ಬೆಂಗಳೂರು : ಫಲಪುಷ್ಪ ಜಾತ್ರೆಗೆ ಲಾಲ್ ಬಾಗ್ ಸಜ್ಜು

ಆ.7ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.150ಕ್ಕೂ ಹೆಚ್ಚು ಬಗೆಯ ಹೂಗಳನ್ನು ಈ ಬಾರಿಯ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಗುಲಾಬಿ, ರೆಡ್ ಹಾಟ್ ಪೋಕರ್, ಲಿಲ್ಲಿ, ಪುಷಿಯಾಮ ಕ್ಯಾಲಾಲಿಲ್ಲಿ, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು ಪ್ರದರ್ಶನದಲ್ಲಿ ಇರಲಿವೆ.
ಪ್ರತಿ ವರ್ಷ ಗಾಜಿನ ಮನೆಯಲ್ಲಿ ಪ್ರದರ್ಶನ ನಡೆಯುತ್ತಿತ್ತು. ಆದ್ದರಿಂದ ಅಲ್ಲಿ ಜನರ ಗದ್ದಲ ಹೆಚ್ಚಾಗುತ್ತಿತ್ತು. ಇದನ್ನು ತಪ್ಪಿಸಲು ಈ ಬಾರಿ, ಪಾರ್ಕ್ ಹುಲ್ಲುಹಾಸು, ಬೋನ್ಸಾಯ್ ಗಾರ್ಡನ್ ನಲ್ಲಿಯೂ ಪ್ರದರ್ಶನ ಏರ್ಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನದ ಮೊದಲ ದಿನ ಕೋಲ್ಕತ್ತಾದ ಬಟಾನಿಕಲ್ ಗಾರ್ಡನ್ ನಿಂದ ತರಿಸಲಾದ 25 ಹೊಸ ಸಸ್ಯಗಳನ್ನು ಸಸ್ಯಕಾಶಿಯಲ್ಲಿ ನಡೆಲಾಗುತ್ತದೆ. ಈ ಹೊಸ ಸಸ್ಯ ಪ್ರಬೇಧಗಳನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಲಾಲ್ ಬಾಗ್ ನಲ್ಲಿ ಪರಿಚಯಿಸಲಾಗುತ್ತಿದೆ.
ಫಲಪುಷ್ಪ ಪ್ರದರ್ಶನದ ಜೊತೆಗೆ ರೈತಪರ ಕಾರ್ಯಕ್ರಮಗಳ ಪರಿಚಯ, ಹೊಸ ತಳಿಗಳ ಪ್ರದರ್ಶನ ಮತ್ತು ಮಾಹಿತಿ ನೀಡುವುದು. ಹೆಸರಘಟ್ಟದಲ್ಲಿ ಬೆಳೆಸಲಾದ ವಿಶೇಷ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪ್ರವೇಶ ಶುಲ್ಕ : ಫಲಪುಷ್ಪ ಪ್ರದರ್ಶನಕ್ಕೆ ಆ.13 ಮತ್ತು 15ರಂದು ಶಾಲಾಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಯಸ್ಕರಿಗೆ 40 ಮತ್ತು ಮಕ್ಕಳಿಗೆ 10ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಇದೇ ಮೊದಲ ಬಾರಿಗೆ ರಜಾ ದಿನಗಳಿಗೆಂದೇ ಪ್ರತ್ಯೇಕ ಶುಲ್ಕ ನಿಗದಿ ಪಡಿಸಲಾಗಿದ್ದು, ಆ.9, 10,11 ಮತ್ತು 15ರಂದು 50 ರೂ. ಪ್ರವೇಶ ಶುಲ್ಕ ವಿಧಿಸಿರುವಾಗಿ ಲಾಲ್ ಬಾಗ್ ಅವರಣದಲ್ಲಿ ಹಾಕಿರುವ ಪೋಸ್ಟರ್ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ.
ಪಾರ್ಕಿಂಗ್ ಮಾಹಿತಿ : ಕುಟುಂಬ ಸಮೇತರಾಗಿ ಫಲಪುಷ್ಪ ಪ್ರದರ್ಶನಕ್ಕೆ ಹೋಗುವುದಾದರೆ ಪಾರ್ಕಿಂಗ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಲಾಲ್ ಬಾಗ್ ವೊಳಗೆ ವಾಹನಗಳಿಗೆ ಪ್ರವೇಶವಿಲ್ಲ. ಶಾಂತಿನಗರ ಬಸ್ ನಿಲ್ದಾಣ ಅಥವ ಜೆ.ಸಿ.ರಸ್ತೆಯ ಬಿಬಿಎಂಪಿ ಪಾರ್ಕಿಂಗ್ ಲಾಟ್ ನಲ್ಲಿ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ.












Click it and Unblock the Notifications