ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಭಾರಿ ಮಾವು
ಶಿವಮೊಗ್ಗ, ಏಪ್ರಿಲ್ 22: ಸ್ವಯಂಕೃಷಿಯಿಂದ ಶಿವಮೊಗ್ಗದ ಕೆಲ ವಿದ್ಯಾರ್ಥಿಗಳು ಕೃಷಿ ಪದವಿಯಲ್ಲಿ ಚಿನ್ನದ ಪದಕಗಳ ಕೊಳ್ಳೆ ಹೊಡೆದಿರುವುದನ್ನು ಇತ್ತೀಚೆಗೆ ಕೇಳಿದಿರಿ. ತಾಜಾ ಏನಪ್ಪಾ ಅಂದರೆ ಇದೇ ಮಲೆನಾಡಿನಿಂದ ಈ ಬಾರಿ ಭಾರಿ ಪ್ರಮಾಣದಲ್ಲಿ ಮಾವು ಕೃಷಿ ಆಗಿದೆ.
ಜಿಲ್ಲೆಯ ಮಾವು ಬೆಳೆಗಾರರು ಬಂಪರ್ ಬೆಳೆ ನಿರೀಕ್ಷಿಸಿದ್ದು, ದಾಖಲೆಯ 35,000 ಟನ್ ಮಾವಿನಹಣ್ಣು ಮಾರುಕಟ್ಟೆಗೆ ಬರುವ ಅಂದಾಜಿದೆ. ಗಮನಾರ್ಹವೆಂದರೆ ಜಿಲ್ಲೆಯ ಮಾವು ಬೆಳೆಗಾರರು ವರ್ಷದಿಂದ ವರ್ಷಕ್ಕೆ ಮಾವು ಬೆಳೆ ಪ್ರದೇಶವನ್ನು ವಿಸ್ತರಿಸುತ್ತಾ ಸಾಗಿದ್ದಾರೆ.

ಶಿವಮೊಗ್ಗದ ಈ ಮಾವು ಸ್ಥಳೀಯ ಮಾರುಕಟ್ಟೆಯ ಜತೆಗೆ ದೂರದ ಮಾರುಕ್ಟೆಟಗಳಿಗೆ ಸರಬರಾಜು ಆಗುತ್ತಿದೆ. ಇಲ್ಲಿನ ಹಣ್ಣು ಬೆಂಗಳೂರು, ಹುಬ್ಬಳ್ಳಿ ಮತ್ತು ಧಾರವಾಡ ಮಾರುಕಟ್ಟೆಗಳನ್ನೂ ತಲುಪುತ್ತಿದೆ.
ಅಂದಹಾಗೆ ಶಿಕಾರಿಪುರ ಮತ್ತು ಸೊರಬ ತಾಲೂಕು ಪ್ರದೇಶಗಳು ಮಾವು ಕೃಷಿಗೆ ಪ್ರಶಸ್ತ ಸ್ಥಳಗಳಾಗಿವೆ. ಜಿಲ್ಲೆಯಲ್ಲಿ ಬೆಳೆಯುವ ಮಾವು ಬೆಳೆಯಲ್ಲಿ ಅರ್ಧದಷ್ಟು ಹಣ್ಣನ್ನು ಈ ಎರಡೂ ತಾಲೂಕುಗಳಲ್ಲಿಯೇ ಬೆಳೆಯಲಾಗುತ್ತದೆ!
ಮಾರುಕಟ್ಟೆಯಲ್ಲಿ ಈಗಾಗಲೇ ಮಾವಿನ ಹಣ್ಣು ಬರಲಾರಂಭಿಸಿದೆಯಾದರೂ ಹಣ್ಣುಗಳು ಇನ್ನೂ ಪಕ್ವವಾಗಲಿ ಎಂದು ಬಹುತೇಕ ಬೆಳೆಗಾರರು ತಡಮಾಡುತ್ತಿದ್ದಾರೆ. ಇನ್ನು ದಿನಗಳಲ್ಲಿ ಆಲ್ಫಾನ್ಸೋ ಮಾವು ಬರುತ್ತದೆಯಾದರೂ ಮಲ್ಲಿಕಾ, ಕಾಶಿ ಮಾವು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ ಎಂದು ವ್ಯಾಪಾರಿ ಬಷೀರ್ ಹೇಳುತ್ತಾರೆ.
ಆದರೆ ಅಕಾಲಿಕ ಮಳೆಯಾದರೆ ಏನಪ್ಪಾ ಗತಿ ಎಂದು ರೈತರು ಚಿಂತಿತರಾಗಿದ್ದಾರೆ. ಈ ಬಗ್ಗೆ ರೈತರಲ್ಲಿ ಜಾಗ್ರತೆ ಮೂಡಿಸಲಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಂ ವಿಶ್ವನಾಥ್ ಅವರು.












Click it and Unblock the Notifications