ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳ ಮಾಡಿದ ಕೇಂದ್ರ
ದೇಶದ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರತಿ ಕ್ವಿಂಟಲ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (Fair and Remunerative Price - FRP)ಯನ್ನು 10 ರೂಪಾಯಿ ಹೆಚ್ಚಿಸಿ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಕಬ್ಬಿನ ಎಫ್‌ಆರ್‌ಪಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
2023-24ನೇ ಹಂಗಾಮಿಗೆ ಕಬ್ಬಿನ ಎಫ್‌ಆರ್‌ಪಿಯನ್ನು ಕ್ವಿಂಟಲ್‌ಗೆ 315 ರೂ.ಗೆ ನಿಗದಿಪಡಿಸಲಾಗಿದೆ. ಕಳೆದ ವರ್ಷ ಕಬ್ಬಿನ ಎಫ್‌ಆರ್‌ಪಿ ಪ್ರತಿ ಕ್ವಿಂಟಲ್‌ಗೆ 305 ರೂ. ಇತ್ತು ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಅನ್ನದಾತರ ಜೊತೆಗಿದ್ದಾರೆ. ಸರಕಾರ ಕೃಷಿ ಹಾಗೂ ರೈತರಿಗೆ ಆದ್ಯತೆ ನೀಡಿದೆ ಎಂದು ಹೇಳಿದರು. 2014-15ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ 210 ರೂ. ಇದ್ದ ಕಬ್ಬಿನ ಎಫ್‌ಆರ್‌ಪಿ ಈಗ 2023-24ನೇ ಸಾಲಿನಲ್ಲಿ ಕ್ವಿಂಟಲ್‌ಗೆ 315 ರೂ.ಗೆ ಏರಿಕೆಯಾಗಿದೆ.
ಕಬ್ಬಿನ ಬಾಕಿ ಉಳಿಸಿಕೊಂಡಿಲ್ಲ
2013-14ನೇ ಸಾಲಿನಲ್ಲಿ ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳು 57,104 ಕೋಟಿ ರೂ. ಮೌಲ್ಯದ ಕಬ್ಬು ಖರೀದಿ ಮಾಡಿದ್ದವು. 2022-23ನೇ ಸಾಲಿನಲ್ಲಿ 1,11,366 ಕೋಟಿ ರೂಪಾಯಿ ಮೌಲ್ಯದ 3,353 ಲಕ್ಷ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಖರೀದಿ ಮಾಡಿವೆ. ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ರೈತಿರಗೆ ಕಬ್ಬಿನ ಹಣ ಸಮಯಕ್ಕೆ ಸರಿಯಾಗಿ ಸಂದಾಯವಾಗುತ್ತಿದೆ. ಕಾರ್ಖಾನೆಗಳು ಯಾವುದೇ ಬಾಕಿ ಉಳಿಸಿಕೊಂಡಿಲ್ಲ, ಈ ಕುರಿತು ಯಾವುದೇ ಪ್ರತಿಭಟನೆ ನಡೆಯುತ್ತಿಲ್ಲ ಎಂದು ಹೇಳಿದರು.
ಎಫ್‌ಆರ್‌ಪಿಯನ್ನು 10 ರೂಪಾಯಿ ಹೆಚ್ಚಿಸಿರುವುದು ದೇಶಾದ್ಯಂತ ಇರುವ 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರನ್ನು ಅವರನ್ನು ಅವಲಂಬಿಸಿರುವ ಕೆಲಸಗಾರರ ಮತ್ತು ಸಕ್ಕರೆ ಕಾರ್ಖಾನೆಗಳ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.
ಎಥೆನಾಲ್ ಅನ್ನು ಕಚ್ಚಾತೈಲದ ಜೊತೆ ಬೆರೆಸುವ ಯೋಜನೆ ರೈತರಿಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 20,500 ಕೋಟಿ ರೂ. ಅನುದಾನ ನೀಡಿದೆ ಎಂದು ಅವರು ಹೇಳಿದರು. ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳ ಮಾಡಿರುವುದು ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.












Click it and Unblock the Notifications