ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ; ರೈತರು ನೋಂದಣಿ ಮಾಡಿಸಲು ಕರೆ
ದಾವಣಗೆರೆ, ಡಿಸೆಂಬರ್ 29; ಈ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಭತ್ತ ಮತ್ತು ರಾಗಿ ಖರೀದಿಸಲು ದಾವಣಗೆರೆ ಜಿಲ್ಲೆಯ ರೈತರಿಂದ ನೋಂದಣಿಯನ್ನು ಆಹ್ವಾನಿಸಲಾಗಿದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿ ನಡೆಯಲಿದೆ.
ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ನೇರವಾಗಿ ನೋಂದಾಯಿತ ರೈತರಿಂದ ಖರೀದಿಸಲು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.

ಆಸಕ್ತ ರೈತರು ತಾವು ಬೆಳೆದ ಭತ್ತ ಮತ್ತು ರಾಗಿಯ ಗುಣಮಟ್ಟವನ್ನು ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಪರಿಶೀಲಿಸಬೇಕು. ನಂತರ ರೈತರು ಕೃಷಿ ಇಲಾಖೆ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಬೇಕು.
ಬೆಂಬಲ ಬೆಲೆ ಎಷ್ಟು?; ಸರ್ಕಾರ ನಿಗದಿ ಮಾಡಿರುವಂತೆ ರಾಗಿ ಪ್ರತಿ ಕ್ವಿಂಟಲ್‍ಗೆ ರೂ. 3,846 ಮತ್ತು ಭತ್ತ ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ರೂ. 2,183, ಗ್ರೇಡ್-ಎ ಗೆ ರೂ. 2,203 ಗಳ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರೈತರ ನೋಂದಣಿ ಪ್ರಕ್ರಿಯೆಯು ಕಡ್ಡಾಯವಾಗಿದೆ.
ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುತ್ತದೆ. ಆದ್ದರಿಂದ ರೈತರು ಫ್ರೂಟ್ಸ್ ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡಬೇಕು.
ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟ ಗುಣಮಟ್ಟ ಪರೀಕ್ಷಕರು ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.
ರೈತರಿಂದ ಪ್ರತಿ ಎಕರೆಗೆ ರಾಗಿ 10ಕ್ವಿಂಟಾಲ್‌ನಂತೆ ರೈತರು ಹೊಂದಿರುವ ಜಮೀನಿಗೆ ಅನುಗುಣವಾಗಿ ಖರೀದಿಸಲಾಗುವುದು. ಹಾಗೂ ರೈತರಿಂದ ಭತ್ತವನ್ನು ಪ್ರತಿ ಎಕರೆಗೆ ಭತ್ತ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುವುದು.
ರೈತರು ತರುವ ರಾಗಿ ಮತ್ತು ಭತ್ತದ ಎಲ್ಲಾ ಚೀಲಗಳನ್ನು ಖರೀದಿ ಕೇಂದ್ರಗಳಲ್ಲಿ ಒಂದಾಗಿ ಪರಿಶೀಲಿಸುವುದರಿಂದಾಗಿ ರೈತರು ತಾವು ತರುವ ಪದಾರ್ಥಗಳು ಒಂದೇ ತರಹದ್ದಾಗಿರಬೇಕು. ಒಂದು ವೇಳೆ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಸಂಪೂರ್ಣ ಪ್ರಮಾಣವನ್ನು ತಿರಸ್ಕರಿಸಲಾಗುತ್ತದೆ.
ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ತಹಶೀಲ್ದಾರ್/ ಉಪವಿಭಾಗಾಧಿಕಾರಿಗಳು/ ಉಪನಿರ್ದೇಶಕರು (ಆಹಾರ), ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು.












Click it and Unblock the Notifications