ ಇಪ್ಪತ್ತೇಳು ನಕ್ಷತ್ರ. ಆ ಇಪ್ಪತ್ತೇಳು ನಕ್ಷತ್ರದ ನಾಲ್ಕು ಪಾದಗಳು ಸೇರಿ ನೂರಾ ಎಂಟು ಪಾದಗಳಾಗುತ್ತವೆ. ಅವನ್ನು ಹನ್ನೆರಡು ರಾಶಿಗಳಿಂದ ಭಾಗಿಸಿದರೆ ಪ್ರತಿ ರಾಶಿಗೆ ಒಂಬತ್ತು ಪಾದ ಹಾಗೂ ಮೂರು ನಕ್ಷತ್ರಗಳು ಬರುತ್ತವೆ.

ಹೇಗೆ ರಾಶಿಯ ಆಧಾರದಲ್ಲಿ ಭವಿಷ್ಯವನ್ನು ಹೇಳಬಹುದೋ ಅದೇ ರೀತಿ ಯಾವ ನಕ್ಷತ್ರ ಎಂಬುದರ ಆಧಾರದಲ್ಲಿ ವ್ಯಕ್ತಿಯ ಗುಣ- ಸ್ವಭಾವಗಳನ್ನು ಹೇಳಬಹುದು. ಈ ಹಿಂದೆ ಆರಂಭಿಸಿದ್ದ ಸರಣಿಯ ಎರಡನೇ ಹಾಗೂ ಕೊನೆ ಭಾಗವಿದು. ಇಂದಿನ ಲೇಖನದಲ್ಲಿ ತುಲಾದಿಂದ ಮೀನದವರೆಗೆ ಆರು ರಾಶಿಗಳ ವ್ಯಾಪ್ತಿಯ ನಕ್ಷತ್ರಗಳ ಗುಣ-ಸ್ವಭಾವ, ಆ ನಕ್ಷತ್ರಗಳಿಗೆ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ ಇತ್ಯಾದಿ ವಿಚಾರಗಳನ್ನು ತಿಳಿಸಲಾಗಿದೆ.

ಸಾಡೇ ಸಾತ್ ಶನಿಯ ಈ ಏಳು ಲಕ್ಷಣಕ್ಕೂ ನೀವು ಎಚ್ಚೆತ್ತುಕೊಳ್ಳದಿದ್ದರೆ!ಸಾಡೇ ಸಾತ್ ಶನಿಯ ಈ ಏಳು ಲಕ್ಷಣಕ್ಕೂ ನೀವು ಎಚ್ಚೆತ್ತುಕೊಳ್ಳದಿದ್ದರೆ!

ಸ್ವಾತಿ ನಕ್ಷತ್ರದಿಂದ ಇಂದಿನ ಲೇಖನ ಆರಂಭವಾಗಿದ್ದು, ತುಲಾ-ವೃಶ್ಚಿಕ- ಧನುಸ್ಸು- ಮಕರ- ಕುಂಭ- ಮೀನ ರಾಶಿಗೆ ಸೇರುವ ನಕ್ಷತ್ರದವರೆಗೆ ಮಾಹಿತಿ ನೀಡಲಾಗಿದೆ. ಇದು ಸ್ಥೂಲ ಸ್ವರೂಪದಲ್ಲಿ ತಿಳಿಸಿರುವ ಗುಣ ಹಾಗೂ ಸ್ವಭಾವ. ಇದರಲ್ಲಿ ರಾಶಿಯ ಅಧಿಪತಿ, ಲಗ್ನ ಕುಂಡಲಿ, ಲಗ್ನಾಧಿಪತಿ ಇನ್ನೂ ಅನೇಕ ವಿಚಾರಗಳು ಪ್ರಭಾವ ಬೀರುತ್ತವೆ. ಆದರೆ ನಕ್ಷತ್ರ ಆಧಾರಿತ ಗುಣ-ಸ್ವಭಾವ ತೆಗೆದು ಹಾಕುವಂತಿರುವುದಿಲ್ಲ.

ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರದ ಅಧಿಪತಿ ವಾಯು. ಈ ನಕ್ಷತ್ರದಲ್ಲಿನ ನಕಾರಾತ್ಮಕ ಗುಣವನ್ನು ಹೋಗಲಾಡಿಸದಿದ್ದರೆ ಇದು ನಾಶಕಾರಕವಾಗಿ ಬದಲಾಗುತ್ತದೆ. ಈ ನಕ್ಷತ್ರದವರು ರಾಜ ಅಥವಾ ರಾಜರಿಗೆ ಸಮಾನರಾದವರಿಂದ ಸಂಪತ್ತು ಪಡೆಯುತ್ತಾರೆ. ಈ ಪೈಕಿ ಹಲವರಿಗೆ ಸೊಗಸಾದ ಮಾತುಗಾರಿಕೆ ಒಲಿದಿರುತ್ತದೆ. ತುಂಬ ಖುಷಿಖುಷಿಯಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಈ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಯಾವುದೇ ನಿರ್ಧಾರ ಮಾಡುವ ಮುನ್ನ ಗಂಭೀರವಾಗಿ ಆಲೋಚಿಸುತ್ತಾರೆ. ತಮಗಾಗಲೀ ಅಥವಾ ತಮ್ಮಿಂದ ಇತರರಿಗಾಗಲಿ ಅನ್ಯಾಯ ಆಗುವುದನ್ನು ಈ ಹೆಣ್ಣುಮಕ್ಕಳು ಸಹಿಸುವುದಿಲ್ಲ. ಇನ್ನು ಸ್ವಾತಿ ನಕ್ಷತ್ರದವರಿಗೆ ಪರಿಸ್ಥಿತಿ ಜತೆಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ.

