ಬೆಂಗಳೂರು ಲಾಲ್ ಬಾಗ್ ಕೆಂಪುಕೋಟೆ ವಿಶೇಷತೆಗಳೇನು?
ಬೆಂಗಳೂರು, ಜ, 19: ದೆಹಲಿಯ ಕೆಂಪು ಕೋಟೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಬಂದು ನಿಂತಿದೆ. ಇದು ಕಲ್ಲಿನಿಂದ ಕಟ್ಟಿದ ಕೋಟೆಯಲ್ಲ, ಹೂಗಳಿಂದ ಅರಳಿದ ಕೋಟೆ, ಅಲ್ಲಿ ಸಂಗೀತದ ಇಂಪು, ಹೂಗಳ ಕಂಪು ಎಲ್ಲವೂ ಇದೆ. ಪಕ್ಕದಲ್ಲಿ ಹೂಗಳಿಂದಲೇ ರಚಿಸಿರುವ ವಾದ್ಯ ಪರಿಕರಗಳ ನೋಟ ಕದಲಲು ಬಿಡುವುದಿಲ್ಲ.
ಗಣರಾಜ್ಯೋತ್ಸವ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ವಿಶೇಷಗಳ ಆಗರ. ಪಾಟ್‌ಗಳಲ್ಲೇ ಬೆಳೆಸಬಹುದಾದ ಸೇಬು, ಸ್ಟ್ರಾಬೆರಿ, ಅಪ್ರಿಕ್ಯಾಟ್, ದಾಳಿಂಬೆ ಇತ್ಯಾದಿ ಹಣ್ಣಿನ ಗಿಡಗಳು ಸಹ ನಿಮ್ಮನ್ನು ಆಕರ್ಷಿಸುತ್ತವೆ.[ದೆಹಲಿಯ ಕೆಂಪುಕೋಟೆ ನೋಡಲು ಕೆಂಪುತೋಟಕ್ಕೆ ಬನ್ನಿ]
ಲಾಲ್ ಬಾಗ್ ಗಾಜಿನ ಮನೆಯಲ್ಲಿ 50 ಅಡಿ ಉದ್ದ ಹಾಗೂ 40 ಅಡಿ ಎತ್ತರದ ಕೆಂಪುಕೋಟೆಯನ್ನು 3 ಲಕ್ಷಕ್ಕೂ ಹೆಚ್ಚಿನ ಗುಲಾಬಿ, ಆರ್ಕಿಡ್, ಆಲ್‌ಸ್ಟಿಮೇರಿಯಾ ಹೂವುಗಳಿಂದ ಅಲಂಕೃತಗೊಳಿಸಲಾಗಿದೆ. ಅದರ ಹಿಂಭಾಗದಲ್ಲಿ ಹೂಗಳಿಂದ ನಿರ್ಮಾಣ ಮಾಡಿರುವ ಇಂಡಿಯಾ ಗೇಟ್ ಗಮನ ಸೆಳೆಯುತ್ತದೆ. ಇದರ ಹಿಂಭಾಗಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಅಚ್ಚ ಬಿಳುಪಿನ ಸ್ಟ್ಯಾಚ್ಯು ಆಫ್ ಲಿಬರ್ಟಿ ಮತ್ತು ನ್ಯಾಯದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.[ಕೆಂಪು ಕೋಟೆಯ ಮತ್ತಷ್ಟು ಚಿತ್ರಗಳು]
ಜನವರಿ 26 ರವರೆಗೆ ಪ್ರದರ್ಶನ ನಡೆಯಲಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲ ಗೇಟ್ ಗಳಲ್ಲೂ ಸೂಕ್ತ ರಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಜನವರಿ 24 ಮತ್ತು 25 ರಂದು ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಕೆಂಪು ಕೋಟೆಯ ನೋಟ
ಗಾಜಿನ ಮನೆಯ ಮಧ್ಯದಲ್ಲಿ ನಿರ್ಮಾಣವಾಗಿರುವ ಕೆಂಪು ಕೋಟೆ ಕಲಾ ಕೌಶಲ್ಯದ ಕತೆ ಹೇಳುತ್ತದೆ. ಆಕರ್ಷಣೆಗೆ ಮನಸೋತ ನಾಗರಿಕರು ಸೆಲ್ಫಿ, ಫೋಟೋ ಕ್ಲಿಕ್ಕಿಸುವುದರಲ್ಲೇ ನಿರತರಾಗಿದ್ದರು.

ಪುಷ್ಪ ವಾದ್ಯಗಳ ಸಂಗೀತ
ಬ್ಯಾಂಡ್‌ಸ್ಟ್ಯಾಂಡ್ ಸುತ್ತಲೂ ಪಿಯಾನೊ, ಗಿಟಾರ್, ತಬಲಾ ಹಾಗೂ ವೀಣೆಗಳನ್ನು ಪುಷ್ಪಗಳಲ್ಲಿ ನಿರ್ಮಿಸಲಾಗಿದೆ. ಒಂದಕ್ಕೊಂದು ಭಿನ್ನವಾಗಿವೆ. ವಿವಿಧ ಬಣ್ಣದ ಮತ್ತು ಬೇರೆ ಬೇರೆ ಜಾತಿಯ ಹೂಗಳನ್ನು ಬಳಸಿ ನಿರ್ಮಿಸಿದ್ದು ಕಣ್ಮನ ತಣಿಸುತ್ತದೆ.

