ಕಬ್ಬನ್ ಪಾರ್ಕ್‌ನಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ
ಬೆಂಗಳೂರು, ಏ. 24 : ಕಬ್ಬನ್ ಪಾರ್ಕ್‌ನಲ್ಲಿ ಪ್ರಾಯೋಗಿಕವಾಗಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು.
ಶುಕ್ರವಾರ ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಭಾನುವಾರ ಕಬ್ಬನ್ ಉದ್ಯಾನಕ್ಕೆ ವಯೋವೃದ್ಧರು, ಮಕ್ಕಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧ]
ಕಬ್ಬನ್ ಪಾರ್ಕ್‌ನ ಎಲ್ಲಾ ಪ್ರವೇಶ ದ್ವಾರಗಳನ್ನು ಏ.25ರ ಶನಿವಾರ ರಾತ್ರಿ 10 ಗಂಟೆಯಿಂದ ಏ.27ರ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ಮುಚ್ಚಲಾಗಿರುತ್ತದೆ. [ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ಬೇಡ]

ಪರ್ಯಾಯ ಮಾರ್ಗಗಳು
* ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಕೆ.ಆರ್.ವೃತ್ತದ ಕಡೆಗೆ ಮತ್ತು ವಿಧಾನಸೌಧದ ಕಡೆ ಹೋಗುವ ವಾಹನಗಳ ಸಂಚಾರವನ್ನು ಕ್ವೀನ್ಸ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ವಾಹನಗಳು ಸಿಟಿಓ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡತಿರುವು ಪಡೆದು ಡಾ.ಅಂಬೇಡ್ಕರ್ ಮಾರ್ಗವಾಗಿ ಕೆ.ಆರ್.ವೃತ್ತಕ್ಕೆ ಮತ್ತು ವಿಧಾನಸೌಧ ಕಡೆಗೆ ಹೋಗಬಹುದು.
* ಯುಬಿಸಿಟಿ ಕಡೆಯಿಂದ ಬಂದು ಸಿದ್ದಲಿಂಗಯ್ಯ ವೃತ್ತದ ಮೂಲಕ ಪಾರ್ಕ್ ಪ್ರವೇಶಿಸುವ ವಾಹನವನ್ನು ಸಿದ್ದಲಿಂಗಯ್ಯ ವೃತ್ತದಲ್ಲಿ ನಿಷೇಧಿಸಲಾಗಿದೆ. ಸವಾರರು ಕಸ್ತೂರಿ ಬಾ ರಸ್ತೆ, ಕ್ವೀನ್ಸ್ ವೃತ್ತ, ಸಿಡಿಓ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡತಿರುವು ಪಡೆದು ಡಾ.ಅಂಬೇಡ್ಕರ್ ಮಾರ್ಗವಾಗಿ ಕೆ.ಆರ್.ವೃತ್ತ ಮತ್ತು ವಿಧಾನಸೌಧ ಕಡೆ ಹೋಗಬಹುದು.
* ಕೆ.ಆರ್.ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ಕಡೆ ಸಾಗುವ ವಾಹನಗಳನ್ನು ಕೆ.ಆರ್.ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ವಾಹನಗಳು ನೃಪತುಂಗ ರಸ್ತೆ, ಪೊಲೀಸ್ ಕಾರ್ನರ್, ಕಸ್ತೂರಿ ಬಾ ರಸ್ತೆ, ಮೂಲಕ ಸಿದ್ದಲಿಂಗಯ್ಯ ವೃತ್ತದ ಕಡೆ ಅಥವ ಡಾ.ಅಂಬೇಡ್ಕರ್ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ಕಾಫೀ ಬೋರ್ಡ್, ಬಾಳೇಕುಂದ್ರಿ ವೃತ್ತ, ಕ್ವೀನ್ಸ್ ರಸ್ತೆ ಮೂಲಕ ಸಿದ್ದಲಿಂಗಯ್ಯ ವೃತ್ತಕ್ಕೆ ತಲುಪಬಹುದಾಗಿದೆ.
* ಹಡ್ಸನ್ ವೃತ್ತದ ಮೂಲಕ ಉದ್ಯಾನವನ ಪ್ರವೇಶಿಸುವ ವಾಹನಗಳ ಸಂಚಾರವನ್ನು ಹಡ್ಸನ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಈ ವಾಹನಗಳು ಕಸ್ತೂರಿ ಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ವಿನ್ಸ್ ವೃತ್ತದ ಮೂಲಕ ಮುಂದೆ ಸಾಗಬಹುದು.
* ಗೋಪಾಲ ಗೌಡ ವೃತ್ತದ ಮೂಲಕ ಉದ್ಯಾನ ಪ್ರವೇಶಿಸುವ ವಾಹನಗಳನ್ನು ಗೋಪಾಲ ಗೌಡ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಈ ವಾಹನಗಳು ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬಹುದಾಗಿದೆ.
ವಾಹನ ನಿಲುಗಡೆ ಸ್ಥಳಗಳು : ಭಾನುವಾರ ಕಬ್ಬನ್ ಉದ್ಯಾನಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಕಿಂಗ್ಸ್ ರಸ್ತೆಯಲ್ಲಿ, ಬಾಲಭವನ ರಸ್ತೆ ಜಂಕ್ಷನ್‌ನಿಂದ ಕಿಂಗ್ ಎಡ್ವರ್ಡ್ ಪ್ರತಿಮೆ ವರೆಗಿನ ರಸ್ತೆಯ ಪೂರ್ವದ ಕಡೆ ನಿಲುಗಡೆ ಮಾಡಬಹುದು.
ವಿಶ್ವೇಶ್ವರಯ್ಯ ಮೂಸಿಯಂಗೆ ಬರುವ ಬಸ್ಸು, ಟೆಂಪೋ ಟ್ರಾವೆಲ್ಲರ್, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಕಸ್ತೂರಿ ಬಾ ರಸ್ತೆಯ ಕಡೆಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ ಪ್ರವೇಶ ದ್ವಾರದ ಮುಖೇನ ಒಳಸಾಗಿ, ಸದರಿ ಮ್ಯೂಸಿಯಂನ ಹಿಂಭಾಗದ ಕಬ್ಬನ್ ಪಾರ್ಕ್ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ, ಅದೇ ದ್ವಾರದಿಂದ ಕಸ್ತೂರಿ ಬಾ ರಸ್ತೆಯ ಮೂಲಕ ನಿರ್ಗಮಿಸಬೇಕು.












Click it and Unblock the Notifications