ಯೂರಿಯಾ ರಸಗೊಬ್ಬರ ಬಳಕೆಯಿಂದ ಕ್ಯಾನ್ಸರ್: ಅಮಿತ್ ಶಾ
ಇತ್ತೀಚೆಗೆ ಅಹಮದಾಬಾದ್‌ನ ಗ್ರಾಮೀಣ ಭಾಗದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ತಾಕೀತು ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಯೂರಿಯಾ ಮೇಲಿನ ಅವಲಂಬನೆ ಸಂಪೂರ್ಣ ಕಡಿದುಕೊಳ್ಳಬೇಕು, ಯೂರಿಯಾ ಹಾಕಿ ಬೆಳೆದ ಆಹಾರ ತಿಂದ ಗ್ರಾಹಕರಿಗೆ ಕ್ಯಾನ್ಸರ್ ಬರುತ್ತಿದೆ. ಇದು ಬೆಳೆಗಾರರಿಗೂ ಒಳ್ಳೆಯದಲ್ಲಿ, ಗ್ರಾಹಕರಿಗೂ ಅಲ್ಲ ಹಾಗಾಗಿ ಯೂರಿಯಾ ಬಳಕೆ ಕೈಬಿಡಬೇಕು ಎಂದು ಹೇಳಿದ್ದಾರೆ.
ಒಂದು ಹಸುವಿನಿಂದ 21 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡಲು ಸಾಧ್ಯ ಎಂದು ಅವರು ಹೇಳಿದರು. ಅಂತೆಯೇ ನೈಸರ್ಗಿಕ ಪದ್ಧತಿಯ ಕೃಷಿಯಲ್ಲಿ1.25 ಪಟ್ಟು ಉತ್ಪಾದಕತೆ ಹೆಚ್ಚಾಗಿರುವುದು ಸಾಬೀತಾಗಿದೆ ಎಂದರು. ಗುಜರಾತ್‌ನಲ್ಲಿ ಈಗಾಗಲೇ 3 ಲಕ್ಷ ರೈತರು ನೈಸರ್ಗಿಕ ಕೃಷಿ ಅಳವಡಿಸಿಕೊಂಡಿದ್ದಾರೆ.
ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರ ಹೊಲಗಳಿಗೆ ನೀವೂ ಭೇಟಿ ಕೊಟ್ಟು ಅವರ ಅವರ ಕೃಷಿ ಪದ್ಧತಿಗಳು ಹಾಗೂ ಅನುಭವದಿಂದ ಕಲಿತು ಅಳವಡಿಸಿಕೊಳ್ಳಬೇಕೆಂದರು. "ಮುಂದಿನ ಐದು ವರ್ಷಗಳಲ್ಲಿ ಒಂದೇ ಒಂದು ಯೂರಿಯಾ ಬ್ಯಾಗ್ ಅಹಮದಾಬಾದ್ ಜಿಲ್ಲೆಯಲ್ಲಿ ಕಾಣಿಸಿಕೊಳ್ಳಬಾರದು, ಆ ರೀತಿಯಾಗಿ ಇಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು" ಎಂದು ರೈತರನ್ನು ಹುರಿದುಂಬಿಸಿದರು.

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳ ಮಾರಾಟಕ್ಕೆ ಸಹಕಾರ ತತ್ವದಲ್ಲಿ ಸೊಸೈಟಿಗಳನ್ನು ಸ್ಥಾಪಿಸಲಾಗುವುದು. ಅಂತೆಯೇ ಸಾವಯವ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಹಾಗೂ ಮಣ್ಣು ಪರೀಕ್ಷೆಗೆ ಸಮರ್ಥ ವೇದಿಕೆಗಳು ಬೇಕೆಂದು ಅಭಿಪ್ರಾಯಪಟ್ಟರು. ಸದ್ಯಕ್ಕೆ ಅಂಥ ಪರೀಕ್ಷಾ ಘಟಕಗಳು ಹಾಗೂ ಮಾರುಕಟ್ಟೆಯ ವ್ಯವಸ್ಥೆ ಇಲ್ಲವೆಂದರು. ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಸಾವಯವ ಉತ್ಪನ್ನಗಳ ಪರೀಕ್ಷೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದೆಂದರು.












Click it and Unblock the Notifications