ಕೊಪ್ಪಳ ರೈತರಿಗೆ ಸಿಹಿಸುದ್ದಿ; ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ
ಕೊಪ್ಪಳ, ಸೆಪ್ಟೆಂಬರ್ 27; ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆದ ರೈತರಿಗೆ ಸಿಹಿಸುದ್ದಿ. ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಮಾಡಲು ಸೂರ್ಯಕಾಂತಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಮುಂಗಾರು ಋತುವಿನಲ್ಲಿ ರೈತರಿಗೆ ಸಹಾಯಕವಾಗಲು ಕೇಂದ್ರ ಸರ್ಕಾರ ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ.

ಎಷ್ಟು ಖರೀದಿ ಮಾಡಲಾಗುತ್ತದೆ?; ಸರ್ಕಾರದ ಆದೇಶದಂತೆ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್. ಎ. ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್‌ಗೆ ರೂ. 6760 ಗಳಂತೆ ಎಕರೆಗೆ 3 ಕ್ವಿಂಟಾಲ್‌ನಂತೆ ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಲ್‌ರಂತೆ ಖರೀದಿ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಸೂರ್ಯಕಾಂತಿ ಖರೀದಿಸುವ ಕುರಿತು ಸೆಪ್ಟೆಂಬರ್ 19ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿತ್ತು.
ಕೊಪ್ಪಳ ತಾಲೂಕಿನ ಅಳವಂಡಿ, ಕುಕನೂರು ತಾಲೂಕಿನ ಮಂಡಲಗೇರಿ ಹಾಗೂ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ನೋಡಲ್ ಅಧಿಕಾರಿಗಳು; ಸೂರ್ಯಕಾಂತಿ ಖರೀದಿ ಕೇಂದ್ರಗಳಾದ ಅಳವಂಡಿ ಖರೀದಿ ಕೇಂದ್ರಕ್ಕೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಜಿ. ಎಂ. ಮರುಳಸಿದ್ದಯ್ಯ (8495056203), ಮಂಡಲಗೇರಿ ಹಾಗೂ ಬೇವೂರು ಈ ಎರಡು ಖರೀದಿ ಕೇಂದ್ರಗಳಿಗೆ ಯಲಬುರ್ಗಾ (ಕೇಂದ್ರ ಕಚೇರಿ, ಕುಕನೂರು) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ (9902224089) ನೋಡಲ್ ಅಧಿಕಾರಿಗಳಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ರೈತರು ಇವರನ್ನು ಸಂಪರ್ಕಿಸಬಹುದು.
ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಾಲ್‌ರಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್. ಎ. ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಯಚೂರು ವಿಭಾಗೀಯ ಕಚೇರಿ ಕೊಪ್ಪಳ ಮೊಬೈಲ್ ಸಂಖ್ಯೆ 9591812142 ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿಂದು ನಡೆಯುವ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ನೀಡುವ ಕುರಿತು ತೀರ್ಮಾನ ಕೈಗೊಳ್ಳುತ್ತದೆ. ಬೆಳೆಗಳಿಗೆ ಎಂ.ಎಸ್.ಪಿ. ನೀಡಿ, ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ದರವನ್ನು ಖಾತ್ರಿಪಡಿಸಲಾಗುತ್ತದೆ.












Click it and Unblock the Notifications