ಲಾಲ್ ಬಾಗ್ ದುಬಾರಿ ಆಯ್ತು ಕಣ್ರೀ!
ಬೆಂಗಳೂರು, ಮಾ. 14 : ಬೆಂಗಳೂರು ಮಹಾನಗರದ ಪ್ರತಿಷ್ಠಿತದ ಲಾಲ್ ಬಾಗ್ ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಉದ್ಯಾನಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ತೋಟಗಾರಿಕೆ ಇಲಾಖೆಯು ಹೆಚ್ಚಿಸಿದ್ದು, ಮಾ.11 ರಿಂದಲೇ ನೂತನ ದರ ಜಾರಿಗೆ ಬಂದಿದೆ.
ಮಾರ್ಚ್ 11 ರಿಂದಲೇ ವಾಹನ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡುವ ಹೊಸ ನಿಯಮಕ್ಕೆ ತೋಟಗಾರಿಕೆ ಇಲಾಖೆ ಅನುಮತಿ ನೀಡಿದೆ. ಇದರಿಂದ ಇನ್ನು ಮುಂದೆ ಲಾಲ್ ಬಾಗ್ ಗೆ ತೆರಳುವ ಸಾರ್ವಜನಿಕರು ವಾಹನಗಳ ಪಾರ್ಕಿಂಗ್ ಗಾಗಿ ಹೆಚ್ಚು ಶುಲ್ಕ ಪಾವತಿ ಮಾಬೇಕಾಗಿದೆ.

ಮೊದಲು ದ್ವಿಚಕ್ರ ವಾಹನಗಳಿಗೆ 5ರೂ. ಇದ್ದ ದರವನ್ನು ಸದ್ಯ 20ರೂ.ಗೆ ಏರಿಕೆ ಮಾಡಲಾಗಿದೆ. ಕಾರುಗಳಿಗೆ ಮೊದಲು 10 ರೂ ದರ ನಿಗದಿ ಪಡಿಸಲಾಗಿತ್ತು ಸದ್ಯ ಅದನ್ನು 25 ರೂ.ಗೆ ಹೆಚ್ಚಿಸಲಾಗಿದೆ. ಈ ದರ ಏರಿಕೆಯಿಂದಾಗಿ ಲಾಲ್ ಬಾಗ್ ಗೆ ಹೋಗುವ ಜನರು ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ. [ಲಾಲ್ ಬಾಗ್ ಪ್ರವೇಶ ಶುಲ್ಕ ಹೆಚ್ಚಳ?]
ಲಾಲ್ ಬಾಗ್ ಉದ್ಯಾನಕ್ಕೆ ಸಾಮಾನ್ಯ ದಿನಗಳಲ್ಲಿ 2 ಸಾವಿರ ಜನರು ಮತ್ತು ರಜಾ ದಿನಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಲಾಲ್ ಬಾಗ್ ನಲ್ಲಿ 2004ರಿಂದ ಪಾರ್ಕಿಂಗ್ ಮತ್ತು ಟಿಕೆಟ್ ಕೌಂಟರ್ ಗಳ ಗುತ್ತಿಗೆಯನ್ನು ಎಸ್ ಕೆಎಸ್ ಎಂಬ ಕಂಪನಿ ನಿರ್ವಹಿಸುತ್ತಿತ್ತು.
ಸದ್ಯ, ತೋಗಾರಿಕಾ ಇಲಾಖೆ ಈ ವರ್ಷ ಗುತ್ತಿಗೆಯನ್ನು ಎಫ್ ಕೆಸಿಕೆ ಎಂಬ ಕಂಪನಿಗೆ ನೀಡಿದೆ. ಈ ಹೊಸ ಕಂಪನಿ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ವರ್ಷದಿಂದ ವರ್ಷಕ್ಕೆ ಲಾಲ್ ಬಾಗ್ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿತ್ತು. ಆದ್ದರಿಂದ ಇಲಾಖೆ ಪಾರ್ಕಿಂಗ್ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದೆ ಎಂದು ದರ ಹೆಚ್ಚಳಕ್ಕೆ ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದಾರೆ.
ನೂತನ ದರ ಪಟ್ಟಿ
ದ್ವಿಚಕ್ರ ವಾಹನ - 20 ರೂ.
ಕಾರು - 25 ರೂ.
ಮಿನಿ ಬಸ್ - 50
ದೊಡ್ಡ ಬಸ್ - 100












Click it and Unblock the Notifications