Arecanut Price: ದೀಪಾವಳಿ ಬಳಿಕ ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ
ಬೆಂಗಳೂರು, ನವೆಂಬರ್ 14: ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣದ ನಡುವೆಯೇ ಅಡಿಕೆ ಕೊಯ್ಲು ನಡೆಯುತ್ತಿದೆ. ಬಯಲು ಸೀಮೆಯಲ್ಲಿ ಅಡಿಕೆ ಕೊಯ್ಲು ಮುಗಿಸಿದ ರೈತರು ಮಾರುಕಟ್ಟೆಗೆ ಸಾಗಣೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ಬಳಿಕ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆ ಫಸಲು ಕಡಿಮೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಗೆ ಹೊಸ ಅಡಿಕೆ ಬರುತ್ತಿದ್ದಂತೆಯೇ ಬೆಲೆಯಲ್ಲಿಯೂ ಏರಿಕೆಯಾಗಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಮಲೆನಾಡು ಭಾಗದಲ್ಲಿ ಶಿವಮೊಗ್ಗ ಅಡಿಕೆಯ ಪ್ರಮುಖ ಮಾರುಕಟ್ಟೆಯಾಗಿದೆ. ವಿವಿಧ ಮಾದರಿಯ ಅಡಿಕೆಯ ಬೆಲೆಗಳಲ್ಲಿ ಏರಿಕೆಯಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಅಡಿಕೆಯೂ ಆಗಮಿಸುತ್ತಿದೆ.

ಸದ್ಯ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೇಗಿದೆ?, ಈಗ ಅಡಿಕೆ ಮಾರಾಟ ಮಾಡಬಹುದೇ?, ಇಲ್ಲದೇ ರೈತರು ಇನ್ನೊಂದಷ್ಟು ದಿನ ಕಾಯಬೇಕೆ? ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ
* ಗೊರಬಲು 17,500 - 32,089
* ನ್ಯೂ ವೆರೈಟಿ 39,069 - 49,299
* ಬೆಟ್ಟೆ 43,152 - 57,310
* ರಾಶಿ 33,899 - 49,559
* ಸರಕು 47,000 - 83,163
ಸಾಗರ ಮಾರುಕಟ್ಟೆ
* ಕೆಂಪುಗೋಟು 26,280 - 29,089
* ಕೋಕ 18,114 - 24,584
* ಚಾಲಿ 26,214 - 32,299
* ಬಿಳಿ ಗೋಟು - 17,421 - 24,199
* ರಾಶಿ 43,019 - 48,359
* ಸಿಪ್ಪೆಗೋಟು 15,369 -16,189
ಸಿದ್ದಾಪುರ ಮಾರುಕಟ್ಟೆ
* ಕೆಂಪುಗೋಟು 21,399 - 21,900
* ಕೋಕ 19019 - 24,299
* ಚಾಲಿ 30699 - 35,159
* ಬಿಳಿಗೋಟು 23,899 - 31,089
* ರಾಶಿ 40,699 - 45,899
ಶಿರಸಿ ಮಾರುಕಟ್ಟೆ
* ಕೆಂಪುಗೋಟು 16,899 - 27,699
* ಚಾಲಿ 33018 - 36,171
* ಬೆಟ್ಟೆ 29,299 - 38,609
* ಬಿಳಿ ಗೋಟು 20,789 - 30,018
* ರಾಶಿ 40,099 - 44,709
ಈ ಬಾರಿ ಮುಂಗಾರು ಮಳೆ ಹೆಚ್ಚಾಗಿ ಸುರಿದ ಕಾರಣ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಬಂದಿದೆ. ಮೂರು, ನಾಲ್ಕು ಬಾರಿ ಔಷಧಿ ಸಿಂಪಡಣೆ ಮಾಡಿದರೂ ಸಹ ರೋಗ ಹತೋಟಿಗೆ ಬಂದಿಲ್ಲ. ಆದ್ದರಿಂದ ಅಡಿಕೆ ಉದುರಿದ್ದು, ರೈತರಿಗೆ ಬೆಳೆ ನಷ್ಟವಾಗಿದೆ.
ಆದ್ದರಿಂದ ಫಸಲು ಕಡಿಮೆಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಈಗಲೂ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ತುಂತುರು ಮಳೆ, ಮೋಡ ಕವಿವ ವಾತಾವರಣವಿದ್ದು, ಅಡಿಕೆ ಕೊಯ್ಲಿಗೆ ತೊಂದರೆ ಉಂಟಾಗಿದೆ.
ಮಲೆನಾಡು ಭಾಗದಲ್ಲಿ ದೀಪಾವಳಿ ಬಳಿಕ ಕೊಯ್ಲು ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಅಡಿಕೆ ಮಾರುಕಟ್ಟೆಗೆ ಬರಲಿದೆ. ಅಲ್ಲಿಯ ತನಕ ಬೆಲೆಗಳು ಸ್ಥಿರವಾಗಿರಲಿ, ಫಸಲು ಸಹ ಕಡಿಮೆಯಾಗಿರುವ ಕಾರಣ ಇರುವ ಅಡಿಕೆಗೆ ಉತ್ತಮ ಬೆಲೆ ಸಿಕ್ಕರೆ ಸಾಕು ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications