Solar System : ಶನಿಗ್ರಹ ನೀರಿನಲ್ಲಿ ತೇಲುತ್ತದಂತೆ, ನೆಪ್ಚೂನ್‌ನಲ್ಲಿ ವಜ್ರದ ಮಳೆ! ಸೌರವ್ಯೂಹದ 10 ಅಚ್ಚರಿಗಳು ನಿಮಗೆ ಗೊತ್ತಾ?
Solar System: ನಮ್ಮ ಸೌರವ್ಯೂಹ ಎಂದರೆ ಕೇವಲ ಸೂರ್ಯನ ಸುತ್ತ ಸುತ್ತುವ ಎಂಟು ಗ್ರಹಗಳ ವ್ಯವಸ್ಥೆಯಷ್ಟೇ ಅಲ್ಲ. ಚಿತ್ರವಿಚಿತ್ರ ಭೌತಶಾಸ್ತ್ರೀಯ ಘಟನೆಗಳು, ಆಶ್ಚರ್ಯಕರ ಭೂವೈಜ್ಞಾನಿಕ ರಚನೆಗಳಿಂದ ತುಂಬಿರುವ ಅದ್ಭುತ ಜಗತ್ತು ಇದು. ಶಾಲೆಯಲ್ಲಿ ನಾವು ಗ್ರಹಗಳ ಕ್ರಮವನ್ನು ಸರಳವಾಗಿ ಕಲಿಯುತ್ತೇವೆ. ಆದರೆ ನಿಜವಾದ ಸೌರವ್ಯೂಹ ಪಠ್ಯಪುಸ್ತಕದಲ್ಲಿ ಕಾಣಿಸುವುದಕ್ಕಿಂತಲೂ ಹೆಚ್ಚು ವಿಚಿತ್ರ ಮತ್ತು ರೋಚಕವಾಗಿದೆ.

ಉದಾಹರಣೆಗೆ, ಸೂರ್ಯನಿಗೆ ಬುಧ ಗ್ರಹ ಹೆಚ್ಚು ಹತ್ತಿರವಿದ್ದರೂ ಶುಕ್ರ ಗ್ರಹವೇ ಅತ್ಯಂತ ಬಿಸಿಯಾದ ಗ್ರಹ. ಅದರ ಮೇಲ್ಮೈ ನೋಡಿದರೆ ಜ್ವಾಲಾಮುಖಿಗಳ ನರಕದಂತೆ ಕಾಣುತ್ತದೆ. ಮತ್ತೊಂದೆಡೆ ಯುರೇನಸ್ ಮತ್ತು ನೆಪ್ಚೂನ್‌ನಂತಹ ಹಿಮ ದೈತ್ಯ ಗ್ರಹಗಳಲ್ಲಿ ವಜ್ರದ ಮಳೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಸೌರವ್ಯೂಹದ ಒಟ್ಟು ದ್ರವ್ಯರಾಶಿಯ ಬಹುತೇಕ ಭಾಗ ಸೂರ್ಯನಲ್ಲೇ ಇದೆ. ಹಾಗಾದರೆ ನಮ್ಮ ಸೌರವ್ಯೂಹದ ಬಗ್ಗೆ ನಿಮ್ಮನ್ನು ಆಶ್ಚರ್ಯಗೊಳಿಸುವ 10 ಸಂಗತಿಗಳನ್ನು ತಿಳಿಯೋಣ.
1. ಬುಧ ಗ್ರಹದ ಒಳಗೆ ಬೃಹತ್ ಕಬ್ಬಿಣದ ಹೃದಯ
ನಮ್ಮ ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ಬುಧ. ಆದರೆ ಅದರ ಒಳಭಾಗದಲ್ಲಿ ಅತಿ ದೊಡ್ಡ ಲೋಹದ ಕೇಂದ್ರವಿದೆ. ನಾಸಾದ ಮೆಸೆಂಜರ್ ಮಿಷನ್ ನಡೆಸಿದ ಅಧ್ಯಯನಗಳ ಪ್ರಕಾರ, ಬುಧ ಗ್ರಹದ ತ್ರಿಜ್ಯದ ಸುಮಾರು ಶೇ.85ರಷ್ಟು ಭಾಗ ಅದರ ಲೋಹದ ಕೇಂದ್ರಕ್ಕೆ ಸಂಬಂಧಿಸಿದೆ. ಹೋಲಿಸಿದರೆ ಭೂಮಿಯ ಕೇಂದ್ರ ಭಾಗವು ಅದರ ತ್ರಿಜ್ಯದ ಸುಮಾರು ಶೇ.50ರಷ್ಟಿದೆ. ವಿಜ್ಞಾನಿಗಳ ಒಂದು ಊಹೆಯ ಪ್ರಕಾರ, ಸೌರವ್ಯೂಹ ರೂಪುಗೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ಬುಧ ಗ್ರಹವು ಮತ್ತೊಂದು ದೊಡ್ಡ ಖಗೋಳಕಾಯದೊಂದಿಗೆ ಡಿಕ್ಕಿ ಹೊಡೆದಿರಬಹುದು. ಆ ಡಿಕ್ಕಿಯಿಂದ ಅದರ ಹೊರಗಿನ ಕಲ್ಲಿನ ಪದರಗಳು ಬಹುತೇಕ ನಾಶವಾಗಿ, ದೈತ್ಯ ಲೋಹೀಯ ಕೇಂದ್ರ ಮಾತ್ರ ಉಳಿದಿರಬಹುದು.
2. ಸೌರವ್ಯೂಹದ ತುದಿಯಲ್ಲಿದೆ ಊರ್ಟ್ ಮೋಡ
ಪ್ಲುಟೊವನ್ನು ಸೌರವ್ಯೂಹದ ಹೊರಭಾಗದಲ್ಲಿರುವ ಕುಬ್ಜ ಗ್ರಹ ಎಂದು ನಾವು ತಿಳಿದಿದ್ದೇವೆ. ಆದರೆ ಸೂರ್ಯನ ಪ್ರಭಾವ ಅದರಾಚೆಗೂ ವಿಸ್ತರಿಸಿದೆ. ಸೌರವ್ಯೂಹದ ಅತ್ಯಂತ ಹೊರಗಿನ ಭಾಗದಲ್ಲಿ ಹಿಮದಿಂದ ಕೂಡಿದ ಅಸಂಖ್ಯಾತ ವಸ್ತುಗಳ ಗೋಳಾಕಾರದ ಪ್ರದೇಶವೊಂದು ಇದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಇದನ್ನೇ ʼಊರ್ಟ್ ಕ್ಲೌಡ್ʼ ಎಂದು ಕರೆಯಲಾಗುತ್ತದೆ. ಇದು ಸೂರ್ಯನಿಂದ ಸುಮಾರು 1.6 ಬೆಳಕಿನ ವರ್ಷಗಳಷ್ಟು ದೂರದವರೆಗೆ ವಿಸ್ತರಿಸಿರಬಹುದು. ದೀರ್ಘ ಅವಧಿಯ ಅನೇಕ ಧೂಮಕೇತುಗಳು ಇಲ್ಲಿಂದಲೇ ಬರುತ್ತವೆ ಎಂದು ನಂಬಲಾಗಿದೆ.
3. ಸೌರವ್ಯೂಹದ ಶೇ.99.8ಕ್ಕೂ ಹೆಚ್ಚು ದ್ರವ್ಯರಾಶಿ ಸೂರ್ಯನಲ್ಲೇ ಇದೆ
ಸೌರವ್ಯೂಹದಲ್ಲಿ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ಸೇರಿದಂತೆ ಅನೇಕ ವಸ್ತುಗಳಿವೆ. ಆದರೆ ಇವೆಲ್ಲದರ ನಡುವೆ ಸೂರ್ಯ ಎಷ್ಟು ದೊಡ್ಡದು ಗೊತ್ತಾ? ಸೌರವ್ಯೂಹದ ಒಟ್ಟು ದ್ರವ್ಯರಾಶಿಯ ಸುಮಾರು ಶೇ.99.8ಕ್ಕೂ ಹೆಚ್ಚು ಭಾಗ ಸೂರ್ಯನಲ್ಲೇ ಇದೆ. ಅಂದರೆ ಉಳಿದ ಎಲ್ಲಾ ಗ್ರಹಗಳು, ಅವುಗಳ ಚಂದ್ರಗಳು, ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳ ಒಟ್ಟು ದ್ರವ್ಯರಾಶಿ ಸೂರ್ಯನೊಂದಿಗೆ ಹೋಲಿಸಿದರೆ ಅತ್ಯಂತ ಚಿಕ್ಕದು.
