ಕೃಷಿ ಸ್ಟಾರ್ಟ್ ಅಪ್‌ಗಳಿಗೆ ಸಬ್ಸಿಡಿ; ಷರತ್ತುಗಳು, ವಿವರ
ಬೆಂಗಳೂರು, ಫೆಬ್ರವರಿ 09: ಕರ್ನಾಟಕ ಸರ್ಕಾರ ಕೃಷಿ ಕ್ಷೇತ್ರದಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲು ಸಬ್ಸಿಡಿ ಘೋಷಣೆ ಮಾಡಿದೆ. ಹೊಸ ಉದ್ಯಮ ಸ್ಥಾಪನೆ, ಇರುವ ಉದ್ಯಮಗಳ ಅಭಿವೃದ್ಧಿಗೆ ಸಹ ಈ ಯೋಜನೆಯಡಿ ಸಹಾಯಧನ ದೊರೆಯಲಿದೆ.
2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ನವೋದ್ಯಮ ಯೋಜನೆಯನ್ನು ಈ ವರ್ಷ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಯೋಜನೆ ಜಾರಿಗೊಳಿಸಲಾಗಿದೆ.

ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳ/ ಘಟಕಗಳ ವಿವರಗಳನ್ನು ರೈತರ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಕರೆ ನೀಡಲಾಗಿದೆ.
ಕೃಷಿ ನವೋದ್ಯಮಗಳಿಗೆ ಆರ್ಥಿಕ ನೆರವು: ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇಕಡ 50ರಷ್ಟು ಸಹಾಯಧನವನ್ನು (ಕನಿಷ್ಟ ರೂ. 5 ಲಕ್ಷದಿಂದ ಗರಿಷ್ಟ ರೂ. 20 ಲಕ್ಷ ವರೆಗೆ) ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.
ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ಆರ್ಥಿಕ ನೆರವನ್ನು ಸಹ ನೀಡಲಾಗುತ್ತದೆ. ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇಕಡಾ 50 ರಷ್ಟು ಸಹಾಯಧನವನ್ನು (ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಟ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುತ್ತದೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಷರತ್ತುಗಳು ಅನ್ವಯಿಸುತ್ತದೆ. ಅರ್ಜಿ ಸಲ್ಲಿಸುವ ಅಗ್ರಿ ಸ್ಟಾರ್ಟ್‍ಅಪ್ (Agri startup) ಗಳು ಪ್ರೈವೇಟ್ ಲಿಮಿಟೆಡ್ ಕಂಪನಿ Act,, 2013) ಅಥವಾ ಪಾರ್ಟನರ್‍ಸಿ ಫಾರ್ಮ (ರಿಜಿಸ್ಟರ್ ಅಂಡರ್ ಸೆಕ್ಷನ್ 59 ಆಪ್ ದಿ ಪಾರ್ಟನರ್ ಸಿಪ್ ಆಕ್ಟ್, 1932) ಅಥವಾ ಲಿಮಿಟೆಡ್ ಲಯಾಬಿಲಿಟಿ ಪಾರ್ಟನರ್‍ಸಿಪ್(ದಿ ಲಿಮಿಟೆಡ್ ಲಯಾಬಿಲಿಟಿ ಪಾರ್ಟನರ್‍ಸಿಪ್ ಆಕ್ಟ್, 2008) ನಡಿ ಕಡ್ಡಾಯವಾಗಿ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು.
ನೋಂದಣಿಯಿಂದ ಇಲ್ಲಿಯವರೆಗೆ ಯಾವುದೇ ಆರ್ಥಿಕ ವರ್ಷದಲ್ಲಿ ವ್ಯವಹಾರ ಗಳಿಕೆಯು ರೂ. 5 ಕೋಟಿ ಮೀರುವಂತಿಲ್ಲ.ಯಾವುದೇ ಸ್ಟಾರ್ಟ್‍ಅಪ್ ನೋಂದಣಿಯಿಂದ ಇಲ್ಲಿಯವರೆಗೆ 3 ವರ್ಷ ಮೀರುವಂತಿಲ್ಲ.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ಪಡೆಯಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸುವುದು.
ಭರ್ತಿ ಮಾಡಿದ ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಫೆಬ್ರವರಿ 28ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.











Click it and Unblock the Notifications