ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಗಡಿ ಭಾಗದ ಹೋಳಾ ಹಬ್ಬದ ಬಗ್ಗೆ ತಿಳಿಯಿರಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಪ್ರಾಣಿಗಳನ್ನು ಗೌರವಿಸುವ ಮತ್ತು ಸತ್ಕರಿಸುವ ಹಲವಾರು ವಿಶೇಷ ಹಬ್ಬಗಳನ್ನು ಆಚರಿಸುವ ವಿಶೇಷ ಸಂಸ್ಕೃತಿ ಮತ್ತು ಪರಂಪರೆಯಿಂದ ಇದೆ. ಇಡೀ ಪ್ರಪಂಚದಲ್ಲಿಯೇ ಕೃಷಿ ಪ್ರಧಾನವಾದ ನಮ್ಮ ಭಾರತ ದೇಶದಲ್ಲಿ ಇಂತಹ ಸಂಸ್ಕೃತಿ ರೂಢಿಯಲ್ಲಿದೆ. ಎತ್ತುಗಳು ಕೃಷಿ ಚಟುವಟಿಕೆಯ ಒಂದು ಅವಿಭಾಜ್ಯ ಅಂಗ.

ಸದಾ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಕೃಷಿ ಚಟುವಟಿಕೆಗಳಿಗಾಗಿ ರೈತನೊಡನೆ ವರ್ಷವಿಡೀ ದುಡಿಯುವ ಎತ್ತುಗಳಿಗೆ ರೈತರು 'ಕಾರುಣ್ಣಿಮೆ' ಹಾಗೂ 'ಹೋಳಾ' ಹಬ್ಬಗಳನ್ನು ಎತ್ತುಗಳ ಹಬ್ಬವೆಂದು ನಮ್ಮ ಪೂರ್ವಜರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ.[ರೋಮಾಂಚನಗೊಳಿಸಿದ ಜೋಡೆತ್ತಿನ ಗಾಡಿ ಓಟ]

ಸೆಪ್ಟೆಂಬರ್ 1 ರಂದು ಕಾರುಣ್ಣಿಮೆ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದಲ್ಲಿ 'ಹೋಳಾ' ಹಬ್ಬವೆಂದು ಆಚರಣೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರು ಕಾರುಣ್ಣಿಮೆಯನ್ನು ಮತ್ತು ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡ ರಾಜ್ಯದ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ 'ಹೋಳಾ' ಹಬ್ಬವನ್ನು ಆಚರಿಸುವರು.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಕನ್ನಡದ ಆಡು ಭಾಷೆಯಲ್ಲಿಯೂ 'ಹೋಳ್' ಎಂದರೆ ಬೀಜದ ಹೋರಿ ಎಂಬುದು ರೂಢಿಯಲ್ಲಿದೆ. ಕಾರಹುಣ್ಣಿಮೆಯ ದಿನದಂದು ಕಳೆದುಹೋದ ಎತ್ತುಗಳು ಶ್ರಾವಣ ಮಾಸದಂತ್ಯದಲ್ಲಿ ಬರುವ ದರ್ಶ ಅಥವಾ ಪಿಠೋರಿ (ವದ್ಯ) ಅಮಾವಾಸ್ಯೆಯಂದು ಸಿಕ್ಕಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 1 ಹಬ್ಬವನ್ನು ಆಚರಿಸಲಾಗುತ್ತದೆ.

ಜಮೀನಿನಲ್ಲಿ ರೈತನೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ವರ್ಷವಿಡೀ ದುಡಿಯುವ ಎತ್ತುಗಳಿಗೆ ಕಾರುಣ್ಣಿಮೆ ಸಂತಸದ ದಿನ. ಅವುಗಳ ಮೈ ಸ್ವಚ್ಛಗೊಳಿಸಿ, ಸಿಂಗರಿಸಿ ಕೋಡುಗಳಿಗೆ ಮತ್ತು ಮೈಗೆ ಬಣ್ಣ ಹಚ್ಚಿ ಓಟದ ಸ್ಪರ್ಧೆಗೆ ಅಣಿಗೊಳಿಸಲಾಗುತ್ತದೆ.

ಕೊರಳಲ್ಲಿ ಕವಡೆ ಮತ್ತು ಗೆಜ್ಜೆನಾದದ ಸರಮಾಲೆ, ಕಾಲುಗಳಲ್ಲಿ ಗೆಜ್ಜೆ (ತೋಡೆ) ಮತ್ತು ಬೆನ್ನಲ್ಲಿ ಬಣ್ಣ-ಬಣ್ಣದ ಝೂಲ್ ಮತ್ತು ಬೆಲೆಬಾಳುವ ಶಾಲು, ಹಣೆಗೆ ರಂಗುರಂಗಿನ ಹಗ್ಗಗಳಿಂದ ತಯಾರಿಸಿದ ಬಾಸಿಂಗ್ ತೊಡಿಸಿ ಎತ್ತುಗಳನ್ನು ಸಿಂಗರಿಸಲಾಗುತ್ತದೆ.

