ಜ. 20ರಿಂದ ಕೊಬ್ಬರಿ ಖರೀದಿ; ಬೆಂಬಲ ಬೆಲೆ ಎಷ್ಟು?
ಚಿಕ್ಕಮಗಳೂರು, ಜನವರಿ 19: ಕೊಬ್ಬರಿ ಬೆಳೆಗಾರರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣ ಮಟ್ಟದ ಉಂಡೆ ಕೊಬ್ಬರಿ ಖರೀದಿಯನ್ನು ಜನವರಿ 20ರಿಂದ ಆರಂಭಿಸಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ. ಎನ್. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 20ರಿಂದ ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಕೊಬ್ಬರಿ ಖರೀದಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖರೀದಿ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ದಿನ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಖರೀದಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಬೆಂಬಲ ಬೆಲೆ ಎಷ್ಟು?; ಸರ್ಕಾರದ ನಿರ್ದೇಶನದನ್ವಯ ಪ್ರತಿ ಕ್ವಿಂಟಾಲ್ ಗುಣಮಟ್ಟದ ಉಂಡೆ ಕೊಬ್ಬರಿಗೆ 12,000 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನಫೆಡ್ ಹಾಗೂ ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ನೇಮಿಸಲಾಗಿದೆ.
ಖರೀದಿ ಸಂಸ್ಥೆಗಳು ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಜನವರಿ 20ರಿಂದ ಅನ್ವಯವಾಗುವಂತೆ 45 ದಿನಗಳವರೆಗೆ ರೈತರ ನೋಂದಣಿ ಕಾರ್ಯವನ್ನು ಬಯೋಮೆಟ್ರಿಕ್ ಮೂಲಕ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಖರೀದಿ ಸಂಸ್ಥೆಗಳು ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಫೆಡ್ ಮಾರ್ಗಸೂಚಿಯನ್ನು ಅನುಸರಿಸಬೇಕು. ಖರೀದಿಸಿದ ಕೊಬ್ಬರಿಯನ್ನು ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕೊಬ್ಬರಿ ಖರೀದಿಸುವಾಗ ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತದೆ. ಕೊಬ್ಬರಿ ಬೆಳೆಗಾರರು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಬಹುದಾಗಿದೆ.
ಚಿಕ್ಕಮಗಳೂರು ಮಾತ್ರವಲ್ಲ ವಿವಿಧ ಜಿಲ್ಲೆಗಳಲ್ಲಿ ಸಹ ಕನಿಷ್ಟ ಬೆಂಬಲ ಯೋಜನೆಯಡಿ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಗೆ ಶೀಘ್ರವೇ ನೋಂದಣಿ ಆರಂಭವಾಗಲಿದೆ. 2024ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಉಂಡೆಕೊಬ್ಬರಿಗೆ ಸರ್ಕಾರವು ಪ್ರತಿ ಕ್ವಿಂಟಾಲಿಗೆ ರೂ. 12,000ರಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ.
2023ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ 2024ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಅನುಮೋದನೆ ನೀಡಲಾಗಿತ್ತು. ಸರ್ಕಾರ 2018-19ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಎಲ್ಲಾ ಕಡ್ಡಾಯ ಬೆಳೆಗಳ MSPಗಳನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚು ನಿಗದಿಪಡಿಸಲಾಗುತ್ತಿದೆ.
2024ರ ಋತುವಿನಲ್ಲಿ ಪ್ರತಿ ಕ್ವಿಂಟಾಲ್‌ಗೆ 11,160 ಮತ್ತು ಕೊಬ್ಬರಿ ಗಿಟುಕಿಗೆ ರೂ. 12,000 ದರವನ್ನು ನಿಗದಿಪಡಿಸಲಾಗಿದೆ. ಮಿಲ್ಲಿಂಗ್ ಕೊಬ್ಬರಿಗೆ ಶೇಕಡಾ 51.84 ಮತ್ತು ಕೊಬ್ಬರಿ ಗಿಟುಕಿಗೆ ಶೇಕಡಾ 63.26 ರಷ್ಟು ಮಾರ್ಜಿನ್ ಅನ್ನು ಖಚಿತಪಡಿಸಲಾಗಿದೆ. ಇದು ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಮೀರಿದೆ.
ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆಯನ್ನು ತೆಗೆಯಲು ಬಳಸಲಾಗುತ್ತದೆ. ಆದರೆ ಗಿಟುಕು/ ಖಾದ್ಯ ಕೊಬ್ಬರಿಯನ್ನು ಒಣ ಹಣ್ಣಾಗಿ ಸೇವಿಸಲಾಗುತ್ತದೆ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡು ಕೊಬ್ಬರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಕೊಬ್ಬರಿ ಗಿಟುಕನ್ನು ಪ್ರಧಾನವಾಗಿ ಉತ್ಪಾದಿಸಲಾಗುತ್ತದೆ.












Click it and Unblock the Notifications