ಕೊಪ್ಪಳದಲ್ಲಿ ಹಣ್ಣು ಮತ್ತು ಜೇನು ಮಾರಾಟ ಮೇಳ
ಕೊಪ್ಪಳ, ಮಾರ್ಚ್ 05: ತೋಟಗಾರಿಕೆ ಇಲಾಖೆ ಕೊಪ್ಪಳದಲ್ಲಿ ಮಾರ್ಚ್ 6 ರಿಂದ 9ರವರೆಗೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಣ್ಣು, ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ-2024 ಆಯೋಜನೆ ಮಾಡಿದೆ.
ಕೊಪ್ಪಳ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಕೊಪ್ಪಳ ಜಿಲ್ಲೆಯ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ-2024 ಆಯೋಜಿಸಲಾಗಿದೆ.

ರೈತರಿಂದ ನೇರ ಗ್ರಾಹಕರಿಗೆ ಎನ್ನುವ ಪರಿಕಲ್ಪನೆಯಲ್ಲಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಮೇಳ ನಡೆಯಲಿದೆ. ಮಾರ್ಚ್ 6ರ ಬುಧವಾರ ಬೆಳಗ್ಗೆ 10.30 ಗಂಟೆಗೆ ಜೇನು ಮತ್ತು ಹಣ್ಣುಗಳ ಮೇಳವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು.
ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಗಾಲಿ ಜನಾರ್ದ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ್ ಪಾಲ್ಗೊಳ್ಳುವರು.
ಹಣ್ಣು ಮತ್ತ ಜೇನು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಲು ಆಸಕ್ತ ರೈತರು ಹೆಸರು ನೋಂದಾಯಿಸುವಂತೆ ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಕರೆ ನೀಡಿದ್ದರು. ರೈತರಿಂದ ನೇರವಾಗಿ ಗ್ರಾಹಕರಿಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಜೇನು ಒದಗಿಸುವುದು ಮೇಳದ ಗುರಿಯಾಗಿದೆ.
ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು, ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಅಂಜೂರು, ಪೇರಲ ಮತ್ತು ಕರಬೂಜ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications