ಲಾಲ್ ಬಾಗ್ ಪ್ರವೇಶ ಶುಲ್ಕ ದುಬಾರಿಯಾಗಲಿದೆ
ಬೆಂಗಳೂರು, ಸೆ.23 : ಪಾರ್ಕಿಂಗ್ ಶುಲ್ಕ ಹೆಚ್ಚಿಸಿ ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ನೀಡಿತ್ತು. ಸದ್ಯ ಲಾಲ್ ಬಾಗ್ ಸರದಿ. ಹೌದು, ಲಾಲ್ ಬಾಗ್ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡುವಂತೆ ಕೋರಿ ತೋಟಗಾರಿಕಾ ಇಲಾಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ಲಾಲ್ ಬಾಗ್ ಪ್ರವೇಶ ಶುಲ್ಕವನ್ನು 10ರಿಂದ 20ರೂ.ಗಳಿಗೆ ಏರಿಸುವ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶುಲ್ಕ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ ಹತ್ತು ವರ್ಷಗಳಿಂದ ಪಾರ್ಕ್ ಪ್ರವೇಶ ಶುಲ್ಕವನ್ನು ಹೆಚ್ಚಿಸಿಲ್ಲ. ಆದ್ದರಿಂದ ಪ್ರವೇಶ ಶುಲ್ಕ ಹೆಚ್ಚಳ ಮಾಡಲು ಅನುಮತಿ ನೀಡಬೇಕು. ಪಾರ್ಕ್ ನಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಆದ್ದರಿಂದ ಶುಲ್ಕ ಹೆಚ್ಚುಸುತ್ತೇವೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. (ಲಾಲ್‌ಬಾಗ್ ನಲ್ಲಿ ನೇತಾಡಲಿವೆ ಸಿಸಿಟಿವಿ)
ತೋಟಗಾರಿಕೆ ಇಲಾಖೆಯ ಪ್ರಸ್ತಾವನೆ ಸರ್ಕಾರ ಮುಂದಿದ್ದು, ಸರ್ಕಾರ ಒಪ್ಪಿಗೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ. ಹೊಸ ಪ್ರಸ್ತಾವನೆ ಜಾರಿಗೆ ಬಂದರೆ, ಲಾಲ್ ಬಾಗ್ ಪ್ರವೇಶಿಸಲು 20 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತಿದೆ.
ಪಾರ್ಕಿಂಗ್ ಶುಲ್ಕವೂ ಹೆಚ್ಚಳ : ಪ್ರವೇಶ ಶುಲ್ಕದ ಜೊತೆಗೆ ಲಾಲ್ ಬಾಗ್ ಸುತ್ತ-ಮುತ್ತವಿರುವ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ. ಬೈಕ್ ಗಳಿಗೆ 10, ಬಸ್ ಗಳಿಗೆ 100 ಮತ್ತು ಕಾರುಗಳಿಗೆ 50 ರೂ. ಶುಲ್ಕ ವಿಧಿಸುವ ಕುರಿತು ಪ್ರಸ್ತಾವೆ ಸಿದ್ಧಪಡಿಸಲಾಗಿದೆ.
ಲಾಲ್ ಬಾಗ್ ಸುತ್ತ-ಮುತ್ತಲಿನ ರಸ್ತೆಗಳ ಪಾರ್ಕಿಂಗ್ ಶುಲ್ಕ ಹೆಚ್ಚಿಸಿದರೆ, ರಜಾ ದಿನಗಳು ಮತ್ತು ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಹೆಚ್ಚು ಆದಾಯ ಸಂಗ್ರಹಣೆಯಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರಕಾರ ಪ್ರತಿದಿನ ಲಾಲ್ ಬಾಗ್ ಗೆ ಸುಮಾರು 4000 ಜನರು ಬಂದು ಹೋಗುತ್ತಾರೆ. ರಜಾ ದಿನಗಳಲ್ಲಿ ಈ ಸಂಖ್ಯೆ 10,000ಕ್ಕಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಶುಲ್ಕ ಹೆಚ್ಚಿಸಿ, ಆದಾಯ ಸಂಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಏಕಪಕ್ಷೀಯ ನಿರ್ಧಾರ : ಲಾಲ್ ಬಾಗ್ ಸಲಹಾ ಸಮಿತಿ ತೋಟಗಾರಿಕಾ ಇಲಾಖೆಯ ಈ ನಿರ್ಧಾರವನ್ನು ವಿರೋಧಿಸಿದೆ. ಶುಲ್ಕ ಹೆಚ್ಚಳದ ಕುರಿತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ಸಮಿತಿ ಅಧ್ಯಕ್ಷ ಪ್ರೊ.ಎಂ.ಆರ್.ದೊರೆಸ್ವಾಮಿ ಹೇಳಿದ್ದಾರೆ.












Click it and Unblock the Notifications