ಖರೀದಿ- ಮಾರಾಟದಲ್ಲಿ ಸ್ವಾತಿ ನಕ್ಷತ್ರದವರು ಬುದ್ಧಿವಂತರು. ಸಂಪತ್ತು- ಆಸ್ತಿ ಇವರ ಬಳಿ ಸುಲಭವಾಗಿ ಸಂಗ್ರಹವಾಗುತ್ತದೆ. ವಿಶಾಲ ಆಲೋಚನೆಯ ಇವರು ವೈವಿಧ್ಯಮಯ ಜನರನ್ನು ತಮ್ಮ ಕಡೆ ಆಕರ್ಷಿಸುವುದರಲ್ಲಿ ನಿಷ್ಣಾತರು. ಇವರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ. ಇವರ ಮುಖ್ಯವಾದ ಉದ್ದೇಶ ಸಂಪತ್ತು ಗಳಿಕೆ. ಉತ್ತಮ ಸಂಸ್ಕೃತಿ, ಓದು, ಖ್ಯಾತಿ, ಶ್ರೀಮಂತಿಕೆ ಇವೆಲ್ಲವನ್ನೂ ಈ ನಕ್ಷತ್ರ ಪ್ರತಿನಿಧಿಸುತ್ತದೆ.

ವಿಶಾಖಾ ನಕ್ಷತ್ರ

ವಿಶಾಖಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಇಂದ್ರಾಗ್ನಿ. ಈ ನಕ್ಷತ್ರದ ಒಂದು ಮೂರು ಪಾದ ತುಲಾ ಹಾಗೂ ಒಂದು ಪಾದ ವೃಶ್ಚಿಕ ರಾಶಿಯಾಗುತ್ತದೆ. ಈ ನಕ್ಷತ್ರವು ತಕ್ಷಣದ ಫಲಿತಾಂಶವನ್ನು ಕೊಡುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಅನುಕೂಲ ನೀಡುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಧಾರ್ಮಿಕ ಮನೋಭಾವದವರಾಗಿರುತ್ತಾರೆ.

ಆದರೆ, ಇವರ ಸ್ವಭಾವದಲ್ಲಿ ಸ್ಥಿರತೆ ಇರುವುದಿಲ್ಲ. ಸ್ನೇಹಜೀವಿಗಳಾ ಅಂದರೆ? ಆ ಗುಣವೂ ಕಡಿಮೆ. ಸಮವಾದ ದೈಹಿಕ ಪ್ರಕೃತಿ ಇರುತ್ತದೆ. ವಯಸ್ಸಾದಂತೆ ಸ್ಥೂಲಕಾಯರಾಗುತ್ತಾರೆ. ಇತರರ ಯಶಸ್ಸು ವಿಶಾಖಾ ನಕ್ಷತ್ರದವರಲ್ಲಿ ಹೊಟ್ಟೆ ಕಿಚ್ಚು ಮೂಡಿಸುತ್ತದೆ. ಇವರಿಗೆ ಸ್ನೇಹ ವರ್ಗ ಕಡಿಮೆ. ಒಂದು ರೀತಿ ದ್ವೀಪದಂತೆ ಬದುಕುತ್ತಾರೆ.

ಸಂತಸದ ವೈವಾಹಿಕ ಜೀವನ ಲಭಿಸುತ್ತದೆ. ಉತ್ತಮ ಸಂಗಾತಿ ದೊರೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಹಲವು ಕೆಲಸಗಳನ್ನು ಕೈಗೊಳ್ಳುತ್ತಾರೆ. ಆದರೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದು ಯಾವುದಾದರೂ ಒಂದರಲ್ಲಿ ಮಾತ್ರ. ಬರವಣಿಗೆ ಹಾಗೂ ಮಾತುಗಾರಿಕೆ ಎರಡೂ ಇವರಿಗೆ ಒಲಿಯುತ್ತದೆ.

ಈ ನಕ್ಷತ್ರದ ಹೆಣ್ಣುಮಕ್ಕಳು ಸುಂದರವಾಗಿರುತ್ತಾರೆ. ಧಾರ್ಮಿಕ ಮನೋಭಾವದವರಾಗಿರುತ್ತಾರೆ. ಆಹಾರದಲ್ಲಿ ಪಥ್ಯ ಹಾಗೂ ನಿಯಮಿತವಾದ ವ್ಯಾಯಾಮ ಮಾಡಲೇಬೇಕು. ಒಳ್ಳೆಯ ಧ್ವನಿ ಇರುತ್ತದೆ. ಮಾತಾಡುವಾಗ ತುಂಬ ಎಚ್ಚರದಿಂದ ಪದ ಬಳಕೆ ಮಾಡುತ್ತಾರೆ. ಇವರು ಕನಸುಗಾರರು, ಜ್ಯೋತಿಷ್ಯದಲ್ಲಿ ಆಸಕ್ತಿ ಇರುವವರು, ಉತ್ತಮ ಆಡಳಿತಗಾರರು, ಧೈರ್ಯವಂತರು, ಶಕ್ತಿಶಾಲಿಗಳು ಹಾಗೂ ದಾನ ಗುಣವುಳ್ಳವರು.