ಮಾರಾಟ ಮತ್ತು ಪ್ರದರ್ಶನ
ಔಷಧೀಯ ಗಿಡ, ಅಲಂಕಾರಿಕ ಗಿಡ, ಬೋನ್ಸಾಯ್, ತೋಟಗಾರಿಕಾ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಜೋರಾಗಿ ನಡೆದಿದೆ. ನೂರಾರು ಮಳಿಗೆಗಳನ್ನು ಗಾಜಿನ ಮನೆಯ ಹಿಂಭಾಗದಲ್ಲಿ ತೆರೆಯಲಾಗಿದೆ. ಕುಂಡಗಳಲ್ಲಿ ಬೆಳೆಸಬಹುದಾದ ತರಕಾರಿ ಮತ್ತು ಸೊಪ್ಪಿನ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.

ಮಾಹಿತಿ ನೀಡುವವರಿಲ್ಲ
ಕೆಂಪು ಕೋಟೆ ನೋಡಿದ ನಂತರ ಯಾವ ಕಡೆ ಹೋಗಬೇಕು ಎಂಬ ಮಾಹಿತಿ ನೀಡುವವರು ಯಾರೂ ಇಲ್ಲ. ಕರ್ತವ್ಯ ನಿರತ ಪೊಲೀಸರ ಬಳಿ ಇನ್ನೇನು ಪ್ರದರ್ಶನವಿದೆ? ಎಂದು ಕೇಳಿದರತೆ ಸಂಬಂಧಿಸಿದವರನ್ನು ಕೇಳಿ ಎಂಬ ಉತ್ತರ ಸಿಗುತ್ತದೆ. ಅಲ್ಲಲ್ಲಿ ಬೋರ್ಡ್ ಗಳನ್ನು ಹಾಕಿದ್ದರೂ ಅವುಗಳಲ್ಲಿ ಅರ್ಧ ಕಿತ್ತು ಬಿದ್ದಿದ್ದು ಜನರಿಗೆ ಕೊಂಚ ಗೊಂದಲವಾಗುವುದು ಗ್ಯಾರಂಟಿ.

ಫುಡ್‌ಕೋರ್ಟ್
ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗಾಗಿ ಫುಡ್‌ಕೋರ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಫ್ರೂಟ್ ಸಲಾಡ್, ಗ್ರೇಪ್ ಜ್ಯೂಸ್, ಒಣಹಣ್ಣುಗಳು, ಕುಡಿಯುವ ನೀರು ಒದಗಿಸಲಾಗುತ್ತಿದ್ದು ಸಾರ್ವಜನಿಕರು ನಿಗದಿತ ದರ ನೀಡಿ ಕೊಂಡುಕೊಳ್ಳಬಹುದು.

ಹೊಸತನ ತುಂಬುತ್ತದೆ
ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಗಳು ಪ್ರತಿ ಸಾರಿ ಹೊಸತನವನ್ನು ಹೊಂದಿರುತ್ತವೆ. ಮಕ್ಕಳಲ್ಲಿನ ಸದಭಿರುಚಿ ಅರಳಿಸಲು ಇಂಥ ಪ್ರದರ್ಶನಗಳು ಕಾರಣವಾಗುತ್ತವೆ. ಪ್ರತಿವರ್ಷವೂ ತಪ್ಪದೇ ಭೇಟಿ ನೀಡುತ್ತೇವೆ ಎನ್ನುತ್ತಾರೆ ಜೆಪಿ ನಗರದ ಎಸ್. ಆರ್. ಗೀತಾ.

ಪ್ಲಾಸ್ಟಿಕ್‌ಗೆ ನಿಷೇಧವಿಲ್ಲ
ಈ ಬಾರಿಯೂ ಪ್ಲಾಸ್ಟಿಕ್ ಮುಕ್ತ ಪ್ರದರ್ಶನ ಎಂದು ಮೊದಲು ಹೇಳಲಾಗಿತ್ತು. ಆದರೆ ಮಾತು ಮಾತಾಗಿಯೇ ಉಳಿದಿದೆ. ಮಳಿಗೆದಾರರು ಮತ್ತು ಹಣ್ಣು ಮಾರಾಟಗಾರರು ಮನಸೋ ಇಚ್ಛೆ ಪ್ಲಾಸ್ಟಕ್ ಬಳಸುತ್ತಿದ್ದಾರೆ. ಆದರೆ ನಾಗರಿಕರೆ ಕಸದ ತೊಟ್ಟಿಯನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿರುವುದು ಕಂಡು ಬಂತು.











Click it and Unblock the Notifications