4. ಶನಿಗ್ರಹವನ್ನು ನೀರಿನಲ್ಲಿ ಹಾಕಿದರೆ ತೇಲುತ್ತದಂತೆ!
ಇದು ಕೇಳಲು ವಿಚಿತ್ರವಾಗಬಹುದು. ಆದರೆ ಶನಿಗ್ರಹದ ಸಾಂಧ್ರತೆ ಸರಾಸರಿ ಸಾಂದ್ರತೆ ನೀರಿಗಿಂತ ಕಡಿಮೆ. ಶನಿಗ್ರಹ ಮುಖ್ಯವಾಗಿ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿದೆ. ಹೀಗಾಗಿ ಅದನ್ನು ಹಿಡಿದಿಡುವಷ್ಟು ದೊಡ್ಡ ನೀರಿನ ತೊಟ್ಟಿ ಇದ್ದರೆ, ಶನಿಗ್ರಹವು ನೀರಿನ ಮೇಲೆ ತೇಲುವ ಸಾಧ್ಯತೆಯಿದೆ. ಖಂಡಿತವಾಗಿಯೂ ಅಷ್ಟು ದೊಡ್ಡ ಬಾತ್‌ಟಬ್ ಅಥವಾ ನೀರಿನ ಪಾತ್ರೆ ಸೌರವ್ಯೂಹದಲ್ಲಿ ಇಲ್ಲ ಎಂಬುದು ಬೇರೆ ಮಾತು!
5. ಸೂರ್ಯನಿಗೆ ಹತ್ತಿರವಿದ್ದರೂ ಬುಧ ಅಲ್ಲ, ಶುಕ್ರವೇ ಅತ್ಯಂತ ಬಿಸಿ ಗ್ರಹ
ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವ ಗ್ರಹ ಬುಧ. ಹೀಗಾಗಿ ಅದು ಅತ್ಯಂತ ಬಿಸಿ ಗ್ರಹ ಎಂದು ನೀವು ಭಾವಿಸಬಹುದು. ಆದರೆ ಅದು ಹಾಗಿಲ್ಲ. ನಮ್ಮ ಸೌರವ್ಯೂಹದ ಅತ್ಯಂತ ಬಿಸಿ ಗ್ರಹ ಶುಕ್ರ. ಅದರ ದಟ್ಟವಾದ ಕಾರ್ಬನ್ ಡೈಆಕ್ಸೈಡ್ ವಾತಾವರಣವು ಶಾಖವನ್ನು ಹೊರಗೆ ಹೋಗದಂತೆ ಬಂಧಿಸಿಟ್ಟುಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಗ್ರೀನ್‌ಹೌಸ್ ಪರಿಣಾಮ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ ಶುಕ್ರ ಗ್ರಹದ ಮೇಲ್ಮೈ ತಾಪಮಾನ ಸುಮಾರು 470 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇದು ಸೀಸವನ್ನು ಕೂಡ ಕರಗಿಸುವಷ್ಟು ಬಿಸಿಯಾಗಿದೆ.
6. ಗ್ರಹಗಳ ನಡುವಿನ ಅಂತರ ಊಹಿಸುವುದಕ್ಕಿಂತಲೂ ಅಗಾಧ
ನಾವು ಪುಸ್ತಕಗಳಲ್ಲಿ ಸೌರವ್ಯೂಹದ ಚಿತ್ರಗಳನ್ನು ನೋಡಿದಾಗ ಗ್ರಹಗಳು ಒಂದಕ್ಕೊಂದು ಹತ್ತಿರದಲ್ಲಿರುವಂತೆ ಕಾಣುತ್ತವೆ. ಆದರೆ ವಾಸ್ತವದಲ್ಲಿ ಅವುಗಳ ನಡುವಿನ ಅಂತರ ಅತ್ಯಂತ ದೊಡ್ಡದು. ಅಂತರಿಕ್ಷದ ಬಹುಭಾಗ ಖಾಲಿ ಜಾಗವೇ ಆಗಿದೆ. ಗ್ರಹಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿದರೂ ಅವುಗಳ ನಡುವಿನ ಅಗಾಧ ಅಂತರವನ್ನು ಊಹಿಸುವುದು ಸುಲಭವಲ್ಲ. ಸೌರವ್ಯೂಹದ ಚಿತ್ರಗಳಲ್ಲಿ ಈ ಅಂತರವನ್ನು ಸರಿಯಾದ ಪ್ರಮಾಣದಲ್ಲಿ ತೋರಿಸಿದರೆ, ಗ್ರಹಗಳು ತುಂಬಾ ದೂರದಲ್ಲಿರುವುದರಿಂದ ಅವುಗಳನ್ನು ಒಂದೇ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸುವುದೇ ಕಷ್ಟವಾಗುತ್ತದೆ.