ಅನೂರಾಧ ನಕ್ಷತ್ರ

ಅನೂರಾಧ ನಕ್ಷತ್ರ

ಅನೂರಾಧ ನಕ್ಷತ್ರದ ಅಧಿಪತಿ ಮಿತ್ರಾ. ಈ ನಕ್ಷತ್ರವು ಸಂಬಂಧದಲ್ಲಿ ಸಮತೋಲನವನ್ನು ಸೂಚಿಸುತ್ತದೆ. ಈ ನಕ್ಷತ್ರದಲ್ಲಿ ಜನಿಸಿದರು ಉತ್ಸಾಹಭರಿತರಾಗಿರುತ್ತಾರೆ. ಶತ್ರುಗಳ ನಾಶ ಮಾಡಬಲ್ಲವರಾಗಿರುತ್ತಾರೆ. ಕಲೆಯ ನಾನಾ ವಿಭಾಗಗಳಲ್ಲಿ ತಜ್ಞರಾಗಿರುತ್ತಾರೆ. ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ.

ಈ ನಕ್ಷತ್ರದವರು ಒಂದಿಷ್ಟು ವಿಚಿತ್ರ ಎನಿಸುವ ಗುಣ ಇರುತ್ತದೆ. ಇವರ ಜೀವನದಲ್ಲಿ ಹಲವು ಸವಾಲು ಹಾಗೂ ಅಡೆ-ತಡೆಗಳನ್ನು ಎದುರಿಸಬೇಕಾಗುತ್ತದೆ. ಆ ಕಾರಣಕ್ಕೆ ಮೇಲ್ನೋಟಕ್ಕೆ ಸೋತವರಂತೆ ಕಾಣುತ್ತಾರೆ. ಇವರು ವಿದೇಶದಲ್ಲಿ ವಾಸ ಮಾಡುವ ಹಾಗೂ ಅಲ್ಲೇ ಯಶಸ್ಸು ಸಾಧಿಸುವ ಅವಕಾಶ ಇರುತ್ತದೆ.

ಇವರ ಆರೋಗ್ಯ ಉತ್ತಮವಾಗಿರುತ್ತದೆ. ಇತರರಿಂದ ಕೆಲಸ ತೆಗೆಯುವುದರಲ್ಲಿ, ಜನರನ್ನು ಸೇರಿಸುವುದರಲ್ಲಿ ನಿಸ್ಸೀಮರು. ತಮ್ಮ ಪೋಷಕರು ಹಾಗೂ ಹತ್ತಿರದ ಸಂಬಂಧಿಗಳ ವಿಚಾರದಲ್ಲಿ ಅಕ್ಕರಾಸ್ಥೆ ಅಷ್ಟಾಗಿ ಇರುವುದಿಲ್ಲ. ಇವರ ಪೈಕಿ ಹಲವರು ಕಲೆಯಲ್ಲಿ ಕ್ರಿಯೇಟಿವ್ ಆಗಿರುತ್ತಾರೆ. ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಮಿಂಚುತ್ತಾರೆ. ಆಸ್ತಮಾ, ಉಸಿರಾಟದ ಸಮಸ್ಯೆ, ನೆಗಡಿ- ಕೆಮ್ಮು ಸಮಸ್ಯೆ ಆಗುತ್ತದೆ. ಇವರು ಹಸಿವು-ಬಾಯಾರಿಕೆ ತಡೆಯಲಾರರು. ಆದ್ದರಿಂದ ಆಹಾರ ಪಥ್ಯದ ವಿಚಾರದಲ್ಲಿ ಜಾಗ್ರತೆಯಾಗಿರಬೇಕು.

ಜ್ಯೇಷ್ಠಾ ನಕ್ಷತ್ರ

ಜ್ಯೇಷ್ಠಾ ನಕ್ಷತ್ರ

ಜ್ಯೇಷ್ಠಾ ನಕ್ಷತ್ರದ ಅಧಿಪತಿ ಇಂದ್ರ. ಜ್ಯೇಷ್ಠಾ ಅಂದರೆ ಹಿರಿಯ. ಈ ನಕ್ಷತ್ರದಲ್ಲಿ ಜನಿಸಿದವರು ಕೀರ್ತಿ, ಪ್ರಸಿದ್ಧಿ ಪಡೆಯುತ್ತಾರೆ. ಶ್ರೀಮಂತರು, ಧೈರ್ಯಶಾಲಿಗಳು, ನಾಯಕರು ಹಾಗೂ ಉತ್ತಮ ಸಮನ್ವಯಕಾರರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಹಾಗೂ ಕುಜ ಎರಡೂ ಗ್ರಹದ ಸ್ವಭಾವ ಇರುತ್ತದೆ.

ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಒಳ್ಳೆ ದೈಹಿಕ ಶಕ್ತಿ, ತ್ರಾಣ ಇರುತ್ತದೆ. ಈ ಎಲ್ಲ ಗುಣಗಳಿಂದ ಹೆಮ್ಮೆಯ ವ್ಯಕ್ತಿ ಎನಿಸುತ್ತಾರೆ. ಆದರೆ ವಾಸ್ತವ ಬೇರೆ ರೀತಿಯಲ್ಲಿ ಇರುತ್ತದೆ. ಇವರಿಗೆ ತಾವು ಕೈಗೊಳ್ಳುವ ವೃತ್ತಿ ಬಗ್ಗೆ ಸ್ಪಷ್ಟತೆ ಇರುತ್ತದೆ. ಆದ್ದರಿಂದ ವೃತ್ತಿ ಹಾಗೂ ವ್ಯಾಪಾರದಲ್ಲಿ ಪದೇಪದೇ ಬದಲಾವಣೆ ಮಾಡುತ್ತಾರೆ.

ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಸಂಪತ್ತಿನ ಸಂಗ್ರಹ ಇವರ ಮೂಲ ಆದ್ಯತೆ. ಕಲಾವಿದ ಮನಸ್ಸಿನವರು. ಆಭರಣಪ್ರಿಯರು. ದುಬಾರಿ ದಿರಿಸು ಇಷ್ಟಪಡುವವರು. ಕನಸುಗಾರರು. ಕೃಷಿ ತಜ್ಞರು. ತಾತ್ವಿಕ ಮನೋಭಾವದವರು ಹಾಗೂ ಪ್ರತಿಭಾವಂತರು.

ಮೂಲಾ ನಕ್ಷತ್ರ

ಮೂಲಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ನಿರಋತಿ. ಮೂಲ ಅಂದರೆ ಬೇರು. ಈ ನಕ್ಷತ್ರ ಅದೃಷ್ಟವನ್ನು ಸೂಚಿಸುವುದಿಲ್ಲ. ಮೂಲ ನಕ್ಷತ್ರದವರು ಆರ್ಥಿಕವಾಗಿ ಯಶಸ್ಸು ಪಡೆಯುತ್ತಾರೆ ಮತ್ತು ಸುಖವಾದ ಜೀವನ ನಡೆಸುತ್ತಾರೆ. ಈ ನಕ್ಷತ್ರದವರಿಗೆ ಆಳವಾದ ತತ್ವಜ್ಞಾನ ಇರುತ್ತದೆ. ಯಾವುದೇ ವಿಚಾರವಾಗಲೀ ತಲಸ್ಪರ್ಶಿಯಾಗಿ ತಿಳಿದುಕೊಳ್ಳುವ ಇಚ್ಛೆ ಇರುತ್ತದೆ.

ತಮ್ಮ ಸ್ವಂತ ಪರಿಶ್ರಮದಿಂದ ಅಪಾರವಾದ ಜ್ಞಾನ ಮತ್ತು ಬುದ್ಧಿವಂತಿಕೆ ಪಡೆಯುತ್ತಾರೆ. ತಮ್ಮ ಕುಟುಂಬದ ತೊಂದರೆ ಅಥವಾ ನಾಶಕ್ಕೆ ಕಾರಣವಾಗುವ ಸಾಧ್ಯತೆ ಕೂಡ ಇದೆ. ಸ್ವಭಾವತಃ ಶಾಂತಿಪ್ರಿಯರೇ ಆದರೂ ತಮಗೆ ಸಿಗಬೇಕಾದದ್ದು ಸಿಗದಿದಲ್ಲಿ ಅದಕ್ಕಾಗಿ ಜಗಳ ಮಾಡಲು ಸಹ ಹಿಂಜರಿಯುವುದಿಲ್ಲ.

ಮೂಲಾ ನಕ್ಷತ್ರದವರಿಗೆ ಹಲವು ಬಗೆಯ ಪ್ರತಿಭೆ ಇರುತ್ತದೆ ಮತ್ತು ಕೌಶಲ ಇರುತ್ತದೆ. ಆಗಾಗ ಕೆಲಸ ಅಥವಾ ವೃತ್ತಿ ಬದಲಾಯಿಸುವುದು ಇವರ ಸ್ವಭಾವ. ಹಣ ಖರ್ಚು ಮಾಡುವುದರಲ್ಲೂ ಹಿಡಿತ ಇರುವುದಿಲ್ಲ. ತಂದೆ-ತಾಯಿ ಜತೆಗೆ ಸಾಮರಸ್ಯ ಇರುವುದಿಲ್ಲ. ಮಹತ್ವಾಕಾಂಕ್ಷಿಗಳು, ಕಲಿಕೆಯಲ್ಲಿ ಆಸಕ್ತರು, ಬರಹಗಾರರು, ಮಾತುಗಾರರು, ವಿಪರೀತ ಪ್ರವಾಸ ಮಾಡುವವರು ಹಾಗೂ ಇತರರಿಗೆ ಸಹಾಯ ಮಾಡುವಂಥವರಾಗಿರುತ್ತಾರೆ.

ಪೂರ್ವಾಷಾಢ ನಕ್ಷತ್ರ

ಪೂರ್ವಾಷಾಢ ನಕ್ಷತ್ರ

ಪೂರ್ವಾಷಾಢ ನಕ್ಷತ್ರದ ಅಧಿಪತಿ ಅಪ. ಈ ನಕ್ಷತ್ರವು ನಮ್ಮ ಶ್ರಮಕ್ಕೆ ಇನ್ನಷ್ಟು ಪ್ರತಿಫಲವನ್ನು ನೀಡುತ್ತದೆ. ಯುದ್ಧ ಘೋಷಣೆ ಜತೆಗೆ ಈ ನಕ್ಷತ್ರ ತಳಕು ಹಾಕಿಕೊಂಡಿದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಬುದ್ಧಿವಂತರು ಹಾಗೂ ಇತರರ ಮನಸ್ಸನ್ನು ಒಲಿಸಬಲ್ಲವರು. ಇವರಿಗೆ ತಮ್ಮ ಬಗ್ಗೆ ಬಹಳ ಹೆಮ್ಮೆ ಇರುತ್ತದೆ.

