ಹಾಲಿನ ಬೆಲೆ ಏರಿಕೆಗೆ ಯಡಿಯೂರಪ್ಪ ಸಮರ್ಥನೆ

ಟೋನ್ಡ್ ಹಾಲನ್ನು ಮೂರು ರುಪಾಯಿ ಏರಿಸಲಾಗಿದ್ದರೆ, ಹಸಿರು ಬಣ್ಣದ ಪ್ಯಾಕೆಟ್ ಇರುವ ಹೋಮೋಜಿನೈಸ್ಡ್ ಹಸು ಹಾಲನ್ನು 18ರು.ಯಿಂದ 22 ರು.ಗೆ ಮತ್ತು ಕೇಸರಿ ಪ್ಯಾಕೆಟ್ ಇರುವ ಕೆನೆಭರಿತ ಹಾಲನ್ನು 22ರು.ಯಿಂದ 26ರು.ಗೆ ಏರಿಸಲಾಗಿದೆ. ನೀಲಿ ಬಣ್ಣದ ಪ್ಯಾಕೆಟ್ ಇರುವ ಹಾಲು ಮೂರು ರು. ಏರಿದ್ದರೆ ಉಳಿದೆರಡಕ್ಕೆ ನಾಲ್ಕು ರು. ಏರಿಸಲಾಗಿದೆ. ಈ ಬೆಲೆಗಳು ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬಂದಿವೆ.
ಹಾಲಿನ ದರ ಏರಿಸುವ ಕುರಿತು ಪ್ರತಿಪಕ್ಷಗಳೊಂದಿಗೂ ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳೆರಡೂ ಹಾಲಿನ ಬೆಲೆ ಏರಿಕೆಗೆ ಸಮ್ಮತಿಸಿದ್ದವು ಎಂದು ಯಡಿಯೂರಪ್ಪ ಮೈಸೂರಿನ ಹೆಲಿಪ್ಯಾಡಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಮೂರು ರು.ಯಲ್ಲಿನ ಎರಡೂವರೆ ರುಪಾಯಿ ಮತ್ತು ಸರಕಾರದಿಂದ ನೀಡಲಾಗುತ್ತಿರುವ ಎರಡು ರು. ಸೇರಿ ನಾಲ್ಕುವರೆ ರು. ರೈತರಿಗೆ ಸಂದಾಯವಾಗಲಿದೆ. ಪ್ರತಿಶತ 6ರಂತೆ 70 ಸಾವಿರ ರು.ವರೆಗೆ ಹಸುಗಳನ್ನು ಕೊಳ್ಳಲು ರೈತರಿಗೆ ಸಾಲ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಸ್ಥೆಗಳಿಗೆ ಹಣಕಾಸು ಸಹಾಯವನ್ನು ವೃದ್ಧಿಸುವ ಕುರಿತಂತೆ ನಾಳೆ ಬೆಂಗಳೂರಿನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.












Click it and Unblock the Notifications