7. ಯುರೇನಸ್ ಮತ್ತು ನೆಪ್ಚೂನ್‌ನಲ್ಲಿ ವಜ್ರದ ಮಳೆಯಾಗುತ್ತದೆಯೇ?
ಮಳೆ ಎಂದರೆ ನೀರು ಎಂದು ನಾವು ಭಾವಿಸುತ್ತೇವೆ. ಆದರೆ ಸೌರವ್ಯೂಹದ ಕೆಲವು ಗ್ರಹಗಳಲ್ಲಿ ವಜ್ರಗಳ ಮಳೆ ಸುರಿಯಬಹುದು! ಯುರೇನಸ್ ಮತ್ತು ನೆಪ್ಚೂನ್‌ನ ಆಳವಾದ ವಾತಾವರಣದಲ್ಲಿ ಅಪಾರ ಒತ್ತಡ ಮತ್ತು ಹೆಚ್ಚಿನ ಉಷ್ಣತೆಯಿದೆ. ಈ ಪರಿಸ್ಥಿತಿಯಲ್ಲಿ ಮೀಥೇನ್‌ನಲ್ಲಿರುವ ಕಾರ್ಬನ್ ಬೇರ್ಪಟ್ಟು ಸ್ಫಟಿಕ ರೂಪದಲ್ಲಿ ವಜ್ರಗಳಾಗಿ ಪರಿವರ್ತನೆಯಾಗಬಹುದು ಎಂದು ಪ್ರಯೋಗಗಳು ಮತ್ತು ಅಧ್ಯಯನಗಳು ಸೂಚಿಸುತ್ತವೆ. ಈ ವಜ್ರಗಳು (diamond) ನಂತರ ಗ್ರಹದ ಒಳಭಾಗದ ಕಡೆಗೆ ಸುರಿಯುವ ಸಾಧ್ಯತೆಯಿದೆ. ಅಂದರೆ ಅಲ್ಲಿ ನಿಜವಾಗಿಯೂ ʼವಜ್ರದ ಮಳೆʼ ಸುರಿಯುತ್ತಿರಬಹುದು!
8. Solar System:ಗುರುಗ್ರಹದ ಕೆಂಪು ಚುಕ್ಕೆ ನೂರಾರು ವರ್ಷಗಳಿಂದ ಬೀಸುತ್ತಿರುವ ಬಿರುಗಾಳಿ
ಗುರುಗ್ರಹದ ಮೇಲಿರುವ ದೈತ್ಯ ಕೆಂಪು ಚುಕ್ಕೆ ಸೌರವ್ಯೂಹದ ಅತ್ಯಂತ ಪ್ರಸಿದ್ಧ ದೃಶ್ಯಗಳಲ್ಲಿ ಒಂದು. ಇದು ಸಾಮಾನ್ಯ ಚುಕ್ಕೆಯಲ್ಲ. ಇದು ನೂರಾರು ವರ್ಷಗಳಿಂದ ಮುಂದುವರಿದಿರುವ ಬೃಹತ್ ಚಂಡಮಾರುತ. 1800ರ ದಶಕದಲ್ಲಿ ಈ ಬಿರುಗಾಳಿಯ ಅಗಲ ಸುಮಾರು 40,000 ಕಿಲೋಮೀಟರ್‌ಗಳಷ್ಟಿತ್ತು ಎಂದು ಅಂದಾಜಿಸಲಾಗಿದೆ. ಆಗ ಅದರೊಳಗೆ ಸುಮಾರು ಮೂರು ಭೂಮಿಗಳನ್ನು ಜೋಡಿಸಬಹುದಾಗಿತ್ತು. ಆದರೆ ಈಗ ಈ ಕೆಂಪು ಚುಕ್ಕೆ ನಿಧಾನವಾಗಿ ಚಿಕ್ಕದಾಗುತ್ತಿದೆ. ಅದರ ಗಾತ್ರ ಸುಮಾರು 16,500 ಕಿಲೋಮೀಟರ್‌ಗಳವರೆಗೆ ಕುಗ್ಗಿದೆ ಮತ್ತು ಮುಂದೆಯೂ ಬದಲಾವಣೆ ಕಾಣುತ್ತಿದೆ.
9. Solar System: ಮಂಗಳ ಗ್ರಹದ ಜ್ವಾಲಾಮುಖಿ ಎವರೆಸ್ಟ್‌ಗಿಂತ ಸುಮಾರು ಮೂರು ಪಟ್ಟು ಎತ್ತರ
ಭೂಮಿಯ (earth) ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್. ಆದರೆ ಸೌರವ್ಯೂಹದ ಅತ್ಯಂತ ದೊಡ್ಡ ಜ್ವಾಲಾಮುಖಿ ಮಂಗಳ ಗ್ರಹದಲ್ಲಿದೆ. ಇದರ ಹೆಸರು ʼಒಲಿಂಪಸ್ ಮಾನ್ಸ್ʼ. ಇದು ಸುಮಾರು 21.9 ಕಿಲೋಮೀಟರ್ ಎತ್ತರವಿದ್ದು, ಎವರೆಸ್ಟ್‌ಗಿಂತ ಸುಮಾರು ಮೂರು ಪಟ್ಟು ಎತ್ತರವಾಗಿದೆ. ಮಂಗಳ ಗ್ರಹದಲ್ಲಿ ಭೂಮಿಯಂತೆ ಸಕ್ರಿಯ ಫಲಕ ಚಲನೆಗಳು ಇಲ್ಲದಿರುವುದರಿಂದ, ಒಂದೇ ಪ್ರದೇಶದಲ್ಲಿ ಜ್ವಾಲಾಮುಖಿ ಚಟುವಟಿಕೆ ದೀರ್ಘಕಾಲ ಮುಂದುವರಿದು ಈ ದೈತ್ಯ ಜ್ವಾಲಾಮುಖಿ ರೂಪುಗೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
10. ನೆಪ್ಚೂನ್ ಆಚೆ ಇದೆ ಕೈಪರ್ ಬೆಲ್ಟ್
ನೆಪ್ಚೂನ್ ಗ್ರಹದ ಆಚೆ ಸೌರವ್ಯೂಹ ಮುಗಿಯುವುದಿಲ್ಲ. ಅದರಾಚೆ ಅತ್ಯಂತ ಶೀತಲವಾದ ಪ್ರದೇಶವೊಂದು ಇದೆ. ಇದನ್ನು ʼಕೈಪರ್ ಬೆಲ್ಟ್ʼ ಎಂದು ಕರೆಯಲಾಗುತ್ತದೆ. ಇಲ್ಲಿ ಹಿಮ, ಕಲ್ಲು ಮತ್ತು ವಿವಿಧ ಘನೀಕೃತ ವಸ್ತುಗಳಿಂದ ಕೂಡಿದ ಲಕ್ಷಾಂತರ ಸಣ್ಣ ಖಗೋಳಕಾಯಗಳಿವೆ. ಪ್ಲುಟೊ, ಹೌಮಿಯಾ ಮತ್ತು ಮಕಿಮಕಿ ಸೇರಿದಂತೆ ಕೆಲವು ಪ್ರಸಿದ್ಧ ಕುಬ್ಜ ಗ್ರಹಗಳು ಈ ಪ್ರದೇಶಕ್ಕೆ ಸಂಬಂಧಿಸಿವೆ. ಕೈಪರ್ ಬೆಲ್ಟ್ ಅನ್ನು ಆರಂಭಿಕ ಸೌರವ್ಯೂಹದ ಒಂದು ರೀತಿಯ ಪಳೆಯುಳಿಕೆ ದಾಖಲೆ ಎಂದೂ ಕರೆಯಬಹುದು. ಏಕೆಂದರೆ ಸುಮಾರು 460 ಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಇದು ವಿಜ್ಞಾನಿಗಳಿಗೆ ಪ್ರಮುಖ ಸುಳಿವುಗಳನ್ನು ನೀಡುತ್ತದೆ.


Click it and Unblock the Notifications