ಜನರನ್ನು ಪ್ರಭಾವಕ್ಕೆ ಒಳಪಡಿಸುವ, ತಮ್ಮ ಮಾತಿನಿಂದ ಮೋಡಿ ಮಾಡುವ ಶಕ್ತಿ ಇರುತ್ತದೆ. ಈ ನಕ್ಷತ್ರ ಸಾಮಾನ್ಯವಾಗಿ ಕೀತ್ತಿ, ಸಂಪತ್ತು, ಫಲವಂತಿಕೆ ಹಾಗೂ ಅಗಾಧ ಜ್ಞಾನವನ್ನು ನೀಡುತ್ತದೆ. ಇನ್ನೊಬ್ಬರ ಜತೆಗೆ ವಾದ ಮಾಡುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ. ಆದರೆ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಹಿನ್ನಡೆ ಅನುಭವಿಸುತ್ತಾರೆ.

ಬೇರೆಯವರ ಅಭಿಪ್ರಾಯವನ್ನು ಒಪ್ಪಿಕೊಳ್ಳದ ಇವರು ತಮ್ಮಿಷ್ಟದಂತೆಯೇ ನಡೆದುಕೊಳ್ಳುತ್ತಾರೆ. ತಮಗಿರುವ ಆಸಕ್ತಿಯಲ್ಲಿ ತಲ್ಲೀನರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಾವು ನಿರ್ಧರಿಸಿದ ವಿಷಯದಿಂದ ಹಿಂತೆಗೆಯುವುದಿಲ್ಲ. ಒಂದು ಗುಂಪನ್ನು ಮುನ್ನಡೆಸುವಂಥ ಛಾತಿ ಇರುತ್ತದೆ. ಈ ನಕ್ಷತ್ರದವರು ಬುದ್ಧಿವಂತರು. ಮತ್ತೊಬ್ಬರಿಗೆ ಸಹಾಯ ಮಾಡುವವರು. ಧೈರ್ಯಶಾಲಿಗಳು. ದುಷ್ಟ ಆಲೋಚನೆ ಇರುವವರು ಹಾಗೂ ಶ್ರೀಮಂತರಾಗಿರುತ್ತಾರೆ.

ಉತ್ತರಾಷಾಢ ನಕ್ಷತ್ರ

ಉತ್ತರಾಷಾಢ ನಕ್ಷತ್ರ

ಉತ್ತರಾಷಾಢ ನಕ್ಷತ್ರದ ಅಧಿಪತಿ ವಿಶ್ವೇದೇವ. ಈ ನಕ್ಷತ್ರದ ಒಂದು ಪಾದ ಧನುಸ್ಸು ರಾಶಿಗೂ ಮೂರು ಪಾದ ಮಕರ ರಾಶಿಗೂ ಸೇರುತ್ತದೆ. ಈ ನಕ್ಷತ್ರದವರು ಆಗಾಗ ಆತ್ಮವಿಮರ್ಶೆ ಮಾಡಿಕೊಳ್ಳುವವರು. ಕೆಲಸ ಮಾಡುವುದರಲೇ ಸಂತೋಷ ಕಾಣುವವರು. ಆದರೆ ಆಸಕ್ತಿ ಕಳೆದುಕೊಂಡು ಬಿಟ್ಟರೆ ಸೋಮಾರಿಗಳಾಗುತ್ತಾರೆ. ಆರಂಭಿಸಿದ ಕೆಲಸ ಪೂರ್ತಿ ಮಾಡಲ್ಲ.

ಜಾತಕದಲ್ಲಿ ಚಂದ್ರ ಪ್ರಬಲನಾಗಿದ್ದರೆ ಒಳ್ಳೆ ಮೈ ಬಣ್ಣ ಇರುತ್ತದೆ. ಇವರು ಇತರರನ್ನು ಸುಲಭಕ್ಕೆ ನಂಬುವುದಿಲ್ಲ. ತುಂಬ ಸಮಯ ಒಟ್ಟಿಗೆ ಕಳೆದ ನಂತರವಷ್ಟೇ ಸ್ನೇಹ ವಲಯದ ಒಳಗೆ ಬರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಅತ್ಯುತ್ತಮ ಸಂಧಾನಕಾರರು. ಯಾವುದೇ ವ್ಯಾಜ್ಯವನ್ನು ಬಗೆಹರಿಸಬಲ್ಲವರು.

ಜನ್ಮ ಜಾತಕದಲ್ಲಿ ಬುಧನು ಉತ್ತಮ ಸ್ಥಿತಿಯಲ್ಲಿದ್ದರೆ ಒಳ್ಳೆ ಸಲಹಾಗಾರರು ಆಗುತ್ತಾರೆ. ಪ್ರವಚನಕಾರರು, ಗೌರವ ಸ್ಥಾನದಲ್ಲಿರುವವರು, ಸಟಕ್ಕನೆ ಸಿಟ್ಟು ಬರುವವರು ಆಗಿರುವ ಸಾಧ್ಯತೆ ಇದೆ.

ಶ್ರವಣ ನಕ್ಷತ್ರ

ಶ್ರವಣ ನಕ್ಷತ್ರ

ಈ ನಕ್ಷತ್ರದ ಅಧಿಪತಿ ವಿಷ್ಣು. ಶ್ರವಣ ಅಂದರೆ ಕೇಳಿಸಿಕೊಳ್ಳುವುದು. ಸರಸ್ವತಿ ದೇವಿಯ ಜನ್ಮ ನಕ್ಷತ್ರ ಶ್ರವಣ. ಈ ನಕ್ಷತ್ರದಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಇತರರೊಂದಿಗೆ ಬೆರೆಯುತ್ತಾರೆ. ದೊಡ್ಡ ಪ್ರಮಾಣದ ಸ್ನೇಹಿತರ ವಲಯ ಇರುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಗೌರವ ಪಡೆಯುತ್ತಾರೆ.