Know about Pola festival Maharashtra

ಮನೆಯಲ್ಲಿ ಸಿಹಿ ಊಟ ಮಾಡುವ ರೈತ ತಾನೂ ಹೊಸ ಬಟ್ಟೆ ತೊಟ್ಟು, ಸಂಜೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮತ್ತು ಹನುಮಂತನ ದರ್ಶನದಲ್ಲಿ ಪಾಲ್ಗೊಳ್ಳುತ್ತಾನೆ. ಪುನಃ ಮನೆಯಲ್ಲಿ ಮುತ್ತೈದೆಯರು ವಿಧಿವತ್ತಾಗಿ ಎತ್ತುಗಳಿಗೆ ಪೂಜೆ ಮಾಡುತ್ತಾರೆ.

ಬಳಿಕ ಎತ್ತುಗಳಿಗೆ ಬೆಲ್ಲ ಮತ್ತು ತುಪ್ಪದೊಂದಿಗೆ ಹೂರಣ ಹೋಳಿಗೆ, ಕರ್ಚಿಕಾಯಿ ಮುಂತಾದ ಮೃಷ್ಠಾನ್ನದ ಭೋಜನವನ್ನು ನೀಡಲಾಗುತ್ತದೆ. ಗೋಧಿ, ಜೋಳ ಧಾನ್ಯಗಳನ್ನು ತಿನ್ನಿಸಲಾಗುತ್ತದೆ. ಎತ್ತುಗಳ ಪೂಜೆ ಮಾಡುವ ರೈತರು ಎತ್ತುಗಳಿಗೆ ಆಹಾರ ನೀಡಿದ, ಬಳಿಕವೇ ಊಟ ಮಾಡುವ ಸಂಪ್ರದಾಯವಿದೆ.

ಈ ಹಬ್ಬದಂದು ಸಾಯಂಕಾಲ ಆಯಾ ಗ್ರಾಮದ 40-50 ಜೋಡಿ ಎತ್ತುಗಳನ್ನು ಕಿರು ಬಂಡಿಗೆ ಜೋಡಿಸಿ ಊರಲ್ಲಿ ವಾದ್ಯ-ಮೇಳದೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಗ್ರಾಮದ ಮುಖಂಡರು ಊರಿನ ಅಗಸಿ ಬಾಗಿಲಿನಲ್ಲಿ ಕರಿ ಕಡಿದ ಬಳಿಕವೇ ಎತ್ತುಗಳ ಓಟದ ಸ್ಪರ್ಧೆ ಪ್ರಾರಂಭವಾಗುತ್ತದೆ. ಕರಾವಳಿಯ ಕಂಬಳದಲ್ಲಿ ಬಲಿಷ್ಠ ಕೋಣಗಳನ್ನು ಓಡಿಸುವಂತೆ, ಗ್ರಾಮದ ಮುಖ್ಯ ರಸ್ತೆಯಲ್ಲಿ ಸಣ್ಣ ಚಕ್ಕಡಿಯ ಮೇಲೆ ನಿಂತು ಎತ್ತುಗಳನ್ನು ಓಡಿಸುವವರ ಎದೆಗಾರಿಕೆ ಸಾಹಸ ಮೆಚ್ಚುವಂಥದ್ದು.

ಈ ಓಟದ ಮಧ್ಯದಲ್ಲೇ ಏಳುತ್ತಾ-ಬೀಳುತ್ತಾ ಓಟ ಪೂರ್ಣಗೊಳಿಸುವ ದೃಶ್ಯ ನೋಡುಗರಿಗೆ ಮೈ ಜುಂ ಎನಿಸುತ್ತದೆ. ಈ ಸಾಹಸಮಯ ದೃಶ್ಯಾವಳಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ, ಮಾಳಿಗೆ ಮೇಲೆ, ಅಂಗಡಿ-ಮುಂಗಟ್ಟು ಕಟ್ಟೆಗಳ ಮೇಲೆ ನಿಂತು ಮಕ್ಕಳು, ಹೆಂಗಳೆಯರು, ಯುವಕರು, ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಕಣ್ತುಂಬಿಕೊಳ್ಳುತ್ತಾರೆ.

ಓಟದಲ್ಲಿ ಕರುಗಳು ಮತ್ತು ದೊಡ್ಡ ಎತ್ತುಗಳ ಪಾಲ್ಗೊಳ್ಳುತ್ತವೆ. ಸ್ಪರ್ಧೆಯಲ್ಲಿ ಮೊದಲು ಬಂದ ಎತ್ತಿನ ಜೋಡಿಗೆ ಬಹುಮಾನ ನೀಡಿ, ಗ್ರಾಮದಲ್ಲಿ ಈ ವರ್ಷದ ಚಾಂಪಿಯನ್ ಎಂಬಂತೆ ಮೆರವಣಿಗೆ ಮಾಡಲಾಗುತ್ತದೆ. ಈ ಹಬ್ಬದ ಆಚರಣೆಯಲ್ಲಿ ಎಲ್ಲ ಧರ್ಮೀಯರು ಹರ್ಷೋಲ್ಲಾಸದಿಂದ ಪಾಲ್ಗೊಳ್ಳುವುದರಿಂದ ಈ ಹಬ್ಬವು ಭಾವೈಕ್ಯತೆಯ ಸಂಕೇತವಾಗಿದೆ.

English summary
Are you aware of the Pola festival. Pola festival is celebrated throughout the state of Maharashtra. Pola is a festival related to bull-worshiping and celebrated by farmers in Shravana month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X