ಆರ್ಥಿಕವಾಗಿ ಯಶಸ್ಸು ಪಡೆಯುವ ಇವರು, ಸಂತುಷ್ಟ ಜೀವನ ನಡೆಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ಮಧ್ಯಮದ ಎತ್ತರದವರಾಗಿರುತ್ತಾರೆ. ಈ ನಕ್ಷತ್ರದ ಸ್ತ್ರೀಯರು ವಾಚಾಳಿಗಳಾಗಿರುತ್ತಾರೆ. ತಮ್ಮ ಸಂಗಾತಿಯ ಗುಣದ ವಿಚಾರದಲ್ಲಿ ನಿರ್ದಿಷ್ಟವಾಗಿ ಹೀಗೇ ಇರಬೇಕು ಎಂದು ಬಯಸುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಚರ್ಮ ವ್ಯಾಧಿ, ಟಿಬಿ ಮತ್ತಿತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇವರು ಧೈರ್ಯವಂತರು, ಆಡಳಿತಗಾರರು, ಬದಲಾವಣೆಗೆ ಒಗ್ಗಿಕೊಳ್ಳುವವರು, ಶ್ರೀಮಂತರು, ದುಷ್ಟ ಜನರ ಸಹವಾಸ ಇರುವವರು ಮತ್ತು ತಮ್ಮ ಕೆಲಸ-ಕಾರ್ಯಗಳನ್ನು ನಿಧಾನವಾಗಿ ಮಾಡುವಂಥವರಾಗಿರುತ್ತಾರೆ.

ಧನಿಷ್ಠಾ ನಕ್ಷತ್ರ

ಧನಿಷ್ಠಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ವಸು. ಈ ನಕ್ಷತ್ರದ ಎರಡು ಪಾದ ಮಕರ ಹಾಗೂ ಇನ್ನೆರಡು ಪಾದ ಕುಂಭ ರಾಶಿಯಾಗುತ್ತದೆ. ಈ ನಕ್ಷತ್ರದವರಿಗೆ ಉತ್ತಮ ನಡವಳಿಕೆ ಇರುತ್ತದೆ. ವಾಸ್ತವವಾದಿಗಳು. ಶ್ರೀಮಂತರು. ಪ್ರಬಲರು ಮತ್ತು ವಿಶಾಲ ಹೃದಯಿಗಳಾಗಿರುತ್ತಾರೆ. ಇವರು ಸಣ್ಣಗೆ- ಎತ್ತರವಾಗಿ ಇರುತ್ತಾರೆ. ಒಳ್ಳೆ ರೋಗ ನಿರೋಧಕ ಶಕ್ತಿ ಇರುತ್ತದೆ.

ಆದರೆ, ಇವರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗ್ರತೆ ತೆಗೆದುಕೊಳ್ಳಬೇಕು. ಆರೋಗ್ಯ ಸ್ಥಿತಿ ಬಿಗಡಾಯಿಸುವ ತನಕ ವೈದ್ಯರ ಬಳಿ ಹೋಗದ ಇವರ ಗುಣವನ್ನು ಬದಲಿಸಿಕೊಳ್ಳಬೇಕು. ಅಧ್ಯಯನದ ಬಗ್ಗೆ ಇವರಿಗೆ ತುಂಬ ಆಸಕ್ತಿ ಇರುತ್ತದೆ. ಈ ನಕ್ಷತ್ರದವರಿಗೆ ಮದುವೆ ನಿಧಾನ ಆಗಬಹುದು ಅಥವಾ ಸಂತುಷ್ಟ ವೈವಾಹಿಕ ಜೀವನ ಇರುವುದಿಲ್ಲ.

ಇನ್ನು ಈ ರಾಶಿಯ ಸ್ತ್ರೀಯರು ತಮ್ಮ ಸಹಜ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ. ವೈವಾಹಿಕ ಜೀವನ ಖುಷಿ ಹಾಗೂ ಸಮಾಧಾನಕರ ಆಗಿರುತ್ತದೆ. ಇವರಿಗೆ ರಕ್ತದ ಕೊರತೆ, ಕೆಮ್ಮು- ನೆಗಡಿ ಇತ್ಯಾದಿ ಸಮಸ್ಯೆ ಎದುರಾಗುತ್ತದೆ. ಹೆಣ್ಣುಮಕ್ಕಳು ಗರ್ಭಕೋಶದ ಸಮಸ್ಯೆ ಎದುರಿಸುತ್ತಾರೆ. ತಾಳ್ಮೆ, ವೈಭವದ ಜೀವನ, ಪ್ರತೀಕಾರ, ಧೈರ್ಯ ಹಾಗೂ ಸಾಮಾಜಿಕ ಚಟುವಟಿಕೆಯನ್ನು ಇವರು ಪ್ರತಿನಿಧಿಸುತ್ತಾರೆ.

ಶತಭಿಷಾ ನಕ್ಷತ್ರ

ಶತಭಿಷಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ವರುಣಾ. ಈ ನಕ್ಷತ್ರದಲ್ಲಿ ಹುಟ್ಟಿದವರು ಧೈರ್ಯವಂತರಾಗಿರುತ್ತಾರೆ. ಬುದ್ಧಿವಂತರು. ಶತ್ರುವನ್ನು ಸೋಲಿಸುವಂಥವರು. ಸರಳ ಹಾಗೂ ಸಿದ್ಧಾಂತ ಇರುವ ಜೀವನ ಶೈಲಿ. ನೇರವಂತಿಕೆ ಇವರ ಗುಣ. ಸಂಶೋಧನೆ ಹಾಗೂ ವೈಜ್ಞಾನಿಕ ಕ್ಷೇತ್ರ ಇವರಿಗೆ ಸೂಕ್ತವಾದದ್ದು.

ಈ ನಕ್ಷತ್ರದಲ್ಲಿ ಹುಟ್ಟಿದ ಪುರುಷರಿಗೆ ಪೂರ್ವಗ್ರಹ ಪೀಡಿತರಾಗಿರುತ್ತಾರೆ. ದೈವ ಭಯ ಇರುವ ಧಾರ್ಮಿಕ ವ್ಯಕ್ತಿಗಳಾಗಿರುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದ ಸ್ತ್ರೀಯರು ಎತ್ತರಕ್ಕೆ ಹಾಗೂ ಸಣ್ಣಗೆ ಇರುತ್ತಾರೆ. ಪ್ರಬುದ್ಧವಾದ ಆಲೋಚನೆ ಹಾಗೂ ಪ್ರತಿಕ್ರಿಯೆ ನೀಡುವವರಾಗಿರುತ್ತಾರೆ.

ಇವರಿಗೆ ಮಧುಮೇಹ, ಮೂತ್ರದ ಸೋಂಕು, ಉಸಿರಾಟದ ಸಮಸ್ಯೆ, ನ್ಯುಮೋನಿಯಾ ಹಾಗೂ ಥಂಡಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸುಂಸ್ಕೃತ, ಕಲಾವಿದ ಹೃದಯ, ಬರಹಗಾರರು, ತ್ಯಾಗ ಮನೋಭಾವ, ಮೃದು ಹೃದಯ ಮತ್ತು ಧಾರ್ಮಿಕ ಮನೋಭಾವ ಈ ನಕ್ಷತ್ರದ ಸ್ವಭಾವ.

ಪೂರ್ವಾಭಾದ್ರ ನಕ್ಷತ್ರ

ಪೂರ್ವಾಭಾದ್ರ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಅಜ ಏಕಪಾದ. ಪೂರ್ವಾಭಾದ್ರ ನಕ್ಷತ್ರದ ಮೂರು ಪಾದ ಕುಂಭ, ಒಂದು ಪಾದ ಮೀನ ರಾಶಿಗೆ ಬರುತ್ತದೆ. ಈ ನಕ್ಷತ್ರವು ಆಧ್ಯಾತ್ಮಿಕ ಉದ್ದೇಶಗಳನ್ನು ಉತ್ತೇಜಿಸುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ತಮ್ಮ ಇಂದ್ರಿಯದ ಮೇಲೆ ಹಿಡಿತ ಇರುತ್ತದೆ. ಬುದ್ಧಿವಂತರಾಗಿರುತ್ತಾರೆ. ಎಲ್ಲ ಬಗೆಯ ಕಲೆಯಲ್ಲಿ ತಜ್ಞರಾಗಿರುತ್ತಾರೆ.

ಶತ್ರುಗಳನ್ನು ಮಣಿಸುವಂಥವರಾಗಿರುತ್ತಾರೆ. ರಿಸ್ಕ್ ತೆಗೆದುಕೊಳ್ಳಬಲ್ಲಂಥವರು. ಈ ನಕ್ಷತ್ರದ ಕುಂಭ ರಾಶಿಯವರು ಎತ್ತರದ ನಿಲುವು ಹೊಂದಿರುತ್ತಾರೆ. ಜೀವನದಲ್ಲಿ ಕೆಲ ಸಿದ್ಧಾಂತ ಇರುತ್ತವೆ. ಯಾವುದೇ ಸನ್ನಿವೇಶದಲ್ಲಿ ತಮ್ಮ ಸಿದ್ಧಾಂತದೊಂದಿಗೆ ರಾಜೀ ಆಗುವವರಲ್ಲ. ಆದರೆ ಸನ್ನಿವೇಶಕ್ಕೆ ಒಗ್ಗಿಕೊಳ್ಳಬಲ್ಲರು.

ಹಣಕಾಸಿಗೆ ಸಂಬಂಧಪಟ್ಟ ಇಲಾಖೆಗೆ ಇವರು ಸೂಕ್ತರು. ಸಹಾಯಕ್ಕೆ ಅರ್ಹರಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸದ ಹೊರತು ನೆರವು ಮಾಡುವವರಲ್ಲ. ಉದಾರಿಗಳು ಎಂಬುದು ಹೌದಾದರೂ ದಾನದ ವಿಚಾರದಲ್ಲಿ ವಾಸ್ತವವಾದಿಗಳು. ಆರ್ಥಿಕವಾಗಿ ದುರ್ಬಲರಾದರೂ ಇತರರಿಗೆ ಇವರ ಮೇಲಿನ ವಿಶ್ವಾಸ ಹೋಗುವುದಿಲ್ಲ.

ಈ ನಕ್ಷತ್ರದವರಿಗೆ ಲಕ್ವಾ, ಮಧುಮೇಹ, ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇವರು ಅಧ್ಯಾತ್ಮ ಆಲೋಚನೆಯವರು, ಯಾರನ್ನೂ ಹಚ್ಚಿಕೊಳ್ಳದವರು, ನಿಗೂಢರು ಹಾಗೂ ಖ್ಯಾತರಾಗಿರುತ್ತಾರೆ.

ಉತ್ತರಾಬಾದ್ರ ನಕ್ಷತ್ರ

ಉತ್ತರಾಬಾದ್ರ ನಕ್ಷತ್ರ

ಈ ನಕ್ಷತ್ರದ ಅಧಿದೇವತೆ ಅಹಿರ್ ಬುದ್ನ್ಯಾ. ಈ ನಕ್ಷತ್ರದಲ್ಲಿ ಜನಿಸಿದವರು ಶ್ರೀಮಂತರಾಗುತ್ತಾರೆ. ಉತ್ತಮ ದಾರಿಯಲ್ಲೇ ಸಂಪತ್ತಿನ ಸಂಗ್ರಹ ಮಾಡುತ್ತಾರೆ. ಜ್ಞಾನದ ಶಕ್ತಿ ಬಗ್ಗೆ ಇವರಿಗೆ ಅಪಾರವಾದ ನಂಬಿಕೆ ಇರುತ್ತದೆ. ಇತರರನ್ನು ಪ್ರೀತಿಯಿಂದ ಕಾಣುವವರು ಹಾಗೂ ಕರುಣೆಯನ್ನು ತೋರುವವರಾಗಿರುತ್ತಾರೆ.

ಇವರು ಜನಿಸಿದ ಸ್ಥಳಕ್ಕಿಂತ ಹೊರಗೆ ಅಂದರೆ ತುಂಬ ದೂರದಲ್ಲಿ ಅದೃಷ್ಟ ಪಡೆಯುತ್ತಾರೆ. ಇವರ ವೈವಾಹಿಕ ಜೀವನವು ಸೌಹಾರ್ದದಿಂದ ಹಾಗೂ ಸಮಾಧಾನದಿಂದ ಇರುತ್ತದೆ. ಮಕ್ಕಳಿಂದ ಸುಖ- ಸಂತೋಷ ಪಡೆಯುತ್ತಾರೆ. ಈ ನಕ್ಷತ್ರದ ಪುರುಷರಿಗೆ ಒಳ್ಳೆಯ ಸ್ನೇಹಿತ ವರ್ಗ ಇರುತ್ತದೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ.

ಈ ನಕ್ಷತ್ರದ ಸ್ತ್ರೀಯರು ತಮ್ಮ ಕುಟುಂಬದವರ ಬಗ್ಗೆ ಒಳ್ಳೆ ಕಾಳಜಿ ಮಾಡುತ್ತಾರೆ. ಮನೆಯ ವ್ಯವಹಾರಗಳನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬ ಸ್ಪಷ್ಟತೆ ಇರುತ್ತದೆ. ತಾವು ಇಷ್ಟಪಡುವವರ ಏಳ್ಗೆಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ದೇಹದ ನಾನಾ ಭಾಗದಲ್ಲಿನ ನೋವು ಇವರಿಗೆ ಸಾಮಾನ್ಯ. ಮೃದು, ಅನುಮಾನ ಸ್ವಭಾವ, ಧಾರ್ಮಿಕ ಮನೋಭಾವ, ಎಲ್ಲದರಲ್ಲೂ ಯೋಜನೆ ಮಾಡಿಕೊಳ್ಳುವುದು ಈ ನಕ್ಷತ್ರದವರ ಗುಣ.

ರೇವತಿ ನಕ್ಷತ್ರ

ರೇವತಿ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಪೂಷನ್. ರೇವತಿ ನಕ್ಷತ್ರವು ಪ್ರಯಾಣವನ್ನು ಸೂಚಿಸುತ್ತದೆ. ಇದು ರಾಶಿ ಚಕ್ರದಲ್ಲಿನ ಕೊನೆ ನಕ್ಷತ್ರ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹೊಂದಾಣಿಕೆ ಸ್ವಭಾವ ಇರುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಶಕ್ತಿ ಇರುತ್ತದೆ. ತಮ್ಮ ಬುದ್ಧಿವಂತಿಕೆಯಿಂದ ಸಂಪತ್ತನ್ನು ಸಂಪಾದಿಸುತ್ತಾರೆ.

ಆದರೆ, ಸ್ವಲ್ಪ ಸಿಟ್ಟಿನ ಸ್ವಭಾವ ಇರುತ್ತದೆ. ತಮ್ಮದಲ್ಲದ ಸಿದ್ಧಾಂತವನ್ನು ಅನುಸರಿಸುವಂತೆ ಒತ್ತಡ ಹಾಕಿದರೆ ರೇವತಿ ನಕ್ಷತ್ರದವರಿಗೆ ಸರಿ ಹೋಗುವುದಿಲ್ಲ. ಇವರಿಗೆ ದೈವ ಭಕ್ತಿ ಹೆಚ್ಚಿರುತ್ತದೆ. ಸ್ವಂತ ಪರಿಶ್ರಮವನ್ನು ನಂಬುವ ಇವರು, ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ತಮ್ಮ ಮೇಲೆ ವಿಪರೀತ ಒತ್ತಡ ಹಾಕಿಕೊಳ್ಳುವ ಅವರು, ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ.

ವೈವಾಹಿಕ ಜೀವನ ಸೌಹಾರ್ದಯುತವಾಗಿರುತ್ತದೆ. ಬಾಳಸಂಗಾತಿಗಳು ಹೊಂದಿಕೊಂಡು ನಡೆದುಕೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದ ಮಹಿಳೆಯರು ವೃತ್ತಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಒಂದು ದೇಶವನ್ನು ಪ್ರತಿನಿಧಿಸುವ ರಾಯಭಾರಿಗಳಾಗುತ್ತಾರೆ. ಇನ್ನು ಪುರುಷರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ. ಕಲಾಸಕ್ತಿ, ಸಮಾಜದಲ್ಲಿ ಗೌರವಾದರ ಪಡೆಯುತ್ತಾರೆ.

English summary
Characteristics of the persons on the basis of birth star Swathi to Revati according to vedic astrology by well known astrologer Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X